ಬೆಂಗಳೂರು(ನ.02): ಮನೆಗೆಲಸ ಮಾಡುವ ವಿಚಾರವಾಗಿ ತಾಯಿ ಬೈದಿದ್ದಕ್ಕೆ ಬೇಸರಗೊಂಡ 16 ವರ್ಷದ ಬಾಲಕಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಗಿರಿನಗರ ಸಮೀಪ ಮುನೇಶ್ವರ ಬ್ಲಾಕ್‌ನಲ್ಲಿ ಭಾನುವಾರ ನಡೆದಿದೆ.

ಮುನೇಶ್ವರ ಬ್ಲಾಕ್‌ನ ನಿವಾಸಿ ಮಹಾಲಕ್ಷ್ಮಿ (16) ಮೃತ ದುರ್ದೈವಿ. ಮನೆಯಲ್ಲಿ ತನ್ನ ಎಂಟು ವರ್ಷದ ತಮ್ಮನನ್ನು ಸ್ನಾನಗೃಹದಲ್ಲಿ ಕೂಡಿಹಾಕಿ ಬಳಿಕ ನೇಣು ಬಿಗಿದುಕೊಂಡು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬಾಲಕನ ಚೀರಾಟ ಕೇಳಿ ನೆರೆ ಹೊರೆಯರು ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

ಬಾಗಲಕೋಟೆ: ಒಂಟಿತನಕ್ಕೆ ಬೇಸತ್ತು ಯುವಕ ಆತ್ಮಹತ್ಯೆ

ಗಾಂಧಿ ಬಜಾರಿನಲ್ಲಿ ಬಟ್ಟೆ ಅಂಗಡಿಯಲ್ಲಿ ಮೃತ ಮಹಾಲಕ್ಷ್ಮಿ ಕೆಲಸ ಮಾಡುತ್ತಿದ್ದಳು. ತನ್ನ ತಾಯಿ ಕಾಮಾಕ್ಷಿ ಹಾಗೂ ಸೋದರನ ಜತೆ ಆಕೆ ನೆಲೆಸಿದ್ದಳು. ಆಕೆಯ ತಾಯಿ ಸಹ ಮನೆಗೆಲಸ ಮಾಡುತ್ತಿದ್ದಳು. ಕ್ಷುಲ್ಲಕ ಕಾರಣಗಳಿಗೆಲ್ಲ ಮಹಾಲಕ್ಷ್ಮಿ ಕೋಪಿಸಿಕೊಳ್ಳುತ್ತಿದ್ದಳು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ತಾಯಿ, ಮಗಳಿಗೆ ಬುದ್ಧಿ ಮಾತು ಹೇಳಿದ್ದಳು. ಅಂತೆಯೇ ಭಾನುವಾರ ಸಹ ಮನೆಯಲ್ಲಿ ಕೆಲಸ ಮಾಡುವ ವಿಚಾರವಾಗಿ ತಾಯಿ-ಮಗಳ ಜತೆ ಮಾತಿನ ಚಕಮಕಿ ನಡೆದಿದೆ. ಆಗ ಮಗಳಿಗೆ ಬೈದು ಕಾಮಾಕ್ಷಿ ಹೊರ ಹೋಗಿದ್ದಳು. 

ಈ ಜಗಳದ ಬಳಿಕ ಬೇಸರಗೊಂಡ ಮಹಾಲಕ್ಷ್ಮಿ, ತನ್ನ ತಮ್ಮನ್ನು ಬಲವಂತವಾಗಿ ಸ್ನಾನದ ಮನೆಯಲ್ಲಿ ಕೂಡಿ ಹಾಕಿದ್ದಾಳೆ. ನಂತರ ನೇಣಿಗೆ ಆಕೆ ಕೊರಳೊಡ್ಡಿದ್ದಾಳೆ. ಸ್ನಾನದ ಮನೆ ಬಾಗಿಲು ತೆಗೆಯುವಂತೆ ಬಾಲಕ ಜೋರಾಗಿ ಗಲಾಟೆ ಮಾಡಿದ್ದಾನೆ. ಈ ಚೀರಾಟ ಕೇಳಿ ನೆರೆಹೊರೆಯವರು ಜಮಾಯಿಸಿದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಗಿರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.