ಹಾಸನ[ಜು.02]: ಯಾವ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಅಂತ್ಯಸಂಸ್ಕಾರ ಮಾಡಲಾಯಿತೋ ಅದೇ ವ್ಯಕ್ತಿ ಕೆಲವು ದಿನಗಳ ಬಳಿಕ ಮನೆಗೆ ಮರಳಿರುವ ವಿಚಿತ್ರ ಘಟನೆ ಹಾಸನ ತಾಲೂಕಿನ ಶಂಖ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ನಿವಾಸಿ ಶಿವಣ್ಣ ಎಂಬುವರು 20 ದಿನಗಳ ಹಿಂದೆ ಪತ್ನಿ ದೀಪಾರೊಂದಿಗೆ ಜಗಳ ಮಾಡಿಕೊಂಡು ಮನೆಯಿಂದ ಹೋಗಿ ನಾಪತ್ತೆಯಾಗಿದ್ದರು. ಈ ಬಗ್ಗೆ ಪತ್ನಿ ದೀಪಾ ಹಾಸನ ಗ್ರಾಮಾಂತರ ಪೊಲೀಸ್‌ ಠಾಣೆಗೆ ಜೂ.16 ರಂದು ದೂರು ನೀಡಿದ್ದರು. ಜೂ.18ರಂದು ಹಾಸನ ನಗರದ ಹೊಸ ಬಸ್‌ ನಿಲ್ದಾಣದ ಸಮೀಪ ಅಪರಿಚಿತ ಶವವೊಂದು ಸಿಕ್ಕಿತ್ತು. ಮೃತದೇಹ ಮೇಲ್ನೋಟಕ್ಕೆ ಕಾಣೆಯಾದ ಶಿವಣ್ಣನನ್ನೇ ಹೋಲುತ್ತಿತ್ತು. ಹೀಗಾಗಿ ಪತ್ನಿ ದೀಪಾ ಹಾಗೂ ಕುಟುಂಬ ಸದಸ್ಯರು ಶಿವಣ್ಣನ್ನದೇ ಮೃತದೇಹ ಎಂದು ಭಾವಿಸಿ ಅವರ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಿಸಿದ್ದರು.

ಜೂ.28ರಂದು ಆರಾಧನೆಯನ್ನು ಶಾಸೊತ್ರೕಕ್ತವಾಗಿ ನೆರವೇರಿಸಿದ್ದರು. ಆದರೆ, ಶಿವಣ್ಣ ಸೋಮವಾರ ದಿಢೀರ್‌ ಪ್ರತ್ಯಕ್ಷರಾಗಿದ್ದಾರೆ. ಮನೆ ಬಿಟ್ಟು ಹೋಗಿದ್ದ ಶಿವಣ್ಣ ತುಮಕೂರಿಗೆ ಹೋಗಿ ಅಲ್ಲಿ ಹೋಟೆಲ್‌ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದರು. ನಂತರ ಬೆಂಗಳೂರಿನಲ್ಲಿರುವ ಅಕ್ಕನ ಮನೆಗೆ ಹೋಗಿದ್ದರು. ಈ ಸಂದರ್ಭದಲ್ಲಿ ತಮ್ಮನನ್ನು ನೋಡಿದ ಅಕ್ಕ ನಡೆದಿರುವ ಎಲ್ಲಾ ಘಟನೆ ಬಗ್ಗೆ ತಿಳಿಸಿದ್ದಾಳೆ. ನಂತರ ಶಿವಣ್ಣ ಕುಟುಂಬ ಸೇರಿಕೊಂಡಿದ್ದಾರೆ.