ಬೆಂಗಳೂರು (ಸೆ.10): ಹಸು ಚರ್ಮ ಹಾಗೂ ಮೂಳೆಗಳ್ನು ಹುಲಿ ಚರ್ಮ ಮತ್ತು ಹಲ್ಲುಗಳೆಂದು ಸುಳ್ಳು ಹೇಳಿ ಜನರಿಗೆ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಸಿ.ಟಿ.ಮಾರ್ಕೆಟ್‌ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ.

ರಾಮನಗರ ತಾಲೂಕಿನ ಬಿಡದಿ ಹತ್ತಿರದ ಗೌರಿಪುರದ ನಿವಾಸಿ ಸುಂದರ್‌ ಸಿಂಗ್‌ ಅಲಿಯಾಸ್‌ ಸುಂದರ್‌ ಬಂಧಿತನಾಗಿದ್ದು, ಆರೋಪಿಯಿಂದ 30 ಬಿಳಿ ಬಣ್ಣದ ಹಲ್ಲುಗಳು ಹಾಗೂ ಹಸುವಿನ ಚರ್ಮ ಜಪ್ತಿ ಮಾಡಲಾಗಿದೆ. ಜಿ.ಪಿ.ಸ್ಟ್ರೀಟ್‌ನಲ್ಲಿರುವ ಕೋನಾರ್ಕ್ ಲಾಡ್ಜ್‌ನ ಮೇಲೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಗೋವಿನ ಚರ್ಮವನ್ನು ಒಣಗಿಸಿ ಬಳಿಕ ಅದಕ್ಕೆ ಹುಲಿ ಚರ್ಮದಂತೆ ಬಣ್ಣ ಹಾಕಿದ್ದಾನೆ. ಹಾಗೆ ದನದ ಮೂಳೆಗಳನ್ನು ಹುಲಿಯ ಹಲ್ಲಿನಂತೆ ಆಕೃತಿಯನ್ನು ಮಾಡಿದ್ದಾಗಿ ವಿಚಾರಣೆ ವೇಳೆ ಆರೋಪಿ ತಿಳಿಸಿದ್ದಾನೆ. ಈ ನಕಲಿ ವಸ್ತುಗಳನ್ನು ಮೈಸೂರು ರಸ್ತೆಯ ಸಿರ್ಸಿ ವೃತ್ತದ ಬಳಿ ಜನರಿಗೆ 15 ಸಾವಿರಕ್ಕೆ ಮಾರಾಟ ಮಾಡಿದ್ದ ಸುಂದರ್‌, ಇನ್ನುಳಿದ ವಸ್ತುಗಳ ಮಾರಾಟಕ್ಕೆ ಯತ್ನಿಸಿದ್ದ. ಆಗ ಖಚಿತ ಮಾಹಿತಿ ಪಡೆದು ಲಾಡ್ಜ್‌ ಮೇಲೆ ದಾಳಿ ನಡೆಸಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಲಾಕ್‌ಡೌನ್‌ ಬಳಿಕ ಆರ್ಥಿಕ ಸಂಕಷ್ಟಎದುರಾಯಿತು. ಇದಕ್ಕಾಗಿ ಪಶುವಿನ ಚರ್ಮ ಮತ್ತು ಮೂಳೆಗಳನ್ನು ಜನರಿಗೆ ಮಾರಾಟ ಮಾಡಲು ನಿರ್ಧರಿಸಿದೆ. ಹುಲಿ ಚರ್ಮ ಹಾಗೂ ಹಲ್ಲುಗಳಿಗೆ ಭಾರಿ ಬೇಡಿಕೆ ಇದೆ. ಅದೃಷ್ಟತರುತ್ತದೆ ಎಂಬ ಪ್ರತೀತಿಯಿಂದ ಜನರು ಖರೀದಿಸುತ್ತಾರೆ ಎಂದು ವಿಚಾರಣೆ ವೇಳೆ ಆರೋಪಿ ಹೇಳಿರುವುದಾಗಿ ಗೊತ್ತಾಗಿದೆ.