ವರದಿ :  ಎನ್‌.ಲಕ್ಷ್ಮಣ್‌

ಬೆಂಗಳೂರು [ಜ.11]  : ಮಹಿಳಾ ಸಬ್‌ ಇನ್‌ಸ್ಪೆಕ್ಟರ್‌ (ಪಿಎಸ್‌ಐ)ರನ್ನೇ ಮಂಚಕ್ಕೆ ಬರುವಂತೆ ಆಹ್ವಾನಿಸಿದ್ದಲ್ಲದೆ, ಅಶ್ಲೀಲ ಚಿತ್ರಗಳನ್ನು ಪಿಎಸ್‌ಐಗೆ ಕಳುಹಿಸಿ ಹಣಕ್ಕೆ ಬ್ಲ್ಯಾಕ್‌ಮೇಲ್‌ ಮಾಡಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.

ನಗರದ ಠಾಣೆಯೊಂದರ ಮಹಿಳಾ ಸಬ್‌ಇನ್‌ಸ್ಪೆಕ್ಟರ್‌ ವಿದ್ಯಾರಣ್ಯಪುರ ಠಾಣೆಗೆ ದೂರು ನೀಡಿದ್ದಾರೆ. ಆರೋಪಿ ವಿರುದ್ಧ ಲೈಂಗಿಕ ದೌರ್ಜನ್ಯ, ಹಣಕ್ಕೆ ಬೇಡಿಕೆ ಹಾಗೂ ಬೆದರಿಕೆ ಹಾಕಿದ ಪ್ರಕರಣದಡಿ ಎಫ್‌ಐಆರ್‌ ದಾಖಲಿಸಿಕೊಂಡು ಆತನ ಬಂಧನಕ್ಕೆ ಶೋಧ ನಡೆಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ವಿಜಯಲಕ್ಷ್ಮೀ(ಹೆಸರು ಬದಲಾಯಿಸಲಾಗಿದೆ) ಅವರು ನಗರದ ಠಾಣೆಯೊಂದರಲ್ಲಿ ಮಹಿಳಾ ಸಬ್‌ ಇನ್‌ಸ್ಪೆಕ್ಟರ್‌ ಆಗಿ ಕೆಲ ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಜ.7ರಂದು ರಾತ್ರಿ 9.45ರ ಸುಮಾರಿಗೆ ವಿಜಯಲಕ್ಷ್ಮೇ ಅವರು ಕರ್ತವ್ಯ ಮುಗಿಸಿ ಮನೆಯಲ್ಲಿದ್ದರು. ಈ ವೇಳೆ ಅವರ ಮೊಬೈಲ್‌ಗೆ ಕರೆ ಮಾಡಿದ್ದ ಆರೋಪಿ ‘ಲಾಡ್ಜ್‌ಗೆ ಬರುತ್ತೀರಾ? ನಿಮಗೆ ಎಷ್ಟುಬೇಕು ಹೇಳಿ, ನಾನು ಕೊಡುತ್ತೇನೆ’ ಎಂದು ಹೇಳಿದ್ದಾನೆ. ಕೂಡಲೇ  ಅವರು ‘ಏಯ್‌ ಯಾರೋ ಲೋ.. ನೀನು. ನಾನು ಯಾರು ಅಂತ ಗೊತ್ತ ನಿನಗೆ? ಯಾರೋ ನನ್ನ ಮೊಬೈಲ್‌ ಸಂಖ್ಯೆ ನಿನಗೆ ನೀಡಿದ್ದು’ ಎಂದು ಏರು ಧ್ವನಿಯಲ್ಲಿ ಕೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಆರೋಪಿ ‘ನೀವು ಪೊಲೀಸ್‌ ಸಬ್‌ಇನ್‌ಸ್ಪೆಕ್ಟರ್‌  ಎಂದು ಗೊತ್ತು. ಅದಕ್ಕೆ ಕರೆ ಮಾಡಿದೆ. ನಿಮಗೆ ಪತಿ ಇಲ್ಲ ಎಂಬ ವಿಚಾರ ಕೂಡ ನನಗೆ ತಿಳಿದಿದೆ. ನಿಮ್ಮ ಠಾಣೆಯಲ್ಲಿರುವ ಗೃಹ ರಕ್ಷಕ ಸಿಬ್ಬಂದಿ ಗೌರಮ್ಮ [ಹೆಸರು ಬದಲಾಯಿಸಲಾಗಿದೆ] ನಿಮ್ಮ ಮೊಬೈಲ್‌ ಸಂಖ್ಯೆ ನೀಡಿದ್ದಾರೆ’ ಎಂದಿದ್ದಾನೆ. ಸಬ್‌ ಇನ್‌ಸ್ಪೆಕ್ಟರ್‌ ಆತನಿಗೆ ಬೈದು ಫೋನ್‌ ಕಟ್‌ ಮಾಡಿದ್ದರು. ಗೃಹ ರಕ್ಷಕ ಸಿಬ್ಬಂದಿ ಪುಟ್ಟಮ್ಮಳ 26 ನಗ್ನ ಫೋಟೋವನ್ನು ಸಬ್‌ ಇನ್‌ಸ್ಪೆಕ್ಟರ್‌ ಮೊಬೈಲ್‌ಗೆ ವಾಟ್ಸಪ್‌ ಮಾಡಿದ್ದಾನೆ.

ಫೋಟೋ ಕಳುಹಿಸಿದ ತಕ್ಷಣವೇ ಆರೋಪಿ ಸಬ್‌ ಇನ್‌ಸ್ಪೆಕ್ಟರ್‌ಗೆ ಕರೆ ಮಾಡಿ, ‘ಫೋಟೋಗಳನ್ನು ನೋಡಿದ್ರಾ? ಈಗ ಅರ್ಥ ಆಯ್ತಾ, ನಾನು ಎಷ್ಟು ಬಲಿಷ್ಠ ಅಂತ’ ಎಂದಿದ್ದಾನೆ. ಈ ವೇಳೆ ಸಬ್‌ ಇನ್‌ಸ್ಪೆಕ್ಟರ್‌, ‘ನನ್ನ ಬಗ್ಗೆ ಗೊತ್ತಿದ್ದೂ ಕರೆ ಮಾಡಿದ್ದೀಯಾ’ ಎಂದು ಖಾರವಾಗಿ ಹೇಳಿದ್ದಾರೆ. ಇದಕ್ಕೆ ಆರೋಪಿ, ‘ನೀವು ನಿಮ್ಮ ಅಧಿಕಾರಿಗಳ ಜತೆ ಸಂಬಂಧ ಇಟ್ಟುಕೊಂಡು 20 ರಿಂದ 25 ಸಾವಿರ ರು.ಗೆ ಹೋಗುವ ವಿಚಾರ ತಿಳಿದಿದೆ. ನನಗೆ ಎಲ್ಲಾ ಗೊತ್ತು. ಅದಕ್ಕೆ ನಾನು ನಿಮಗೆ ಫೋನ್‌ ಮಾಡಿದ್ದು. ಗೌರಮ್ಮ ನಿಮ್ಮ ಬಗ್ಗೆ ಎಲ್ಲಾ ಹೇಳಿದ್ದಾಳೆ. ನಿಮಗೆ ಎಷ್ಟುಬೇಕು, ಯಾವಾಗ, ಎಲ್ಲಿಗೆ ಬರುತ್ತೀರಾ’ ಎಂದು ಅಸಭ್ಯವಾಗಿ ಮಾತನಾಡಿದ್ದಾನೆ.

ತಕ್ಷಣವೇ ಮಹಿಳಾ ಪಿಎಸ್‌ಐ ಆತನಿಗೆ ನಿಂದಿಸಿ ಕರೆ ಕಟ್‌ ಮಾಡಲು ಮುಂದಾಗುತ್ತಿದ್ದಂತೆ, ‘ಕರೆ ಕಟ್‌ ಮಾಡಿದರೆ ನಿಮ್ಮ ಎಲ್ಲಾ ಬಂಡವಾಳವನ್ನು ಇಲಾಖೆಯಲ್ಲಿ ಬಯಲು ಮಾಡುತ್ತೇನೆ. ನಿಮ್ಮ ಮಾನವನ್ನು ಮೂರು ಕಾಸಿಗೆ ಹರಾಜು ಹಾಕುತ್ತೇನೆ. ನಾನು ಹಾಗೆ ಮಾಡದೆ ಇರಬೇಕು ಎಂದರೆ ಜ.8ರಂದು ಮಧ್ಯಾಹ್ನ 12ಕ್ಕೆ ನಾನು ಹೇಳಿದ ಸ್ಥಳಕ್ಕೆ ಒಂದು ಲಕ್ಷ ತಂದು ಕೊಡಬೇಕು. ಇಲ್ಲದಿದ್ದರೆ ನಿಮ್ಮ ಬಂಡವಾಳ ಬಯಲು ಮಾಡುತ್ತೇನೆ. ಯೋಚನೆ ಮಾಡಿ’ ಎಂದು ಹೇಳಿ ಕರೆ ಸ್ಥಗಿತಗೊಳಿಸಿದ್ದ.

ಕೂಡಲೇ ಪಿಎಸ್‌ಐ  ಅವರು ಕರೆ ಮಾಡಿದ್ದ ಅಪರಿಚಿತ ಹಾಗೂ ಗೃಹ ರಕ್ಷಕ ಸಿಬ್ಬಂದಿ ಗೌರಮ್ಮ ಸಂಚು ರೂಪಿಸಿ ಅಶ್ಲೀಲ ಫೋಟೋ ಕಳುಹಿಸಿ ನನಗೆ ಕಿರುಕುಳ ನೀಡಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ವಿವರಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಪ್ರೇಯಸಿಗೆ ಡ್ಯೂಟಿ ಕೊಡಿಸಲು ಕೃತ್ಯ!

ಗೃಹ ರಕ್ಷಕ ಸಿಬ್ಬಂದಿ ಗೌರಮ್ಮಗೆ ಆರೋಪಿ ಪ್ರಿಯತಮನಾಗಿದ್ದಾನೆ. ಪ್ರೇಯಸಿಗೆ ಡ್ಯೂಟಿ ಕೊಡಿಸುವ ಸಲುವಾಗಿ ಮಹಿಳಾ ಸಬ್‌ ಇನ್‌ಸ್ಪೆಕ್ಟರ್‌ಗೆ ಕರೆ ಮಾಡಿ ಅಶ್ಲೀಲವಾಗಿ ಮಾತನಾಡಿ, ಬೆದರಿಕೆ ವೊಡ್ಡಿದ್ದಾನೆ. ದೂರು ದಾಖಲಾಗುತ್ತಿದ್ದಂತೆ ಮೊಬೈಲ್‌ ಸ್ವಿಚ್‌ಆಫ್‌ ಮಾಡಿಕೊಂಡು ಆರೋಪಿ ಪರಾರಿಯಾಗಿದ್ದಾನೆ. ಆರೋಪಿ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಆತನ ಬಂಧನಕ್ಕೆ ಬಲೆ ಬೀಸಲಾಗಿದೆ.

ಈ ಹಿಂದೆ ಕೂಡ ಆರೋಪಿ ಮಹಿಳಾ ಸಹಾಯ ಸಬ್‌ ಇನ್‌ಸ್ಪೆಕ್ಟರ್‌ಗೆ (ಎಎಸ್‌ಐ) ಬೆದರಿಸಿದ್ದ. ಆಗ ಆತನಿಗೆ ಎಚ್ಚರಿಕೆ ನೀಡಿ ಕಳುಹಿಸಲಾಗಿತ್ತು. ಆರೋಪಿಯನ್ನು ಬಂಧಿಸಿ ಸೂಕ್ತ ಕ್ರಮಕೈಗೊಳ್ಳಲಾಗುವುದು. ಘಟನೆಯಲ್ಲಿ ಗೃಹ ರಕ್ಷಕ ಸಿಬ್ಬಂದಿ ಪಾತ್ರದ ಬಗ್ಗೆ ತಿಳಿದು ಬಂದಿಲ್ಲ. ಆಕೆ ವಿರುದ್ಧ ಕೂಡ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದರು.

ಪ್ರಕರಣದ ಸಂಬಂಧ ಆರೋಪಿ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಹೊರಗಿನ ವ್ಯಕ್ತಿ ಮಹಿಳಾ ಸಬ್‌ಇನ್‌ಸ್ಪೆಕ್ಟರ್‌ಗೆ ಕರೆ ಮಾಡಿ ಕೆಟ್ಟದಾಗಿ ಮಾತನಾಡಿ ಬೆದರಿಸಿದ್ದಾನೆ. ಆರೋಪಿಯನ್ನು ಬಂಧಿಸಿದ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.

-ಭೀಮಾಶಂಕರ್‌ ಎಸ್‌.ಗುಳೇದ್‌, ಈಶಾನ್ಯ ವಿಭಾಗದ ಡಿಸಿಪಿ