Asianet Suvarna News Asianet Suvarna News

ಆಕ್ಸಿಜನ್‌ ವಿಷಯಕ್ಕೆ ಆ್ಯಂಬುಲೆನ್ಸ್‌ ಚಾಲಕನ ಅಟ್ಟಾಡಿಸಿ ಹಲ್ಲೆ!

ರಾಜಧಾನಿಯಲ್ಲಿ ಕೊರೋನಾ ಸೋಂಕಿತನಿಗೆ ಆಕ್ಸಿಜನ್‌ ನೀಡಲಿಲ್ಲ ಎಂದು ಆರೋಪಿಸಿರುವ ಸೋಂಕಿತನ ಕಡೆಯವರು 108 ಆ್ಯಂಬುಲೆನ್ಸ್‌ ಚಾಲಕನಿಗೆ ಆಸ್ಪತ್ರೆ ಆವರಣದಲ್ಲಿ ಅಟ್ಟಾಡಿಸಿಕೊಂಡು ಹಲ್ಲೆ ನಡೆಸಿರುವ ಅಮಾನವೀಯ ಘಟನೆ ಗುರುವಾರ ಜರುಗಿದೆ.

Man attacks ambulance driver in public as he did not get oxygen cylinder
Author
Bangalore, First Published Jul 31, 2020, 7:34 AM IST

ಬೆಂಗಳೂರು(ಜು.31): ರಾಜಧಾನಿಯಲ್ಲಿ ಕೊರೋನಾ ಸೋಂಕಿತನಿಗೆ ಆಕ್ಸಿಜನ್‌ ನೀಡಲಿಲ್ಲ ಎಂದು ಆರೋಪಿಸಿರುವ ಸೋಂಕಿತನ ಕಡೆಯವರು 108 ಆ್ಯಂಬುಲೆನ್ಸ್‌ ಚಾಲಕನಿಗೆ ಆಸ್ಪತ್ರೆ ಆವರಣದಲ್ಲಿ ಅಟ್ಟಾಡಿಸಿಕೊಂಡು ಹಲ್ಲೆ ನಡೆಸಿರುವ ಅಮಾನವೀಯ ಘಟನೆ ಗುರುವಾರ ಜರುಗಿದೆ.

ಆ್ಯಂಬುಲೆನ್ಸ್‌ ಚಾಲಕ ಯೋಗೇಶ್‌(33) ಹಲ್ಲೆಗೆ ಒಳಗಾದವರು. ಭಾರತೀನಗರದಲ್ಲಿ 75 ವರ್ಷ ವ್ಯಕ್ತಿಯೊಬ್ಬರಿಗೆ ಕೊರೋನಾ ಸೋಂಕು ದೃಢಪಟ್ಟಹಿನ್ನೆಲೆಯಲ್ಲಿ ಸಂಜೆ 4ರ ಸುಮಾರಿಗೆ ಯೋಗೇಶ್‌ ಆ್ಯಂಬುಲೆನ್ಸ್‌ ತೆಗೆದುಕೊಂಡು ಆ ವ್ಯಕ್ತಿಯನ್ನು ನಗರದ ಎಂ.ಎಸ್‌.ರಾಮಯ್ಯ ಆಸ್ಪತ್ರೆಗೆ ಕರೆತಂದಿದ್ದಾರೆ. ಈ ವೇಳೆ ಆಸ್ಪತ್ರೆ ಸಿಬ್ಬಂದಿ 20 ನಿಮಿಷ ಬಳಿಕ ದಾಖಲು ಮಾಡಿಕೊಳ್ಳುವುದಾಗಿ ಹೇಳಿದ್ದು, ಅಲ್ಲಿಯವರೆಗೂ ಆ್ಯಂಬುಲೆನ್ಸ್‌ನಲ್ಲಿ ಸೋಂಕಿತ ಇರಲಿ ಎಂದಿದ್ದಾರೆ.

ಶೇ.25ರಷ್ಟುಸೋಂಕಿತರಿಗಷ್ಟೇ ಜ್ವರ: ಕೊರೋನಾ ಲಕ್ಷಣಕ್ಕೆ ಹೊಸ ಸೇರ್ಪಡೆ!

ಈ ನಡುವೆ ಸೋಂಕಿತ ಮೃತಪಟ್ಟಿದ್ದಾರೆ. ಈ ವೇಳೆ ಮೃತ ಸೋಂಕಿನ ಕಡೆಯವರು ಆ್ಯಂಬುಲೆನ್ಸ್‌ ಚಾಲಕ ಯೋಗೇಶ್‌ ಆಕ್ಸಿಜನ್‌ ನೀಡದಿರುವುದೇ ಸಾವಿಗೆ ಕಾರಣ ಎಂದು ಆರೋಪಿಸಿ, ಆಸ್ಪತ್ರೆ ಆವರಣದಲ್ಲೇ ಅಟ್ಟಾಡಿಸಿಕೊಂಡು ಹಲ್ಲೆ ಮಾಡಿದ್ದಾರೆ. ಈ ವೇಳೆ ಸದಾಶಿವನಗರ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ, ಪರಿಸ್ಥಿತಿ ನಿಯಂತ್ರಿಸಿದ್ದಾರೆ.

ಘಟನೆ ಸಂಬಂಧ ಪ್ರತಿಕ್ರಿಸಿರುವ ಯೋಗೇಶ್‌ ಸ್ನೇಹಿತ ದೇವರಾಜ್‌ ಅವರು, ಯೋಗೇಶ್‌ ಸೋಂಕಿತನ್ನು ಆಸ್ಪತ್ರೆಗೆ ಕರೆತರಲು ಮನೆಗೆ ತೆರಳಿದ್ದಾಗಲೇ ಸೋಂಕಿತನ ಸ್ಥಿತಿ ಗಂಭೀರವಾಗಿತ್ತು. ಅಲ್ಲದೆ, ಯೋಗೇಶ್‌ ಆ್ಯಂಬುಲೆನ್ಸ್‌ನಲ್ಲಿ ಸೋಂಕಿತನಿಗೆ ಆಕ್ಸಿಜನ್‌ ನೀಡಿದ್ದರು. ಆದರೂ ಅವರ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಹೇಳಿದರು.

ಆಸ್ಪತ್ರೆಯ ಆವರಣದಲ್ಲಿ ಆ್ಯಂಬುಲೆನ್ಸ್‌ ಚಾಲಕ ಯೋಗೇಶ್‌ ಮೇಲೆ ಮೃತ ಸೋಂಕಿತನ ಕಡೆಯವರು ಹಲ್ಲೆ ಮಾಡುತ್ತಿರುವ 14 ಸೆಂಕೆಂಡಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರದಾಡುತ್ತಿದ್ದು, ಚಾಲಕನ ಮೇಲಿನ ಹಲ್ಲೆಗೆ ಎಲ್ಲೆಡೆಯಿಂದ ಟೀಕೆ ವ್ಯಕ್ತವಾಗಿದೆ. ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ.ಸುಧಾಕರ್‌ ಅವರೇ ತಮ್ಮ ಟ್ವಿಟರ್‌ ಖಾತೆಯಲ್ಲಿ ಈ ವಿಡಿಯೋ ಹಾಕಿ ಘಟನೆಯನ್ನು ಖಂಡಿಸಿದ್ದಾರೆ.

ಶೀಘ್ರ ದಾಖಲಿಸಿಕೊಂಡಿದ್ದರೆ ಪ್ರಾಣ ಉಳಿಯುತ್ತಿತ್ತು:

ಆಸ್ಪತ್ರೆಯಲ್ಲಿ ರೋಗಿಯನ್ನು ದಾಖಲು ಮಾಡಿಕೊಳ್ಳದೆ ಕಾಯಿಸಿದ ಪರಿಣಾಮ ರೋಗಿ ಆ್ಯಂಬುಲೆನ್ಸ್‌ನಲ್ಲೇ ಮೃತಪಟ್ಟಿದ್ದಾರೆ ಎಂಬ ಸುದ್ದಿ ನಿಜಕ್ಕೂ ನೋವಿನ ಸಂಗತಿ. ಸರ್ಕಾರ ಸಾವಿನ ಸಂಖ್ಯೆಯನ್ನು ಇಳಿಸಲು ಶತಪ್ರಯತ್ನ ಮಾಡುತ್ತಿದೆ. ಆಸ್ಪತ್ರೆ ಸಿಬ್ಬಂದಿ ರೋಗಿಯನ್ನು ಬೇಗ ದಾಖಲಿಸಿಕೊಂಡಿದ್ದರೆ ಪ್ರಾಣ ಉಳಿಯುತ್ತಿತ್ತು ಎಂದು ಟ್ವೀಟ್‌ ಮಾಡಿದ್ದಾರೆ.

ಹಲ್ಲೆಗೆ ಸಚಿವ ಡಾ.ಕೆ.ಸುಧಾಕರ್‌ ಖಂಡನೆ

ಎಂ.ಎಸ್‌.ರಾಮಯ್ಯ ಆಸ್ಪತ್ರೆಯ ಆವರಣದಲ್ಲಿ ಕೊರೋನಾ ವಾರಿಯರ್‌ ಆ್ಯಂಬುಲೆನ್ಸ್‌ ಚಾಲಕ ಮೇಲೆ ನಡೆದಿರುವ ಹಲ್ಲೆ ಅಮಾನವೀಯ ವರ್ತನೆ. ಪ್ರಾಣವನ್ನೂ ಲೆಕ್ಕಿಸದೆ 108 ಚಾಲಕ ಆಸ್ಪತ್ರೆಗೆ ದಾಖಲಿಸಲು ರೋಗಿಯನ್ನು ಕರೆ ತಂದರೆ ಈ ರೀತಿ ಹಲ್ಲೆ ಮಾಡಿರುವುದು ಸರಿಯಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ತಮ್ಮ ಟ್ವಿಟರ್‌ ಖಾತೆಯಲ್ಲಿ ಹಲ್ಲೆ ಘಟನೆಯನ್ನು ಖಂಡಿಸಿದ್ದಾರೆ.

Follow Us:
Download App:
  • android
  • ios