ಬೆಂಗಳೂರು [ಆ.30]:  ಚಲನಚಿತ್ರ, ಧಾರವಾಹಿ ಹಾಗೂ ಜಾಹೀರಾತುಗಳಲ್ಲಿ ನಟಿಸಲು ಅವಕಾಶ ಕೊಡಿಸುವುದಾಗಿ ನಂಬಿಸಿ ಯುವತಿಯರಿಂದ ಹಣ ಪಡೆದು ವಂಚಿಸುತ್ತಿದ್ದ ಕಿಡಿಗೇಡಿಯೊಬ್ಬ ನಂದಿನಿ ಲೇಔಟ್‌ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಹೆಸರಘಟ್ಟಮುಖ್ಯರಸ್ತೆಯ ಕಿರ್ಲೋಸ್ಕರ್‌ ಲೇಔಟ್‌ ನಿವಾಸಿ ನಿಖಿಲ್‌ ಗೌಡ ಅಲಿಯಾಸ್‌ ವಾದಿರಾಜ್‌ ಬಂಧಿತ. ಕೆಲ ದಿನಗಳ ಹಿಂದೆ ನಂದಿನಿಲೇಔಟ್‌ನ ರೂಪಾ ಎಂಬುವರಿಂದ 25 ಸಾವಿರ ರು. ಪಡೆದು ಆರೋಪಿ ವಂಚಿಸಿದ್ದ. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಮೊಬೈಲ್‌ ಕರೆಗಳ ಮಾಹಿತಿ ಆಧರಿಸಿ ನಿಖಿಲ್‌ನನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಫೇಸ್‌ಬುಕ್‌ನಲ್ಲಿ ಯುವತಿಯರಿಗೆ ಗಾಳ: ಫೇಸ್‌ಬುಕ್‌ನಲ್ಲಿ ನಟನಾಸಕ್ತಿ ಹೊಂದಿದ ಯುವತಿಯರಿಗೆ ನಿಖಿಲ್‌ ಗಾಳ ಹಾಕುತ್ತಿದ್ದ. ತಾನೇ ಯುವತಿಯರಿಗೆ ಫ್ರೆಂಡ್‌ ರಿಕ್ವೆಸ್ಟ್‌ ಕಳುಹಿಸಿ ಪರಿಚಯಿಸಿಕೊಳ್ಳುತ್ತಿದ್ದ ಆತ, ಬಳಿಕ ಚಲನಚಿತ್ರ, ಧಾರವಾಹಿ ಹಾಗೂ ಜಾಹೀರಾತುಗಳಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ ಅವರಿಂದ ಹಣ ಪಡೆದು ಟೋಪಿ ಹಾಕುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇತ್ತೀಚಿಗೆ ನಂದಿನಿಲೇ ಔಟ್‌ನಲ್ಲಿ ನೆಲೆಸಿರುವ ರಾಣಿಬೆನ್ನೂರು ತಾಲೂಕಿನ ರೂಪಾ ಅವರಿಗೆ ಫೇಸ್‌ಬುಕ್‌ನಲ್ಲಿ ನಿಖಿಲ್‌ ಸ್ನೇಹವಾಗಿದೆ. ಈ ಗೆಳೆತನದಲ್ಲಿ ಆರೋಪಿ, ನನಗೆ ಹಲವು ಚಲನಚಿತ್ರ ಮತ್ತು ಧಾರವಾಹಿ ನಿರ್ದೇಶಕರು ಗೊತ್ತಿದ್ದಾರೆ. ನಿಮಗೆ ನಟಿಸಲು ಅವಕಾಶ ಕೊಡಿಸುತ್ತೇನೆ ಎಂದಿದ್ದ. ಈ ನಾಜೂಕಿನ ಮಾತುಗಳಿಗೆ ಸಂತ್ರಸ್ತೆ ವಿಶ್ವಾಸಗೊಂಡಿದ್ದರು. ಬಳಿಕ ಪೋತೀಸ್‌ ಸ್ಯಾರೀಸ್‌ ಮತ್ತು ಧವನಂ ಜ್ಯುವೆಲ್ಸ್‌ನ ಜಾಹೀರಾತಿನ ಫೋಟೋ ಶೂಟ್ಸ್‌ಗೆ ಆಯ್ಕೆಯಾಗಿದ್ದೀರಿ ಎಂದು ನಂಬಿಸಿದ ಆರೋಪಿ, ರೂಪಾ ಅವರಿಂದ ಹಣ ಪಡೆದಿದ್ದ. ಹಣ ಸಿಕ್ಕಿದ್ದ ಬಳಿಕ ಆತನ ಮೊಬೈಲ್‌ ಸ್ವಿಚ್‌ಆಫ್‌ ಆಗಿತ್ತು. ಇದರಿಂದ ಅನುಮಾನಗೊಂಡ ಸಂತ್ರಸ್ತೆ, ಕೊನೆಗೆ ವಂಚನೆ ಕುರಿತು ನಂದಿನಿಲೇಔಟ್‌ ಠಾಣೆಯಲ್ಲಿ ದೂರು ನೀಡಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಇದೇ ರೀತಿ ಬೆಂಗಳೂರು ಮಾತ್ರವಲ್ಲದೆ ದಾವಣಗೆರೆ ಹಾಗೂ ಮೈಸೂರಿನ ಒಟ್ಟು 9 ಯುವತಿಯರಿಗೆ 4.23 ಲಕ್ಷ ರು. ಆರೋಪಿ ವಂಚಿಸಿದ್ದಾನೆ. ಅಲ್ಲದೆ ಮಂಜುನಾಥ್‌ ಎಂಬುವರಿಗೆ ಬಿಡಿಎನಲ್ಲಿ ನಿವೇಶನ ಕೊಡಿಸುತ್ತೇನೆಂದು 50 ಸಾವಿರ ರು. ವಸೂಲಿಗೆ ಮಾಡಿ ನಾಮ ಹಾಕಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.