ಚಿಕ್ಕಬಳ್ಳಾಪುರ (ಆ.28): ನಾನು ಹೋಮ್‌ ಮಿನಿಸ್ಟರ್‌ ತಮ್ಮ ಮಾತನಾಡುವುದು ಎಂದು ಸುಳ್ಳು ಹೇಳಿ ಪೊಲೀಸರಿಗೆ ಗಲಾಟೆ ಪ್ರಕರಣದಲ್ಲಿ ತನ್ನ ಸ್ನೇಹಿತನಿಗೆ ಸಹಾಯ ಮಾಡುವಂತೆ ಧಮ್ಕಿ ಹಾಕಿದ್ದ ಅಸಾಮಿ ಹಾಗು ಆತನ ಸಹಚರನನ್ನು ಜಿಲ್ಲೆಯ ಪೊಲೀಸರು ಬುಧವಾರ ರಾತ್ರಿ ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಮೂಲದ ನಿವಾಸಿ ಬಸವರಾಜ್‌ ಹಾಗೂ ಆತನ ಸಹಚರ ಗೌರಿಬಿದನೂರು ತಾಲೂಕಿನ ಪುಲಗಾನಹಳ್ಳಿ ನಿವಾಸಿ ಶಾಲಾ ಶಿಕ್ಷಕ 40 ವರ್ಷದ ರವಿಪ್ರಕಾಶ್‌ರನ್ನು ಎಂದು ಗುರುತಿಸಲಾಗಿದ್ದು ಮಂಚೇನಹಳ್ಳಿ ಪೊಲೀಸರು ಇವರಿಬ್ಬರನ್ನೂ ಬಂಧಿಸಿದ್ದಾರೆ.

1 ಕೋಟಿ ಮೌಲ್ಯದ ಗಾಂಜಾ ವಶ: ರಾಜಕಾರಣಿ ಸೇರಿ ಮೂವರ ಸೆರೆ...

ಏನಿದು ಪ್ರಕರಣ?

ಬಂಧಿತರ ಪೈಕಿ ಪ್ರಮುಖ ಆರೋಪಿ ಬಸವರಾಜ್‌, ಜಿಲ್ಲೆಯ ಮಂಚೇನಹಳ್ಳಿ ಠಾಣೆ ಪಿಎಸ್‌ಐ ಲಕ್ಷ್ಮೇನಾರಾಯಣ ಎಂಬುವರಿಗೆ ದೂರವಾಣಿ ಕರೆ ಮಾಡಿ ತಾನು ಗೃಹ ಸಚಿವ ಬಸವರಾಜ ಬೊಮ್ಮಾಯಿ ರವರ ಸಹೋದರ ಮಹೇಶ್‌ ಬೊಮ್ಮಾಯಿ ಎಂದು ಪರಿಚಯಿಸಿಕೊಂಡು ತಮ್ಮ ಸಂಬಂದಿಯೊಬ್ಬರು ಠಾಣೆಗೆ ಬರುತ್ತಾರೆ. ಅವರಿಗೆ ಕೆಲಸ ಮಾಡಿಕೊಡಿ ಎಂದು ಹೇಳಿದ್ದಾನೆ. ಆದರೆ ಈತ ತನ್ನ ಸ್ನೇಹಿತ ರವಿಪ್ರಕಾಶ್‌ ಜೊತೆ ಮಂಚೇನಹಳ್ಳಿ ಠಾಣೆಗೆ ತೆರಳಿ, ತಾನು ಹೋಮ್‌ ಮಿನಿಸ್ಟರ್‌ ಕಾನೂನು ಸಲಹೆಗಾರನೆಂದು ಪರಿಚಯಿಸಿಕೊಂಡಿದ್ದಾನೆ. ಈತ ಕಪ್ಪು ಬಣ್ಣದ ಕೋಟ್‌ ಸಹ ಧರಿಸಿದ್ದ. ಅನುಮಾನಗೊಂಡ ಪೊಲೀಸರು ಗುರುತಿನ ಚೀಟಿ ಕೇಳಿದ್ದಾರೆ. ಆಗ ಈತ ಗೃಹಸಚಿವರ ನಕಲಿ ಸಹೋದರ ಎನ್ನುವುದು ಪತ್ತೆಯಾಗಿದ್ದು, ಕೂಡಲೇ ಇಬ್ಬರನ್ನೂ ಬಂಧಿಸಿದ್ದಾರೆ.

ಸ್ಯಾಂಡಲ್‌ವುಡ್ ನಟ- ನಟಿಯರಿಗೆ ಡ್ರಗ್ಸ್‌ ಸಪ್ಲೈ ಮಾಡುತ್ತಿದ್ದವರು ಯಾರು ಗೊತ್ತಾ?..

ಆರೋಪಿಗಳ ತಪ್ಪೊಪ್ಪಿಗೆ:

ಆರೋಪಿ ಬಸವರಾಜ್‌ ಹಾಗೂ ಶಿಕ್ಷಕ ರವಿಪ್ರಕಾಶ್‌ ಪೊಲೀಸರ ಮುಂದೆ ತಪ್ಪು ಒಪ್ಪಿಕೊಂಡಿದ್ದಾರೆ. ಬಳಿಕ ಪೊಲೀಸರು ಆರೋಪಿಗಳು ವಿರುದ್ಧ ಸುಳ್ಳು, ವಂಚನೆ ಆರೋಪ ಸೇರಿದಂತೆ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಗುರುವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.