ಚಾಮರಾಜನಗರ(ಮಾ.19): ಬ್ಯಾಂಕ್‌ನಲ್ಲಿ ರಜೆ ಕೊಡದ ಕಾರಣ ಬೇಸತ್ತ ನೌಕರನೊಬ್ಬ ಕೊರೋನಾ ವೈರಸ್‌ ಇದೆ ಎಂದು ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಬಂದು ತಪಾಸಣೆಗೊಳಗಾದ ವಿಚಿತ್ರ ಪ್ರಸಂಗ ನಡೆದಿದೆ.

ಗುಂಡ್ಲುಪೇಟೆ ಪಟ್ಟಣದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಶಾಖೆಯ ನೌಕರನೊಬ್ಬ ಆಸ್ಪತ್ರೆಯಲ್ಲಿ ಕೊರೋನಾ ವೈರಸ್‌ ಸಂಬಂಧ ತೆರೆಯಲಾಗಿದ್ದ ವಾರ್ಡ್‌ನಲ್ಲಿದ್ದ. ಬುಧವಾರ ಬೆಳಗ್ಗೆ ಆಸ್ಪತ್ರೆಯ ದಾಖಲಾಗಿದ್ದ ಬ್ಯಾಂಕ್‌ನ ನೌಕರರನ್ನು ಎಲ್ಲ ವೈದ್ಯರು ತಪಾಸಣೆ ನಡೆಸಿದರು ಎಂದು ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ರವೀಂದ್ರ ತಿಳಿಸಿದ್ದಾರೆ.

ಮಡಿಕೇರಿಯಲ್ಲಿ ಮೊತ್ತೊಬ್ಬ ವ್ಯಕ್ತಿಗೆ ಕೊರೋನಾ: ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 15ಕ್ಕೆ ಏರಿಕೆ

ಆಸ್ಪತ್ರೆಯಲ್ಲಿದ್ದ ನೌಕರ ಗಂಟಲು ನೋವು ಕಾಣಿಸುತ್ತಿದೆ ಎಂದು ಮಂಗಳವಾರ ರಾತ್ರಿ ಆಸ್ಪತ್ರೆಗೆ ಬಂದಾಗ ಕೊರೋನಾ ವೈರಸ್‌ ಸಂಬಂಧ ಹೆದರಿ ವಾರ್ಡ್‌ನಲ್ಲಿ ಇರಿಸಲಾಗಿತ್ತು. ವೈರಸ್‌ಯಿದೆ ಎಂದು ಆಸ್ಪತ್ರೆಗೆ ದಾಖಲಾಗಿದ್ದ ಬ್ಯಾಂಕ್‌ ನೌಕರ ಈ ಹಿಂದೆ ಕೊಳ್ಳೇಗಾಲ, ಹನೂರಲ್ಲಿ ಇದ್ದಾಗಲೂ ರಜೆ ಕೊಡದಿದ್ದಾಗ ಹುಷಾರಿಲ್ಲ ಎಂದು ಆಸ್ಪತ್ರೆಗೆ ಸೇರುತ್ತಿದ್ದ ಎಂದು ಹೇಳಲಾಗುತ್ತಿದೆ. ಈ ಬಾರಿ ಕೊರೋನಾ ವೈರಸ್‌ ಇದೆ ಎಂದು ನಾಟಕವಾಡಿದಾಗ ವೈದ್ಯರು ಪರಿಶೀಲಿಸಿ ಯಾವ ವೈರಸ್‌ ಕೂಡ ಇಲ್ಲದ್ದರಿಂದ ತಪಾಸಣೆ ಮಾಡಿ ವಾಪಸ್‌ ಕಳುಹಿಸಿದ್ದಾರೆ. ಈ ಬೆಂಗಳೂರು ಮೂಲದವನಾಗಿದ್ದು, ಪಟ್ಟಣದಲ್ಲಿ ಮನೆ ಮಾಡಿಕೊಂಡಿದ್ದ. ವೈದ್ಯರ ತಪಾಸಣೆ ಬಳಿಕ ಅವನನ್ನು ವಾಪಸ್‌ ಕಳುಹಿಸಲಾಗಿದೆ.

ಟಿಎಚ್‌ಒ ಪರಿಶೀಲನೆ:

ಮೂಲೆಹೊಳೆ ಚೆಕ್‌ಪೋಸ್ಟ್‌ನಲ್ಲಿ ಜನರ ತಪಾಸಣೆ ನಡೆಸುತ್ತಿಲ್ಲ ಎಂಬ ದೂರು ಕೇಳಿ ಬಂದಿತ್ತು. ಈ ಹಿನ್ನೆಲೆ ತಾಲೂಕು ಪ್ರಭಾರ ಆರೋಗ್ಯಾಧಿಕಾರಿ ಡಾ. ಸೋಮಣ್ಣ ಹಾಗೂ ಸಿಬ್ಬಂದಿ ಪರಿಶೀಲನೆ ನಡೆಸಿದರು.

ಬ್ಯಾಂಕ್‌ ನೌಕರ ಕೊರೋನಾ ವೈರಸ್‌ ತಗುಲಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ ಎಂಬ ಸುದ್ದಿ ಹರಡಿ ಗುಂಡ್ಲುಪೇಟೆ ಸೇರಿದಂತೆ ತಾಲೂಕಿನ ಬಹುತೇಕ ಕಡೆ ಜನರು ಆತಂಕಕ್ಕೀಡಾಗಿದ್ದರು. ಗಾಳಿ ಸುದ್ದಿಗೆ ಜನರು ಭಯಭೀತರಾಗಿ ಮಾಸ್ಕ್‌ ಹಾಕಿಕೊಂಡು ಹೋಗ್ರಪ್ಪ ಗುಂಡ್ಲುಪೇಟೆಗೆ ಎಂದು ಗ್ರಾಮಾಂತರ ಪ್ರದೇಶದಲ್ಲಿ ಹೇಳುವ ಮಾತು ಕೇಳಿ ಬಂದರೆ ಪಟ್ಟಣ ಪ್ರದೇಶದಲ್ಲಿ ಏನಪ್ಪ ಇಲ್ಲಿಗೂ ಬಂತಲ್ಲ ಮಾರಿ ಎನ್ನುತ್ತಿದ್ದರು.