ಮಳಲಿ ಮಸೀದಿ ವಿವಾದ: ಹಿಂದೂ-ಮುಸ್ಲಿಂ ಸೌಹಾರ್ದ ಸಭೆ: ಶಾಸಕರ ಮಧ್ಯಸ್ಥಿಕೆ!
ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ನೇತೃತ್ವದಲ್ಲಿ ಸಭೆ ನಡೆಸಲಾಗಿದ್ದು, ಮಳಲಿ ಮಸೀದಿ ಆಡಳಿತ, ವಿಎಚ್ ಪಿ ಮುಖಂಡರು ಹಾಗೂ ಮಳಲಿ ಗ್ರಾಮಸ್ಥರು ಸಭೆಯಲ್ಲಿ ಭಾಗಿಯಾಗಿದ್ದರು. ವಿವಾದವನ್ನ ಸೌಹಾರ್ದಯುತವಾಗಿ ಮುಗಿಸುವ ನಿಟ್ಟಿನಲ್ಲಿ ಮೊದಲ ಸುತ್ತಿನ ಸಭೆ ನಡೆದಿದೆ.
ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು
ಮಂಗಳೂರು(ಮೇ.30): ಮಳಲಿ ಮಸೀದಿ ವಿವಾದದಲ್ಲಿ ಸೌಹಾರ್ದತೆ ಹೆಜ್ಜೆ ಇಟ್ಟಿದ್ದಾರೆ ಹಿಂದೂ-ಮುಸ್ಲಿಂ ಮುಖಂಡರು. ಉರಿದು ಬಿದ್ದಿದ್ದ ಎಸ್ ಡಿಪಿಐಗೆ ಸೌಹಾರ್ದತೆಯ ಸಂದೇಶ ಸಾರಿದೆ ಮಳಲಿಯ ಮಸೀದಿ ಆಡಳಿತ. ಸಂಘರ್ಷಕ್ಕೆ ಕರೆ ಕೊಟ್ಟ ಎಸ್ ಡಿಪಿಗೆ ಮಳಲಿ ಮಸೀದಿ ಆಡಳಿತ ಪರೋಕ್ಷ ತಿರುಗೇಟು ನೀಡಿದ್ದು, ಮಸೀದಿ ವಿವಾದ ಸಂಬಂಧ ಶಾಸಕರ ನೇತೃತ್ವದಲ್ಲಿ ಸೌಹಾರ್ದ ಸಭೆ ನಡೆಸಿದೆ.
ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ನೇತೃತ್ವದಲ್ಲಿ ಸಭೆ ನಡೆಸಲಾಗಿದ್ದು, ಮಳಲಿ ಮಸೀದಿ ಆಡಳಿತ, ವಿಎಚ್ ಪಿ ಮುಖಂಡರು ಹಾಗೂ ಮಳಲಿ ಗ್ರಾಮಸ್ಥರು ಸಭೆಯಲ್ಲಿ ಭಾಗಿಯಾಗಿದ್ದರು. ವಿವಾದವನ್ನ ಸೌಹಾರ್ದಯುತವಾಗಿ ಮುಗಿಸುವ ನಿಟ್ಟಿನಲ್ಲಿ ಮೊದಲ ಸುತ್ತಿನ ಸಭೆ ನಡೆದಿದೆ. ಮೊದಲಿಗೆ ಮಸೀದಿ ಕಮಿಟಿಯ ನಿಲುವು ಆಲಿಸಿದ ಶಾಸಕ ಭರತ್ ಶೆಟ್ಟಿ, ನಂತರ ವಿಎಚ್ ಪಿ ಮತ್ತು ಗ್ರಾಮಸ್ಥರ ಜೊತೆ ಮಾತುಕತೆ ನಡೆಸಿದ್ದಾರೆ. ಬಳಿಕ ಎರಡೂ ಬಣದ ಪ್ರಮುಖರ ಜೊತೆ ಸಭೆ ನಡೆಸಿ ಶಾಂತಿ ಮಾತುಕತೆ ಮಾಡಿದ್ದಾರೆ. ಮಳಲಿಯ ಮುಸ್ಲಿಮರ ಜೊತೆ ಚರ್ಚಿಸಿ ಎರಡನೇ ಸುತ್ತಿನ ಸಭೆಗೆ ಹಾಜರಾಗುವ ಭರವಸೆಯನ್ನ ಮಳಲಿ ಮಸೀದಿ ಕಮಿಟಿ ನೀಡಿದೆ. ಮುಂದಿನ ವಾರ ಮತ್ತೊಂದು ಸುತ್ತಿನ ಸೌಹಾರ್ದ ಸಭೆ ನಡೆಸಲು ತೀರ್ಮಾನಿಸಲಾಗಿದೆ. ಕಾನೂನು ಹೋರಾಟ, ಅಷ್ಟಮಂಗಳ ಪ್ರಶ್ನೆ ಮಧ್ಯೆಯೇ ಸಹಬಾಳ್ವೆಯ ಸಂದೇಶ ಸಾರಲಾಗಿದೆ. ಹಿಂದೂ-ಮುಸ್ಲಿಮರ ಮಧ್ಯೆ ಹುಳಿ ಹಿಂಡಲು ಹೊರಟ ಎಸ್ ಡಿಪಿಐಗೆ ಠಕ್ಕರ್ ಕೊಡಲಾಗಿದೆ. ಗ್ರಾಮದ ಸಮಸ್ಯೆಗೆ ಹೊರಗಿನವರ ಪ್ರವೇಶದ ಅಗತ್ಯವಿಲ್ಲ ಅಂತ ನೇರ ಸಂದೇಶ ರವಾನಿಸಿದಂತೆ ಕಾಣುತ್ತಿದೆ.
'ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರದಂತೆ, ಜೀವಹಾನಿ ತಡೆಯಲು ಸೌಹಾರ್ದ ಸಭೆ'
ಮಳಲಿ ಮಸೀದಿ ವಿವಾದ ಸಂಬಂಧ ಹಿಂದೂ-ಮುಸ್ಲಿಂ ಸಭೆ ಬಳಿಕ ಏಷ್ಯಾನೆಟ್ ಸುವರ್ಣನ್ಯೂಸ್ ಗೆ ಶಾಸಕ ಭರತ್ ಶೆಟ್ಟಿ ಹೇಳಿಕೆ ನೀಡಿದ್ದಾರೆ. ಎಸ್ ಡಿಪಿಐ, ಕಾಂಗ್ರೆಸ್ ಹೇಳಿಕೆ ಹಿನ್ನೆಲೆ ಈ ಸಭೆ ಅತೀ ಅಗತ್ಯವಿತ್ತು. ಡಿ.ಕೆ.ಶಿವಕುಮಾರ್ ನಮ್ಮ ತಾಂಬೂಲ ಪ್ರಶ್ನೆ ನಂಬಿಕೆ ಪ್ರಶ್ನೆ ಮಾಡಿದ್ದಾರೆ. ಎಸ್ ಡಿಪಿಐ ಪ್ರಚೋದನೆ ಕೊಟ್ಟು ಶಾಂತಿ ಸುವ್ಯವಸ್ಥೆ ತೊಂದರೆ ಕೊಡ್ತಿದಾರೆ. ಸ್ಥಳೀಯವಾಗಿ ಹಿಂದೂ-ಮುಸ್ಲಿಮರು ಸರಿ ಇದ್ದಾರೆ, ಶಾಂತವಾಗಿ ಇದ್ದಾರೆ. ಮಸೀದಿ ಕಮಿಟಿ, ಹಿಂದೂ ನಾಯಕರು, ಗ್ರಾಮಸ್ಥರ ಜೊತೆ ಸಭೆ ನಡೆಸಿದ್ದೇವೆ. ಶಾಂತಿ ಸುವ್ಯವಸ್ಥೆ ಸಮಸ್ಯೆ ಬಾರದಂತೆ ಸೌಹಾರ್ದಯುತವಾಗಿ ಬಗೆ ಹರಿಸಲು ಸಭೆ ಮಾಡಿದ್ದೇವೆ. ಮಸೀದಿ ಕಮಿಯವರು ಅವರ ಇತಿಹಾಸ, ಪ್ರಾರ್ಥನೆ ಬಗ್ಗೆ ಹೇಳಿದ್ದಾರೆ. ಹಿಂದೂಗಳು ಅವರ ಹಳೆಯ ಮೂರು ದೇವಸ್ಥಾನ ಇತ್ತು, ಮಸೀದಿ ಸರ್ವೇ ಆಗಲಿ ಅಂದಿದ್ದಾರೆ. ಮುಂದೆ ಅಷ್ಟಮಂಗಳ ಪ್ರಶ್ನೆ ಇಡ್ತಾರಂತೆ, ಆದರೆ ಅದು ಅವರ ವೈಯಕ್ತಿಕ. ಆದರೆ ಅದನ್ನ ಅವಹೇಳನ ಮಾಡೋದು ಸರಿಯಲ್ಲ, ಅದು ಓಟ್ ಬ್ಯಾಂಕ್ ರಾಜಕಾರಣ. ಮಸೀದಿ ಜಾಗ ಸರ್ವೇ ಬಗ್ಗೆ ಸಭೆಯಲ್ಲಿ ಮಾತುಕತೆ ನಡೆದಿದೆ, ಆದರೆ ಅವರು ಅದಕ್ಕೆ ಉತ್ತರ ಕೊಟ್ಟಿಲ್ಲ. ಆದರೆ ಅವರ ಮಳಲಿಯ ಎಲ್ಲಾ ಮುಸ್ಲಿಮರ ಜೊತೆ ಸಭೆ ನಡೆಸೋದಾಗಿ ಹೇಳಿದ್ದಾರೆ.
ಮುಂದೆ ಏನೇ ಆದರೂ ಅಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಬಾರದು. ಜೀವಹಾನಿ, ಆಸ್ತಿ ಪಾಸ್ತಿ ಹಾನಿ ಆಗಬಾರದು ಅಂತ ಈ ಸೌಹಾರ್ದ ಸಭೆ ಮಾಡಿದ್ದೇವೆ. ಎಸ್ ಡಿಪಿಐ ಹೇಳಿಕೆ ಬಗ್ಗೆ ಚರ್ಚೆ ಆಯ್ತು, ಎಲ್ಲರೂ ಸೌಹಾರ್ದ ಇರೋಣ ಅಂದೆ. ಅದಕ್ಕೆ ಅವರು ಬೆಂಬಲ ಕೊಟ್ಟಿದ್ದಾರೆ, ಅವರ ಮನಸ್ಸಲ್ಲೂ ಅದು ಇದೆ. ಎಸ್ಡಿಪಿಐಗೆ ರಾಜಕೀಯವಾಗಿ ಜಾಗ ಇಲ್ಲ, ಅದನ್ನ ಅವರು ತೋರಿಸ್ತಿದಾರೆ. ಕಾನೂನು ಹೋರಾಟ ಅಗ್ತಾನೆ ಇದೆ, ಎರಡೂ ಕಡೆಯವರೂ ಅರ್ಜಿ ಹಾಕಿದ್ದಾರೆ. ಇದರ ನಡುವೆ ಬೇರೆ ಏನಾದ್ರೂ ಆಗಬಾರದು ಅಂತ ಸಭೆ ಮಾಡಿದ್ದೇವೆ. ಕಾನೂನು ಹೋರಾಟ ಇಲ್ಲದೇ ಸಮಸ್ಯೆ ಬಗೆ ಹರಿದ್ರೆ ಉತ್ತಮ. ಒಂದೇ ಮಾತುಕತೆಯಲ್ಲಿ ಆಗಲ್ಲ, ಮುಂದೆ ಯೋಚನೆ ಮಾಡಿ ಸಮಯ ನಿಗದಿ ಮಾಡ್ತೇವೆ. ಮುಂದಿನ ದಿನಗಳಲ್ಲಿ ಮತ್ತೆ ಸಭೆ ಸೇರ್ತೇವೆ, ಅವರು ಮಳಲಿಗೆ ಹೋಗಿ ಮತ್ತೆ ಚರ್ಚೆ ಮಾಡ್ತಾರೆ. ಎಸ್ ಡಿಪಿಐ ವಿದ್ವಂಸಕಾರಿ ಮನಸ್ಥಿತಿ ಹೊಂದಿರೋ ಸಂಘಟನೆ. ಅವರನ್ನ ಬ್ಯಾನ್ ಮಾಡಿದ್ರೂ ಅವರು ಬೇರೆ ಹೆಸರಲ್ಲಿ ಮತ್ತೆ ಬರ್ತಾರೆ. ಅವರಿಗೆ ಯಾವುದೇ ಸಂದೇಶ ಕೊಟ್ಟು ಪ್ರಯೋಜನ ಇಲ್ಲ. ಅಷ್ಟಮಂಗಳ ಪ್ರಶ್ನೆಗೆ ಯಾರದ್ರೂ ಒಬ್ಬರ ಜಾಗ ಬೇಕು. ಜಾಗದ ಮಾಲೀಕರಿಗೆ ಸಮಸ್ಯೆ ಇಲ್ಲಾಂದರೆ ಯಾರಿಗೂ ಇಲ್ಲ. ಮಳಲಿ ಮಸೀದಿಯವರು ಅದು ನಿಮ್ಮ ವೈಯಕ್ತಿಕ ಅಂದ್ರು ಎಂದಿದ್ದಾರೆ.
'ಮಳಲಿ ಮಸೀದಿಯ ಮುಸ್ಲಿಮರಲ್ಲಿ ಎಸ್ ಡಿಪಿಐನ ಮಾನಸಿಕತೆ ಇಲ್ಲ'
ಮಳಲಿ ಮಸೀದಿ ವಿವಾದ ಸಂಬಂಧ ಹಿಂದೂ-ಮುಸ್ಲಿಂ ಸಭೆ ಬಳಿಕ ಏಷ್ಯಾನೆಟ್ ಸುವರ್ಣನ್ಯೂಸ್ ಗೆ ವಿಎಚ್ ಪಿ ಮುಖಂಡ ಶರಣ್ ಪಂಪ್ ವೆಲ್ ಪ್ರತಿಕ್ರಿಯಿಸಿದ್ದಾರೆ. ಮಳಲಿ ಮಸೀದಿಯ ಮುಸ್ಲಿಮರಲ್ಲಿ ಎಸ್ ಡಿಪಿಐನ ಮಾನಸಿಕತೆ ಇಲ್ಲ. ಇದು ನಮಗೆ ಇವತ್ತು ನಡೆದ ಸಭೆಯಲ್ಲಿ ಸ್ಪಷ್ಟವಾಗಿ ಅರ್ಥವಾಗಿದೆ. ಎಸ್ ಡಿಪಿಐ ಭಾಷಣ, ಹೇಳಿಕೆ ಯಾವುದೂ ಇವರ ಬಾಯಲ್ಲಿ ಬಂದಿಲ್ಲ. ಇಂಥ ವ್ಯಕ್ತಿಗಳು ಮಳಲಿ ಮತ್ತು ಮಸೀದಿ ಕಮಿಟಿಯಲ್ಲಿ ಇರೋದು ಸಂತೋಷದ ವಿಚಾರ. ಯಾರು ಏನೇ ಮಾತನಾಡಿದ್ರೂ ಸಂಘರ್ಷಕ್ಕೆ ನಾವು ಎಡೆ ಮಾಡಲ್ಲ. ಸಮಸ್ಯೆಗೆ ಸೌಹಾರ್ದಯುತ ಪರಿಹಾರ ಹುಡುಕಲು ಶಾಸಕರ ನೇತೃತ್ವದಲ್ಲಿ ಸಭೆ. ತಾಂಬೂಲ ಪ್ರಶ್ನೆಯಲ್ಲಿ ಶಿವ ಸಾನಿಧ್ಯ ಪತ್ತೆಯಾದ ಬಗ್ಗೆ ಸ್ಪಷ್ಟವಾಗಿ ಹೇಳಿದ್ದೇವೆ. ಸೌಹಾರ್ದಯುತವಾಗಿ ಬಿಟ್ಟು ಕೊಟ್ಟರೆ ಮಂದಿರ ಕಟ್ಟೋಣ ಅಂತ ಮಸೀದಿಯವರಿಗೆ ಹೇಳಿದೆವು. ಅದಕ್ಕೆ ಅವರು ಕೂಡ ಸಕಾರಾತ್ಮಕವಾಗಿ ಸ್ಪಂದನೆ ನೀಡಿದ್ದಾರೆ. ಅವರ ಧಾರ್ಮಿಕ ಮುಖಂಡರು, ಸ್ಥಳೀಯರ ಜೊತೆ ಚರ್ಚಿಸಿ ತಿಳಿಸೋದಾಗಿ ಹೇಳಿದ್ದಾರೆ. ತಾಂಬೂಲ ಪ್ರಶ್ನೆ ಇಡುವ ತನಕ ಗೊಂದಲ ಇತ್ತು, ಆದರೆ ಈಗ ಅದು ಇಲ್ಲ. ಹೀಗಾಗಿ ಮಳಲಿಯ ಮುಸ್ಲಿಮರು ಇದನ್ನ ಸೌಹಾರ್ದಯುತವಾಗಿ ಬಿಟ್ಟುಕೊಡೋ ವಿಶ್ವಾಸ ಇದೆ. ಸದ್ಯ ಇದರ ಕಾನೂನು ಹೋರಾಟ ಕೂಡ ಆಗ್ತಾ ಇದೆ, ಸಂಘರ್ಷ ನಾವು ಬಯಸ್ತಿಲ್ಲ. ಮಳಲಿಯ ಮತ್ತು ದ.ಕ ಜಿಲ್ಲೆಯ ಹಿಂದೂಗಳ ಮನಸ್ಸಲ್ಲೂ ಇದೆ. ಈ ಸಭೆ ಎಸ್ ಡಿಪಿಐಗೆ ಸಂದೇಶ ಕೊಡಲು ನಾವು ನಡೆಸಿಲ್ಲ.
ನಾವು ನಮ್ಮ ನಿಲುವು ಹೇಳಿದ್ದೇವೆ, ಮೊದಲೇ ಸೌಹಾರ್ದಯುತವಾಗಿ ಬಗೆಹರಿಸೋಣ ಅಂದಿದ್ದೇವು. ಎಸ್ ಡಿಪಿಐ ಭಯೋತ್ಪಾದಕ ಸಂಘಟನೆ ಅಂತ ಇಡೀ ದೇಶಕ್ಕೆ ಗೊತ್ತಿದೆ. ಅಷ್ಟಮಂಗಳ ಪ್ರಶ್ನೆ ನಡೆಯುತ್ತದೆ, ಹೀಗಾಗಿ ಅದು ಮುಂದೆ ಇಟ್ಟೇ ಇಡ್ತೀವಿ. ಸಮಿತಿ ರಚಿಸಿ ಮುಂದಿನ ವಾರ ಅದರ ನಿರ್ಧಾರ ತೆಗೋತಿವಿ. ವೀರಶೈವ ಜಂಗಮ ಮಠದವರು ಆ ಜಾಗ ನಮ್ಮದು ಅಂದಿದ್ದಾರೆ. ಹೀಗಾಗಿ ಅವರು ಕೂಡ ಕೋರ್ಟ್ ಗೆ ಅರ್ಜಿ ಹಾಕ್ತಾರೆ. ನಮಗೆ ಮಠ, ಮಂದಿರ, ದೇವಸ್ಥಾನ ಏನೇ ಅದ್ರೂ ಅದು ಹಿಂದುಗಳದ್ದು. ನಾವು ಯಾರೇ ಬಂದರೂ ಅದನ್ನ ಬೆಂಬಲಿಸಿ ಜೊತೆಗೆ ಹೋಗ್ತೇವೆ ಎಂದಿದ್ದಾರೆ.