ಬೆಳಗಾವಿ(ನ.22): ಟಿವಿ ಮಾಧ್ಯಮಗಳಿಗೆ ಹೇಳಿಕೆ ಕೊಡಬೇಡಿ ಅಂತಾ ಹಿತೈಷಿಗಳು ಹೇಳಿದ್ದಾರೆ.ಕಳೆದ ಎರಡ್ಮೂರು ದಿನಗಳಿಂದ ಟಿವಿ ಮಾಧ್ಯಮಗಳಲ್ಲಿ ಮಾತನಾಡುವುದನ್ನು ಬಿಟ್ಟಿದ್ದೇನೆ. ಎಲೆಕ್ಷನ್ ಮಾಡಿ ಉತ್ತರ ಕೊಡೋಣ ಎಂದು ಅನರ್ಹ ಶಾಸಕ ಹಾಗೂ ಗೋಕಾಕ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಅವರು ಹೇಳಿದ್ದಾರೆ.

ಶುಕ್ರವಾರ ಜಿಲ್ಲೆಯ ಗೋಕಾಕ್ ತಾಲೂಕಿನ ಖನಗಾಂವ್ ಗ್ರಾಮದಲ್ಲಿ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ನಾಮಪತ್ರ ಸಲ್ಲಿಕೆ ದಿನ ಹಲವು ವಿಚಾರ ಬಹಿರಂಗ ಮಾಡುವವನಿದ್ದೆ, ಆದ್ರೆ ಆ ವೇಳೆ ಫಲಿತಾಂಶ ಮೂಲಕ ಉತ್ತರ ಕೊಡೋನು ಅಂತಾ ಜನ ಹೇಳಿದ್ದಾರೆ. ಈಗಲೂ ನಾನು ಆ ಬಗ್ಗೆ ಮಾತನಾಡಲ್ಲ, ದೇವರೇ ಅವರನ್ನು ನೋಡುತ್ತೇನೆ ಎಂದು ಹೇಳಿದ್ದಾರೆ. 

ಹೂವಿನ ಚಿಹ್ನೆಗೆ ಮತ ನೀಡುವಂತೆ ಜನರಿಗೆ ಯುವಕರು ಟ್ರೈನಿಂಗ್ ಕೊಡಬೇಕು. ಕಳೆದ ಐದು ಬಾರಿ ನಾನು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಗೆದ್ದಿದ್ದೆ, ಈ ಬಾರಿ ಬಿಜೆಪಿಯಿಂದ ಸ್ಪರ್ಧಿಸಿದ್ದು ನಮ್ಮ ಚಿಹ್ನೆ 'ಕಮಲ' ಹೂವಿನ ಚಿತ್ರ ಇದೆ. ನಿಮ್ಮ ತಲೆಯಲ್ಲಿ ಸಾಹುಕಾರ್ ಅಂತಾ ಹೊಗ್ತೇರಿ ನೀವು, ಅಲ್ಲೊಬ್ಬ ಸಾಹುಕಾರ್ ಅದಾನ ಮತ್ತ ಹೊಸಬನಿದ್ದಾನೆ. ನಮ್ಮ ಜನರಿಗೆ ಟ್ರೈನಿಂಗ್ ಕೊಟ್ಟು ಕಳಿಸುವ ಜವಾಬ್ದಾರಿ ಯುವಕರ ಮೇಲಿದೆ ಎಂದು ತಿಳಿಸಿದ್ದಾರೆ.

2019ರ ಲೋಕಸಭೆ ಚುನಾವಣೆಯಲ್ಲಿ ನಮ್ಮ ಜನರು ಬಿಜೆಪಿ ಬೆಂಬಲಿಸಿದ್ರು, ದಾಶೆನಟ್ಟಿ ಗ್ರಾಮದಲ್ಲಿ ನಮ್ಮ ಜನ ಬಿಜೆಪಿಗೆ ಮತಹಾಕುವಂತೆ ಪ್ರಚಾರ ಮಾಡಿದ್ದರು. ಆಗ ಕೆಲ ಮಹಿಳೆಯರು ಸಾಹುಕಾರ್ ಚಿಹ್ನೆ 'ಕೈ' ಐತಿ 'ಕಮಲ ಹೂ' ಅಂತಾ ಏಕೆ ಹೇಳ್ತಿರಿ ಅಂತಾ ಜಗಳ ಮಾಡಿದ್ದರು. ಆಮೇಲೆ ತಿಳಿಸಿ ಹೇಳಿ ಬಿಜೆಪಿಗೆ ಮತ ಹಾಕಿಸಿದ್ದರು. ನಮ್ಮ ಕ್ಷೇತ್ರದ ಜನರ ತಲ್ಯಾಗ ಇದು ಕುಂತುಬಿಟ್ಟಿದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ಒಬ್ಬ ಸಾಹುಕಾರ್ ಇದಾನ, ಹೂವು ಚಿಹ್ನೆ ಇರುವ ಸಾಹುಕಾರ್‌ಗ ಮತ ಹಾಕುವಂತೆ ತಿಳಿಸಿ ಹೇಳಿ, ನಮ್ಮ ವಿರೋಧಿಗಳು ಅನರ್ಹರು, ನೈತಿಕತೆ ಇಲ್ಲ ಅಂತಾ ಅಪಮಾನ ಮಾಡ್ತಿದಾರೆ. ಪ್ರಚಂಡ ಬಹುಮತದಿಂದ ಆರಿಸಿ ತಂದು ಅವರಿಗೆ ಉತ್ತರ ಕೊಡಬೇಕು ಎಂದು ಕ್ಷೇತ್ರದ ಮತದಾರರಿಗೆ ರಮೇಶ್ ಜಾರಕಿಹೊಳಿ ಅವರು ಮನವಿ ಮಾಡಿಕೊಂಡಿದ್ದಾರೆ.

ನಮ್ಮ ವಿರೋಧಿಗಳು ಹೋರಾಟಗಾರರಲ್ಲ, ಕುತಂತ್ರವಾದಿಗಳಾಗಿದ್ದಾರೆ. ತಮ್ಮ ಆಕ್ರೋಶ ತೋರಿಸೋದು ಐದನೇ ತಾರೀಖು ಐತಿ, ಎಷ್ಟೇ ಅನ್ಯಾಯ ಮಾಡಿದರೂ ಕೊನೆಗೆ ದೇವರೊಬ್ಬ ಇದ್ದಾನೆ. ಮಾನಸಿಕವಾಗಿ ಹಿಂಸೆ ಕೊಟ್ಟು ನಮಗೆ ಹಿನ್ನಡೆ ಮಾಡೋಕೇ ನೋಡಿದ್ರು, ದೇವರ ಆಶೀರ್ವಾದದಿಂದ ಸರ್ವೋಚ್ಛ ನ್ಯಾಯಾಲಯದಿಂದ ಚುನಾವಣೆ ನಿಲ್ಲಲು ಅವಕಾಶ ಸಿಕ್ಕಿದೆ. ಕಳೆದ ಮೂರು ತಿಂಗಳಿಂದ ಕ್ಷೇತ್ರದಲ್ಲಿ ವಿಚಿತ್ರವಾದ ವಾತಾವರಣ ನಿರ್ಮಾಣವಾಗಿತ್ತು. ನಮ್ಮ ರಾಜಕೀಯ ಭವಿಷ್ಯ ಅಂತ್ಯವಾಯ್ತು ಎಂಬ ವಾತಾವರಣವಿತ್ತು. ಪ್ರತಿ ಗ್ರಾಮ ಬೀದಿಗಳಲ್ಲಿ ತಮ್ಮದೇ ಬ್ಯಾನರ್ ಹಾಕಿಕೊಂಡು ಸ್ಬಯಂಘೋಷಿತ ಲೀಡರ್‌ಗಳಿಂದ ನಮ್ಮ ವಿರುದ್ಧ ಪ್ರಚಾರ ಮಾಡಿದ್ದರು ಎಂದು ಹೇಳಿದ್ದಾರೆ. 

ನಮ್ಮ ಎದುರಾಳಿಗಲು ರಮೇಶ್ ಜಾರಕಿಹೊಳಿ ಅನರ್ಹರಾಗಿದ್ದಾರೆ ಚುನಾವಣೆ ನಿಲ್ಲಲು ಬರಲ್ಲ ಎಂಬ ಖುಷಿಯಲ್ಲಿದ್ದರು. ಆ ವೇಳೆ ನಮ‌್ಮ ಎಲ್ಲಾ ಅಭಿಮಾನಿಗಳು, ಮತದಾರರ ಬಾಯಿ ಬಂದ್ ಆಗಿತ್ತು. ಕೋರ್ಟ್‌ನಲ್ಲಿ ಪ್ರತಿ 15 ದಿವಸಕ್ಕೊಮ್ಮೆ ವಿಚಾರಣೆ ಮುಂದೂಡುತ್ತಾ ಬಂದಿತ್ತು. ಒಂದು ವಾರದಲ್ಲಿ ಬರಬೇಕಿದ್ದ ಆದೇಶ ನಾಲ್ಕೂವರೆ ತಿಂಗಳಾಯ್ತು. ಬಹುಶಃ ಕೋರ್ಟ್‌ನಲ್ಲಿ ಹಿನ್ನಡೆಯಾಗುತ್ತೆ ಅಂತಾ ನಮ್ಮ ಜನ ಆತಂಕಗೊಂಡಿದ್ದರು.ಆದ್ರೆ ಚುನಾವಣೆಗೆ ನಿಲ್ಲಲು ಕೋರ್ಟ್ ಅವಕಾಶ ಕೊಡುತ್ತೆ ಎಂಬ ಆತ್ಮಧೈರ್ಯವಿತ್ತು ಎಂದು ತಿಳಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ನಮ್ಮ ಜಡ್ಜ್‌ಮೆಂಟ್ ಡೇ ದಿವಸ ಸ್ಪೀಕರ್ ಆದೇಶ ಎತ್ತಿ ಹಿಡಿದ ತಕ್ಷಣ ಜನ ಕಣ್ಣೀರಿಟ್ಟಿದ್ರು, ಆಗ ಚುನಾವಣೆಗೆ ಅವಕಾಶ ಕೊಡ್ತಾರೆ ಹೆದರಬೇಡಿ ಎಂದು ನಾನು ಹೇಳಿದ್ದೆ, ನಮ್ಮ ಕ್ಷೇತ್ರದ ಎಷ್ಟೋ ಜನ ನಮ್ಮ ಸಾಹುಕಾರ್ ಪರ ಆದೇಶ ಬರಲಿ ಎಂದು ಪ್ರಾರ್ಥನೆ ಮಾಡಿದ್ದರು. ಆದೇಶ ಬಂದ ತಕ್ಷಣ ಪ್ರತಿ ಬೀದಿಗಳಲ್ಲಿ ವಿಜಯೋತ್ಸವ ಆಚರಿಸಿದ್ದಾರೆ. ಅಂದೇ ನಮ್ಮ ಜನ ಚುನಾವಣಾ ಫಲಿತಾಂಶವನ್ನೂ ಡಿಕ್ಲೇರ್ ಮಾಡಿದ್ರು, ಅತಿಯಾದ ಆತ್ಮವಿಶ್ವಾಸ ಬೇಡ ನಮ್ಮ ವಿರೋಧಿಗಳು ನಮಗಿಂತ ಪ್ರಬಲರು ಅಂತಾ ತಿಳಿದು ಕೆಲಸ ಮಾಡ್ಬೇಕು ಎಂದು ಹೇಳಿದ್ದಾರೆ. 

ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.