ಬಿಜೆಪಿ ನಾಯಕ ಬಿಎಲ್ ಸಂತೋಷ್ ಅವರನ್ನು ಫೇಸ್‌ಬುಕ್‌ನಲ್ಲಿ ನಿಂದಿಸಿದ ಆರೋಪದ ಮೇಲೆ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಯನ್ನು ಬ್ರಹ್ಮಾವರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ತಿಮರೋಡಿ ಬಂಧನದ ವೇಳೆ ಬೆಂಬಲಿಗರಿಂದ ಪ್ರತಿಭಟನೆ ನಡೆದಿದೆ.

ಬೆಂಗಳೂರು (ಆ.21): ಬಿಜೆಪಿ ನಾಯಕ ಬಿಎಲ್‌ ಸಂತೋಷ್‌ ಅವರಿಗೆ ನಿಂದನೆ ಮಾಡಿದ ಆರೋಪದಲ್ಲಿ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯನ್ನು ಗುರುವಾರ ಪೊಲೀಸ್‌ ವಶಕ್ಕೆ ಪಡೆಯಲಾಗಿದೆ. ಉಡುಪಿಯ ಬ್ರಹ್ಮಾವರ ಪೊಲೀಸರಿಂದ ವಶಕ್ಕೆ ಪಡೆಯಲಾಗಿದೆ. ಬಿಎಲ್‌ ಸಂತೋಷ್‌ ಅವರನ್ನು ಫೇಸ್‌ಬುಕ್‌ನಲ್ಲಿ ಅವಹೇಳನ ಮಾಡಿದ ಆರೋಪವನ್ನು ಹೊರಿಸಲಾಗಿದೆ. ಬ್ರಹ್ಮಾವರ ಪೊಲೀಸರು ತಿಮರೋಡಿಯನ್ನು ವಶಕ್ಕೆ ಪಡೆಯುವ ವೇಳೆ ಅವರ ಬೆಂಬಲಿಗರು ಮನೆಯ ಬಳಿ ಪುಂಡಾಟ ನಡೆಸಿದ್ದಾರೆ. ಅವರನ್ನು ಉಜಿರೆಯ ನಿವಾಸದಲ್ಲಿಯೇ ವಶಕ್ಕೆ ಪಡೆಯಲಾಗಿದೆ. ಇವರ ವಿರುದ್ಧ ಉಡುಪಿಯ ಬ್ರಹ್ಮಾವರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅವರನ್ನು ವಶಕ್ಕೆ ಪಡೆಯುವ ಮುನ್ನ ಮನೆಯ ಎದುರು ಭಾರೀ ಹೈಡ್ರಾಮಾ ನಡೆದಿದೆ.

ಬಿಜೆಪಿ ನಾಯಕ ಬಿ.ಎಲ್‌. ಸಂತೋಷ್ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ನಿಂದಿಸಿದ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಉಡುಪಿ ಜಿಲ್ಲಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಉಡುಪಿಯ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಇಂದು (ಗುರುವಾರ) ಬೆಳಿಗ್ಗೆ ಮಣಿಪಾಲ ಇನ್ಸ್‌ಪೆಕ್ಟರ್ ಮಹೇಶ್ ಪ್ರಸಾದ್, ಡಿವೈಎಸ್ಪಿ ಡಿ.ಟಿ. ಪ್ರಭು, ಬ್ರಹ್ಮಾವರ ಇನ್ಸ್‌ಪೆಕ್ಟರ್ ಗೋಪಿ ಕೃಷ್ಣ ಮತ್ತು ಕಾರ್ಕಳ ಗ್ರಾಮಾಂತರ ಇನ್ಸ್‌ಪೆಕ್ಟರ್ ಪ್ರಸನ್ನ ಕುಮಾರ್ ಸೇರಿದಂತೆ ನಾಲ್ಕೈದು ಇನ್ಸ್‌ಪೆಕ್ಟರ್‌ಗಳ ತಂಡ ಬಿಗಿ ಭದ್ರತೆಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಅವರ ಉಜಿರೆಯ ಮನೆಗೆ ಭೇಟಿ ನೀಡಿತು.

ಪೊಲೀಸರು ಮನೆಯನ್ನು ಶೋಧಿಸಲು ಬಂದಿರುವುದಾಗಿ ತಿಳಿಸಿದಾಗ, ತಿಮರೋಡಿ ಪರ ವಕೀಲರು ಶೋಧ ವಾರೆಂಟ್‌ ನೀಡುವಂತೆ ಆಗ್ರಹಿಸಿದರು. ಅಲ್ಲದೆ, ಬ್ರಹ್ಮಾವರ ಠಾಣೆಗೆ ತಿಮರೋಡಿ ಅವರೇ ವಿಚಾರಣೆಗೆ ಹಾಜರಾಗುವುದಾಗಿ ವಕೀಲರು ಪೊಲೀಸರಿಗೆ ತಿಳಿಸಿದರು. ಆದರೆ ಪೊಲೀಸರು, "ನಾವೇ ಅವರನ್ನು ಕರೆದುಕೊಂಡು ಹೋಗುತ್ತೇವೆ," ಎಂದು ಪಟ್ಟು ಹಿಡಿದರು. ಈ ವೇಳೆ, ಮನೆಯೊಳಗಡೆ ತಿಮರೋಡಿ ಪತ್ನಿ ಮತ್ತು ಪೊಲೀಸರ ನಡುವೆ ವಾಗ್ವಾದ ನಡೆದು, ವಕೀಲರು ಹಾಗೂ ಪೊಲೀಸರ ಮಧ್ಯೆ ಕೆಲಕಾಲ ಚರ್ಚೆ ನಡೆಯಿತು.

ಚರ್ಚೆಯ ಬಳಿಕ, ತಿಮರೋಡಿ ಪೊಲೀಸರ ವಶಕ್ಕೆ ಒಪ್ಪಿಸಲು ತೀರ್ಮಾನಿಸಲಾಯಿತು. ಪೊಲೀಸರು ಖಾಸಗಿ ಕಾರಿನಲ್ಲಿ ಮಹೇಶ್ ಶೆಟ್ಟಿ ಅವರನ್ನು ಬ್ರಹ್ಮಾವರ ಠಾಣೆಗೆ ಕರೆದೊಯ್ಯಲಿದ್ದು, ಅಲ್ಲಿ ಹೆಚ್ಚಿನ ವಿಚಾರಣೆ ನಡೆಸಲಾಗುತ್ತದೆ. ವಿಚಾರಣೆಯ ನಂತರ ಅವರನ್ನು ಬಂಧಿಸಬೇಕೇ ಅಥವಾ ಇಲ್ಲವೇ ಎನ್ನುವುದು ನಿರ್ಧಾರವಾಗಲಿದೆ.