ಧರ್ಮಸ್ಥಳದ ಶವಗಳ ಪ್ರಕರಣಕ್ಕೆ ಸಂಬಂಧಿಸಿದಂತೆ, ಬೆಳ್ತಂಗಡಿಯಲ್ಲಿ ಅಕ್ರಮ ಕೂಟ ಸೇರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್ ಬೆಳ್ತಂಗಡಿ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದಾರೆ. ಸುವರ್ಣ ನ್ಯೂಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಪ್ರಕರಣ ಸೇರಿದೆ.

ದಕ್ಷಿಣ ಕನ್ನಡ (ಆ.20): ಧರ್ಮಸ್ಥಳದ ನೂರಾರು ಶವಗಳನ್ನು ಹೂತು ಹಾಕಿದ್ದಾರೆಂಬ ಪ್ರಕರಣಕ್ಕೆ ಸಂಬಂಧಿಸಿದಂತೆ, ಬೆಳ್ತಂಗಡಿಯ ಬೆನಕ ಆಸ್ಪತ್ರೆಯ ಎದುರು ಅಕ್ರಮ ಕೂಟ ಸೇರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಗಿರೀಶ್ ಮಟ್ಟಣ್ಣನವರ್ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಹಾಜರಾಗಿದ್ದಾರೆ.

ಈ ಹಿಂದೆ, ಬೆನಕ ಆಸ್ಪತ್ರೆಯ ಎದುರು 50ಕ್ಕೂ ಹೆಚ್ಚು ಜನರು ಅಕ್ರಮ ಕೂಟ ಸೇರಿ ದ್ವೇಷ ಭಾಷಣ ಮಾಡಿದ್ದರು. ಆ ವೇಳೆ, ಏಷ್ಯಾನೆಟ್ ಸುವರ್ಣ ನ್ಯೂಸ್ ತಂಡದ ಸಿಬ್ಬಂದಿ ಮೇಲೆ ಹಲ್ಲೆಯನ್ನೂ ನಡೆಸಿ, ದುಷ್ಕೃತ್ಯ ಮೆರೆದಿದ್ದರು. ಈ ಹಿನ್ನೆಲೆಯಲ್ಲಿ ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗೆ ನೋಟಿಸ್ ಜಾರಿ ಮಾಡಿದ್ದರು. ಈ ನೋಟಿಸ್‌ಗೆ ಸ್ಪಂದಿಸಿ ಇಂದು ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಗಿರೀಶ್ ಮಟ್ಟಣ್ಣನವರ್ ಠಾಣೆಗೆ ಆಗಮಿಸಿದ್ದಾರೆ.

ಈ ಪ್ರಕರಣದ ಕುರಿತು ಪೊಲೀಸರು ಇಬ್ಬರಿಂದಲೂ ಹೇಳಿಕೆಗಳನ್ನು ದಾಖಲಿಸಿಕೊಳ್ಳುತ್ತಿದ್ದಾರೆ. ಈ ಪ್ರಕರಣದ ಹೊರತಾಗಿ, ದ್ವೇಷ ಭಾಷಣ ಪ್ರಕರಣ ಮತ್ತು ಮಾಧ್ಯಮ ತಂಡದ ಮೇಲೆ ಹಲ್ಲೆ ನಡೆಸಿದ ಕುರಿತು ಪ್ರತ್ಯೇಕ ಪ್ರಕರಣಗಳು ಕೂಡ ದಾಖಲಾಗಿವೆ. ಸದ್ಯ ನಡೆಯುತ್ತಿರುವ ಎಸ್‌ಐಟಿ ತನಿಖೆಯ ಜೊತೆಗೆ, ಈ ಪ್ರಕರಣಗಳು ಕೂಡ ಹೆಚ್ಚಿನ ಗಂಭೀರತೆಯನ್ನು ಪಡೆದುಕೊಂಡಿವೆ. ಪೊಲೀಸರ ವಿಚಾರಣೆಯ ನಂತರ ಪ್ರಕರಣದ ಮುಂದಿನ ಹಂತದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗುವ ಸಾಧ್ಯತೆ ಇದೆ.