ಬೆಂಗಳೂರು(ಫೆ.02): 17 ಶಾಸಕರು ರಾಜೀನಾಮೆ ಕೊಟ್ಟಿದ್ದರಿಂದಲೇ ಬಿಜೆಪಿ ಸರ್ಕಾರ ಬಂದಿದೆ. ಇದನ್ನ ಸಿಎಂ ಯಡಿಯೂರಪ್ಪ ಅವರು ಪದೇ ಪದೇ ಬಹಿರಂಗವಾಗಿ ಹೇಳಿದ್ದಾರೆ. ಎಲ್ಲರಿಗೂ ಸಚಿವ ಸ್ಥಾನ ಕೊಡುತ್ತೇವೆ ಅಂತ ಹೇಳಿದ್ದಾರೆ. ಯಡಿಯೂರಪ್ಪ ನುಡಿದಂತೆ ನಡೆಯುತ್ತಾರೆ ಎಂಬ ವಿಶ್ವಾಸ ಇದೆ ಎಂದು ಶಾಸಕ ಮಹೇಶ್ ಕುಮಟಳ್ಳಿ ಹೇಳಿದ್ದಾರೆ. 

ಭಾನುವಾರ ನಗರದ ರೇಸ್ ವ್ಯೂ ಹೋಟೆಲ್‌ನಲ್ಲಿ ರಮೇಶ್ ಜಾರಕಿಹೊಳಿ ಅವರನ್ನ ಭೇಟಿ ಮಾಡಿದ ಬಳಿಕ ಮಾಧ್ಯದವರ ಜೊತೆ ಮಾತನಾಡಿದ ಅವರು, ಲಕ್ಷ್ಮಣ ಸವದಿ ಅವರ ವಿರುದ್ಧ ನಾನು ಕಾಂಗ್ರೆಸ್‌ನಲ್ಲಿ ಚುನಾವಣೆ ಮಾಡಿದ್ದೇನೆ ಬಳಿಕ ಬಿಜೆಪಿಗೆ ಬಂದು ಗೆದ್ದು ಬಂದಿದ್ದೇನೆ. ಈಗ ಸಾರ್ವತ್ರಿಕ ಚುನಾವಣೆ ನಡೆದಿಲ್ಲ. ಉಪಚುನಾವಣೆ ಯಲ್ಲಿ ನಡೆದು ರಾಜಕೀಯ ಪುನರ್ ಜನ್ಮ ಪಡೆದಿದ್ದೇವೆ. ಸವದಿ ಡಿಸಿಎಂ ಆಗಿ ಇರಲಿ, ನನ್ನನ್ನ ಸಚಿವನಾಗಿ ಮಾಡ್ಲಿ, ಒಂದೇ ಕ್ಷೇತ್ರದಲ್ಲಿ ಇಬ್ಬರು ಸಚಿವರಾಗೋದು ತಪ್ಪೇನಿದೆ ಎಂದು ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ನಮ್ಮ ತ್ಯಾಗದಿಂದ ಸರ್ಕಾರ ಬಂದಿದ್ದು. ನಮ್ಮನ್ನ ಪರಿಗಣಿಸದಿದ್ದರೆ ಜನ ಮೋಸ ಮಾಡಿದ್ರು ಅಂತ ಹೇಳುತ್ತಾರೆ. ಮುಂದೆ ಬಿಜೆಪಿಗೆ ಬರುವವರುಗೂ ಭಯ ಶುರುವಾಗುತ್ತದೆ. ಹೀಗಾಗಿ ನಮಗೆ ಹೇಳಿದ ರೀತಿ ನಡೆದುಕೊಳ್ಳಲಿ ಎಂದು ಹೇಳಿದ್ದಾರೆ. 

ಒಂದೇ ಕ್ಷೇತ್ರಕ್ಕೆ ಎರಡು ಸಚಿವ ಸ್ಥಾನದ ವಿಚಾರದ ಬಗ್ಗೆ ಮಾತನಾಡಿದ ಅವರು, ನನ್ನ ವಿಚಾರ ಬೇರೆ, ಲಕ್ಷ್ಮಣ ಸವದಿ ಅವರ ವಿಚಾರ ಬೇರೆಯಾಗಿದೆ.  ಒಂದೇ ಕ್ಷೇತ್ರ ಇಬ್ಬರಿಗೆ ಸಚಿವ ಸ್ಥಾನ ಅಂದ್ರೆ ಮೊದಲೇ ಈ ಬಗ್ಗೆ ಯೋಚನೆ ಮಾಡಬೇಕಿತ್ತು. ಗೆದ್ದವರಿಗೆಲ್ಲಾ ಮಂತ್ರಿ ಮಂತ್ರಿ ಮಾಡುತ್ತೇವೆ ಅಂತ ಸಿಎಂ‌ ಯಡಿಯೂರಪ್ಪ ಮಾತು ಕೊಟ್ಟಿದ್ದಾರೆ. ಆ ಮಾತನ್ನ ಉಳಿಸಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ. 

ಸರ್ಕಾರ ರಚನೆಗೂ ಮುನ್ನ ಬಿಜೆಪಿ ಶಾಸಕರು, ನೀವೆಲ್ಲಾ ಬನ್ನಿ ಸರ್ಕಾರ ರಚನೆ ಆಗಲಿ ಅಂದಿದ್ದರು. ನಮ್ಮ ಕ್ಷೇತ್ರಗಳು ಅಭಿವೃದ್ಧಿ ಆಗಲಿ ಅಂತಾ ಹೇಳಿದ್ದರು. ಆದ್ರೆ ಇದೀಗ ಅವರು ವರಸೆ ಬದಲಿಸಿದ್ದಾರೆ. ನನಗೆ ಕ್ಷೇತ್ರ ಮುಖ್ಯವಾಗಿದೆ. ಮಂತ್ರಿ ಸ್ಥಾನ ಸಿಗದಿದ್ದರೂ ಬೇಡ, ಬಿಜೆಪಿ ಪಕ್ಷದ ಕಚೇರಿಯಲ್ಲಿ ಕಸ ಗುಡಿಸೋ ಕೆಲಸ ಕೊಟ್ಟರೂ ಮಾಡುತ್ತೇನೆ. ಬಿಜೆಪಿ ಪಕ್ಷವನ್ನ ಬಲಿಷ್ಠ ಪಕ್ಷವಾಗಿ ಮಾಡುತ್ತೇವೆ. ಆದ್ರೆ ಮಾತು ಉಳಿಸಿಕೊಳ್ಳದಿದ್ದರೆ ಬಿಜೆಪಿ ಮತ್ತು ನಾಯಕರ ಬಗ್ಗೆ ಕೆಟ್ಟ ಸಂದೇಶ ರವಾನೆಯಾಗುತ್ತದೆ ಎಂದು ಹೇಳಿದ್ದಾರೆ.

ನಾನು ಸಚಿವ ಸ್ಥಾನ ತ್ಯಾಗ ಮಾಡಲು ಸಿದ್ಧನಿದ್ದೇನೆ. ಬಿಜೆಪಿ ಕಚೇರಿಯಲ್ಲಿ ಕಸ ಗುಡಿಸಲು ತಯಾರಿದ್ದೇನೆ. ಆದ್ರೆ ಎಚ್ ವಿಶ್ವನಾಥ್ ಅವರನ್ನ ಮಂತ್ರಿ ಮಾಡಬೇಕು ಎಂದು ಹೇಳುವ ಮೂಲಕ ಮೊದಲ ಬಾರಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

17 ಶಾಸಕರಲ್ಲಿ ಕೆಲವರು ಸೋತಿದ್ದಾರೆ. ಅದರಲ್ಲೂ ಎಚ್ ವಿಶ್ವನಾಥ್ ಹಿರಿಯರಿದ್ದಾರೆ. ಜನಾದೇಶ ಅವರಿಗೆ ಸಿಗಲಿಲ್ಲ.. ಇತ್ತೀಚಿನ ಬಿಜೆಪಿ ಬೆಳವಣಿಗೆಗಳಿಂದ ಬೇಸರವಾಗಿದೆ ಎಂದಿದ್ದಾರೆ.