'ಸಾ.ರಾ. ಮಹೇಶ್‌ಗೆ ನಮ್ಮ ಕುಟುಂಬ, ಕಾಂಗ್ರೆಸ್‌ ಬಗ್ಗೆ ಮಾತನಾಡುವ ನೈತಿಕ ಹಕ್ಕು ಇಲ್ಲ'

ಶಾಸಕ ಸಾ.ರಾ. ಮಹೇಶ್‌ ಅವರಿಗೆ ನಮ್ಮ ಕುಟುಂಬ ಮತ್ತು ಕಾಂಗ್ರೆಸ್‌ ಬಗ್ಗೆ ಮಾತನಾಡುವ ಯಾವುದೇ ನೈತಿಕ ಹಕ್ಕು ಇಲ್ಲ ಎಂದು ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮೇಗೌಡ ಹೇಳಿದರು

Mahesh has no right to talk about our family Congress doddaswamegowda snr

  ಕೆ.ಆರ್‌. ನಗರ (ಅ.29):  ಶಾಸಕ ಸಾ.ರಾ. ಮಹೇಶ್‌ ಅವರಿಗೆ ನಮ್ಮ ಕುಟುಂಬ ಮತ್ತು ಕಾಂಗ್ರೆಸ್‌ ಬಗ್ಗೆ ಮಾತನಾಡುವ ಯಾವುದೇ ನೈತಿಕ ಹಕ್ಕು ಇಲ್ಲ ಎಂದು ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮೇಗೌಡ ಹೇಳಿದರು.

ಪಟ್ಟಣದ ಹುಣಸೂರು (Hunasur)  ರಸ್ತೆಯಲ್ಲಿರುವ ನಾಮಧಾರಿ ಸಮುದಾಯ ಭವನದಲ್ಲಿ ಶುಕ್ರವಾರ ನಡೆದ ಜನಾಶೀರ್ವಾದ ಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿ, ಮಾತೆತ್ತಿದರೆ ಸಾರ್ವಜನಿಕ ಸಭೆಗಳಲ್ಲಿ (Meet)  ನಮ್ಮ ಬಗ್ಗೆ ಹಣ ಸಂಪಾದನೆಯ ವಿಚಾರ ಮಾತನಾಡುವ ಶಾಸಕರು, ಅದನ್ನು ಸಾಬೀತು ಪಡಿಸಿದರೆ ರಾಜಕೀಯ ನಿವೃತ್ತಿ ಹೊಂದುವುದಾಗಿ ಸವಾಲು ಹಾಕಿದರು.

ನಮ್ಮ ವೈಯಕ್ತಿಕ ವಿಚಾರದ ಬಗ್ಗೆ ಸಾ.ರಾ. ಮಹೇಶ್‌ ಪದೇ ಪದೇ ಮಾತನಾಡುತ್ತಿದ್ದಾರೆ, ಆದರೆ ಅವರ ವೈಯಕ್ತಿಕ ವಿಚಾರಗಳನ್ನು ಮಾತನಾಡಲು ನಮಗೂ ಸಾಕಷ್ಟು ವಿಷಯಗಳಿವೆ, ಆದರೆ ಆ ಸಂಸ್ಕೃತಿ ನಮ್ಮದಲ್ಲ ಎಂದು ಅವರು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್‌ ಮಾತನಾಡಿ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಲು ಜನಾಶೀರ್ವಾದ ಯಾತ್ರೆ ದಿಕ್ಸೂಚಿಯಾಗಲಿದೆ. ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಅನಗತ್ಯವಾಗಿ ವಾದ ವಿವಾದ ಮಾಡದೆ ಚುನಾವಣೆಯಲ್ಲಿ ವಿರೋಧಿಗಳಿಗೆ ತಕ್ಕ ಉತ್ತರ ನೀಡಬೇಕು ಎಂದರು.

ಕಾಂಗ್ರೆಸ್‌ ಮುಖಂಡ ಡಿ. ರವಿಶಂಕರ್‌ ಮಾತನಾಡಿ, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ನಿರಂತರ ಹೋರಾಟ ಮಾಡಿ ಈ ಬಾರಿ ಕ್ಷೇತ್ರದಲ್ಲಿ ಪಕ್ಷದ ಬಾವುಟ ಹಾರಿಸುವುದಾಗಿ ತಿಳಿಸಿದರು.

75 ದಿನಗಳವರೆಗೆ ಕ್ಷೇತ್ರದಿಂದ ನಡೆಯುವ ಜನಾಶೀರ್ವಾದ ಯಾತ್ರೆಗೆ ಪಕ್ಷದ ಸಮಸ್ತರು ಮತ್ತು ಮತಬಾಂಧವರು ಸಹಕಾರ ನೀಡಬೇಕೆಂದು ಕೋರಿದರು.

ತಾಪಂ ಮಾಜಿ ಅಧ್ಯಕ್ಷ ಹಾಡ್ಯ ಮಹದೇವಸ್ವಾಮಿ, ವಿಧಾನ ಪರಿಷತ್‌ ಮಾಜಿ ಸದಸ್ಯ ಕೆ.ಸಿ. ಪುಟ್ಟಸಿದ್ದಶೆಟ್ಟಿ, ರಾಜ್ಯ ಕಾಂಗ್ರೆಸ್‌ ಎಸ್ಟಿಘಟಕದ ಉಪಾಧ್ಯಕ್ಷ ಶ್ರೀನಿವಾಸ್‌, ಕಾಂಗ್ರೆಸ್‌ ಮುಖಂಡರಾದ ಸಿ.ಪಿ. ರಮೇಶ್‌ಕುಮಾರ್‌, ಎಸ್‌.ಪಿ. ತಮ್ಮಯ್ಯ, ಜಿಪಂ ಮಾಜಿ ಸದಸ್ಯರಾಜಯ್ಯ ಮಾತನಾಡಿದರು.

ತಾಲೂಕು ಕುರುಬರ ಸಂಘದ ಅಧ್ಯಕ್ಷ ಜೆ. ಶಿವಣ್ಣ, ಪುರಸಭೆ ಅಧ್ಯಕ್ಷ ಪ್ರಕಾಶ್‌, ಮಾಜಿ ಅಧ್ಯಕ್ಷರಾದ ಕೆ. ಜಿ. ಸುಬ್ರಮಣ್ಯ, ನರಸಿಂಹರಾಜು, ಗೀತಾ ಮಹೇಶ್‌, ಸ್ಥಾಯಿ ಸಮಿತಿ ಅಧ್ಯಕ್ಷ ಶಂಕರ್‌ಸ್ವಾಮಿ, ಸದಸ್ಯರಾದ ಜಾವೀದ್‌ ಪಾಷಾ, ಶಿವುನಾಯಕ್‌, ಶಂಕರ್‌, ನಟರಾಜು, ಎಪಿಎಂಸಿ ಮಾಜಿ ನಿರ್ದೇಶಕರಾದ ಎಚ್‌.ಪಿ. ಪ್ರಶಾಂತ್‌, ಎಲ….ಪಿ. ರವಿಕುಮಾರ್‌, ಟಿಎಪಿಸಿಎಂಎಸ್‌ ನಿರ್ದೇಶಕ ಜಿ.ಕೆ. ತೋಟಪ್ಪನಾಯಕ, ತಾಲೂಕು ಕಾಂಗ್ರೆಸ್‌ ಸೇವಾ ದಳದ ಅಧ್ಯಕ್ಷ ರಾಘವೇಂದ್ರ ಗುಡ್ಡಪ್ಪ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ಎಸ್‌. ಮಹದೇವ್‌, ಉದಯಶಂಕರ್‌ ನಗರ ಘಟಕದ ಅಧ್ಯಕ್ಷ ಎಂ.ಜೆ. ರಮೇಶ್‌, ವಕ್ತಾರ ಸೈಯದ್‌ ಜಾಬೀರ್‌, ಯುವ ಘಟಕದ ಅಧ್ಯಕ್ಷ ಮಂಜುಕೆಂಚಿ, ಮಹಿಳಾ ಘಟಕದ ಅಧ್ಯಕ್ಷರಾದ ರಾಣಿ, ಲತಾ ರವಿಶಂಕರ್‌, ಕಾನೂನು ಘಟಕದ ಅಧ್ಯಕ್ಷ ಎಂ.ಬಿ. ಮೂರ್ತಿ, ನಗರ ಯೋಜನಾ ಪ್ರಾಧಿಕಾರದ ಮಾಜಿ ನಿರ್ದೇಶಕರಾದ ಕೆ.ಎಸ್‌. ಮಹೇಶ್‌, ಕೆ.ಎನ್‌. ಪ್ರಸನ್ನಕುಮಾರ್‌, ಕಾಂಗ್ರೆಸ್‌ ಮುಖಂಡರಾದ ಸತೀಶ್‌, ದೇವರಾಜು ಇದ್ದರು.

 ಸಾ ರಾ ಜಯಗಳಿಸಲು ನನ್ನ ಕೊಡುಗೆ : 

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅತ್ಯಲ್ಪ ಮತಗಳ ಅಂತರದಿಂದ ಶಾಸಕ ಸಾ.ರಾ. ಮಹೇಶ್‌ ಜಯಗಳಿಸಲು ನನ್ನ ಕೊಡುಗೆ ಅಪಾರವಾಗಿದ್ದು, ನಾನು ಜೆಡಿಎಸ್‌ ಸೇರಿದ್ದರಿಂದ ಇದು ಸಾಧ್ಯವಾಯಿತು ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌. ವಿಶ್ವನಾಥ್‌ ಹೇಳಿದರು.

ಕಾಂಗ್ರೆಸ್‌ (Congress)  ನನ್ನನ್ನು ಎಂದು ಕಡೆಗಾಣಿಸಿಲ್ಲ, ನಾನೆ ಕೆಲವು ಸಿದ್ದಾಂತಗಳನ್ನು ವಿರೋಧಿಸಿ ರಾಜೀನಾಮೆ ನೀಡಿದೆ, ನಂತರ ಶಾಸಕರಾಗಿದ್ದ ಎಸ್‌. ಚಿಕ್ಕಮಾದು ಅವರು ನನ್ನನ್ನು ಜೆಡಿಎಸ್‌ಗೆ (JDS)  ಸೇರ್ಪಡೆ ಮಾಡುವಲ್ಲಿ ಮಹತ್ತರ ಪಾತ್ರ ವಹಿಸಿದ್ದು, ಆಮೇಲೆ ಖುದ್ದು ಎಚ್‌.ಡಿ. ದೇವೇಗೌಡರೆ ಹುಣಸೂರಿಗೆ ಬಂದು ಪಕ್ಷಕ್ಕೆ ಸೇರಿಸಿಕೊಂಡರೆಂದು ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಾಂಗ್ರೆಸ್‌ನಲ್ಲಿ ಇದ್ದಾಗ ಸಂಸತ್‌ ಚುನಾವಣೆಯಲ್ಲಿ ಸೋತ ನಂತರ ನಾನು ಅವರನ್ನು ಜೆಡಿಎಸ್‌ಗೆ ಕರೆ ತಂದು ಹುಣಸೂರು ಕ್ಷೇತ್ರದಲ್ಲಿ ಶಾಸಕನನ್ನಾಗಿ ಮಾಡಲು ಶ್ರಮ ವಹಿಸಿದೆ ಎಂದು ಜೆಡಿಎಸ್‌ ಕುರುಬ ಸಮಾಜದ ಸಭೆಯಲ್ಲಿ ಸಾ.ರಾ. ಮಹೇಶ್‌ ಹೇಳಿದ್ದು, ಇದು ಸತ್ಯಕ್ಕೆ ದೂರವಾದ ಮಾತು ಎಂದರು. ನಾನು ಹುಣಸೂರು ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಗೆಲ್ಲಲು ಆ ಕ್ಷೇತ್ರದ ಮತದಾರರು ಮತ್ತು ಜಿಟಿಡಿ ಕುಟುಂಬ ಕಾರಣವಾಗಿದ್ದು, ಈ ವಿಚಾರದಲ್ಲಿ ಸಾ.ರಾ. ಮಹೇಶ್‌ ಅವರ ಯಾವ ಕೊಡುಗೆಯು ಇಲ್ಲವೆಂದು ಸ್ಪಷ್ಟಪಡಿಸಿದರು.

ಜೆಡಿಎಸ್‌ನಲ್ಲಿ ನಾನು ಇದ್ದಾಗ ನನ್ನ ಬೆಂಬಲಿಗರು ಮತ್ತು ಸಮಾಜದವರು ಮತ ಹಾಕಿದ್ದಕ್ಕೆ ಇವರು ಗೆಲುವು ಸಾಧಿಸಲು ಸಾಧ್ಯವಾಯಿತು, ಉದಾಹರಣೆಗೆ ನಮ್ಮೂರಿನಲ್ಲಿ ಇವರಿಗೆ ಹಿಂದಿನ ಚುನಾವಣೆಯಲ್ಲಿ 5 ಅಥವಾ 10 ಮತಗಳು ಬರುತ್ತಿದ್ದವು, ಆದರೆ ನಾನು ಬಂದ ನಂತರ 270 ಮತಗಳು ಬಂದಿವೆ, ಹೀಗಾಗಿ ಇದು ಯಾರ ಕೊಡುಗೆ ಎಂದು ಪ್ರಶ್ನಿಸಿದರಲ್ಲದೆ, ಹುಣಸೂರಿನಲ್ಲಿ ಎಚ್‌. ವಿಶ್ವನಾಥ್‌ ಶಾಸಕನಾಗುವುದಕ್ಕೂ ಸಾ.ರಾ. ಮಹೇಶ್‌ಗೂ ಯಾವುದೇ ಸಂಬಂಧವಿಲ್ಲ ಎಂದರು.

ಸಾ.ರಾ. ಮಹೇಶ್‌ ಉತ್ತಮವಾಗಿ ಕೆಲಸ ಮಾಡುತ್ತಿದ್ದು, ನನಗೆ ಅವರ ಬಗ್ಗೆ ಅಭಿಮಾನವಿದೆ, ಆದರೆ ಇತ್ತೀಚಿನ ದಿನಗಳಲ್ಲಿ ಕುರುಬ ಸಮಾಜವನ್ನು ತಾರತಮ್ಯದಿಂದ ನೋಡುತ್ತಿದ್ದು, ಪಟ್ಟಣದ ಸಂಗೊಳ್ಳಿರಾಯಣ್ಣ ಸಮುದಾಯ ಭವನ ಮತ್ತು ಗಂಧನಹಳ್ಳಿ ಸಮುದಾಯ ಭವನದ ಅನುದಾನ ತಡೆ ಹಿಡಿಸಿದ್ದು, ಮುಂದಾದರು ಅವರು ಇಂತಹ ವರ್ತನೆ ಬಿಟ್ಟು ಹೃದಯ ವೈಶಾಲ್ಯತೆ ಬೆಳೆಸಿಕೊಂಡು ಸಮಾಜದ ಎಲ್ಲ ಸಮುದಾಯದ ಶಾಸಕರಂತೆ ನಡೆದುಕೊಳ್ಳಬೇಕೆಂದು ಸಲಹೆ ನೀಡಿದರು.

ನನ್ನ ರಾಜಕೀಯ ಜೀವನದಲ್ಲಿ ಎಂದೂ ಯಾವ ಸಮಾಜದವರನ್ನು ಧಿಕ್ಕರಿಸಿಲ್ಲ, ಜತೆಗೆ ಒಕ್ಕಲಿಗ ಸಮಾಜದ ಹಲವು ನಾಯಕರನ್ನು ಬೆಳೆಸಿ ಆ ಸಮುದಾಯದ ಕೆಲಸ ಮಾಡಿದ್ದೇನೆ. ಇಂತಹ ಸೂಕ್ಷ್ಮ ವಿಚಾರಗಳನ್ನು ಸಾ.ರಾ. ಅರ್ಥ ಮಾಡಿಕೊಳ್ಳಬೇಕೆಂದರು. ಈಗಲೂ ನಾನು ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸ್‌ ಮತ್ತು ಮಾಜಿ ಪ್ರಧಾನಮಂತ್ರಿ ಎಚ್‌.ಡಿ. ದೇವೇಗೌಡರ ರಾಜಕೀಯ ಮುಲಾಜಿನಲ್ಲಿ ಇದ್ದೇನೆಂದು ನುಡಿದರು.

Latest Videos
Follow Us:
Download App:
  • android
  • ios