ಬಸವರಾಜ ಹಿರೇಮಠ

ಧಾರವಾಡ(ನ.05): ಸ್ವಾತಂತ್ರ್ಯ ಪೂರ್ವದ ಸಮಯದಲ್ಲಿ ಚಳವಳಿಯ ನಾಡಾಗಿದ್ದ ಧಾರವಾಡಕ್ಕೆ ಮಹಾತ್ಮ ಗಾಂಧೀಜಿ ಅವರು ಭೇಟಿ ನೀಡಿ ಇದೀಗ ಬರೋಬ್ಬರಿ 100 ವರ್ಷಗಳು ಸಂದಿದ್ದು, ಈ ಭೇಟಿ ದಿನ ಧಾರವಾಡಿಗರಿಗೆ ಸದಾ ಸ್ಮರಣೀಯ ದಿನ.

ಸ್ವಾತಂತ್ರ್ಯ ಚಳವಳಿಯು ದೇಶಾದ್ಯಂತ ಪಸರಿಸಲು ಪಣತೊಟ್ಟಿದ್ದ ಗಾಂಧೀಜಿ, 1920ರ ದಶಕದಲ್ಲಿ ಕರ್ನಾಟಕಕ್ಕೆ ಹಲವು ಬಾರಿ ಭೇಟಿ ನೀಡಿದ್ದಾರೆ. ಈ ಪೈಕಿ ಧಾರವಾಡ ನಗರಕ್ಕೆ ನ. 10ರಂದು ಭೇಟಿ ನೀಡಿದ್ದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಗಾಂಧೀಜಿ ಅವರು ಗುಜರಾತನಿಂದ ತಮ್ಮ ಪ್ರಯಾಣ ಆರಂಭಿಸಿ 1920ರ ನ. 7 ಮತ್ತು 8ರಂದು ನಿಪ್ಪಾಣಿ ಮತ್ತು ಚಿಕ್ಕೋಡಿ ಮತ್ತು ನ. 9ರಂದು ಬೆಳಗಾವಿಯಲ್ಲಿ ಸಭೆ ನಡೆಸಿದರು. ನಂತರ ನ. 10ರ ನಸುಕಿನಲ್ಲಿ ಧಾರವಾಡಕ್ಕೆ ಆಗಮಿಸಿ ಅಂದು ಧಾರವಾಡದಲ್ಲಿ ತಂಗಿದ್ದರು (ಸಾರಸ್ವತಪೂರದ ಆಗಿನ ಡಾ. ಗಿರೀಶ ಕಾರ್ನಾಡ ಅವರ ಮನೆ) ಎನ್ನುವುದೇ ಧಾರವಾಡಿಗರಿಗೆ ಹೆಮ್ಮೆಯ ವಿಷಯ. ಮರುದಿನ ನ. 11ರಂದು ಹುಬ್ಬಳ್ಳಿ ಹಾಗೂ ಅಲ್ಲಿಂದ ಗದಗಕ್ಕೆಯ ಪ್ರಯಾಣ ಬೆಳೆಸಿ ಮತ್ತೆ ಅಲ್ಲಿಂದ ಗುಜರಾತಿಗೆ ಹೋದರು ಎಂದು ಖ್ಯಾತ ಭಾಷಾ ತಜ್ಞ, ಸಾಹಿತಿ ಡಾ. ಜಿ.ಎನ್‌. ದೇವಿ ಕನ್ನಡಪ್ರಭಕ್ಕೆ ಮಾಹಿತಿ ನೀಡಿದ್ದಾರೆ. 

ಗಾಂಧೀಜಿ ಅವರು ಧಾರವಾಡಕ್ಕೆ ಭೇಟಿ ನೀಡಿದ ದಿನ ಧಾರವಾಡ-ಹುಬ್ಬಳ್ಳಿಯ ಜನತೆ ಅಭೂತಪೂರ್ವಕವಾಗಿ ಬರಮಾಡಿಕೊಂಡಿದ್ದರಂತೆ. 100ಕ್ಕಿಂತ ಹೆಚ್ಚು ಯುವಜನರು ಅವರನ್ನು ಭೇಟಿಯಾಗಿ ಅವರ ಮಾತು ಕೇಳಲು ಉತ್ಸಾಹದಿಂದ ಬಂದಿದ್ದರು. ಧಾರವಾಡದಲ್ಲಿ ಸರ್ವಧರ್ಮ ಪ್ರಾರ್ಥನೆ ಮಾಡಿದ್ದ ಗಾಂಧೀಜಿ ಎಲ್ಲ ವಲಯದ ಜನರನ್ನು ಮಾತನಾಡಿಸಿ ಸ್ವಾತಂತ್ರ್ಯ ಚಳವಳಿಯ ಕಾವು ಹೆಚ್ಚಿಸಿದ್ದರು. ಅವರ ಕರೆಗೆ ಓಗೊಟ್ಟು ಅವಳಿ ನಗರದ 800 ಜನರು ಸ್ವಾತಂತ್ರ್ಯ ಚಳವಳಿಯ ಯಾತ್ರೆಯಲ್ಲಿ ಪಾಲ್ಗೊಂಡು ಕೋಲ್ಕತ್ತಾವರೆಗೂ ಆಗ ನಡೆಯಲಿದ್ದ ಕಾಂಗ್ರೆಸ್‌ ಸಭೆಯಲ್ಲಿ ಭಾಗವಹಿಸಲು ಹೋಗಿದ್ದರು. ಅದೇ ವರ್ಷ ಸಮಸ್ತ ಕರ್ನಾಟಕ ರಾಜಕೀಯ ಸಮಾವೇಶವು ಧಾರವಾಡದಲ್ಲಿ ನಡೆದಿತ್ತು. ಈ ಚಾರಿತ್ರಿಕ ಘಟನೆಯಿಂದಾಗಿಯೇ ಉತ್ತರ ಕರ್ನಾಟಕವು ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರೀಯವಾಗಿ ಧುಮುಕಿತು ಎನ್ನುವುದು ಇದೀಗ ಇತಿಹಾಸ.

ರಾಷ್ಟ್ರಮಟ್ಟದಲ್ಲಿ ಮೆಚ್ಚುಗೆ ಪಡೆದ ಕರ್ನಾಟಕದ ಈ ರೇಲ್ವೆ ನಿಲ್ದಾಣ: ಇದು ಕನ್ನಡಿಗರ ಹೆಮ್ಮೆ

ಗಾಂಧೀಜಿಯ ಧಾರವಾಡದ ಮೊದಲ ಭೇಟಿಯ ಶತಮಾನೋತ್ಸವ ನಿಮಿತ್ತ ಹು-ಧಾ ಮಹಾನಗರದ ಬುದ್ಧಿಜೀವಿಗಳು, ಸಂಘ-ಸಂಸ್ಥೆಗಳು ನ. 10 ಹಾಗೂ 11ರಂದು ಗಾಂಧೀಜಿ ಸ್ಮರಣಾ ದಿನ ಆಚರಿಸಲು ಯೋಜನೆ ರೂಪಿಸಿವೆ ಎನ್ನುವುದು ಮಹತ್ತರ ಬೆಳವಣಿಗೆ.

ಕವಿವಿ ಗಾಂಧಿ ಅಧ್ಯಯನ ವಿಭಾಗದ ಡಾ. ಶಿವಾನಂದ ಶೆಟ್ಟರ್‌, ಗಾಂಧಿವಾದಿಗಳಾದ ಡಾ. ಸಂಜೀವ ಕುಲಕರ್ಣಿ, ಡಾ. ರಾಜೇಂದ್ರ ಪೋದ್ದಾರ, ಶಂಕರ ಹಲಗತ್ತಿ, ಸಾಹಿತಿ ಪ್ರೊ. ಮಾಲತಿ ಪಟ್ಟಣಶೆಟ್ಟಿ, ವಿವಿಧ ಸಂಘಟನೆಗಳ ಶಾಕೀರ ಸನದಿ, ಆಶ್ರಫ ಅಲಿ, ಕಿರಣ ಹಿರೇಮಠ, ಎಫ್‌.ಎಚ್‌. ಜಕ್ಕಪ್ಪನವರ, ವಿಜಯ ಗುಂಟ್ರಾಳ, ಡಾ. ಪ್ರಕಾಶ ಗರುಡ ಹಾಗೂ ಸಾರ್ವಜನಿಕರು ಸಹ ಎರಡು ದಿನಗಳ ಕಾಲ ಗಾಂಧೀಜಿ ಸ್ಮರಣೆಗೆ ಸಿದ್ಧರಾಗಿದ್ದಾರೆ.

ಶುಭ ಸಸುದ್ದಿ: ಖಾಲಿಯಾಗ್ತಿದೆ ಕಿಮ್ಸ್‌ನ ಕೊರೋನಾ ವಾರ್ಡ್‌..!

ಗಾಂಧೀಜಿ ಸ್ಮರಣೆ ಹೇಗೆ

ನ. 10ರಂದು ಧಾರವಾಡದಲ್ಲಿ ಬೆಳಗ್ಗೆ 6ರಿಂದಲೇ ಗಾಂಧೀಜಿ ಸ್ಮರಣೆ ಶುರುವಾಗಲಿದೆ. ರೀಗಲ್‌ ವೃತ್ತದ ಬಳಿ ಪೌರಕಾರ್ಮಿಕರ ಸಭೆ, ನಂತರ 7ರಿಂದ ಗಾಂಧಿ ಶಾಂತಿ ಪ್ರತಿಷ್ಠಾನದಲ್ಲಿ ಸರ್ವಧರ್ಮ ಪ್ರಾರ್ಥನೆ, 8ರಿಂದ ವಾಲ್ಮಿಯ ಆವರಣದಲ್ಲಿ ಗಿಡ ನೆಡುವುದು, ನಂತರ ಬುದ್ಧ ರಕ್ಕಿಥ ಶಾಲೆಯಲ್ಲಿ ಎಲ್ಲ ಧರ್ಮದ ಮಕ್ಕಳೊಂದಿಗೆ ಸಹಭೋಜನ, ಅಲ್ಲಿಂದ 9ರಿಂದ ಅಂಜುಮನ್‌ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ವಿವಿಧ ಸ್ಪರ್ಧೆಗಳು, ನಂತರ ಸಾಹಿತ್ಯ ಪರಿಷತ್ತಿನಲ್ಲಿ ಗಾಂಧೀಜಿ ಭೇಟಿ, ಅವರ ಕುರಿತು ಕವಿತೆ ವಾಚನ, ಗೊಂಬೆಮನೆಯಿಂದ ಗಾಂಧೀಜಿ ಅವರ ಹಿಂದ್‌ ಸ್ವರಾಜ್ಯ ಕೃತಿಯ ರಂಗವಾಚನ, ಮಧ್ಯಾಹ್ನ 2ರಿಂದ ಬಾರ್‌ ಅಸೋಸಿಯೇಶನ್‌ ನಲ್ಲಿ ವಕೀಲರ ಸಭೆ, ಸಂಜೆ ಕರ್ನಾಟಕ ಕಾಲೇಜಿನ ಆವರಣದ ಗಾಂಧೀಜಿ ಪ್ರತಿಮೆಯ ಎದುರು ರೋಟರಿ ಕ್ಲಬ್‌ ಸದಸ್ಯರಿಂದ ಪ್ರಮಾಣ ವಚನ ಸ್ವೀಕಾರ, ನಂತರ ಸೃಜನಾ ರಂಗಮಂದಿರದಲ್ಲಿ ಚಿತ್ರಾ ಫಿಲಂ ಸೊಸೈಟಿಯಿಂದ ಶ್ಯಾಮ್‌ ಬೆನಗಲ್‌ ನಿರ್ದೇಶಿಸಿದ ದಿ ಮೇಕಿಂಗ್‌ ಆಫ್‌ ಮಹಾತ್ಮ ಚಲನಚಿತ್ರ ಪ್ರದರ್ಶನ ನಡೆಯಲಿದೆ. 

ಅದೇ ರೀತಿ ನ. 11ರಂದು ಹುಬ್ಬಳ್ಳಿಯ ಬೇರೆ ಬೇರೆ ಕಡೆಗಳಲ್ಲಿ ವಿದ್ಯಾರ್ಥಿಗಳ, ಶ್ರಮಿಕರಿಂದ ಗಾಂಧೀಜಿಯ ಸ್ಮರಣೆ, ಕಿಮ್ಸ್‌ ಎದುರಿನ ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ, ವಿಶೇಷ ಅಂಚೆ ಲಕೋಟೆ ಬಿಡುಗಡೆ, ಮಹಿಳಾ ವಿದ್ಯಾಪೀಠದ ಎದುರು ಸಭೆ, ಕಾಂಗ್ರೆಸ್‌ ಭವನದಲ್ಲಿ ಭೇಟಿ ಹಾಗೂ ಸಂಜೆ 4ಕ್ಕೆ ಸಿದ್ಧಾರೂಢ ಮಠದಲ್ಲಿ ಸಭೆ ನಡೆಯಲಿದೆ. ಗಾಂಧೀಜಿಯು ಈ ಭಾಗದಲ್ಲಿ ಪಯಣಿಸಿದ ಶತಮಾನದ ಚಾರಿತ್ರಿಕ ಪಥ ಗುರುತಿನ ನೆನಪಿಗಾಗಿ ಗದಗ ನಗರಕ್ಕೆ ಪಯಣ ಬೆಳೆಸಲು ಗಾಂಧಿವಾದಿಗಳು ತೀರ್ಮಾನಿಸಿದ್ದಾರೆ.