Chitradurga; ತುರುವನೂರು ಗ್ರಾಮದಲ್ಲಿದೆ ಮಹಾತ್ಮ ಗಾಂಧೀಜಿ ದೇವಾಲಯ
ಸ್ವಾತಂತ್ರ್ಯ ದಿನಾಚರಣೆ ಬಂತಂದ್ರೆ ಮಹಾತ್ಮ ಗಾಂಧೀಜಿ ಭಾವಚಿತ್ರವಿಟ್ಟು ಪೂಜಿಸೋದು ಸಂಪ್ರದಾಯ. ಆದ್ರೆ ಇಲ್ಲೊಂದು ಊರಲ್ಲಿ ಸ್ವಾತಂತ್ರ್ಯ ಹೋರಾಟದ ಸವಿ ನೆನಪಿಗಾಗಿ ಗಾಂಧಿಜಿಯವರ ದೇಗುಲವನ್ನೇ ಕಟ್ಟಿಸಿದ್ದಾರೆ.
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಆ.14): ಸ್ವಾತಂತ್ರ್ಯ ದಿನಾಚರಣೆ ಬಂತಂದ್ರೆ ಮಹಾತ್ಮ ಗಾಂಧೀಜಿ ಭಾವಚಿತ್ರವಿಟ್ಟು ಪೂಜಿಸೋದು ಸಂಪ್ರದಾಯ. ಆದ್ರೆ ಇಲ್ಲೊಂದು ಊರಲ್ಲಿ ಸ್ವಾತಂತ್ರ್ಯ ಹೋರಾಟದ ಸವಿ ನೆನಪಿಗಾಗಿ ಗಾಂಧೀಜಿಯವರ ದೇಗುಲವನ್ನೇ ಕಟ್ಟಿಸಿದ್ದಾರೆ. ಆ ದೇಗುಲದಲ್ಲಿ ನಿತ್ಯ ಪೂಜಾ ಕೈಂಕಾರ್ಯ ನಡೆಯೋದು ಕೂಡ ವಿಶೇಷ ಎನಿಸಿದೆ..! ನೋಡಿ ಹೀಗೆ ನಿಂತಿರುವ ಭಾಪುವಿನ ದೇಗುಲಕ್ಕೆ ಪೂಜೆ ಸಲ್ಲಿಸ್ತಿರೋ ಜನರು. ಈ ದೃಶ್ಯಗಳು ಕಂಡು ಬಂದಿದ್ದು ಚಿತ್ರದುರ್ಗ ತಾಲೂಕಿನ ತುರುವನೂರು ಗ್ರಾಮದ ಬಳಿ. ಸ್ವಾತಂತ್ರ್ಯ ಹೋರಾಟದಲ್ಲಿ ತನ್ನದೇ ಛಾಪು ಮೂಡಿಸಿದ್ದ ಗ್ರಾಮ. ಮಾಜಿ ಮುಖ್ಯಮಂತ್ರಿ, ರಾಷ್ಟ್ರನಾಯಕ ದಿವಂಗತ ಎಸ್.ನಿಜಲಿಂಗಪ್ಪ ನೇತೃತ್ವದಲ್ಲಿ ಅನೇಕ ಸ್ವತಂತ್ರ್ಯ ಹೋರಾಟಗಳು ಇಲ್ಲಿ ನಡೆದಿವೆ. ಈಚಲ ಮರದ ಚಳುವಳಿ ಕೂಡ ಇದೇ ತುರುವನೂರು ಗ್ರಾಮದಲ್ಲಿ ನಡೆದಿತ್ತು. ಹೀಗಾಗಿ, ಇಲ್ಲಿನ ನೂರಾರು ಜನ ಮಹಿಳೆಯರು ಹಾಗು ಪುರುಷರು ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ್ದರು. ಆ ಸವಿನೆನಪಿಗಾಗಿ ಈ ಗ್ರಾಮದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ನೇತಾರ ಮಹಾತ್ಮ ಗಾಂಧೀಜಿಯವರ ದೇವಸ್ಥಾನವನ್ನೇ ಇಲ್ಲಿನ ಗ್ರಾಮಸ್ಥರು ನಿರ್ಮಿಸಿದ್ದಾರೆ.
ನಿತ್ಯ ಗಾಂಧೀಜಿ ಪ್ರತಿಮೆಗೆ ಇಲ್ಲಿ ಪೂಜೆಯನ್ನು ಸಲ್ಲಿಸ್ತಾರೆ. ಮನೆ ದೇವರಂತೆ ಭಕ್ತಿಯಿಂದ ಆರಾಧಿಸುತ್ತಾರೆ. ಅಲ್ಲದೇ ದೆಹಲಿಯಲ್ಲಿ ಬಿಟ್ಟರೆ, ಕಂಚಿನ ಗಾಂಧಿ ಪ್ರತಿಮೆ ಇರುವ ಏಕೈಕ ದೇಗುಲ ಇದಾಗಿದ್ದು, ಅಕ್ಟೋಬರ್ 1, 1968 ರಂದು ಎಸ್.ನಿಜಲಿಂಗಪ್ಪನವರು ಈ ದೇಗುಲವನ್ನು ಉದ್ಘಾಟಿಸಿದ್ದರು ಎಂಬ ಇತಿಹಾಸವಿದೆ. ಅಂದಿನಿಂದಲೂ ಈ ಗ್ರಾಮ ಸ್ವಾತಂತ್ರ್ಯ ಹೋರಾಟಗಾರರ ಗ್ರಾಮವೆಂದೇ ಪ್ರಖ್ಯಾತಿಯಾಗಿದೆ.
India@75:ಗಾಂಧೀಜಿ ಜೊತೆ ಸುದೀರ್ಘ ದಂಡಯಾತ್ರೆ ನಡೆಸಿದ ಕ್ರೈಸ್ತ ಅನುಯಾಯಿ ಟೈಟಸ್ ಜೀ
ಇನ್ನು ಈ ಗ್ರಾಮಕ್ಕೆ ಸ್ವತಃ ಗಾಂಧೀಜಿ ಬರುವುದಾಗಿ ಹೇಳಿದ್ರಂತೆ. ಆದ್ರೆ ಕಾರ್ಯದ ಒತ್ತಡದಿಂದಾಗಿ ಅವರು ಬರಲು ಸಾಧ್ಯವಾಗದ ಹಿನ್ನಲೆಯಲ್ಲಿ ಅವರ ಸಹಚರರು ಹಾಗು ಸಂಬಂಧಿಗಳು ಗ್ರಾಮಕ್ಕೆ ಭೇಟಿ ನೀಡಿ ಹೋರಾಟದ ಕಿಚ್ಚು ಮೊಳಗಿಸಿದ್ರಂತೆ. ಆ ನೆನಪಿಗಾಗಿ ನಿರ್ಮಾಣವಾಗಿರೋ ಈ ದೇಗುಲದಲ್ಲಿ ನಿತ್ಯ ಪೂಜೆ ಹಾಗು ರಾಷ್ಟ್ರೀಯ ಹಬ್ಬಗಳಂದು ವಿಶೇಷ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿರುವ ಗ್ರಾಮಸ್ಥರು, ನಮ್ಮ ಪೂರ್ವಜರ ಕಾಲದಿಂದಲೂ ಈ ಸಂಪ್ರದಾಯ ಜೀವಂತವಾಗಿದೆ ಅಂತಾರೆ.
Uttara Kannada: ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಸೂರ್ವೆಯ ಕರಬಂಧಿ ಚಳುವಳಿ
ಒಟ್ಟಾರೆ ಸ್ವಾತಂತ್ರ್ಯ ಹೋರಾಟಗಾರರ ನೆನಪಿಗಾಗಿ ನಿರ್ಮಾಣವಾದ ಗಾಂಧೀಜಿ ದೇಗುಲದಲ್ಲಿ ನಿತ್ಯವೂ ಪೂಜಾ ಕೈಂಕಾರ್ಯ ನಡೆಯುತ್ತಿದೆ. ಕೇವಲ ರಾಷ್ಟ್ರೀಯ ಹಬ್ಬಗಳಿಗೆ ಈ ದೇಗುಲವನ್ನು ಸೀಮಿತಗೊಳಿಸದೇ, ಸ್ವಾತಂತ್ರ್ಯ ಬಂದು 75 ವರ್ಷ ಕಳೆದರು ಸಹ ಸ್ವಾತಂತ್ರ್ಯ ಹೋರಾಟಗಾರರ ಹೋರಾಟದ ಕಿಚ್ಚು ಅಚ್ಚಳಿಯದಂತೆ ಗಾಂಧೀಜಿ ದೇಗುಲದ ನೆನಪಲ್ಲಿ ಉಳಿಸಿರೋದು ಅವಿಸ್ಮರಣೀಯ.