Asianet Suvarna News Asianet Suvarna News

ಕನ್ನಡದಲ್ಲೇ ಮಾತನಾಡಿದ್ದ ಬಾಪು, ಹೋರಾಟದಲ್ಲಿ ಎಂದೂ ಮರೆಯದ ಛಾಪು

ಗದಗ ಜಿಲ್ಲೆಯಲ್ಲೂ ಮಹಾಥ್ಮರ ಹೆಜ್ಜೆ ಗುರುತುಗಳಿವೆ. ಮುಂಬೈ ಕರ್ನಾಟಕದಲ್ಲಿ ಸ್ವಾತಂತ್ರ್ಯ ಚಳವಳಿ ಉನ್ನತ ಸ್ಥಾನದಲ್ಲಿದ್ದಾಗ ಗಾಂಧೀಜಿ ಬಂದು ಹೋಗಿದ್ದರು. ಕನ್ನಡದಲ್ಲೇ ಮಾತನಾಡಿದ್ದ ಗಾಂಧೀಜಿ ಜನರನ್ನು ಹುರಿದುಂಬಿಸಿದ್ದರು.

mahatma gandhi Speaks Kannada at Gadag
Author
Bengaluru, First Published Oct 2, 2018, 8:28 PM IST

ಗದಗ[ಅ.2]  ಕರ್ನಾಟಕ ಏಕೀಕರಣಕ್ಕೆ ಪ್ರಮುಖ ಪಾತ್ರವಹಿಸಿದ್ದ, ಮುಂಬೈ ಅಸೆಂಬ್ಲಿಯಲ್ಲಿ ಕನ್ನಡದಲ್ಲಿಯೇ ಮಾತನಾಡಿ, ದೇಶದ ಗಮನವನ್ನೇ ಸೆಳೆದಿದ್ದ ದಿ.ಅಂದಾನಪ್ಪ ದೊಡ್ಡಮೇಟಿ ಅವರ ತವರು ಗ್ರಾಮವಾದ ರೋಣ ತಾಲೂಕಿನ ಜಕ್ಕಲಿ ಗ್ರಾಮಕ್ಕೆ ಬಾಪೂಜಿ ಭೇಟಿ ನೀಡಿದ್ದು, ಜಿಲ್ಲೆಯ ಇತಿಹಾಸಕ್ಕೆ ಮೈಲುಗಲ್ಲಾಗಿ ಉಳಿದಿದೆ. 

ಗಾಂಧೀಜಿ ಅವರ ಸರಳ ಬದುಕು, ಸಮಾನತೆ, ಅಹಿಂಸೆಯ ಮೂಲಕವೇ ಸ್ವಾತಂತ್ರ್ಯವನ್ನು ತಂದು ಕೊಡುವಲ್ಲಿ ದೇಶ ಮಾತ್ರವಲ್ಲ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಶೇಷ ಗೌರವ ಹೊಂದಿದ್ದ ಅವರು ಗದಗ ಜಿಲ್ಲೆಯ ಜಕ್ಕಲಿಯಂತಾ ಪುಟ್ಟ ಗ್ರಾಮಕ್ಕೆ ಭೇಟಿ ನೀಡಿ, ಅಲ್ಲಿನ ಹಾಗೂ ಸುತ್ತಮುತ್ತಲ ಗ್ರಾಮಗಳ ಸಾವಿರಾರು ಯುವಕರಿಗೆ ಸ್ವಾತಂತ್ರ್ಯದ ಕಿಚ್ಚನ್ನು ಹೆಚ್ಚಿಸಿ ಹೋರಾಟಕ್ಕೆ ಧುಮುಕುವಂತೆ ಮಾಡಿದ್ದರು. 

1934 ರಲ್ಲಿ ಭೇಟಿ ನೀಡಿದ ಮಹಾತ್ಮ:  ಅಂದಿನ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರೀಯರಾಗಿದ್ದ ದೇಶ ಮಟ್ಟದಲ್ಲಿ ಗುರುತಿಸಿಕೊಂಡಿದ್ದ, ಗಾಂಧೀಜಿ ಅವರ ಕಟ್ಟಾ ಅನುಯಾಯಿಯಾಗಿದ್ದ ದಿ.ಅಂದಾನಪ್ಪ ದೊಡ್ಡಮೇಟಿಯವರು ಕರೆ ಮೆರೆಗೆ ಗಾಂಧೀಜಿಯವರು 1934 ಮಾರ್ಚ 3 ರಂದು ಗದಗ ಜಿಲ್ಲೆಯ ರೋಣ ತಾಲೂಕಿನ ಜಕ್ಕಲಿ ಗ್ರಾಮಕ್ಕೆ ಬಂದಿದ್ದರು. ಗ್ರಾಮದ ದೊಡ್ಡಮೇಟಿಯವರ ಜಮೀನನಲ್ಲಿ ಅಂದು ಏರ್ಪಡಿಸಿದ ಸಮಾರಂಭದಲ್ಲಿ ಜನತೆಯನ್ನುದ್ದೇಶಿಸಿ ಮಾತನಾಡಿದರು. ಆಗ ವಿಜಾಪೂರ, ಧಾರವಾಡ ಜಿಲ್ಲೆಗಳು ಸೇರಿದಂತೆ ಅಕ್ಕ ಪಕ್ಕದ ಜಿಲ್ಲೆಗಳ ಹಳ್ಳಿಗಳಿಂದ 25 ಸಾವಿರಕ್ಕೂ ಹೆಚ್ಚಿನ ಜನರು 1200 ಕ್ಕೂ ಹೆಚ್ಚು ಎತ್ತಿನ ಬಂಡಿಗಳೊಂದಿಗೆ ಆಗಮಿಸಿ ಪಾಲ್ಗೊಂಡು ಗಾಂಧೀಜಿ ಕಾರ್ಯಕ್ರಮವನ್ನು ದೊಡ್ಡ ಮಟ್ಟದಲ್ಲಿ ಯಶಸ್ವಿಗೊಳಿಸಿದ್ದರು. 

ಗಾಂಧಿ ಮೂರ್ತಿ ಸ್ಥಾಪನೆ:  ಗಾಂಧೀಜಿ ಗ್ರಾಮಕ್ಕೆ ಭೇಟಿ ನೀಡಿದ ಸವಿ ನೆನಪಿಗಾಗಿ 1970  ರಲ್ಲಿ ಗ್ರಾಮದಲ್ಲಿ ಗಾಂಧೀಜಿ ಅವರ ಮೂರ್ತಿ ಸ್ಥಾಪನೆ ಮಾಡಲಾಗಿದೆ. ಇದರೊಟ್ಟಿಗೆ ಅಂದು ಅವರು ಜಕ್ಕಲಿ ಗ್ರಾಮಕ್ಕೆ ತೆರಳುವ ಮಾರ್ಗ ಮಧ್ಯದಲ್ಲಿ ಗದಗ ನಗರದಲ್ಲೂ ಅವರು ಸ್ವಾತಂತ್ರ್ಯ ಹೋರಾಟಗಾರರನ್ನು ಭೇಟಿ ಮಾಡಿ ತೆರಳಿದ ಹಿನ್ನೆಲೆಯಲ್ಲಿ ಅವರು ಜಕ್ಕಲಿ ಗ್ರಾಮಕ್ಕೆ ಸಾಗಿದ ದಿಕ್ಕಿನಲ್ಲಿಯೇ ಗದಗ ನಗರದ ಮುಖ್ಯ ಕೂಡು ರಸ್ತೆಯನ್ನು ಗಾಂಧಿ ವೃತ್ತವನ್ನಾಗಿ ಹೆಸರಿಡಲಾಗಿದೆ. ಈಗ ಅಲ್ಲಿ ದೊಡ್ಡ ಗಾಂಧಿ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. 

ಗಾಂಧೀಜಿ ಅವರು ನಮ್ಮ ಜಿಲ್ಲೆಗೆ ಭೇಟಿ ನೀಡಿದ್ದರು ಎಂದು ಹೇಳಿಕೊಳ್ಳುವುದೇ ಒಂದು ಹೆಮ್ಮೆಯ ಸಂಗತಿ ಅಂದಿನ ನಮ್ಮ ಹಿರಿಯರ ನಿರಂತರ ಪರಿಶ್ರಮ ಮತ್ತು ಸ್ವಾತಂತ್ರ್ಯ ಹೋರಾಟದಲ್ಲಿ ಅವರು ಸಕ್ರಿಯವಾಗಿ ಪಾಲ್ಗೊಂಡ ಹಿನ್ನೆಲೆಯಲ್ಲಿ ಗಾಂಧೀಜಿ ಅವರಂತಾ ಮಹಾನ್ ನಾಯಕರು ಜಕ್ಕಲಿ ಅಂತಾ ಸಣ್ಣ ಗ್ರಾಮಕ್ಕೆ ಭೇಟಿ ನೀಡಲು ಸಾಧ್ಯವಾಯಿತು. ಇದಕ್ಕೆ ಮುಖ್ಯ ಕಾರಣೀಭೂತರೇ ದಿ.ಅಂದಾನಪ್ಪ ದೊಡ್ಡಮೇಟಿ  ಎಂದು ಜಿಲ್ಲಾ ಯುವ ಬ್ರಿಗೇಡ್ ಅಧ್ಯಕ್ಷ ಕಿಶನ್ ಮೆರವಾಡೆ ಸ್ಮರಿಸುತ್ತಾರೆ.


 

Follow Us:
Download App:
  • android
  • ios