ನರಗುಂದ(ಜ.02): ರಾಜ್ಯದ ರೈತ ಸಮುದಾಯದ ಬಹುದಿನಗಳ ಬೇಡಿಕೆಯಾದ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆ ಜಾರಿಯಾಗದಿರುವುದಕ್ಕೆ ಈ ಭಾಗದ ಜನಪ್ರತಿನಿಧಿಗಳೇ ಕಾರಣ ಎಂದು ರೈತ ಸೇನಾ ಸಂಘಟನೆ ಸದಸ್ಯ ಜಗನ್ನಾಥ ಮುಧೋಳೆ ಆರೋಪಿಸಿದ್ದಾರೆ.

1630 ನೇ ದಿನದ ನಿರಂತರ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆ ಹೋರಾಟ ವೇದಿಕೆಯಲ್ಲಿ ಮಾತನಾಡಿ, ಉತ್ತರ ಕರ್ನಾಟಕ ಭಾಗದ ರೈತರ ಬಹುದಿನಗಳ ಬೇಡಿಕೆಯಾದ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆ ಜಾರಿ ವಿಳಂಬಕ್ಕೆ ಈ ಭಾಗದ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಪಕ್ಷದ ನಾಯಕರಿಂದ ಈ ಯೋಜನೆಗೆ ಹಿನ್ನೆಡೆಯಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಏಕೆಂದರೆ ಈ ಭಾಗದಿಂದ ಚುನಾವಣೆಯಲ್ಲಿ ಆಯ್ಕೆಗೊಂಡ ನಂತರ ಈ ಜನಪ್ರತಿನಿಧಿಗಳು ಈ ಭಾಗದ ಸಮಸ್ಯೆಗಳ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ. ತಮ್ಮ ಮುಂದಿನ ರಾಜಕೀಯ ಭವಿಷ್ಯ ಮತ್ತು ಅಕ್ರಮ ಆಸ್ತಿ ಮಾಡುವುದರಲ್ಲಿಯೇ ಈ ಭಾಗದ ರಾಜಕಾರಣಿಗಳು ತಮ್ಮ ಅಧಿಕಾರ ಮುಗಿಸುತ್ತಾರೆ. ಆದ್ದರಿಂದ ಈ ಯೋಜನೆ ಜಾರಿಯಾಗಬೇಕೆಂದರೆ ಮೊದಲು ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತ ಸಮುದಾಯ ಒಗ್ಗೂಡಿ ಚುನಾವಣೆಯಲ್ಲಿ ರಾಜ್ಯದ ಮೂರು ಪಕ್ಷದ ಅಭ್ಯರ್ಥಿಗಳಗೆ ತಕ್ಕಪಾಠ ಕಲಿಸಿದರೆ ಮಾತ್ರ ಈ ಮಹದಾಯಿ ಯೋಜನೆ ಜಾರಿಯಾಗಲು ಸಾಧ್ಯ ಎಂದರು.

ರೈತ ಸೇನೆ ಸದಸ್ಯ ಪುಂಡಲಿಕಪ್ಪ ಯಾದವ ಮಾತನಾಡಿ, ತಾಲೂಕಿನ ರೈತರಿಗೆ 2018ರ ಮುಂಗಾರು ಹಂಗಾಮಿನ ಬೆಳೆ ವಿಮೆ ಪರಿಹಾರ ಕೆಲವು ರೈತರಿಗೆ ಮಾತ್ರ ಬಂದಿವೆ. ಇನ್ನು ಕೆಲವು ರೈತರಿಗೆ ವಿಮೆ ಪರಿಹಾರ ಬರದೆ ಪ್ರತಿದಿನ ಗ್ರಾಮೀಣ ಭಾಗದ ರೈತರು ಬ್ಯಾಂಕ್‌ ಖಾತೆ ಪುಸ್ತಕ ಹಿಡಿದು ಬ್ಯಾಂಕಿಗೆ ಅಲೆಯುವಂತಹ ಪರಿಸ್ಥಿತಿ ಎದುರಾಗಿದೆ. ಆದ್ದರಿಂದ ಸರ್ಕಾರ ಬೇಗ 2018ರ ಹಿಂಗಾರು ಹಂಗಾಮಿನಲ್ಲಿ ರೈತರು ತುಂಬಿದ ಬೆಳೆ ವಿಮೆ ಪರಿಹಾರವನ್ನು 1 ವಾರದಲ್ಲಿ ಬಿಡುಗಡೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಸರ್ಕಾರದ ವಿರುದ್ಧ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ವೀರಬಸಪ್ಪ ಹೂಗಾರ, ಎಸ್‌.ಬಿ. ಜೋಗಣ್ಣವರ, ಸಂಗಪ್ಪ ಶಾನವಾಡ, ವೆಂಕಪ್ಪ ಹುಜರತ್ತಿ, ಹನಮಂತ ಸರನಾಯ್ಕರ, ಚನ್ನಪ್ಪಗೌಡ ಪಾಟೀಲ, ಮಾರುತಿ ಬಡಿಗೇರ, ವಿಜಯಕುಮಾರ ಹೂಗಾರ, ನಾಗರತ್ನ ಸವಳಬಾವಿ, ಅನಸವ್ವ ಶಿಂದೆ, ಶಾಂತವ್ವ ಭೂಸರಡ್ಡಿ, ವಾಸು ಚವ್ಹಾಣ, ಯಲ್ಲಪ್ಪ ಗುಡದೇರಿ ಸೇರಿದಂತೆ ಮುಂತಾದವರು ಇದ್ದರು.