ಕೃಷಿ ಮಾಡುವಾಗ ಮಣ್ಣಿನ ಗುಣಮಟ್ಟ ಉತ್ತಮವಾಗಿರುವುದು ಬಹಳ ಮುಖ್ಯ. ಆದರೆ ವರ್ಷಗಳಿಂದ ಟ್ರ್ಯಾಕ್ಟರ್ ಓಡಿಸಿ ಗಟ್ಟಿಯಾಗಿರುವ ಭೂಮಿಯನ್ನು ಮತ್ತೆ ಸಡಿಲಗೊಳಿಸುವುದು ರೈತರಿಗೆ ದೊಡ್ಡ ಸವಾಲು. ಇಂತಹ ಸಮಸ್ಯೆಗೆ ಪರಿಹಾರವಾಗಿ ಮರಗೆಣಸು ಬೆಳೆಯಬಹುದು.

ಕೃಷಿ ಮಾಡುವಾಗ ಮಣ್ಣಿನ ಗುಣಮಟ್ಟ ಉತ್ತಮವಾಗಿರುವುದು ಬಹಳ ಮುಖ್ಯ. ಆದರೆ ವರ್ಷಗಳಿಂದ ಟ್ರ್ಯಾಕ್ಟರ್ ಓಡಿಸಿ ಗಟ್ಟಿಯಾಗಿರುವ ಭೂಮಿಯನ್ನು ಮತ್ತೆ ಸಡಿಲಗೊಳಿಸುವುದು ರೈತರಿಗೆ ದೊಡ್ಡ ಸವಾಲು. ಇಂತಹ ಸಮಸ್ಯೆಗೆ ಪರಿಹಾರವಾಗಿ ಮರಗೆಣಸು ಬೆಳೆಯಬಹುದು. ಆಹಾರ ಬೆಳೆಯಾಗಿ ಮಾತ್ರವಲ್ಲದೆ, ಮಣ್ಣಿನ ರಚನೆಯನ್ನು ಸುಧಾರಿಸಲು ಸಹ ಮರಗೆಣಸು ಸಹಕಾರಿಯಾಗುತ್ತದೆ ಎಂಬುದನ್ನು ತಮ್ಮ ತೋಟದಲ್ಲಿ ಬೆಳೆದು ತೋರಿಸಿದ್ದಾರೆ ಕೃಷಿಕರೊಬ್ಬರು.

ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಕೃಷಿಕರೊಬ್ಬರು ಮರಗೆಣಸು ಬೆಳೆಯುವ ವಿಧಾನ, ನಾಟಿ ಮಾಡುವಾಗ ವಹಿಸಬೇಕಾದ ಎಚ್ಚರಿಕೆ, ಕೊಯ್ಲು ಮಾಡುವ ಸಮಯ ಹಾಗೂ ಇದರಿಂದ ಸಿಗುವ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

ಒಂದು ಗಿಡದಿಂದ 5ರಿಂದ 10 ಕೆಜಿ ಮರಗೆಣಸು

ಕೃಷಿಕರು ತಮ್ಮ ತೋಟದಲ್ಲಿ ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಮರಗೆಣಸನ್ನು ನಾಟಿ ಮಾಡಿದ್ದರು. ಸುಮಾರು 10ರಿಂದ 11 ತಿಂಗಳ ಬಳಿಕ ಇದೀಗ ಕೊಯ್ಲು ಮಾಡಿದ್ದಾರೆ. ಒಂದು ಮರಗೆಣಸಿನ ಗಿಡದಿಂದ ಕನಿಷ್ಠ 5ರಿಂದ 10 ಕೆಜಿಯಷ್ಟು ಇಳುವರಿ ನಿರೀಕ್ಷಿಸಬಹುದು ಎಂದು ಅವರು ಹೇಳಿದ್ದಾರೆ.

ಆದರೆ ಎಲ್ಲ ರೀತಿಯ ಮಣ್ಣಿನಲ್ಲೂ ಒಂದೇ ರೀತಿಯ ಇಳುವರಿ ಸಿಗುವುದಿಲ್ಲ. ಮಣ್ಣಿನ ಗುಣಮಟ್ಟ, ಗಿಡದ ಬೆಳವಣಿಗೆ ಹಾಗೂ ಹವಾಮಾನಕ್ಕೆ ಅನುಗುಣವಾಗಿ ಇಳುವರಿ ಬದಲಾಗುತ್ತದೆ. ಗಿಡ ಚೆನ್ನಾಗಿ ಬೆಳೆದಿದ್ದರೆ 10 ತಿಂಗಳಲ್ಲೇ ಕೊಯ್ಲು ಮಾಡಬಹುದು. ಬೆಳವಣಿಗೆ ನಿಧಾನವಾಗಿದ್ದರೆ 12ರಿಂದ 14 ತಿಂಗಳವರೆಗೆ ಕಾಯುವುದು ಉತ್ತಮ ಎಂಬುದು ಅವರ ಸಲಹೆ.

ಮರಗೆಣಸು ಕೊಯ್ಲಿಗೆ ಬಂದಿದೆ ಎಂದು ತಿಳಿಯುವುದು ಹೇಗೆ?

ಮರಗೆಣಸು ಕೊಯ್ಲಿಗೆ ಸಿದ್ಧವಾಗಿದೆಯೇ ಎಂಬುದನ್ನು ತಿಳಿಯಲು ಕೆಲವು ಲಕ್ಷಣಗಳನ್ನು ಗಮನಿಸಬೇಕು. ಗಿಡದ ಕಾಂಡ ದಪ್ಪವಾಗಿ ಬೆಳೆದಿರಬೇಕು. ಗಿಡದ ಸುತ್ತಲಿನ ಮಣ್ಣಿನಲ್ಲಿ ಬಿರುಕುಗಳು ಕಾಣಿಸಿಕೊಳ್ಳುತ್ತವೆ. ಮಣ್ಣಿನ ಕೆಳಭಾಗದಲ್ಲಿ ಗೆಣಸು ಬೆಳೆದಿರುವುದರಿಂದ ನೆಲ ಉಬ್ಬಿದಂತೆ ಕಾಣಿಸಬಹುದು. ಗಿಡದ ಬೆಳವಣಿಗೆಯ ಗಾತ್ರ ಮತ್ತು ಅವಧಿಯನ್ನು ಗಮನಿಸಬೇಕು. ಗಿಡದ ಸುತ್ತಲಿನ ಮಣ್ಣನ್ನು ಸ್ವಲ್ಪ ತೆಗೆದು ನೋಡಿದರೆ ಗೆಣಸು ಬೆಳೆದಿದೆಯೇ ಎಂಬುದನ್ನು ಪರಿಶೀಲಿಸಬಹುದು.

ಮರಗೆಣಸು ನಾಟಿ ಮಾಡಲು ಎರಡು ಸುಲಭ ವಿಧಾನಗಳು

1. ಕಾಂಡದ ತುಂಡುಗಳಿಂದ ನಾಟಿ

ಮರಗೆಣಸು ಬೆಳೆಯಲು ಅದರ ಕಾಂಡದ ತುಂಡುಗಳನ್ನು ಬಳಸಬಹುದು. ಸುಮಾರು ಒಂದು ಅಡಿ ಉದ್ದದ ಕಾಂಡದ ತುಂಡುಗಳನ್ನು ಕತ್ತರಿಸಿ ನಾಟಿ ಮಾಡಬೇಕು. ಕಾಂಡದಲ್ಲಿ ಮೊಗ್ಗುಗಳಿರುವ ಭಾಗವನ್ನು ಆಯ್ಕೆ ಮಾಡುವುದು ಮುಖ್ಯ. ಈ ಮೊಗ್ಗುಗಳಿಂದಲೇ ಹೊಸ ಚಿಗುರುಗಳು ಬೆಳೆಯುತ್ತವೆ.

ಒಂದು ಕಾಂಡದಿಂದ ಐದರಿಂದ ಆರು ತುಂಡುಗಳನ್ನು ಪಡೆಯಬಹುದು. ಆದರೆ ಎಳೆಯದಾದ, ಮೊಗ್ಗುಗಳು ಸರಿಯಾಗಿ ಬೆಳೆಯದ ಕಾಂಡಗಳನ್ನು ನಾಟಿಗೆ ಬಳಸಬಾರದು.

2. ಗೆಣಸಿನ ತುಂಡುಗಳಿಂದ ನಾಟಿ

ಕೊಯ್ಲಿನ ಸಂದರ್ಭದಲ್ಲಿ ಸಿಗುವ ಮರಗೆಣಸನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ನಾಟಿ ಮಾಡಬಹುದು. ಶುಂಠಿ, ಅರಿಶಿನ ಮತ್ತು ಸಿಹಿಗೆಣಸನ್ನು ನಾಟಿ ಮಾಡುವ ರೀತಿಯಲ್ಲೇ ಈ ವಿಧಾನವನ್ನು ಅನುಸರಿಸಬಹುದು. ಆದರೆ ಕಾಂಡದ ತುಂಡುಗಳಿಂದ ನಾಟಿ ಮಾಡುವುದು ಹೆಚ್ಚು ಸುಲಭ ಎಂದು ಕೃಷಿಕರು ತಿಳಿಸಿದ್ದಾರೆ.

ನಾಟಿ ಮಾಡುವಾಗ ಈ ತಪ್ಪು ಮಾಡಬೇಡಿ

ಮರಗೆಣಸಿನ ಕಾಂಡವನ್ನು ನಾಟಿ ಮಾಡುವಾಗ ಅದರ ಮೊಗ್ಗುಗಳ ದಿಕ್ಕನ್ನು ಸರಿಯಾಗಿ ಗಮನಿಸಬೇಕು. ಕಾಂಡದ ಮೇಲಿರುವ ಕಣ್ಣುಗಳು ಅಥವಾ ಮೊಗ್ಗುಗಳು ಕೆಳಮುಖವಾಗಿರುವುದನ್ನು ಗುರುತಿಸಿ ನಾಟಿ ಮಾಡಬೇಕು. ಅವುಗಳ ದಿಕ್ಕನ್ನು ಗಮನಿಸದೆ ಉಲ್ಟಾ ನೆಟ್ಟರೆ ಗಿಡ ಸರಿಯಾಗಿ ಚಿಗುರದೆ ಹಾಳಾಗುವ ಸಾಧ್ಯತೆ ಇದೆ. ಹೀಗಾಗಿ ನಾಟಿ ಮಾಡುವ ಮೊದಲು ಕಾಂಡದ ಮೇಲಿರುವ ಮೊಗ್ಗುಗಳ ದಿಕ್ಕನ್ನು ಪರಿಶೀಲಿಸುವುದು ಬಹಳ ಮುಖ್ಯ.

ಗಟ್ಟಿಯಾದ ಭೂಮಿಯನ್ನೂ ಸಡಿಲಗೊಳಿಸುವ ಮರಗೆಣಸು

ಈ ಕೃಷಿಕರು ತಮ್ಮ ತೋಟದಲ್ಲಿ ಮರಗೆಣಸನ್ನು ಬೆಳೆಯಲು ಮುಖ್ಯ ಕಾರಣ ಮಣ್ಣಿನ ಸುಧಾರಣೆ. ಈ ಹಿಂದೆ ಅವರ ಜಮೀನಿನಲ್ಲಿ ಟ್ರ್ಯಾಕ್ಟರ್‌ಗಳ ಓಡಾಟ ಮತ್ತು ಕೃಷಿ ಚಟುವಟಿಕೆಗಳಿಂದ ಮಣ್ಣು ಬಹಳ ಗಟ್ಟಿಯಾಗಿತ್ತು. ಕಲ್ಲಿನಂತೆ ಗಟ್ಟಿಯಾಗಿದ್ದ ಮಣ್ಣನ್ನು ಸಡಿಲಗೊಳಿಸುವ ಉದ್ದೇಶದಿಂದ ಮರಗೆಣಸು ನಾಟಿ ಮಾಡಿದ್ದರು. ಮರಗೆಣಸಿನ ಬೇರುಗಳು ಭೂಮಿಯೊಳಗೆ ಬೆಳೆದು ಗೆಣಸು ಬಿಡುವುದರಿಂದ ಮಣ್ಣಿನಲ್ಲಿ ಬಿರುಕುಗಳು ಉಂಟಾಗಿ ಮಣ್ಣು ಸಡಿಲವಾಗಲು ಸಹಾಯವಾಗಿದೆ ಎಂದು ಅವರು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಈ ಹಿಂದೆ ಗಟ್ಟಿಯಾಗಿದ್ದ ಮಣ್ಣು ಇದೀಗ ಪುಡಿಯಂತಾಗಿದೆ ಎಂದು ತೋಟದಲ್ಲಿ ತೋರಿಸಿದ್ದಾರೆ.

ಮರಗೆಣಸಿನಿಂದ ಚಿಪ್ಸ್, ಪಲ್ಯ ಮಾಡಬಹುದು

ಮರಗೆಣಸು ಕೇವಲ ಮಣ್ಣಿನ ಸುಧಾರಣೆಗೆ ಮಾತ್ರವಲ್ಲ, ಆಹಾರ ಬೆಳೆಯಾಗಿಯೂ ಉಪಯುಕ್ತವಾಗಿದೆ. ಇದರಿಂದ ಹಲವು ಬಗೆಯ ಖಾದ್ಯಗಳನ್ನು ತಯಾರಿಸಬಹುದು.

ಮರಗೆಣಸು ಚಿಪ್ಸ್: ಆಲೂಗಡ್ಡೆ, ಬಾಳೆಹಣ್ಣು ಮತ್ತು ಹಲಸಿನಕಾಯಿ ಚಿಪ್ಸ್ ಮಾಡುವ ರೀತಿಯಲ್ಲೇ ಮರಗೆಣಸನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಚಿಪ್ಸ್ ತಯಾರಿಸಬಹುದು.

ಮರಗೆಣಸು ಪಲ್ಯ: ಚೆನ್ನಾಗಿ ಬೇಯಿಸಿದ ಬಳಿಕ ಅದನ್ನು ಕಿವುಚಿ ಆಲೂಗಡ್ಡೆ ಪಲ್ಯದಂತೆ ತಯಾರಿಸಬಹುದು.

ಬೇಯಿಸಿದ ಮರಗೆಣಸು: ಸರಿಯಾಗಿ ಬೇಯಿಸಿದ ಮರಗೆಣಸನ್ನು ಉಪ್ಪಿನೊಂದಿಗೆ ಸೇವಿಸಬಹುದು.

ಮರಗೆಣಸು ಸಿಹಿಗೆಣಸಿನಂತೆ ಸಿಹಿಯಾಗಿರುವುದಿಲ್ಲ. ಇದು ಸ್ವಲ್ಪ ಗಟ್ಟಿಯಾಗಿರುತ್ತದೆ. ಹಾಗಾಗಿ ಸೇವಿಸುವ ಮೊದಲು ಚೆನ್ನಾಗಿ ಬೇಯಿಸುವುದು ಮುಖ್ಯ.

ಮರಗೆಣಸಿಗೆ ಮಾರುಕಟ್ಟೆಯಲ್ಲಿ ಎಷ್ಟು ಬೆಲೆ?

ಕೃಷಿಕರು ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಬೆಂಗಳೂರು ಮತ್ತು ಮೈಸೂರಿನ ಕೆಲವು ಅಂಗಡಿಗಳಲ್ಲಿ ಮರಗೆಣಸು ಚಿಪ್ಸ್ ಬೆಲೆ ಕೆಜಿಗೆ ಸುಮಾರು 200 ರೂಪಾಯಿ ಇರಬಹುದು. ಇನ್ನು ಮರಗೆಣಸಿಗೆ ಕೇರಳದಲ್ಲಿ ಹೆಚ್ಚಿನ ಬೇಡಿಕೆಯಿದ್ದು, ಕೆಜಿಗೆ 50ರಿಂದ 100 ರೂಪಾಯಿವರೆಗೆ ಮಾರಾಟವಾಗಿರುವುದನ್ನು ಕೇಳಿದ್ದೇನೆ ಎಂದು ಅವರು ತಿಳಿಸಿದ್ದಾರೆ. ಆದರೆ ಇವು ಸ್ಥಳ ಮತ್ತು ಮಾರುಕಟ್ಟೆಗೆ ಅನುಗುಣವಾಗಿ ಬದಲಾಗುವ ಬೆಲೆಗಳಾಗಿವೆ.

ಮರಗೆಣಸು ಕೊಯ್ಲು ಮಾಡುವುದು ಹೇಗೆ?

ಕೊಯ್ಲು ಮಾಡುವ ಮೊದಲು ನೆಲದಿಂದ ಸುಮಾರು ಒಂದರಿಂದ ಒಂದೂವರೆ ಅಡಿ ಎತ್ತರದಲ್ಲಿ ಗಿಡದ ಕಾಂಡವನ್ನು ಕತ್ತರಿಸಬೇಕು. ನಂತರ ಉಳಿದ ಕಾಂಡವನ್ನು ಹಿಡಿದು ನಿಧಾನವಾಗಿ ಎಳೆಯಬೇಕು. ಮಣ್ಣು ಗಟ್ಟಿಯಾಗಿದ್ದರೆ ಮೊದಲು ಸ್ವಲ್ಪ ನೀರು ಬಿಡಬೇಕು. ಡ್ರಿಪ್ ಇರಿಗೇಶನ್ ಇದ್ದರೆ ಒಂದೆರಡು ನಿಮಿಷ ನೀರು ಹರಿಸಿ ಮಣ್ಣನ್ನು ತೇವಗೊಳಿಸಬಹುದು. ಇದರಿಂದ ಗೆಣಸನ್ನು ಸುಲಭವಾಗಿ ಹೊರತೆಗೆಯಲು ಸಾಧ್ಯವಾಗುತ್ತದೆ.