ಚುನಾವಣೆ ಬೆನ್ನಲ್ಲೇ ಅಧಿಕೃತವಾಗಿ ಬಿಜೆಪಿ ಸೇರಿದ ಮುಖಂಡ
ರಾಜ್ಯದಲ್ಲಿ ಚುನಾವಣೆ ಅಬ್ಬರ ಜೋರಾಗಿದೆ. ಚುನಾವಣಾ ರಂಗು ಹೆಚ್ಚಾದ ಬೆನ್ನಲ್ಲೇ ಇದೀಗ ಪಕ್ಷಾಂರವೂ ಜೋರಾಗಿದೆ. ಇದೇ ಬೆನ್ನಲ್ಲೇ ಮುಖಂಡರೋರ್ವರು ಬಿಜೆಪಿ ಸೇರಿದ್ದಾರೆ.
ಮಾಗಡಿ (ಡಿ.11): ಕಾಂಗ್ರೆಸ್ ಪಕ್ಷವೆಂದರೆ ಕುಟುಂಬ ರಾಜಕಾರಣ, ಸ್ವಜನ ಪಕ್ಷಪಾತ, ಭ್ರಷ್ಟಾಚಾರ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಕ್ತ ಭಾರತದ ಗುರಿ ಸಾಧಿಸುವುದರ ಜತೆ ಜತೆಯಲ್ಲೇ ಭ್ರಷ್ಟಾಚಾರ ಮುಕ್ತ ಭಾರತ ನಿರ್ಮಾಣ ಮಾಡುವುದರಲ್ಲಿ ಬಿಜೆಪಿ ಯಶಸ್ವಿಯಾಗಲಿದೆ ಎಂದು ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ಪಟ್ಟಣದ ಕೆಂಪೇಗೌಡ ಬಯಲು ರಂಗಮಂದಿರದಲ್ಲಿ ಕೆಂಪೇಗೌಡ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಎಚ್.ಎಂ.ಕೃಷ್ಣಮೂರ್ತಿ ಅವರು ಬಿಜೆಪಿ ಪಕ್ಷ ಸೇರ್ಪಡೆಯಾಗುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿಹಾಗೂ ಅಭಿವೃದ್ಧಿಪರ ಕಾರ್ಯಕ್ರಮಗಳ ಪ್ರವಾಹದಲ್ಲಿ ಕಾಂಗ್ರೆಸ್ ಕೊಚ್ಚಿ ಹೋಗುತ್ತಿದೆ. ದೇಶದ ಜನರ ನಾಡಿಮಿತಕ್ಕೆ ತಕ್ಕಂತೆ ಬಿಜೆಪಿ ಕೆಲಸ ಮಾಡುತ್ತಿರುವ ಕಾರಣಕ್ಕಾಗಿಯೇ ದೇಶಾದ್ಯಂತ ಜನರು ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸುತ್ತಿದ್ದಾರೆ ಎಂದರು.
ಅಧಿಕೃತವಾಗಿ ಬಿಜೆಪಿ ಸೇರ್ಪಡೆ ದಿನಾಂಕ ಘೋಷಿಸಿದ ಮುಖಂಡ ...
ಬಿಜೆಪಿ ಎಲ್ಲರ ಪಕ್ಷ: ಭಾರತೀಯ ಜನತಾ ಪಕ್ಷವು ಕೇವಲ ರಾಜಕೀಯ ಪಕ್ಷವಲ್ಲ. ಅದು ಸಮಸ್ತ ಭಾರತೀಯರ ಜನಜೀವನದ ಒಂದು ಭಾಗ. ನಮ್ಮತನವನ್ನು ಎತ್ತಿ ಹಿಡಿಯುವ ಪಕ್ಷ. ಪ್ರತಿಯೊಬ್ಬರಿಗೂ ಸಲ್ಲುವ ಏಕೈಕ ರಾಜಕೀಯ ಪಕ್ಷ, ಜನರ ಭಾವನೆಗಳನ್ನು ಗೌರವಿಸುತ್ತಿರುವ ಪಕ್ಷ ಮಾತ್ರ. ಸಿಐಐಎ, ತ್ರಿವಳಿ ತಲಾಕ್, ಜಮ್ಮು ಮತ್ತು ಕಾಶ್ಮೀರದ 370 ರದ್ದು ಸೇರಿದಂತೆ ಅನೇಕ ಜಟಿಲ ಸಮಸ್ಯೆಗಳನ್ನು ರಾಜಕೀಯ ಇಚ್ಛಾಶಕ್ತಿಯಿಂದ ಬಗೆಹರಿಸಿದ ಪಕ್ಷವೆಂದರೆ ಅದು ಬಿಜೆಪಿ ಮಾತ್ರ. ಈ ಕಾರಣಕ್ಕಾಗಿ ಜಗತ್ತಿನ ಅತಿದೊಡ್ಡ ರಾಜಕೀಯ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದೆ ಎಂದರು.
ಇದೇ ವೇಳೆ ಮಾತನಾಡಿದ ಎಚ್.ಎಂ.ಕೃಷ್ಣಮೂರ್ತಿ, ಮಾತೃಪಕ್ಷ ಬಿಜೆಪಿಗೆ ಮರಳುತ್ತಿರುವುದು ಖುಷಿ ತಂದಿದೆ. ಇಡೀ ದೇಶದಲ್ಲಿ ಬಿಜೆಪಿಗೆ ಹೆಚ್ಚು ಮಾನ್ಯತೆ ಇದೆ. ಅಂತಹ ಪಕ್ಷಕ್ಕೆ ಮರಳಿದ್ದು ಹೆಮ್ಮೆಯ ಸಂಗತಿ ಎಂದರು.
ವಿಧಾನ ಪರಿಷತ್ ಸದಸ್ಯ ಅ.ದೇವೇಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ, ಪಕ್ಷದ ಹಿಂದುಳಿದ ವರ್ಗಗಳ ವಿಭಾಗದ ಮುಖ್ಯಸ್ಥ ಬಸವರಾಜ, ಮಂಡಲ ವಿಭಾಗದ ಅಧ್ಯಕ್ಷ ಧನಂಜಯ ಮುಂತಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು.