Asianet Suvarna News Asianet Suvarna News

ಮಧ್ಯರಾತ್ರಿ ಒಬ್ಬರೇ ಡ್ರೈವ್ ಮಾಡಿ ಗಸ್ತು ತಿರುಗುವ ಮಹಿಳಾ ಎಸ್‌ಪಿ..!

ಕೊರೋನಾ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ. ಸುಮನ್‌ ಪನ್ನೇಕರ್‌ ಅವರು ಇತ್ತೀಚೆಗೆ ರಾತ್ರಿ ಸ್ವಯಂ ವಾಹನ ಚಾಲನೆ ಮಾಡಿ ತಪಾಸಣಾ ಕೇಂದ್ರಗಳಿಗೆ ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Madikeri sp drives alone at midnight monitors area
Author
Bangalore, First Published Apr 15, 2020, 9:50 AM IST

ಮಡಿಕೇರಿ(ಏ.15): ಕೊರೋನಾ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ. ಸುಮನ್‌ ಪನ್ನೇಕರ್‌ ಅವರು ಇತ್ತೀಚೆಗೆ ರಾತ್ರಿ ಸ್ವಯಂ ವಾಹನ ಚಾಲನೆ ಮಾಡಿ ತಪಾಸಣಾ ಕೇಂದ್ರಗಳಿಗೆ ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಒಬ್ಬ ಮಹಿಳಾ ಅಧಿಕಾರಿಯಾಗಿ ನಡು ರಾತ್ರಿ ಗಸ್ತು ತಿರುಗಿ ಪರಿಶೀಲನೆಯಲ್ಲಿ ತೊಡಗಿರುವುದು ಹೆಮ್ಮೆಯ ವಿಚಾರವಾಗಿದೆ. ಇತ್ತೀಚೆಗೆ ರಾತ್ರಿ 11 ಗಂಟೆಗೆ ಎಸ್ಪಿ ಅವರು ಕುಶಾಲನಗರ, ಸೋಮವಾರಪೇಟೆ ಮತ್ತಿತರ ಚೆಕ್‌ ಪೋಸ್ಟ್‌ಗಳಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಅವಲೋಕಿಸಿ ಮುಂಜಾನೆ 3 ಗಂಟೆಗೆ ಮನೆ ಹಿಂತಿರುಗಿದ್ದರು.

ಕೊಡಗು ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದ ನಂತರ ಇದೀಗ ಕೊರೋನಾ ಪರಿಸ್ಥಿತಿಯಲ್ಲಿ ಕೆಲಸ ಮಾಡಬೇಕಾದ ಅನಿವಾರ್ಯತೆ ಬಂದಿದೆ. ಈ ಅವಧಿಯಲ್ಲಿ ತನ್ನ ​ಪುಟ್ಟಮಗು ಇದ್ದರೂ ಕೊಡಗು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಮನ್‌ ಡಿ. ಪನ್ನೇಕರ್‌ ಜಿಲ್ಲೆಯ ಹಲವು ಕಡೆಗಳಿಗೆ ತೆರಳಿ ಕೆಲಸ ಮಾಡುವ ಮೂಲಕ ಮಾದರಿಯಾಗಿದ್ದು, ಸೂಪರ್‌ ಕಾಪ್‌ ಎನಿಸಿಕೊಂಡಿದ್ದಾರೆ.

ಈ ಹಿಂದೆ ಪ್ರಕೃತಿ ವಿಕೋಪ ಸಂಭವಿಸಿದ್ದ ಸಂದರ್ಭ ವಿಕೋಪ ಪೀಡಿತ ಪ್ರದೇಶಗಳಿಗೆ ತೆರಳಿ ಕೆಲಸ ಮಾಡುವ ಮೂಲಕ ಜನ ಮೆಚ್ಚುಗೆ ಗಳಿಸಿದ್ದರು. ಇದಲ್ಲದೆ ಜಿಲ್ಲೆಯಲ್ಲಿ ತಮ್ಮ ತಂಡದೊಂದಿಗೆ ಹಲವಾರು ಅಪರಾಧ ಪ್ರಕರಣಗಳನ್ನು ಬಯಲಿಗೆಳೆಯುವಲ್ಲಿ ಯಶಸ್ವಿಯಾಗಿರುವ ಎಸ್ಪಿ, ಇದೀಗ ಕೊರೋನಾ ವಿರುದ್ಧವೂ ಕೆಲಸ ಮಾಡುತ್ತಿದ್ದಾರೆ.

ವುಹಾನ್‌ ಬಳಿಕ ಚೀನಾದಲ್ಲಿ ಗಡಿ ಭಾಗದಲ್ಲಿ ಕೊರೋನಾ!

ಕೊರೋನಾ ಹಿನ್ನೆಲೆಯಲ್ಲಿ ತಮ್ಮ ತಂಡದೊಂದಿಗೆ ಕೆಲಸ ಮಾಡುತ್ತಿದ್ದೇನೆ. ಕೆಲಸದ ಮುಗಿಸಿದ ನಂತರ ಮನೆಗೆ ತೆರಳಿದ ಸಂದರ್ಭ ಮಗು ಓಡಿ ಬರುತ್ತದೆ. ಈ ಸಂದರ್ಭ ಏಕಾಏಕಿ ಮಗುವನ್ನು ಎತ್ತಿಕೊಳ್ಳಲೂ ಸಾಧ್ಯವಾಗದ ಪರಿಸ್ಥಿತಿ. ನಂತರ ಸ್ವಚ್ಛವಾಗಿ ಮತ್ತೆ ಮಗುವನ್ನು ಎತ್ತಿ ಮುದ್ದಾಡುತ್ತೇನೆ. ನನ್ನ ವೃತ್ತಿಗೆ ನನ್ನ ಕುಟುಂಬ ಕೂಡ ಬೆಂಬಲವಾಗಿ ನಿಂತಿದೆ ಎನ್ನುತ್ತಾರೆ ಎಸ್ಪಿ ಸುಮನ್‌.

ಇದರಲ್ಲಿ ನನ್ನ ಕರ್ತವ್ಯ ಎನ್ನುವುದಕ್ಕಿಂತ ಮುಖ್ಯವಾಗಿ ನಮ್ಮ ತಂಡದ ಎಲ್ಲರ ಶ್ರಮ ಎಂದರೆ ತಪ್ಪಾಗಲಾರದು. ದುಬೈನಿಂದ ಬಂದಿದ್ದ ವ್ಯಕ್ತಿಯಲ್ಲಿ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನಮ್ಮ ಇಲಾಖೆಗೆ ಆತ ತಂಗಿದ್ದ ಊರಿನ ಕಂಟೈನ್ಮೆಂಟ್‌ ಹಾಗೂ ಬಫರ್‌ ಜೋನ್‌ ಗುರುತಿಸುವುದು ಕೂಡಲೇ ಆಗಬೇಕಿತ್ತು. ಈ ಹಿನ್ನೆಲೆಯಲ್ಲಿ ಇದಕ್ಕೆ ಹೆಚ್ಚು ಆದ್ಯತೆ ನೀಡಿದ್ದೆವು. ಕೂಡಲೇ ಇಲಾಖೆಯಿಂದ ಬಂದೋಬಸ್‌್ತ ವ್ಯವಸ್ಥೆ ಮಾಡಲಾಯಿತು. ಅಲ್ಲದೆ ಸೋಂಕಿತ ಸಂಚರಿಸಿದ್ದ ಸ್ಥಳ ಹಾಗೂ ಆತನ ಸಂಪರ್ಕದಲ್ಲಿದ್ದವರ ಬಗ್ಗೆ ಮಾಹಿತಿ ಸಂಗ್ರಹ ಮಾಡುವುದು ಮುಖ್ಯವಾಗಿತ್ತು. ಇದರಲ್ಲಿ ಪೊಲೀಸ್‌ ಇಲಾಖೆ ಕ್ರಿಯಾಶೀಲವಾಗಿ ಕೆಲಸ ಮಾಡಿತ್ತು ಎನ್ನಲು ಇಷ್ಟಪಡುತ್ತೇನೆ ಎನ್ನುತ್ತಾರೆ ಎಸ್ಪಿ.

ಜಗತ್ತಿಗೆ ಕೊರೋನಾ ಹರಡಿದ ಚೀನಾದಿಂದಲೇ ಔಷಧ ಪತ್ತೆ!

ಕೇರಳ ರಾಜ್ಯದಲ್ಲಿ ಅತಿ ಹೆಚ್ಚು ಸೋಂಕು ಪ್ರಕರಣ ಕಂಡುಬಂದಿರುವ ಹಿನ್ನೆಲೆಯಲ್ಲಿ ಅಂತಾ ರಾಜ್ಯ ಗಡಿಗಳನ್ನು ಬಂದ್‌ ಮಾಡಿದ್ದೆವು. ಈ ಹಿನ್ನೆಲೆಯಲ್ಲಿ ಗಡಿಗೆ ತೆರಳಿ ಪರಿಶೀಲನೆ ಮಾಡಿದ್ದೆ. ನನ್ನ ಕೆಲಸಕ್ಕಿಂತ ನನ್ನ ಕೆಳಗಿನ ಅಧಿಕಾರಿಗಳು ಹಾಗೂ ಸಿಬ್ಬಂದಿ ಶಕ್ತಿ ಮೀರಿ ಕೆಲಸ ಮಾಡುತ್ತಿದ್ದಾರೆ.

ಓಡಾಡಲು ಅಸಾಧ್ಯವಾದಾಗ ಅಧಿಕಾರಿಗಳೊಂದಿಗೆ ವೀಡಿಯೋ ಕಾನ್ಫ​ರೆನ್ಸ್‌ ಮೂಲಕ ಸಭೆಯನ್ನು ಮಾಡಿ ಅಗತ್ಯ ಸೂಚನೆಗಳನ್ನು ನೀಡುತ್ತಿದ್ದೆ. ಇದರಿಂದ ಕಚೇರಿಯಲ್ಲಿ ಅಧಿಕಾರಿಗಳನ್ನು ಕರೆದು ಸಭೆ ಮಾಡುತ್ತಿದ್ದು ತಪ್ಪಿದಂತಾಗಿದೆ. ಲಾಕ್‌ಡೌನ್‌ ಇದ್ದರೂ ಎಷ್ಟೇ ನಿಯಂತ್ರಣ ಮಾಡಿದ್ದರೂ ಜನರು ಅನಗತ್ಯವಾಗಿ ಸಂಚರಿಸುತ್ತಿದ್ದರು. ಇದರಿಂದ ಪೊಲೀಸರು ಲಾಠಿ ಚಾಜ್‌ರ್‍ ಮಾಡುವುದು ಅನಿವಾರ್ಯವಾಗಿತ್ತು. ಒಂದಿಷ್ಟುಪ್ರಮಾಣದಲ್ಲಿ ನಿಯಂತ್ರಣಕ್ಕೆ ಬಂದ ನಂತರ ಲಾಠಿ ಬಿಟ್ಟು ಕೆಲಸ ಮಾಡುತ್ತಿದ್ದೇವೆ. ಅನಗತ್ಯ ಸಂಚಾರ ಮಾಡಿದ ವಾಹನಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದೇವೆ ಎಂದು ಅನುಭವ ಹಂಚಿಕೊಂಡರು.

ತಣಿವು ಪೆಟ್ಟಿಗೆ: ಜಿಲ್ಲಾಡಳಿತದ ಸಹಕಾರದೊಂದಿಗೆ ಹಸಿದ ಹೊಟ್ಟೆಗೆ ತಣಿವು ಪೆಟ್ಟಿಗೆ ಮಾಡಲು ಆಲೋಚನೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲೆಯ ನಾಲ್ಕು ಕಡೆಗಳಲ್ಲಿ ಈ ಕೇಂದ್ರ ತೆರೆಯಲಾಗಿತ್ತು. ಗಡಿಯಿಂದ ಬಂದ ಕಾರ್ಮಿಕರಿಗೆ, ಬಡವಿಗೆ ಊಟ ಸಿಗುತ್ತಿರಲಿಲ್ಲ ಎಂಬ ಮಾಹಿತಿ ಬಂದಿತ್ತು. ಇದರಿಂದ ತಣಿವು ಪೆಟ್ಟಿಗೆ ತೆರೆಯಲಾಯಿತು. ಇದಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಾವು ಆಹಾರ ಪದಾರ್ಥಗಳನ್ನು ಸಂಗ್ರಹಿಸಿ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಹಸ್ತಾಂತರ ಮಾಡುತ್ತಿದ್ದೇವೆ. ಈಗಾಗಲೇ 2,000 ಕೆ.ಜಿ, 4,000 ಕೆ.ಜಿ ಬೇಳೆ, 2,000 ಲೀಟರ್‌ ಎಣ್ಣೆ ಮತ್ತಿತರ ಪದಾರ್ಥಗಳು ಬಂದಿದ್ದು, ಇಒ ಹಾಗೂ ತಹಸೀಲ್ದಾರ್‌ ಅವರ ಮೂಲಕ ಆಹಾರ ವಿತರಣೆಯಾಗುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಯಾವುದೇ ಕಠಿಣ ಪರಿಸ್ಥಿತಿಯಲ್ಲಿ ನನ್ನ ತಂಡ ಎಂದಿಗೂ ಸದಾ ಸಿದ್ಧವಾಗಿ ಕಾರ್ಯಪ್ರವೃತ್ತವಾಗಿರುತ್ತದೆ. ಮೇ 3ರ ವರೆಗೆ ಲಾಕ್‌ಡೌನ್‌ ಇರಲಿದೆ. ಜಿಲ್ಲೆಯಲ್ಲಿ ಈಗ ಯಾವುದೇ ಸೋಂಕು ಪ್ರಕರಣಗಳಿಲ್ಲ. ಆದ್ದರಿಂದ ಇದನ್ನು ಮುಂದುವರೆಸಿಕೊಂಡು ಹೋಗಬೇಕಾಗಿದೆ. ಕೊಡಗು ಸುರಕ್ಷಿತವಾಗಿದೆ ಎಂದು ಹೊರಗಿನವರಿಗೆ ಇಲ್ಲಿನ ಹೋಂಸ್ಟೇ, ರೆಸಾರ್ಟ್‌ಗಳಲ್ಲಿ ವಾಸ್ತವ್ಯಕ್ಕೆ ಅವಕಾಶ ನೀಡಬೇಡಿ. ಪ್ರಕರಣ ಕೂಡ ದಾಖಲು ಮಾಡುತ್ತೇವೆ. ತಮ್ಮ ಲಾಭಕ್ಕೋಸ್ಕರ ಜನರ ಬದುಕು ಹಾಳು ಮಾಡಬೇಡಿ ಎಂದು ಎಸ್ಪಿ ಕಿವಿ ಮಾತು ಹೇಳಿದ್ದಾರೆ.

-ವಿಘ್ನೇಶ್‌ ಎಂ. ಭೂತನಕಾಡು

Follow Us:
Download App:
  • android
  • ios