ಮೈಸೂರು(ಫೆ.01): ಕುಶಾಲನಗರ ನೂತನ ಬ್ರಾಡ್‌ಗೇಜ್‌ ರೈಲ್ವೆ ಮಾರ್ಗದ ಯೋಜನೆ ನನೆಗುದಿಗೆ ಬಿದ್ದಿದ್ದು ಕೊಡಗಿನ ಗಡಿಭಾಗದ ಜನತೆ ರೈಲು ಸಂಪರ್ಕಕ್ಕಾಗಿ ಶಬರಿಯಂತೆ ಕಾಯುತ್ತಿದ್ದು ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ರೈಲಿನ ನಿರೀಕ್ಷೆಯಲ್ಲಿದ್ದಾರೆ.

8 ವರ್ಷಗಳ ಹಿಂದೆ ಅಂದಾಜು 600 ಕೋಟಿ ರುಪಾಯಿ ವೆಚ್ಚದಲ್ಲಿ ಈ ಪ್ರಸ್ತಾವಿತ ಯೋಜನೆಗೆ ಸರ್ವೆ ಕಾರ್ಯ ನಡೆದು ನಂತರದ ದಿನಗಳಲ್ಲಿ ಹಲವು ಅಡ್ಡಿ ಆತಂಕ, ತೊಡಕುಗಳು ಉಂಟಾಗುವುದರೊಂದಿಗೆ ಯೋಜನೆ ನನೆಗುದಿಗೆ ಬಿದ್ದಿದೆ. ನಂತರದ ಬಜೆಟ್‌ಗಳಲ್ಲಿ ಈ ಯೋಜನೆ ಬಗ್ಗೆ ಯಾವುದೇ ರೀತಿಯ ಸಕಾರಾತ್ಮಕ ಪ್ರಸ್ತಾವನೆಗಳು ಬಾರದೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಡುವೆ ಅಸಹಕಾರದ ಆರೋಪಗಳು ಕೇಳಿ ಬರುತ್ತಿವೆ.

ಕೊರೋನಾ ವೈರಸ್‌: ಕೊಡಗು ಕೇರಳ ಗಡಿ ಪ್ರದೇಶದಲ್ಲಿ ಆತಂಕ

ಮೈಸೂರು- ಕುಶಾಲನಗರ ನಡುವಿನ 86.50 ಕಿ.ಮೀ. ಅಂತರದ ಮಾರ್ಗದ ನಡುವೆ ಸೇತುವೆಗಳು, ಕನ್ವರ್ಟರ್‌ಗಳ ನಿರ್ಮಾಣ ಸೇರಿದಂತೆ ರೈಲು ಮಾರ್ಗ ನಿರ್ಮಾಣಕ್ಕೆ 600 ಕೋಟಿ ರುಪಾಯಿ ವೆಚ್ಚದ ಅಂದಾಜು ಪಟ್ಟಿತಯಾರಿಸಲಾಗಿತ್ತು. ಮೈಸೂರಿನಿಂದ ಮಡಿಕೇರಿ ತನಕ ಒಟ್ಟು 2607.53 ಕೋಟಿ ವೆಚ್ಚದ ರೈಲು ಹಳಿ ಮಾರ್ಗ ಯೋಜನೆಯಲ್ಲಿ ಕುಶಾಲನಗರ ತನಕದ ಮಾರ್ಗಕ್ಕೆ ಕೇಂದ್ರ ಸರ್ಕಾರ 1858 ಕೋಟಿ ರುಗಳನ್ನು ಬಿಡುಗಡೆಗೊಳಿಸಿದೆ ಎಂಬ ವರದಿ ಹೊರಬಿದ್ದಿತ್ತು.

ಜನವರಿ 2012ರಲ್ಲಿ ಅಂದಿನ ರೈಲ್ವೆ ಸಚಿವರಾಗಿದ್ದ ಕೆ.ಎಚ್‌. ಮುನಿಯಪ್ಪ ಅವರು ಮೈಸೂರು- ಕುಶಾಲನಗರ ನೂತನ ರೈಲ್ವೆ ಮಾರ್ಗ ಸರ್ವೆ ಕಾರ್ಯಕ್ಕೆ ಕುಶಾಲನಗರದಲ್ಲಿ ಚಾಲನೆ ನೀಡಿರುವುದನ್ನು ಇಲ್ಲಿ ಸ್ಮರಿಸಬಹುದು. ನಂತರದ ದಿನಗಳಲ್ಲಿ ಮೈಸೂರು ಬಳಿಯ ಬೆಳಗೊಳದಿಂದ ಕುಶಾಲನಗರ ಗಡಿ ತನಕ ಪ್ರಥಮ ಹಂತದ ಸರ್ವೆ ಕಾರ್ಯ ಮಾತ್ರ ನಡೆದಿರುವುದು ದಾಖಲೆಗಳಲ್ಲಿ ಕಾಣಬಹುದು. ಎರಡನೇ ಹಂತದ 30 ಕಿ.ಮೀ. ಉದ್ದದ ಕುಶಾಲನಗರ- ಮಡಿಕೇರಿ ರೈಲ್ವೇ ಮಾರ್ಗದ ಯೋಜನೆಗೆ ಪ್ರಾಥಮಿಕ ಸರ್ವೆ ಕಾರ್ಯ ನಡೆದಿದ್ದು ಈ ಹಂತದಲ್ಲಿ ಪರಿಸರವಾದಿಗಳ ವಿರೋಧದಿಂದ ನಂತರದ ಬೆಳವಣಿಗೆ ಸ್ಥಗಿತಗೊಂಡಿತ್ತು.

ಕೊರೋನಾ ವೈರಸ್‌ ಬಗ್ಗೆ ರಾಜ್ಯಾದ್ಯಂತ ಹೈಅಲರ್ಟ್‌!

2012ರ ನಂತರದಲ್ಲಿ ಕೊಡಗು ಜಿಲ್ಲೆಯ ಕುಶಾಲನಗರದ ಅಳಿಯ ಡಿ.ವಿ. ಸದಾನಂದಗೌಡ ದೇಶದ ರೈಲ್ವೆ ಸಚಿವರಾಗಿದ್ದಾಗ ಜನರಲ್ಲಿ ಮತ್ತೆ ರೈಲು ಬರುವ ಭರವಸೆ ಮೂಡಿದ್ದರೂ ಗೌಡರ ನಿರಾಸಕ್ತಿಯಿಂದ ಯೋಜನೆ ಮಾತ್ರ ಕಡತಗಳಲ್ಲಿಯೇ ಉಳಿದಿದ್ದು ಈ ವ್ಯಾಪ್ತಿಯ ಜನರಿಗೆ ಅಸಮಾಧಾನ ಉಂಟು ಮಾಡಿತ್ತು. ರಾಜ್ಯದವರೇ ಆದ ಮಲ್ಲಿಕಾರ್ಜುನ ಖರ್ಗೆ ಅವರೂ ರೈಲ್ವೆ ಸಚಿವರಾದರೂ ಮೈಸೂರು- ಕುಶಾಲನಗರ ಯೋಜನೆ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಸಂಸದ ಪ್ರತಾಪ್‌ ಸಿಂಹ ಅವರು ರೈಲ್ವೇ ಯೋಜನೆಯನ್ನು ತಂದೇ ತರುತ್ತೇನೆ ಎನ್ನುವ ಭರವಸೆ ನೀಡಿದ್ದರೂ ಯಾವುದೇ ಪ್ರಗತಿ ಕಂಡುಬಂದಿಲ್ಲ. ಈ ಸಾಲಿನ ಬಜೆಟ್‌ನಲ್ಲಾದರೂ ಮೈಸೂರು- ಕುಶಾಲನಗರ ನೂತನ ರೈಲು ಸಂಪರ್ಕದ ಘೋಷಣೆ ಬಗ್ಗೆ ಈ ಭಾಗದ ಜನತೆ ಕಾತುರದಿಂದ ಕಾಯುತ್ತಿರುವುದಂತೂ ಸತ್ಯ.

ಕೊಡಗು ಜಿಲ್ಲೆಯ ಕಾಫಿ ಉದ್ಯಮ, ಜಿಲ್ಲೆ ಹಾಗೂ ನೆರೆ ಜಿಲ್ಲೆಗಳ ಬೆಳೆಗಳಾದ ತಂಬಾಕು, ಮುಸುಕಿನ ಜೋಳ, ಶುಂಠಿ ಇತ್ಯಾದಿ ವಾಣಿಜ್ಯ ಬೆಳೆಗಳ ಸಾಗಾಟಕ್ಕೂ ಈ ರೈಲ್ವೇ ಯೋಜನೆ ಲಾಭದಾಯಕ ಎನ್ನುವ ಮಾತು ಕೇಳಿಬರುತ್ತಿದ್ದು ಪ್ರವಾಸೋದ್ಯಮದ ಬೆಳವಣಿಗೆಗೆ ಕೂಡ ಇದು ಪೂರಕವಾಗಲಿದೆ ಕುಶಾಲನಗರ ಚೇಂಬರ್‌ ಆಫ್‌ ಕಾಮರ್ಸ್‌ ಅಧ್ಯಕ್ಷ ಬಿ. ಅಮೃತ್‌ರಾಜ್‌ ಹೇಳಿದ್ದಾರೆ.

-ಕೀರ್ತನ ಕುಶಾಲನಗರ