ಸಿಗದ ಸಚಿವ ಸ್ಥಾನ: ಪಕ್ಷದವರೇ ನಮಗೆ ಮುಳ್ಳಾದ್ರು ಎಂದ ಬಿಜೆಪಿ ಶಾಸಕ
* ಸಂಪುಟ ವಿಸ್ತರಣೆ ಕುರಿತು ಮಡಿಕೇರಿ ಶಾಸಕ ಅಸಮಾಧಾನ
* ಕೊಡಗು ಸೇರಿ 13 ಜಿಲ್ಲೆಗೆ ಸಚಿವ ಸ್ಥಾನ ಇಲ್ಲ. ಮುಂದೆಯಾದರೂ ಸಂಪುಟಕ್ಕೆ ಕೊಡಗನ್ನು ಪರಿಗಣಿಸಲಿ
* ಸಂಸದ ಪ್ರತಾಪ್ ಸಿಂಹ ವಿರುದ್ಧ ಅಪ್ಪಚ್ಚು ರಂಜನ್ ಅಸಮಾಧಾನ
ಮಡಿಕೇರಿ(ಆ.07): ಸಂಪುಟ ವಿಸ್ತರಣೆ ಬಗ್ಗೆ ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಕಿಡಿಯಾಗಿದ್ದಾರೆ. ಶುಕ್ರವಾರ ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದವರೇ ನಮಗೆ ಮುಳ್ಳಾಗಿದ್ದಾರೆ. ನಾವು ಬೆಂಬಲಿಸಿ ಬೆಳೆಸಿದವರೇ ಮುಳ್ಳಾಗಿದ್ದಾರೆ. ಅವರಿಂದ ನನಗೆ ತೊಂದರೆ ಆಯ್ತು. ಇಲ್ಲದಿದ್ದರೆ ನನಗೆ ಸಚಿವ ಸ್ಥಾನ ಸಿಗುತ್ತಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.
ಸಂಭಾವ್ಯ ಸಚಿವರ ಪಟ್ಟಿಯಲ್ಲಿ ನನ್ನ ಹೆಸರಿತ್ತು, ಕೊನೇ ಕ್ಷಣದಲ್ಲಿ ಕೈಬಿಟ್ಟಿದ್ದಾರೆ. ಅವರಿಗೆ ದೇವರು ಒಳ್ಳೇದು ಮಾಡಲಿ ಎಂದರು. 1983ರಿಂದ ಬೇತಾಳವನ್ನು ಹಿಂದೆ ಕಟ್ಕೊಂಡು ಬಂದೆ. ಆ ಬೇತಾಳ ಚೆನ್ನಾಗಿ ಬೆಳೀತು, ಈಗ ನನಗೇ ತಲೆಗೆ ಹೊಡೀತಿದೆ ಎಂದು ಅಪ್ಪಚ್ಚು ರಂಜನ್ ಮಾರ್ಮಿಕವಾಗಿ ನುಡಿದರು. 24 ವರ್ಷದಿಂದ ಶಾಸಕನಾಗಿದರೂ ಸಚಿವ ಸ್ಥಾನ ಸಿಗಲಿಲ್ಲ. ಈ ಬೆಳವಣಿಗೆ ನನಗೂ, ಕೊಡಗಿನ ಜನರಿಗೂ ಬೇಸರ ತರಿಸಿದೆ ಎಂದಿರುವ ರಂಜನ್,
ಕೊಡಗು ಸೇರಿ 13 ಜಿಲ್ಲೆಗೆ ಸಚಿವ ಸ್ಥಾನ ಇಲ್ಲ. ಮುಂದೆಯಾದರೂ ಸಂಪುಟಕ್ಕೆ ಕೊಡಗನ್ನು ಪರಿಗಣಿಸಲಿ ಎಂದರು. ಮೊದಲ ಸುತ್ತಿನಲ್ಲಿ ಸಚಿವನಾಗಿ ಮಾಡದಿರಲು ನನ್ನಲ್ಲೇನು ಕೊರತೆಯಿತ್ತು? ಎಂದು ಪಕ್ಷದ ವರಿಷ್ಠರಿಗೆ ಅಪ್ಪಚ್ಚು ರಂಜನ್ ಪ್ರಶ್ನೆ ಮಾಡಿದರು.
ಸಚಿವ ಸ್ಥಾನ ಕೈ ತಪ್ಪಿದಕ್ಕೆ ಶಾಸಕ ಅಪ್ಪಚ್ಚು ರಂಜನ್ ಫುಲ್ ಗರಂ
ರಾಜ್ಯದಲ್ಲಿ ಕೋವಿಡ್ ಸೆಂಟರ್‌ಗೆ ಭೇಟಿ ನೀಡಿದ ಮೊದಲ ಶಾಸಕ ನಾನು. ಪಿಪಿಇ ಕಿಟ್ ಹಾಕಿ ಕೋವಿಡ್ ಸೆಂಟರ್‌ಗೆ ತೆರಳಿ ಸೋಂಕಿತರಿಗೆ ಧೈರ್ಯ ಹೇಳಿದ್ದೇನೆ. ಜನತೆಯನ್ನು ನಾನು ಕೈಬಿಡಲ್ಲ, ಜನರ ಮನಸ್ಸಿನಲ್ಲಿ ನಾನಿದ್ದೇನೆ. ರಾಜ್ಯದಲ್ಲಿ ಕಾಂಗ್ರೆಸ್ ಮುಕ್ತ ಜಿಲ್ಲೆ ಕೊಡಗು. ಇಂತಹ ಸಂದರ್ಭದಲ್ಲಿ ನಮ್ಮನ್ನು ಕಡೆಗಣಿಸುವುದು ತಪ್ಪು ಎಂದು ಬಹಿರಂಗವಾಗಿ ಅಸಮಾಧಾನ ಹೊರಹಾಕಿದರು.
ಪಕ್ಷದಲ್ಲಿ ಹಿರಿಯ ನಿರ್ಲಕ್ಷ:
ಸಚಿವ ಸ್ಥಾನ ಸಿಗದಿದ್ದಕ್ಕೆ ಶಾಸಕ ಅಪ್ಪಚ್ಚು ರಂಜನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜಿಲ್ಲಾವಾರು, ಸಾಮಾಜಿಕ ನ್ಯಾಯದ ಪ್ರಕಾರ ಸಿಗುವ ನಿರೀಕ್ಷೆ ಇತ್ತು. ಆದರೆ ಸಚಿವ ಸ್ಥಾನ ನೀಡದೆ ಪಕ್ಷದಲ್ಲಿ ಹಿರಿಯರನ್ನು ಕಡೆಗಣಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಒಂದೊಂದು ಜಿಲ್ಲೆಗೆ ಮುರ್ನಾಲ್ಕು ಸಚಿವ ಸ್ಥಾನ ಸಿಕ್ಕಿದೆ. ಟೇಕ್ ಇಟ್ ಆ್ಯಸ್ ಗ್ರಾಂಟೆಡ್ ಎಂಬಂತಾಗಿದೆ. ಇದು ಸರಿಯಾದ ಕ್ರಮವಲ್ಲ. ಈ ಬಗ್ಗೆ ಸಂಸದರು ಕೂಡಾ ಮೌನವಾಗಿದ್ದಾರೆ. ಎಂಪಿ ಜಾಣ ಮೌನ ತಾಳಿದ್ದಾರೆ. ಅವರು ಸರ್ಕಾರಕ್ಕೆ ಒತ್ತಡ ಹಾಕಬೇಕಿತ್ತು. ರಾಜ್ಯ ಬಿಜೆಪಿ ಉಪಾಧ್ಯಕ್ಷ ಅವರು, ಅವರಿಗೆ 80 ಸಾವಿರ ಮತ ಲೀಡ್ ಜಿಲ್ಲೆಯಿಂದ ಕೊಟ್ಟಿದ್ದೆವು. ಅವರ ಮೌನ ಬೇಸರ ತರಿಸಿದೆ ಎಂದು ಸಂಸದ ಪ್ರತಾಪ್ ಸಿಂಹ ವಿರುದ್ಧ ಅಪ್ಪಚ್ಚು ರಂಜನ್ ಅಸಮಾಧಾನ ವ್ಯಕ್ತಪಡಿಸಿದರು.