ಮಡಿಕೇರಿ(ಫೆ.08): ಇತ್ತೀಚೆಗೆ ಯಡಿಯೂರಪ್ಪ ಅವರ ಸಚಿವ ಸಂಪುಟ ವಿಸ್ತರಣೆ ಮಾಡಲಾಗಿದ್ದು, ಕೊಡಗಿನ ಇಬ್ಬರು ಶಾಸಕರನ್ನು ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡದಿರುವುದಕ್ಕೆ ಶಾಸಕ ಅಪ್ಪಚ್ಚು ರಂಜನ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಹಾರಂಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಂಜನ್‌, ಹತ್ತು ಜನರು ಬಂದಿದ್ದರಿಂದಲೇ ಬಿಜೆಪಿ ಸರ್ಕಾರ ಇದೆ. ಅದರಲ್ಲಿ ಎರಡು ಮಾತಿಲ್ಲ. ಆದರೆ ಹಿರಿಯರು ಜಿಲ್ಲಾವಾರು ಪರಿಗಣನೆ ಮಾಡಬೇಕಿತ್ತು. ಸಾಮಾಜಿಕ ನ್ಯಾಯ ಎಲ್ಲರಿಗೂ ಸಿಗಬೇಕಿತ್ತು. ಎರಡು ಸಮುದಾಯದವರಿಗೆ ಮಾತ್ರ ಹೆಚ್ಚಿನ ಅವಕಾಶ ನೀಡಲಾಗಿದೆ. ಉಳಿದವರು ಏನು ಮಾಡಬೇಕು ಅನ್ನೋ ಚಿಂತನೆ ಮಾಡಬೇಕಾಗುತ್ತದೆ ಎಂದಿದ್ದಾರೆ.

ಮಂಗಳೂರು: ದಾರಿ ಮಧ್ಯೆ ಆಂಬ್ಯುಲೆನ್ಸ್‌ನಲ್ಲೇ ಹೆರಿಗೆ

ಈ ವಿಚಾರವನ್ನು ಹಿರಿಯರ ಗಮನಕ್ಕೆ ತರುತ್ತೇವೆ. ಮುಂದಿನ ದಿನಗಳಲ್ಲಿ ಸರಿಪಡಿಸಿ ಪಕ್ಷದ ಸಿದ್ಧಾಂತವನ್ನು ಉಳಿಸುವ ಕಾರ್ಯ ಆಗಬೇಕಾಗಿದೆ. ನಾನು ಐದು ಬಾರಿ ಶಾಸಕನಾಗಿದ್ದೇನೆ. ಹಿರಿಯರಿಗೆ ಗೌರವ ಕೊಡುವ ಕಾರ್ಯ ಆಗಬೇಕು. ಮುಂದೆಯೂ ನಮ್ಮ ಸರ್ಕಾರ ಬರಬೇಕು ಆ ದೃಷ್ಟಿಯಲ್ಲಿ ಮೂಲ ಬಿಜೆಪಿಗರಿಗೆ ಒತ್ತು ನೀಡಬೇಕು ಎಂದಿರುವ ರಂಜನ್‌ ಆಯಾ ಜಿಲ್ಲೆಗೆ ಸ್ಥಳೀಯ ನಾಯಕರನ್ನೇ ಉಸ್ತುವಾರಿ ಮಾಡಬೇಕೆಂದು ಆಗ್ರಹಿಸಿದ್ದಾರೆ. ಕೊಡಗಿನವರು ಬೀದಿಗಿಳಿದು ಹೋರಾಟ ಮಾಡೋದಕ್ಕೆ ಸಿದ್ಧರಿದ್ದಾರೆ ನಾನು ಬೇಡ ಅಂದಿದ್ದೇನೆ ಅದಕ್ಕೆ ಸುಮ್ಮನಿದ್ದಾರೆ. ಕೊಡಗಿನ ಜನ ಶಾಂತಿಪ್ರಿಯರು ಎಂದು ಹೇಳಿದ್ದಾರೆ.