ಮಡಿಕೇರಿ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಕುಡಿಯುವ ನೀರಿಗೂ ಬರ: ಕಾರಣವೇನು?
ಕೊಡಗು ಎಂದರೆ ವರ್ಷದ ಆರು ತಿಂಗಳು ಮಳೆ ಸುರಿಯುವ ಜಿಲ್ಲೆ. ಹೀಗಾಗಿ ಜಿಲ್ಲೆಯಲ್ಲಿ ಕಾವೇರಿ, ಲಕ್ಷ್ಮಣ ತೀರ್ಥ, ಹಾರಂಗಿ ಹೀಗೆ ವಿವಿಧ ನದಿಗಳು ಹುಟ್ಟಿ ಹರಿಯುತ್ತವೆ. ಆದರೆ ಈ ಬಾರಿ ತೀವ್ರ ಮಳೆ ಕೊರತೆಯಿಂದ ಬೇಸಿಗೆ ಆರಂಭಕ್ಕೂ ಮೊದಲೇ ಕುಡಿಯುವ ನೀರಿಗೆ ಆಹಾಕಾರ ಎದುರಾಗುವ ಆತಂಕ ಶುರುವಾಗಿದೆ.
ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು (ಫೆ.18): ಜಿಲ್ಲೆಯಲ್ಲಿ ಈ ವರ್ಷ ಐದು ತಾಲ್ಲೂಕುಗಳು ತೀವ್ರ ಮಳೆ ಕೊರತೆಯಿಂದಾಗಿ ಬರಪೀಡಿತ ಎಂದು ಘೋಷಣೆಯಾಗಿವೆ. ಹೀಗಾಗಿ ಜಿಲ್ಲಾಡಳಿತ ಜಿಲ್ಲೆಯ ವಿವಿಧ ಹತ್ತಾರು ಗ್ರಾಮಗಳಿಗೆ ಕುಡಿಯುವ ನೀರಿಗೂ ಆಹಾಕಾರ ಎದುರಾಗುತ್ತದೆ ಎಂದು ಪಟ್ಟಿ ಸಿದ್ಧತೆ ಮಾಡಿಕೊಂಡಿದ್ದು ಅದನ್ನು ಸರಿಯಾಗಿ ನಿಭಾಯಿಸುವಂತೆ ಆಯಾ ತಾಲ್ಲೂಕುಗಳ ತಹಶೀಲ್ದಾರ್ ಗಳಿಗೆ ಸೂಚನೆ ನೀಡಿದೆ. ಅದರಲ್ಲೂ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಬೇಸಿಗೆಗೆ ಮುನ್ನವೇ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಆತಂಕ ಶುರುವಾಗಿದೆ. ನಗರಕ್ಕೆ ನೀರು ಪೂರೈಸುವ ಕೂಟುಹೊಳೆ ಮತ್ತು ರೊಷನರ ಕೆರೆಗಳಲ್ಲಿ ಬಹುತೇಕ ನೀರು ಬತ್ತಿಹೋಗಿದೆ.
ರೋಷನರ ಕೆರೆಯಲ್ಲಿ ಸ್ವಲ್ಪ ಮಾತ್ರವೇ ನೀರು ಇದ್ದು ಇನ್ನೊಂದೆರಡು ದಿನಗಳಲ್ಲಿ ಕೆರೆ ಸಂಪೂರ್ಣ ಬತ್ತಿ ಹೋಗುವ ಹಂತ ತಲುಪಿದೆ. ಮತ್ತೊಂದೆಡೆ ನಗರಕ್ಕೆ ನೀರು ಪೂರೈಸುವ ಪ್ರಮುಖವಾದ ಕೆರೆ ಕೂಟು ಹೊಳೆ ಕೂಡ ಜನವರಿ ತಿಂಗಳ ಅಂತ್ಯದಲ್ಲಿಯೇ ಬತ್ತಲಾರಂಭಿಸಿದೆ. ಹೀಗಾಗಿ ಆ ಕೆರೆಯಲ್ಲೂ ನೀರು ಕಡಿಮೆಯಾಗಿದೆ. ಈಗ ಅನಿವಾರ್ಯವಾಗಿ ಕುಂಡಾಮೇಸ್ತ್ರಿ ಚೆಕ್ ಡ್ಯಾಂನಿಂದ ನೀರನ್ನು ಲಿಫ್ಟ್ ಮಾಡಿ ಕೂಟು ಹೊಳೆಗೆ ತುಂಬಿಸಿ ಮಡಿಕೇರಿ ನಗರಕ್ಕೆ ಕುಡಿಯುವ ನೀರು ಪೂರೈಸಲಾಗುತ್ತಿದೆ. ಇನ್ನು ಆತಂಕದ ವಿಷಯ ಎಂದರೆ ಬೇಸಿಗೆ ಈಗಷ್ಟೇ ಶುರುವಾಗುತ್ತಿದ್ದು ಇನ್ನೂ ಮೂರು ತಿಂಗಳ ಕಾಲ ಇದೇ ರೀತಿ ಬಿಸಿಲು, ಒಣಹವೆ ಮುಂದುವರಿದರೆ ಆಗ ಮಡಿಕೇರಿ ನಗರಕ್ಕೆ ಕುಡಿಯುವ ನೀರಿಗೆ ಆಹಾಕಾರ ಎದುರಾಗುವುದರಲ್ಲಿ ಎರಡು ಮಾತಿಲ್ಲ.
ಹೀಗಾಗಿ ಮಡಿಕೇರಿ ನಗರಸಭೆ ಕಮಿಷನರ್ ವಿಜಯ ಅವರು ನಗರದ ಜನರು ದಯವಿಟ್ಟು ನೀರನ್ನು ಮಿತವಾಗಿ ಬಳಸಿ. ಅನಗತ್ಯವಾಗಿ ಯಾವುದ್ಯಾವುದೋ ಕೆಲಸಗಳಿಗೆ ನೀರನ್ನು ಬಳಸಬೇಡಿ ಎಂದಿದ್ದಾರೆ. ಈಗಾಗಲೇ ಜನರಿಗೆ ಈ ಸೂಚನೆ ನೀಡಲಾಗಿದ್ದು ಜನರು ಅದನ್ನು ಕಡ್ಡಾಯವಾಗಿ ಪಾಲಿಸುವಂತೆ ಮನವಿ ಮಾಡಿದ್ದಾರೆ. ಪ್ರತೀ ವರ್ಷದಂತೆ ಬೇಸಿಗೆ ಮಳೆ ಸುರಿದರೆ ನೀರಿನ ಕೊರತೆ ನೀಗಲಿದೆ. ಇಲ್ಲದಿದ್ದರೆ ನೀರಿನ ಸಮಸ್ಯೆ ಎದುರಾಗಲಿದ್ದು ಅದನ್ನು ಹೇಗೆ ನಿಭಾಯಿಸಬೇಕೆಂದು ಈಗಾಗಲೇ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದಿದ್ದಾರೆ. ಇದು ಮಡಿಕೇರಿ ನಗರಕ್ಕೆ ಕುಡಿಯುವ ನೀರಿನ ಕೊರತೆ ಶುರುವಾಗುವ ಪರಿಸ್ಥಿತಿಯಾದರೆ ಮತ್ತೊಂದೆಡೆ ಇಡೀ ಜಿಲ್ಲೆಯ ಐದು ತಾಲ್ಲೂಕುಗಳ ಹತ್ತಾರು ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ತೀವ್ರ ಸಮಸ್ಯೆ ಎದುರಾಗುವ ಆತಂಕವಿದೆ.
ನಕಲಿ ದಾಖಲೆ ಸೃಷ್ಟಿಸಿ ಭೂಮಿ ಕಬಳಿಕೆ ಯತ್ನ: ಅಧಿಕಾರಿಗಳ ಕಣ್ಣಮುಚ್ಚಾಲೆ ಆಟಕ್ಕೆ ಪರದಾಡ್ತಿರೋ ಮಹಿಳೆ!
ಇಂತಹ ಹಳ್ಳಿಗಳನ್ನು ಈಗಾಗಲೇ ಜಿಲ್ಲಾಡಳಿತ ಪಟ್ಟಿ ಮಾಡಿದ್ದು ಅಂತಹ ಗ್ರಾಮಗಳಿಗೆ ಕುಡಿಯುವ ನೀರನ್ನು ಪೂರೈಸುವುದಕ್ಕಾಗಿ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿ ವರ್ಣಿತ್ ನೇಗಿ ತಿಳಿಸಿದ್ದಾರೆ. ಒಟ್ಟಿನಲ್ಲಿ ಕಾವೇರಿ, ಲಕ್ಷ್ಮಣತೀರ್ಥ, ಹಾರಂಗಿ ನದಿಗಳ ಮೂಲಕ ಅರ್ಧ ರಾಜ್ಯಕ್ಕೆ ನೀರು ಕೊಡುತ್ತಿದ್ದ ಕೊಡಗು ಜಿಲ್ಲೆ ಈ ಬಾರಿ ತೀವ್ರ ಬರಗಾಲದಿಂದಾಗಿ ತನ್ನ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಿಸುವ ಹಂತಕ್ಕೆ ತಲುಪಿರುವುದು ನಿಜಕ್ಕೂ ಆತಂಕದ ವಿಚಾರ.