ಬಾಗಲಕೋಟೆ: ಹೊಳಲ್ಕೆರೆ ಶಾಸಕ ಚಂದ್ರಪ್ಪ ವಿರುದ್ಧ ಆಕ್ರೋಶ, ಮಾದಿಗ ಮಹಾಸಭಾದಿಂದ ಹೋರಾಟದ ಎಚ್ಚರಿಕೆ
ಬಿಜೆಪಿ ಸೋಲಿಗೆ ಕೇಂದ್ರ ಸಚಿವ ನಾರಾಯಣಸ್ವಾಮಿ & ಗೋವಿಂದ ಕಾರಜೋಳ ಎಂಬ ಶಾಸಕ ಎಂ.ಚಂದ್ರಪ್ಪ ಅವರ ಹೇಳಿಕೆ ವಿರುದ್ಧ ಮಾದಿಗ ಮಹಾಸಭಾ ಗರಂ, ತಕ್ಷಣ ಬಿಜೆಪಿ ವರಿಷ್ಠರಿಂದ ಶಾಸಕ ಎಂ.ಚಂದ್ರಪ್ಪ ವಿರುದ್ಧ ಕ್ರಮಕ್ಕೆ ಆಗ್ರಹ.....ಇಲ್ಲವಾದಲ್ಲಿ ರಾಜ್ಯವ್ಯಾಪಿ ಹೋರಾಟ ಎಂದ ಮಾದಿಗ ಮಹಾಸಭಾ ರಾಜ್ಯಾಧ್ಯಕ್ಷ ಮುತ್ತಣ್ಣ ಬೆಣ್ಣೂರ
ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ
ಬಾಗಲಕೋಟೆ(ಜೂ.08): ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅತ್ತ ಅಧಿಕಾರ ಕಳೆದುಕೊಂಡ ಬಿಜೆಪಿಯಲ್ಲಿ ವರಿಷ್ಠರಿಂದ ಆತ್ಮವಲೋಕನ ಸಭೆ ನಡೆಯುತ್ತಿರೋದು ಒಂದು ಭಾಗವಾದ್ರೆ, ಇತ್ತ ಬಿಜೆಪಿ ಶಾಸಕರಿಂದಲೇ ಬಿಜೆಪಿ ಮುಖಂಡರ ವಿರುದ್ದ ಸೋಲಿಗೆ ಕಾರಣವೆಂಬ ಹೇಳಿಕೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ಬಾಗಲಕೋಟೆಯಲ್ಲಿ ತುರ್ತು ಸಭೆ ನಡೆಸಿದ ರಾಜ್ಯ ಮಾದಿಗ ಮಹಾಸಭಾ, ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ವಿರುದ್ಧ ರಾಜ್ಯವ್ಯಾಪಿ ಹೋರಾಟಕ್ಕೆ ಕರೆ ನೀಡಲು ನಿರ್ಧರಿಸಿದೆ. ಈ ಕುರಿತ ವರದಿ ಇಲ್ಲಿದೆ...
ಹೌದು, ರಾಜ್ಯದಲ್ಲಿ ಅಧಿಕಾರವನ್ನ ಕಳೆದುಕೊಂಡಿರೋ ಬಿಜೆಪಿಯಲ್ಲಿ ಮುಂದಿನ ಲೋಕಸಭೆಯನ್ನ ಗೆಲ್ಲಲು ಇನ್ನಿಲ್ಲದ ಕಸರತ್ತುಗಳು ನಡೆಯುತ್ತಿದರೆ ಇತ್ತ ಸ್ವಪಕ್ಷೀಯರಿಂದಲೇ ಬಿಜೆಪಿ ಸೋಲಾಯ್ತು ಎಂಬ ಸ್ವಪಕ್ಷದ ಶಾಸಕರ ಹೇಳಿಕೆಗಳು ಹಲವು ವಿವಾದಗಳಿಗೆ ಕಾರಣವಾಗುತ್ತಿವೆ. ಅಂದ್ರೆ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಇತ್ತೀಚಿಗೆ ಸಮಾರಂಭವೊಂದರಲ್ಲಿ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಪಕ್ಷ ಸೋಲಲು ಕೇಂದ್ರ ಸಚಿವ ನಾರಾಯಣಸ್ವಾಮಿ ಮತ್ತು ಮಾಜಿ ಸಚಿವ ಗೋವಿಂದ ಕಾರಜೋಳರು ಕಾರಣ ಎಂಬ ಹೇಳಿಕೆ ನೀಡಿರೋದು ಇದೀಗ ಮಾದಿಗ ಮಹಾಸಭಾದ ಕಂಗೆಣ್ಣಿಗೆ ಗುರಿಯಾಗುವಂತೆ ಮಾಡಿದೆ. ಈ ಸಂಭಂದ ಇಂದು ಬಾಗಲಕೋಟೆಯಲ್ಲಿ ರಾಜ್ಯ ಮಾದಿಗ ಮಹಾಸಭಾದಿಂದ ತುರ್ತು ಸಭೆಯನ್ನ ಕರೆಯಲಾಗಿದ್ದು, ಸಭೆಯಲ್ಲಿ ವಿಸ್ತೃತ ಚರ್ಚೆಗಳು ನಡೆದು ರಾಜ್ಯವ್ಯಾಪಿ ಶಾಸಕ ಎಂ. ಚಂದ್ರಪ್ಪ ವಿರುದ್ದ ಹೋರಾಟಕ್ಕೆ ಕರೆ ನೀಡಲು ನಿರ್ಧರಿಸಲಾಯಿತು. ಮೊದಲು ನಾಳೆ ಚಿತ್ರದುರ್ಗದಲ್ಲಿ ನಡೆಯುವ ಹೋರಾಟದಲ್ಲಿ ಭಾಗಿಯಾಗುವುದು ಈ ಮೂಲಕ ಬಿಜೆಪಿ ವರಿಷ್ಠರಿಗೆ ಗಮನಕ್ಕೆ ತಂದು ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ವಿರುದ್ದ ಸೂಕ್ತ ಕ್ರಮಕೈಗೊಂಡು, ಅವರು ಹೇಳಿಕೆ ನೀಡುವುದನ್ನು ಹದ್ದುಬಸ್ತಿನಲ್ಲಿಡುವುದು ಮತ್ತು ಈ ಹಿಂದೆ ಹೇಳಿಕೆ ನೀಡಿದ್ದಕ್ಕೆ ಕ್ಷಮೆ ಕೋರಬೇಕು ಇಲ್ಲವಾದಲ್ಲಿ ರಾಜ್ಯವ್ಯಾಪಿ ಹೋರಾಟ ಮಾಡಲಾಗುವುದೆಂದು ರಾಜ್ಯ ಮಾದಿಗ ಮಹಾಸಭಾ ರಾಜ್ಯಾಧ್ಯಕ್ಷ ಮುತ್ತಣ್ಣ ಬೆಣ್ಣೂರ ಎಚ್ಚರಿಕೆ ನೀಡಿದ್ದಾರೆ.
ಬಾಗಲಕೋಟೆ: ಐದು ವರ್ಷವಾದ್ರೂ ಪೂರ್ಣಗೊಳ್ಳದ ಸೇತುವೆ
ಕೇಂದ್ರ ಸಚಿವ ನಾರಾಯಣಸ್ವಾಮಿ, ಕಾರಜೋಳ ವಿರುದ್ಧ ಒಳಸಂಚಿಗೆ ಆಕ್ರೋಶ...ಹೋರಾಟದ ಎಚ್ಚರಿಕೆ
ಇನ್ನು ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಅವರು ತಮ್ಮ ಹೇಳಿಕೆ ಮೂಲಕ ಕೇಂದ್ರ ಸಚಿವ ನಾರಾಯಣಸ್ವಾಮಿ ಅವರಿಗೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಹಿನ್ನಡೆಯನ್ನುಂಟು ಮಾಡುವುದು ಮತ್ತು ಗೋವಿಂದ ಕಾರಜೋಳ ಅವರ ವಿರುದ್ದ ತಪ್ಪು ಕಲ್ಪನೆ ತರುವಂತೆ ಮಾಡುವ ಉದ್ದೇಶವನ್ನ ಹೊಂದಿದ್ದು, ಕೂಡಲೇ ಈ ಸಂಭಂಧ ವರಿಷ್ಠರು ಕ್ರಮ ವಹಿಸಬೇಕು. ಈ ಮಧ್ಯೆ ಎಂ.ಚಂದ್ರಪ್ಪನವರ ಸ್ವ ಸಮುದಾಯವೇ ರಾಜ್ಯವ್ಯಾಪಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ದ ಮತ ಚಲಾಯಿಸಿದ್ದು, ಇತ್ತ ಮಾದಿಗರು ಹೊಳಲ್ಕೆರೆಯಲ್ಲಿಯೇ ತಮ್ಮದೇ ಸಮುದಾಯದ ಕಾಂಗ್ರೆಸ್ ಅಭ್ಯರ್ಥಿ ಎಚ್.ಆಂಜನೇಯ ಇದ್ದರೂ ಅವರನ್ನ ಸೋಲಿಸಿ ಬಿಜೆಪಿಯ ಎಂ.ಚಂದ್ರಪ್ಪನವರನ್ನ ಗೆಲ್ಲಿಸಿದ್ದು, ಇದರ ಸತ್ಯವನ್ನ ಅರಿಯದೇ ಮಾತನಾಢಿರೋದು ಸರಿಯಲ್ಲ, ಕೂಡಲೇ ನಾರಾಯಣಸ್ವಾಮಿ ಮತ್ತು ಕಾರಜೋಳ ಅವರಿಗೆ ಕ್ಷಮೆ ಕೋರಬೇಕೆಂದು ಆಗ್ರಹಿಸಿರೋ ಮಾದಿಗ ಮಹಾಸಭಾ ಸದಸ್ಯರು, ಇತ್ತ ಬಿಜೆಪಿಯ ಪಕ್ಷದ ಏಳಿಗೆಗಾಗಿ ದುಡಿದಿರೋ ಹಿರಿಯ ದಲಿತ ನಾಯಕ ಗೋವಿಂದ ಕಾರಜೋಳ ಅವರನ್ನ ಮುಂಬರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಯಿಂದ ಗೆಲ್ಲಿಸಿ ನ್ಯಾಯ ಕೊಡಿಸುವಂತಾಗಬೇಕೆಂದು ಮಾದಿಗ ಮಹಾಸಭಾದ ಯಲ್ಲಪ್ಪ ಬೆಂಡಿಗೇರಿ & ಶಿವಾನಂದ ಟವಳಿ ಆಗ್ರಹಿಸಿದ್ದಾರೆ.
ಒಟ್ಟಿನಲ್ಲಿ ಮಾದಿಗ ಸಮುದಾಯದ ಬಿಜೆಪಿ ನಾಯಕರಾದ ಕೇಂದ್ರ ಸಚಿವ ನಾರಾಯಣಸ್ವಾಮಿ ಮತ್ತು ಗೋವಿಂದ ಕಾರಜೋಳ ಅವರ ವಿರುದ್ದ ಹೇಳಿಕೆ ನೀಡಿರುವ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ವಿರುದ್ದ ಬಿಜೆಪಿಗರು ಸೂಕ್ತ ಕ್ರಮಕೈಗೊಳ್ಳಬೇಕು ಇಲ್ಲವಾದಲ್ಲಿ ರಾಜ್ಯವ್ಯಾಪಿ ಹೋರಾಟ ಅನಿವಾರ್ಯ ಎಂದಿರೋ ಮಾದಿಗ ಮಹಾಸಭಾದ ನಿಲುವು ಮುಂದೆ ಏನಾಗುತ್ತೇ ಅಂತ ಕಾದು ನೋಡಬೇಕಿದೆ.