ಸಚಿವ ಪ್ರಭು ಚವ್ಹಾಣ್ ಸಂಪುಟದಿಂದ ಕೈ ಬಿಡಲು ಒತ್ತಾಯ
- ಅಸ್ಪೃಶ್ಯ ಸಮುದಾಯಗಳಿಗೆ ನ್ಯಾಯ ಒದಗಿಸುವ ನ್ಯಾ.ಎ.ಜೆ.ಸದಾಶಿವ ಆಯೋಗ ವರದಿ ಜಾರಿಗೊಳಿಸಲು ವಿರೋಧ
- ಸಚಿವ ಪ್ರಭು ಚವ್ಹಾಣ್ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು ಎಂದು ಆಗ್ರಹ
ತುಮಕೂರು (ಅ.08): ಅಸ್ಪೃಶ್ಯ ಸಮುದಾಯಗಳಿಗೆ ನ್ಯಾಯ ಒದಗಿಸುವ ನ್ಯಾ.ಎ.ಜೆ.ಸದಾಶಿವ ಆಯೋಗ (Sadashiva Ayog) ವರದಿ ಜಾರಿಗೊಳಿಸಲು ವಿರೋಧಿಸುತ್ತಿರುವ ಸ್ಪೃಶ್ಯ ಸಮುದಾಯದ ಸಚಿವ ಪ್ರಭು ಚವ್ಹಾಣ್ (Prabhu chavan ) ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು ಎಂದು ಮಾದಿಗ ದಂಡೋರ ರಾಜ್ಯ ವಕ್ತಾರ ರಾಘವೇಂದ್ರ ಸ್ವಾಮಿ (Raghavendra Swamy) ಒತ್ತಾಯಿಸಿದರು.
ಅವರು ತುಮಕೂರಿನಲ್ಲಿ (Tumakur) ಸದಾಶಿವ ಆಯೋಗ ವರದಿ ಜಾರಿಗೊಳಿಸಬೇಕು ಮತ್ತು ಸಚಿವ ಪ್ರಭು ಚವ್ಹಾಣ್ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಒತ್ತಾಯಿಸಿ ಮಾದಿಗ ದಂಡೋರ ಅ.11ರಂದು ಕರೆ ನೀಡಿರುವ ಬೀದರ್ ಬಂದ್ (Bidar Bandh) ಸಂಬಂಧ ಮುಖಂಡರ ಸಭೆಯಲ್ಲಿ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದರು. ಅಸ್ಪೃಶ್ಯರ ಬಹುಕಾಲದ ಒಳಮೀಸಲಾತಿ (Resarvation) ಬೇಡಿಕೆ ಈಡೇರಿಕೆಗೆ ಅಡ್ಡಿಯಾಗಿರುವ ಪ್ರಭು ಚವ್ಹಾಣ್ ಅಂತವರನ್ನು ಸಂಪುಟದಿಂದ ಕೈಬಿಡದೇ ಹೋದರೆ ಅಸ್ಪೃಶ್ಯ ಸಮುದಾಯಗಳು ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ (BJP) ತಕ್ಕಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಶೀಘ್ರದಲ್ಲೇ ಪಶು ವೈದ್ಯರ ನೇಮಕಕ್ಕೆ ಪ್ರಭು ಚೌಹಾಣ್ ಅಸ್ತು
ಸಂವಿಧಾನ ಜಾರಿಯಾದ ನಂತರ ಅಸ್ಪೃಶ್ಯ ಸಮುದಾಯಗಳಾದ ಮಾದಿಗ ಮತ್ತು ಹೊಲೆಯ ಸಮುದಾಯಗಳು ಇಂದಿಗೂ ಸಾಮಾಜಿಕ, ರಾಜಕೀಯ, ಶೈಕ್ಷಣಿಕವಾಗಿ ಹಿಂದುಳಿದಿದ್ದು, ಸ್ಪೃಶ್ಯ ಸಮುದಾಯಗಳಾದ ಭೋವಿ, ಲಂಬಾಣಿ, ಕೊರಮ, ಕೊರಚ, ವಡ್ಡ ಸಮುದಾಯಗಳು ಮೀಸಲಾತಿಯ ಲಾಭ ಪಡೆದುಕೊಂಡು, ಅಸ್ಪೃಶ್ಯ ಸಮುದಾಯಗಳನ್ನು ಶೋಷಣೆ ಮಾಡುತ್ತಿವೆ ಎಂದು ಆರೋಪಿಸಿದರು. ಮೀಸಲಾತಿ ಸವಲತ್ತುಗಳನ್ನು ಪಡೆಯಲು ಮಾತ್ರ ಮುಂದಿರುವ ಈ ಸ್ಪೃಶ್ಯ ಸಮುದಾಯಗಳು, ಅಸ್ಪೃಶ್ಯ ಸಮುದಾಯಗಳನ್ನು ಅವಕಾಶವಂಚಿತರನ್ನಾಗಿ ಮಾಡುತ್ತಿದ್ದು, ಅಸ್ಪೃಶ್ಯ ಸಮುದಾಯಗಳ ಹಿತ ಕಾಯುವುದಕ್ಕಾಗಿ ಮಾದಿಗ ದಂಡೋರ ಕಳೆದ 23 ವರ್ಷಗಳಿಂದ ಹೋರಾಟ ಮಾಡುತ್ತಿದ್ದು, ಹೋರಾಟದಿಂದಲೇ ರಚನೆಯಾದ ನ್ಯಾ. ಸದಾಶಿವ ಆಯೋಗ ವರದಿ ಜಾರಿ ಮಾಡಲು ಸಹ ಈ ಸ್ಪೃಶ್ಯ ಸಮುದಾಯಗಳು ವಿರೋಧ ವ್ಯಕ್ತಪಡಿಸುತ್ತಿವೆ ಎಂದು ಆಕೊ್ರೀಶ ವ್ಯಕ್ತಪಡಿಸಿದರು.
ಸರ್ಕಾರ ರಚನೆ ಮಾಡಿರುವ ನ್ಯಾ.ಸದಾಶಿವ ಆಯೋಗದ ವರದಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಸ್ಪೃಶ್ಯ ಸಮುದಾಯದ ಪ್ರಭುಚವ್ಹಾಣ್ ಅವರನ್ನು ಸಂಪುಟದಿಂದ ಕೈಬಿಡಬೇಕು ಹಾಗೂ ಸದಾಶಿವ ಆಯೋಗದ ವರದಿ ಜಾರಿಗೆ ಒತ್ತಾಯಿಸಿ ಅ. 11ರಂದು ಕರೆ ನೀಡಿರುವ ಬೀದರ್ ಬಂದ್ ಯಶಸ್ವಿಗೊಳಿಸಲು ಜಿಲ್ಲೆಯ ಸಮುದಾಯದ ಮುಖಂಡರು ಹಾಗೂ ಯುವ ಸಮೂಹ ಸಹಕಾರ ನೀಡುವ ನಿಟ್ಟಿನಲ್ಲಿ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಮಾದಿಗ ಪರ ಸಂಘಟನೆಗಳ ಜಿಲ್ಲಾಧ್ಯಕ್ಷ ಕೊಡಿಯಾಲ ಮಹಾದೇವ್ ಮಾತನಾಡಿ, ಸುಮಾರು ಏಳು ವರ್ಷ ನಿರಂತರವಾಗಿ ಅಧ್ಯಯನ ಮತ್ತು ವೈಜ್ಞಾನಿಕ ಸಮೀಕ್ಷೆಯಿಂದ ಸಿದ್ಧಗೊಂಡಿರುವ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿಯೇ ಅವೈಜ್ಞಾನಿಕ ಎನ್ನುತ್ತಿರುವ ಸ್ಪೃಶ್ಯ ಸಮುದಾಯಗಳಿಗೆ ಅಸ್ಪೃಶ್ಯರಾದ ಹೊಲೆಯ ಮತ್ತು ಮಾದಿಗ ಸಮುದಾಯಗಳ ಅಭಿವೃದ್ಧಿ ಬೇಕಾಗಿಲ್ಲ, ಮೀಸಲಾತಿಯ ಉಪಯೋಗ ಕೇವಲ ಸ್ಪೃಶ್ಯರಿಗೆ ಧಕ್ಕಬೇಕೆಂಬ ದುರಾಲೋಚನೆ ಈ ಸಮುದಾಯಗಳಿಗೆ ಇದೆ ಎಂದು ಆರೋಪಿಸಿದರು.
ಕೆಲಸದ ಮೇಲೆ ಕಾಳಜಿ ಇಲ್ಲದ ವೈದ್ಯರನ್ನು ಮನೆಗೆ ಕಳುಹಿಸಿ: ಪ್ರಭು ಚೌಹಾಣ್ ವಾರ್ನಿಂಗ್
ಸಭೆಯಲ್ಲಿ ದಲಿತ ಸ್ವಾಭಿಮಾನಿ ಸಂಘರ್ಷ ಸಮಿತಿ (Dalit Swabimani sangharsh samiti) ರಾಜ್ಯಾಧ್ಯಕ್ಷ ಬಂಡೆಕುಮಾರ್, ಮಾದಿಗ ದಂಡೋರ ರಾಜ್ಯ ಜಂಟಿ ಕಾರ್ಯದರ್ಶಿ ಗೂಳರಿವೆ ನಾಗರಾಜು, ದಲಿತ ಸಾಮ್ರಾಜ್ಯ ಸ್ಥಾಪನೆ ಜಿಲ್ಲಾಧ್ಯಕ್ಷ ಎ.ನಾಗೇಶ್, ಕರ್ನಾಟಕ ಮಾದಿಗ ಸಂಘ ಜಿಲ್ಲಾಧ್ಯಕ್ಷ ಹೆಚ್.ಆರ್. ರಾಮಮೂರ್ತಿ, ಪಾವಗಡ ರಾಮಾಂಜಿ, ಕೆಸರುಮಡು ಗೋಪಾಲ್ ಇತರರು ಇದ್ದರು