ಲೋಕ ಸಮರದಲ್ಲಿ 'ಕೈ' ಸುಟ್ಟ ಸದಾಶಿವ ಆಯೋಗ ಹೋರಾಟ!
ಲೋಕ ಚುನಾವಣೆಯಲ್ಲೂ ನಡೀತಾ ಸದಾಶಿವ ಆಯೋಗದ ಹೋರಾಟದ ಎಫೆಕ್ಟ್?| ದಲಿತ ನಾಯಕರಿಗೆ ಸೋಲು..ಮುಂದೇನು?| ಖರ್ಗೆ, ಮುನಿಯಪ್ಪ ಅವರಂತ ನಾಯಕರ ಸೋಲಿನ ಬಳಿಕ ಕಾಂಗ್ರೆಸ್‌ನಲ್ಲೀಗ ತಿಮ್ಮಾಪೂರಗೆ ಹೆಚ್ಚಿದ ಹೊಣೆ| ಕಾಂಗ್ರೆಸ್‌ನ ಘಟಾನುಘಟಿ ನಾಯಕರ ಸೋಲಿನ ಬಳಿಕವೂ ಇನ್ನೂ ನಿಂತಿಲ್ಲ ಮಾದಿಗರ ನೋವು| ಸದಾಶಿವ ಆಯೋಗ ಜಾರಿಗಾಗಿ ರಾಜ್ಯಮಟ್ಟದ ಸಮಾವೇಶಕ್ಕೆ ಮುಂದಾದ ರಾಜ್ಯ ಮಾದಿಗ ಹೋರಾಟ ಸಮಿತಿ|
ಮಲ್ಲಿಕಾರ್ಜುನ ಹೊಸಮನಿ
ಬಾಗಲಕೋಟೆ(ಮೇ.29): ರಾಜ್ಯದಲ್ಲಿ ಸದಾಶಿವ ಆಯೋಗ ಜಾರಿಗಾಗಿ ಮಾದಿಗರು ನಡೆಸುತ್ತಿರೋ ಹೋರಾಟ ಇದೀಗ ಲೋಕಸಭಾ ಚುನಾವಣೆ ಫಲಿತಾಂಶದ ಮೇಲೂ ಪರಿಣಾಮ ಬೀರಿದೆ ಎಂದೇ ರಾಜ್ಯ ರಾಜಕಾರಣದಲ್ಲಿ ವಿಶ್ಲೇಷಿಸಲಾಗುತ್ತಿದೆ. ರಾಜ್ಯದಲ್ಲಿ ದಲಿತ ನಾಯಕರೆನಿಸಿಕೊಂಡವರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಹೀನಾಯ ಸೋಲನ್ನು ಅನುಭವಿಸಿರೋದೇ ಇದಕ್ಕೆ ಸಾಕ್ಷಿ.
ಈ ಮದ್ಯೆ ಬೆಂಬಲ ಸಿಗೋವರೆಗೂ ಹೋರಾಟವನ್ನ ಮುಂದುವರೆಸಲು ಮುಂದಾಗಿರೋ ಮಾದಿಗರು ಇದೀಗ ರಾಜ್ಯ ಮಟ್ಟದ ಸಮಾವೇಶ ಆಯೋಜಿಸಲು ಮುಂದಾಗಿದ್ದಾರೆ.
"
ರಾಜ್ಯದಲ್ಲಿ ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆ ಹಾಗೂ ಈಗಷ್ಟೇ ಮುಗಿದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲನ್ನು ಅನುಭವಿಸಿದೆ. ರಾಜ್ಯದಲ್ಲಿ ಘಟಾನುಘಟಿ ದಲಿತ ನಾಯಕರೆಂದೇ ಗುರುತಿಸಿಕೊಂಡಿದ್ದ ಸೋಲಿಲ್ಲದ ಸರದಾರ ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್.ಮುನಿಯಪ್ಪನಂತವರು ಸೋಲನ್ನು ಅನುಭವಿಸಿರೋದು ಕಾಂಗ್ರೆಸ್‌ನ್ನ ಚಿಂತೇಗೀಡಾಗುವಂತೆ ಮಾಡಿದೆ.
ಈ ಬಾರಿ ಸದಾಶಿವ ಆಯೋಗ ವರದಿ ಜಾರಿಗಾಗಿ ಆಗ್ರಹಿಸಿ ನಡೆದ ಹೋರಾಟ ತೀವ್ರಗೊಂಡು ಸಾಲದ್ದಕ್ಕೆ ರಾಜ್ಯದ ಹಲವು ಮತಕ್ಷೇತ್ರಗಳಿಗೂ ತೆರಳಿದ್ದ ಹೋರಾಟಗಾರರು ಕಾಂಗ್ರೆಸ್ ವಿರುದ್ಧ ಮತಚಲಾಯಿಸಿ ಬೇರೆ ಯಾವುದಾದ್ರೂ ಪಕ್ಷಕ್ಕೆ ಮತ ನೀಡಿ ಅಂತ ಪ್ರಚಾರ ನಡೆಸಿದ್ದರು. ಹೀಗಾಗಿ ಮೊದಲೇ ಮೋದಿ ಅಲೆಯಿಂದ ಕಂಗೆಟ್ಟಿದ್ದ ಕಾಂಗ್ರೆಸ್‌ಗೆ ಇತ್ತ ಮಾದಿಗರ ಹೋರಾಟ ನಡೆಯೂ ಪೆಟ್ಟು ನೀಡಿ ಇದೀಗ ದಲಿತ ನಾಯಕರ ಸೋಲಿಗೆ ಕಾರಣವಾಗಿದೆ.
ಇಷ್ಟಾದ್ರೂ ಅಸಮಾಧಾನ ಹೊಂದಿರೋ ಮಾದಿಗರು ಇದೀಗ ರಾಜ್ಯಮಟ್ಟದ ಬೃಹತ್ ಸಮಾವೇಶವೊಂದನ್ನು ಆಯೋಜಿಸುವ ಮೂಲಕ ಇನ್ನಾದ್ರೂ ಎಚ್ಚೆತ್ತುಕೊಂಡು ತಮ್ಮ ಹೋರಾಟಕ್ಕೆ ಸ್ಪಂದಿಸುವಂತಾಗಬೇಕು ಎಂದು ಇಂದಿನ ಮೈತ್ರಿ ಸರ್ಕಾರಕ್ಕೂ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
"
ಇನ್ನು ಮಾದಿಗ ಮಹಾಸಭಾ ಹೋರಾಟದ ಫಲವಾಗಿ ಖರ್ಗೆ ಮತ್ತು ಕೆ.ಎಚ್.ಮುನಿಯಪ್ಪ ಸೋಲುಂಡ ಪರಿಣಾಮ ಕಾಂಗ್ರೆಸ್‌ನಲ್ಲಿ ಇದೀಗ ದಲಿತ ನಾಯಕ, ಸಕ್ಕರೆ ಸಚಿವ ಆರ್.ಬಿ.ತಿಮ್ಮಾಪೂರಗೆ ಹೆಚ್ಚಿನ ಹೊಣೆ ಬಿದ್ದಂತಾಗಿದೆ. ಹೀಗಾಗಿ ಕಾಂಗ್ರೆಸ್ ಪಕ್ಷದಲ್ಲೂ ದಲಿತ ನಾಯಕರು ಚಿಂತನೆ ಮಾಡುವ ಕಾಲ ಸನ್ನಿಹಿತವಾಗಿದೆ.
ಮತ್ತೊಂದೆಡೆ ಇತ್ತ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಪರಮೇಶ್ವರ ಸಹ ಸದಾಶಿವ ಆಯೋಗ ಜಾರಿಗೆ ಬೆಂಬಲಿಸಿಲ್ಲ ಅನ್ನೋ ಕೂಗು ಹೋರಾಟಗಾರರಲ್ಲಿ ಮಡುಗಟ್ಟಿದೆ. ಹೀಗಾಗಿ ಮಾದಿಗ ಹೋರಾಟ ಸಮಿತಿ ಸದಸ್ಯರು ಮತ್ತೆ ರಾಜ್ಯಾದ್ಯಂತ ಹೋರಾಟಕ್ಕೆ ಕರೆ ನೀಡಿದ್ದಾರೆ.
"
ಒಟ್ಟಿನಲ್ಲಿ ಸದಾಶಿವ ಆಯೋಗ ಜಾರಿಗಾಗಿ ರಾಜ್ಯದಲ್ಲಿ ಹೋರಾಟ ನಡೆಸುತ್ತಿರೋ ಮಾದಿಗ ಮಹಾಸಭಾ ಹೋರಾಟ ಸಮಿತಿ, ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಾಲಿಗೆ ಕಂಠಕವಾಗಿ ಪರಿಣಮಿಸಿದ್ದು, ಇನ್ನಾದ್ರೂ ಕಾಂಗ್ರೆಸ್ ನಾಯಕರು ಇತ್ತ ಲಕ್ಷ್ಯ ವಹಿಸಿ ಅವರ ಹೋರಾಟಕ್ಕೆ ಸ್ಪಂದಿಸ್ತಾರಾ ಅಥವಾ ಮಾದಿಗರ ರಾಜ್ಯ ಮಟ್ಟದ ಹೋರಾಟಕ್ಕೆ ಸಾಕ್ಷಿಯಾಗ್ತಾರಾ ಕಾದು ನೋಡಬೇಕಿದೆ.