'DCM ಗೋವಿಂದ ಕಾರಜೋಳರನ್ನ ಸಂಪುಟದಿಂದ ರಾಜ್ಯ ಸರ್ಕಾರ ಕೈಬಿಡಬೇಕು'
ಡಿಸಿಎಂ ಕಾರಜೋಳ ರಾಜೀನಾಮೆ ನೀಡಲಿ: ಮಾದಿಗ ಸಮುದಾಯದ ಮುಖಂಡ ಮಂಜುನಾಥ ಹಾಳಕೇರಿ| ತಮಗೆ ರಾಜಕೀಯವಾಗಿ ಬೆಳೆಯಲು, ವಿವಿಧ ಹುದ್ದೆಗಳನ್ನು ಅನುಭವಿಸಲು ಮಾದಿಗ ಸಮಾಜ ಬೇಕು. ಆದರೆ, ಮಾದಿಗ ಸಮಾಜ ಏಳ್ಗೆಗೆ ಶ್ರಮಿಸದೇ, ಪರಿಶಿಷ್ಟ ಜಾತಿಯಲ್ಲಿರದ ಜಾತಿಗಳನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಹೊರಟಿರುವ ಕ್ರಮ ಸೂಕ್ತವಲ್ಲ|
ರೋಣ(ಜೂ.15): ಲಂಬಾಣಿ, ಬೋವಿ, ಕೊರಮ, ಕೊರಚ ಸಮುದಾಯಗಳನ್ನು ಪರಿಶಿಷ್ಟ ಜಾತಿಯಿಂದ ಕೈಬಿಡಬೇಕು ಎಂದು ಸುಪ್ರೀಂ ಕೋರ್ಟ ನಿರ್ದೇಶನ ನೀಡಿದ್ದು, ಈ ನಿರ್ದೇಶನ ವಿರುದ್ಧವಾಗಿ, ಈ ನಾಲ್ಕು ಸಮುದಾಯದ ಪರವಾಗಿ ಹೇಳಿಕೆ ನೀಡಿರುವ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ನಡೆ ಖಂಡನಾರ್ಹವಾಗಿದ್ದು, ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಪುರಸಭೆ ಮಾಜಿ ಸದಸ್ಯ, ಮಾದಿಗ ಸಮುದಾಯದ ಮುಖಂಡ ಮಂಜುನಾಥ ಹಾಳಕೇರಿ ಆಗ್ರಹಿಸಿದರು.
ಸೋಮವಾರ ಪಟ್ಟಣದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ನಾಲ್ಕು ಜಾತಿಯಗಳು ಪರಿಶಿಷ್ಟ ಜಾತಿಗೆ ಸೇರಿರುವದಿಲ್ಲ ಎಂಬುದನ್ನು ಕೋರ್ಟ್ ಹೇಳಿದೆ. ಆದರೂ ಕಾರಜೋಳ ಅವರು ಈ ರೀತಿಯ ಹೇಳಿಕೆ ನೀಡಿರುವುದು ಸಮಂಜಸವಲ್ಲ. ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಶೋಷಿತಗೊಂಡಿರುವ ಮಾದಿಗ ಸಮಾಜವನ್ನು ಮುಖ್ಯ ವಾಹಿನಿಗೆ ತರುವಲ್ಲಿ ಶ್ರಮಿಸಬೇಕಿದ್ದ ಕಾರಜೋಳ ಅವರು ಈ ರೀತಿ ಹೇಳಿಕೆ ನೀಡಿರುವದು ಖಂಡನಾರ್ಹವಾಗಿದೆ.
'ಕೊರೋನಾ ಪರಿಸ್ಥಿತಿ ದುರ್ಬಳಕೆ ಮಾಡಿಕೊಂಡು ಸರ್ಕಾರದಿಂದ ರೈತರಿಗೆ ಅನ್ಯಾಯ'
ತಮಗೆ ರಾಜಕೀಯವಾಗಿ ಬೆಳೆಯಲು, ವಿವಿಧ ಹುದ್ದೆಗಳನ್ನು ಅನುಭವಿಸಲು ಮಾದಿಗ ಸಮಾಜ ಬೇಕು. ಆದರೆ, ಮಾದಿಗ ಸಮಾಜ ಏಳ್ಗೆಗೆ ಶ್ರಮಿಸದೇ, ಪರಿಶಿಷ್ಟ ಜಾತಿಯಲ್ಲಿರದ ಜಾತಿಗಳನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಹೊರಟಿರುವ ಕ್ರಮ ಸೂಕ್ತವಲ್ಲ. ದೇಶದ ಯಾವದೇ ರಾಜ್ಯದಲ್ಲಿ ಈ ನಾಲ್ಕು ಸಮುದಾಯಗಳು ಎಸ್.ಸಿ ಪಟ್ಟಿಯಲ್ಲಿಲ್ಲ, ಅದರಂತೆ ರಾಜ್ಯ ಸರ್ಕಾರ ಕೂಡಾ ಈ ನಾಲ್ಕು ಸಮುದಾಯವನ್ನು ಎಸ್.ಸಿ ಪಟ್ಟಿಯಿಂದ ಕೈಬಿಡಬೇಕು. ಆದರೆ, ಉಪ ಮುಖ್ಯಂಮತ್ರಿ ಗೋವಿಂದ ಕಾರಜೋಳ ಅವರು ಪರಿಶಿಷ್ಟ ಪಟ್ಟಿಯಿಂದ ಯಾವುದೇ ಜಾತಿಯನ್ನು ಕೈಬಿಡಲ್ಲ, ಕೈಬಿಡುವ ವಿಚಾರವು ಸರ್ಕಾರದ ಮುಂದೆ ಬಂದಿಲ್ಲ ಎಂಬ ಹೇಳಿಕ ನೀಡುವ ಮೂಲಕ ಗೊಂದಲ ಸೃಷ್ಟಿಸಿದ್ದಾರೆ.
ಮಾದಿಗ ಸಮುದಾಯ ಎದುರಿಸುತ್ತಿರುವ ಅನ್ಯಾಯ, ಶೋಷಣೆ, ಸಮಸ್ಯಗಳ ವಿರುದ್ಧ ದ್ವನಿ ಎತ್ತುವ ಬದಲು, ಈ ರೀತಿ ಹೇಳಿಕೆ ನೀಡಿ ಮಾದಿಗ ಸಮುದಾಯಕ್ಕೆ ಅನ್ಯಾಯ ಮಾಡಲು ಹೊರಟಿರುವ ಕಾರಜೋಳ ಅವರನ್ನು ಸಂಪುಟದಿಂದ ರಾಜ್ಯ ಸರ್ಕಾರ ಕೈಬಿಡಬೇಕು. ಇಲ್ಲವಾದಲ್ಲಿ ರಾಜ್ಯದಲ್ಲಿನ ಮಾದಿಗ ಸಮೂದಾಯ ಬೀದಿಗಿಳಿದು ಉಗ್ರ ಸ್ವರೂಪದ ಹೋರಾಟ ಹಮ್ಮಿಕೊಳ್ಳಲಾಗುವದು ಎಂದು ಎಚ್ಚರಿಸಿದರು.