Asianet Suvarna News Asianet Suvarna News

ಮದ್ದೂರಿನ ಅಳಿಯನಿಗೆ ವಿಷಾದದ ವಿದಾಯ..!

ಮದ್ದೂರಿನ ಎಸ್‌.ಎಂ.ಕೃಷ್ಣ ಅವರ ಸಾವಿರಾರು ಬೆಂಬಲಿಗರಿಗೆ ಕೃಷ್ಣ ಅವರು ದೊಡ್ಡ ಸಾಹೇಬ್ರು ಆಗಿದ್ದರೆ, ಮದ್ದೂರಿನ ಅಳಿಯ ಸಣ್ಣ ಸಾಹೇಬ್ರು ಆಗಿದ್ದರು. ಮಾವ ಕೃಷ್ಣರ ತವರೂರು ಎನ್ನುವ ಕಾರಣಕ್ಕಾಗಿ ಸಿದ್ಧಾರ್ಥ ಅವರು ಜಿಲ್ಲೆಯಲ್ಲಿ ಎರಡು ಕೆಫೆ ಕಾಫಿ ಡೇ ಆರಂಭಿಸಿ ಇಲ್ಲಿನ ಜನರಿಗೆ ಉದ್ದೋಗ ನೀಡಿದ್ದಾರೆ. ಅಗಲಿದ ಮದ್ದೂರಿನ ಅಳಿಯನಿಗಾಗಿ ಅಲ್ಲಿನ ಜನತೆ ಕಂಬನಿ ಮಿಡಿದಿದೆ.

Maddur people condole Death of CCD Owner vg Siddharth
Author
Bangalore, First Published Aug 1, 2019, 12:13 PM IST

ಮಂಡ್ಯ(ಆ.01): ಮದ್ದೂರಿನ ಅಳಿಯ ಸಿದ್ದಾರ್ಥನಿಗೆ ಜಿಲ್ಲೆಯ ಜನರು ವಿಷಾದದ ವಿದಾಯ ಹೇಳಿದ್ದಾರೆ. ಸಿದ್ದಾರ್ಥವರು ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ತಿಳಿದು ಮಂಡ್ಯದಲ್ಲೂ ಶೋಕದ ಛಾಯೆ ಆವರಿಸಿದೆ.

ಮಾಜಿ ಸಿಎಂ ಎಸ್‌.ಎಂ. ಕೃಷ್ಣ ತಮ್ಮ ಹಿರಿಯ ಪುತ್ರಿ ಮಾಳವಿಕಾ ಅವರನ್ನು 1988 ರ ಮೇ ನಲ್ಲಿ ಸಿದ್ದಾರ್ಥ ಅವರಿಗೆ ವಿವಾಹ ಮಾಡಿಕೊಟ್ಟಿದ್ದರು. ಸೋಮನಹಳ್ಳಿ ಅಳಿಯ ಎಂದು ಜನರು ಅವರನ್ನು ಗುರುತಿಸುತ್ತಿದ್ದರು.

ಫ್ಯಾಕ್ಟರಿ ತರುವ ಕನಸು ನೆರವೇರಲಿಲ್ಲ:

ಮಂಡ್ಯ ಹಾಗೂ ಇಲ್ಲಿನ ನಾಯಕರ ಬಗ್ಗೆ ಅಪಾರ ವಿಶ್ವಾಸ, ಗೌರವ ಇಟ್ಟುಕೊಂಡಿದ್ದ ಸಿದ್ದಾರ್ಥ, ಕೃಷ್ಣ ಅವರು 1999ರಲ್ಲಿ ಮುಖ್ಯಮಂತ್ರಿಗಳಾಗಿದ್ದ ವೇಳೆ ಮಂಡ್ಯಕ್ಕೊಂದು ಟ್ರ್ಯಾಕ್ಟರ್‌ ಬಿಡಿಭಾಗ ತಯಾರಿಕಾ ಫ್ಯಾಕ್ಟರಿ ತಂದು ಇಲ್ಲಿನ ಸಾವಿರಾರು ಜನರಿಗೆ ಉದ್ಯೋಗ ನೀಡುವ ಕನಸು ಹೊಂದಿದ್ದರು. ರಾಜಕೀಯ ಕಾರಣಗಳಿಂದಾಗಿ ಸಿದ್ಧಾರ್ಥರ ಕನಸು ಈಡೇರಲಿಲ್ಲ.

ಮದ್ದೂರಿನ ಜನರಿಗೆ ಸಣ್ಣ ಸಹೇಬ್ರು ಆಗಿದ್ದರು ಸಿದ್ಧಾರ್ಥ:

ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣರ ಸಾವಿರಾರು ಬೆಂಬಲಿಗರಿಗೆ ಕೃಷ್ಣ ಅವರು ದೊಡ್ಡ ಸಾಹೇಬ್ರು ಆಗಿದ್ದರೆ, ಸಿದ್ದಾರ್ಥ ಸಣ್ಣ ಸಾಹೇಬ್ರೆ ಆಗಿದ್ದರು. ಮಾವ ಕೃಷ್ಣರ ರಾಜಕೀಯ ವ್ಯವಹಾರ, ಚುನಾವಣೆ, ಜನರ ಕಷ್ಟಸುಖಗಳನ್ನು ವಿಚಾರಿಸಿಕೊಳ್ಳುವ ಹೊಣೆ ಹೊತ್ತು ಹಿಂದಿನಿಂದ ಕೃಷ್ಣರ ಯಶಸ್ಸಿಗೂ ಸಾಕಷ್ಟುಶ್ರಮಿಸಿದ್ದರು. ಕೃಷ್ಣರ ಪರಮ ಆಪ್ತರಾಗಿದ್ದ ಆರ್‌.ಟಿ.ನಾರಾಯಣ ಹಾಗೂ ಸಿದ್ದಾರ್ಥ ಜೋಡಿ ಕೃಷ್ಣರ ಕೈಗಳನ್ನು ಬಲಪಡಿಸಿತ್ತು. ಈಗ ಇಬ್ಬರೂ ಕಣ್ಮರೆಯಾಗಿರುವುದು ಕೃಷ್ಣರನ್ನು ಮತ್ತಷ್ಟುಏಕಾಂಗಿಯಾಗುವಂತೆ ಮಾಡಿದೆ.

ಸಿದ್ಧಾರ್ಥ ಬಳಿಯೇ ಸಮಸ್ಯೆ ಹೇಳಿ ಪರಿಹರಿಸಿಕೊಳ್ತಿದ್ರು ಜನ:

ಎಸ್‌ .ಎಂ.ಕೃಷ್ಣ ಪ್ರಭಾವವನ್ನು ಬಳಕೆ ಮಾಡಿಕೊಂಡು ಮಂಡ್ಯದಲ್ಲಿ ಸಾಕಷ್ಟುಬೆಳೆಯುವ ಅವಕಾಶವಿದ್ದರೂ ಸಿದ್ಧಾರ್ಥ ಆಗಲಿ, ಪತ್ನಿ ಮಾಳವಿಕಾ ಆಗಲಿ ರಾಜಕೀಯದಲ್ಲಿ ಬೆಳೆಯುವ ಆಸಕ್ತಿ ತೋರಲಿಲ್ಲ. ಮಂಡ್ಯ ರಾಜಕೀಯದ ನಂಟು ಎಂದರೆ ಈ ದಂಪತಿಗಳಿಗೆ ಅಷ್ಟಕಷ್ಟೆ. ಆದರೆ, ಮಂಡ್ಯದ ಕೃಷ್ಣ ಬೆಂಬಲಿಗರು ಅನೇಕರು ಕೃಷ್ಣ ಅವರಿಗಿಂತ, ಸಿದ್ಧಾರ್ಥ ಅವರ ಬಳಿಯೇ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಪರಿಹರಿಸಿಕೊಂಡವರಿದ್ದಾರೆ.

ಎರಡು ಕಾಫಿ ಢೇ ಆರಂಭಿಸಿ, ಉದ್ಯೋಗ ಸೃಷ್ಟಿ:

ಮಂಡ್ಯ ಮಾವ ಕೃಷ್ಣರ ತವರೂರು ಎನ್ನುವ ಕಾರಣಕ್ಕಾಗಿ ಜಿಲ್ಲೆಯಲ್ಲಿ ಎರಡು ಕೆಫೆ ಕಾಫಿ ಡೇ ಆರಂಭಿಸಿ ಇಲ್ಲಿನ ಜನರಿಗೆ ಉದ್ದೋಗ ನೀಡಿದ್ದಾರೆ. ಜನರೊಂದಿಗೆ ಹೆಚ್ಚು ಬೆರೆಯುವ ಸ್ವಭಾವ ಸಿದ್ಧಾರ್ಥ ಅವರಿಗೆ ಇರಲಿಲ್ಲ. ಹೀಗಾಗಿ ಎಸ್‌.ಎಂ.ಕೃಷ್ಣ ಯಾವುದೇ ಅಧಿಕಾರದಲ್ಲಿದ್ದಾಗಲೂ ಬಹಿರಂಗವಾಗಿ ಎಲ್ಲೂ ಕಾಣಿಸಿಕೊಳ್ಳುತ್ತಿರಲಿಲ್ಲ.

ಮಾವ ಸಿಎಂ ಆಗೋವಾಗಲೂ ಶ್ರಮಿಸಿದ್ರು ಸಿದ್ಧಾರ್ಥ:

1999 ರಲ್ಲಿ ಎಸ್‌.ಎಂ. ಕೃಷ್ಣ ಕಾಂಗ್ರೆಸ್‌ನಲ್ಲಿದ್ದಾಗ ರಾಜ್ಯದಾದ್ಯಂತ ಪಾಂಚಜನ್ಯ ಯಾತ್ರೆ ಮಾಡಿ ಕಾಂಗ್ರೆಸನ್ನು ಅಧಿಕಾರಕ್ಕೆ ತಂದರು. ಆ ವೇಳೆ ಸಿದ್ಧಾರ್ಥ ಎಲ್ಲವನ್ನೂ ನಿರ್ವಹಣೆ ಮಾಡಿದರು. ತಮ್ಮದೇ ಆದ ತಂಡದೊಂದಿಗೆ ಕೃಷ್ಣರ ಬೇಕು - ಬೇಡಿಕೆಗಳು, ವಾಹನ ವ್ಯವಸ್ಥೆ, ಊಟ, ತಿಂಡಿ, ಪೆಂಡಾಲು ಸೇರಿದಂತೆ ಪ್ರತಿ ನಗರಗಳಲ್ಲೂ ಸಾರ್ವಜನಿಕ ಸಮಾರಂಭಕ್ಕೆ ಜನರನ್ನೂ ಸೇರಿಸುವ ಜವಾಬ್ದಾರಿಯನ್ನು ತೆಗೆದುಕೊಂಡಿದ್ದರು. ನಂತರ ಆ ವರ್ಷ ನಡೆದ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್‌ 5 ಸ್ಥಾನಗಳಲ್ಲಿ ಗೆದ್ದು ಎಸ್‌.ಎಂ.ಕೃಷ್ಣಅವರನ್ನು ಮುಖ್ಯಮಂತ್ರಿಯಾಗಿ ಮಾಡುವಲ್ಲಿ ಯಶಸ್ವಿಯಾದರು.

'ಧಣಿ'ಯನ್ನು ಕಳೆದುಕೊಂಡ ಚೇತನಹಳ್ಳಿಯಲ್ಲಿ ಕರಾಳ ಮೌನ!

ಸಿದ್ಧಾರ್ಥಅವರ ಆತ್ಮಹತ್ಯೆಯಿಂದಾಗಿ ಇಳಿವಯಸ್ಸಿನಲ್ಲಿರುವ ಎಸ್‌.ಎಂ.ಕೃಷ್ಣ ಅವರಿಗೆ ಸಾಕಷ್ಟುದುಃಖವಾಗಿದೆ. ಮಂಡ್ಯ ಜಿಲ್ಲೆಯ ಎಸ್‌.ಎಂ.ಕೃಷ್ಣ ಅಭಿಮಾನಿಗಳು ಬೆಂಗಳೂರಿಗೆ ತೆರಳಿ ಕೃಷ್ಣ ಅವರಿಗೆ ಸಾಂತ್ವನ ಹೇಳಲು ಹೋಗಿದ್ದಾರೆ. ಮತ್ತೆ ಕೆಲವರು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಚೇತನಹಳ್ಳಿ ಗ್ರಾಮಕ್ಕೆ ತೆರಳಿ ಸಿದ್ದಾರ್ಥ ಅವರ ಅಂತಿಮ ದರ್ಶನ ಪಡೆದು ತವರಿನ ಅಳಿಯನಿಗೆ ವಿದಾಯ ಹೇಳಿದ್ದಾರೆ.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us:
Download App:
  • android
  • ios