ಮದ್ದೂರು [ಸೆ.04]:  ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಚುನಾವಣೆಯನ್ನು ಕೋರಂ ಅಭಾವದಿಂದ ಮುಂದೂಡಲಾಯಿತು. 

ಸಂಘದ ಐವರು ಕಾಂಗ್ರೆಸ್‌ ಸದಸ್ಯರು ಹಾಗೂ ಒಬ್ಬ ಬಿಜೆಪಿ ಸದಸ್ಯರ ಗೈರು ಹಾಜರಿ ಹಿನ್ನಲೆಯಲ್ಲಿ ಚುನಾವಣಾಧಿಕಾರಿಯಾಗಿದ್ದ ಸಹಕಾರ ಸಂಘಗಳ ಅಭಿವೃದ್ಧಿ ಅಧಿಕಾರಿ ಎನ್‌.ಎಲ್ ರವಿ ಅಧ್ಯಕ್ಷರ ಚುನಾವಣೆಯನ್ನು ಸೆ. 8ಕ್ಕೆ ನಿಗಧಿ ಮಾಡಿ ಮುಂದೂಡಿದರು. 

ಈ ಹಿಂದೆ ಅಧ್ಯಕ್ಷರಾಗಿದ್ದ ಸುಜಾತ ಶಿವಣ್ಣ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಿಗಧಿ ಮಾಡಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್‌ ಬೆಂಬಲಿತ ಎಚ್‌.ಸಿ.ಮಹದೇವು ಹಾಗೂ ಜಾವಿದ್‌ ಉಲ್ಲಾಖಾನ್‌ ನಾಮಪತ್ರ ಸಲ್ಲಿಸಿದ್ದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ನಾಮಪತ್ರ ವಾಪಸ್‌ ಪಡೆದ ಕಾಲಕ್ಕೆ ಜಾವಿದ್‌ ಉಲ್ಲಾಖಾನ್‌ ನಾಮಪತ್ರ ವಾಪಸ್‌ ಪಡೆದರು. ಎಚ್‌.ಸಿ.ಮಹದೇವು ಕಣದಲ್ಲಿ ಉಳಿದುಕೊಂಡಿದ್ದರು. ಚುನಾವಣಾ ಸಭೆಗೆ ಡಿಸಿಸಿ ಬ್ಯಾಂಕ್‌ ನಾಮನಿರ್ದೆಶನ ಸದಸ್ಯ ಎಂ. ಹೊನ್ನೇಗೌಡ, ಮಹದೇವು, ಜಾವಿದ್‌ ಉಲ್ಲಾಖಾನ್‌, ಸುಧಾಕರ್‌ ಶಿವಣ್ಣ, ಸಿದ್ದರಾಜು, ರಾಜು ಹಾಜರಾಗಿದ್ದರು. ಕಾಂಗ್ರೆಸ್‌ನ ಶಂಕರಲಿಂಗಯ್ಯ, ಎಂ.ಡಿ. ಪ್ರಕಾಶ್‌, ಎಂ.ಟಿ. ಹರೀಶ್‌, ಸಾವಿತ್ರಮ್ಮ, ಕೆ. ಕಬ್ಬಾಳಯ್ಯ ಹಾಗೂ ಬಿಜೆಪಿಯ ನಾಮನಿರ್ದೇಶನ ಸದಸ್ಯ ಎಂ.ಸಿ. ಸಿದ್ದು ಗೈರು ಹಾಜರಾಗಿದ್ದರು. ಕೋರಂ ಅಭಾವ ಉಂಟಾದ ಕಾರಣ ಚುನಾವಣಾಧಿಕಾರಿ ಎನ್‌.ಎಲ್ ರವಿ ಅಧ್ಯಕ್ಷರ ಚುನಾವಣೆಯನ್ನು ಸೆ. 8ರಂದು ನಿಗದಿ ಮಾಡಿದ್ದಾರೆ.