ಶಿರಾ (ಡಿ01):  ಶಿರಾ ತಾಲೂಕಿನ ಜನತೆಯ ಬಹಳ ವರ್ಷಗಳ ಬೇಡಿಕೆಯಾದ ಮದಲೂರು ಕೆರೆಗೆ ನೀರು ಹರಿಯುವ ಯೋಜನೆ  ಸಾಕಾರಗೊಂಡಿದ್ದು, ಮದಲೂರು ಗ್ರಾಮದಲ್ಲಿ ನಡೆದ ಸಮಾವೇಶದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೊಟ್ಟಮಾತಿನಂತೆ ಮದಲೂರು ಕೆರೆಗೆ ನೀರು ಹರಿಸಲು ಎಲ್ಲಾ ರೀತಿಯ ಕ್ರಮ ಕೈಗೊಂಡು ಯಶಸ್ವಿಗೊಳಿಸಿದ್ದಾರೆ ಎಂದು ಶಾಸಕ ಡಾ.ಸಿ.ಎಂ. ರಾಜೇಶ್‌ ಗೌಡ ಹೇಳಿದರು.

ತಾಲೂಕಿನ ಕಳ್ಳಂಬೆಳ್ಳ ಕೆರೆಯಿಂದ ಮದಲೂರು ಕೆರೆಗೆ ನೀರು ಹರಿಸುವ ಕಾಲುವೆಗೆ ಪೂಜೆ ಸಲ್ಲಿಸಿ ಮಾತನಾಡಿದರು. ಚುನಾವಣೆ ಘೋಷಣೆಗೂ ಮುನ್ನವೇ ತಾಲೂಕಿನ ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್‌ ಗೌಡ, ಎಸ್‌.ಆರ್‌.ಗೌಡ, ಬಿ.ಕೆ.ಮಂಜುನಾಥ್‌ ಸೇರಿದಂತೆ ಅನೇಕ ಮುಖಂಡರು ಮುಖ್ಯಮಂತ್ರಿಗಳಿಗೆ ಮದಲೂರು ಕೆರೆಗೆ ನೀರು ಹರಿಸುವಂತೆ ಮನವಿ ಮಾಡಿದ್ದರು. ಇದಕ್ಕೆ ಕಾರಣಕರ್ತರಾದ ಎಲ್ಲಾ ಬಿಜೆಪಿ ಮುಖಂಡರಿಗೂ ಹಾಗೂ ಪಟ್ಟನಾಯಕನಹಳ್ಳಿ ಶ್ರೀಮಠದ ನಂಜಾವಧೂತ ಸ್ವಾಮೀಜಿಯವರೂ ಸಹ ತಮ್ಮ ಹುಟ್ಟು ಹಬ್ಬವನ್ನು ನೀರಾವರಿ ಹಕ್ಕೊತ್ತಾಯ ಸಮಾವೇಶವನ್ನಾಗಿ ಮಾಡಿ ನೀರು ಹರಿಯಲು ಕಾರಣರಾಗಿದ್ದಾರೆ ಅವರಿಗೂ ಸಹ ನಾವು ಕೃತಜ್ಞರಾಗಿದ್ದೇವೆ ಎಂದರು.

ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ಹಳ್ಳಿಹಕ್ಕಿಗೆ ನಿರಾಸೆ: ಸುಪ್ರೀಂಗೆ ಹೋಗ್ತಾರಾ ವಿಶ್ವನಾಥ್? ...

ಸಂಸದ ಎ.ನಾರಾಯಣ ಸ್ವಾಮಿ ಅವರು ಮಾತನಾಡಿ, ರಾಜ್ಯದ ಮುಖ್ಯಮಂತ್ರಿ ಬಿ.ಎಸ್‌.ಯಡಿಯುರಪ್ಪ ಅವರು ಯಾವುದೇ ವಿಚಾರದಲ್ಲಿ ಮಾತು ಕೊಟ್ಟರೆ ಅದನ್ನು ನಡೆಸಿಕೊಡುತ್ತಾರೆ ಎಂಬುದಕ್ಕೆ ಚುನಾವಣೆ ಫಲಿತಾಂಶ ಬಂದ 20 ದಿನಗಳಲ್ಲಿಯೇ ಮದಲೂರು ಕೆರೆಗೆ ನೀರು ಹರಿಸಿದ್ದಾರೆ. ಕಳೆದ ಉಪಚುನಾವಣೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮದಲೂರು ಗ್ರಾಮದ ಕೆರೆಯ ಪಕ್ಕದಲ್ಲಿಯೇ ಬಹಿರಂಗ ಸಭೆ ಮಾಡಿ ಮದಲೂರು ಕೆರೆಗೆ 6 ತಿಂಗಳಲ್ಲಿ ನೀರು ಹರಿಸುವುದಾಗಿ ಹೇಳಿದ್ದರು. ನಾವೂ ಸಹ ನಿರೀಕ್ಷೆ ಮಾಡದ ರೀತಿಯಲ್ಲಿ ಚುನಾವಣೆ ಫಲಿತಾಂಶ ಬಂದ 20 ದಿನಕ್ಕೆ ನೀರು ಬಿಡಿಸಿದ್ದಾರೆ. ಶಿರಾ ತಾಲೂಕಿನ ರೈತರ ಅನೇಕ ವರ್ಷಗಳ ಹೋರಾಟದ ಫಲ ಇಂದು ಮದಲೂರು ಕೆರೆ ನೀರು ಹರಿಸುವ ಮೂಲಕ ನನಸಾಗಿದೆ ಎಂದರು.

ಮುಂದಿನ ಬಜೆಟ್‌ನಲ್ಲಿ ರೈಲ್ವೆ ಕಾಮಗಾರಿ: ಇತ್ತಿಚೆಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಸಂಸದರ ಸಭೆ ಕರೆದಿದ್ದರು. ಈ ಸಭೆಯಲ್ಲಿ ತುಮಕೂರು-ದಾವಣಗೆರೆ ರೈಲ್ವೆ ಕಾಮಗಾರಿಗೆ ಅನುದಾನ ಬಿಡುಗಡೆ ಬಗ್ಗೆ ಪ್ರಸ್ತಾಪ ಮಾಡಿದ್ದೇನೆ. ಮುಖ್ಯಮಂತ್ರಿಗಳು ಮುಂದಿನ ಬಜೆಟ್‌ನಲ್ಲಿ ಈ ಬಗ್ಗೆ ಘೋಷಣೆ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದರು.

ವಿಧಾನಪರಿಷತ್‌ ಶಾಸಕ ಚಿದಾನಂದ್‌ ಎಂ.ಗೌಡ ಮಾತನಾಡಿ, ಶಿರಾ ತಾಲೂಕಿನಲ್ಲಿ ಉಪಚುನಾವಣೆಯಲ್ಲಿ ಒಂದೇ ಘೋಷಣೆ ಎಂದರೆ ಅದು ಮದಲೂರು ಕೆರೆಗೆ ನೀರು ಹರಿಸುವ ವಿಷಯ ಅದರಂತೆ ತಾಲೂಕಿನ ಮದಲೂರು ಕೆರೆಗೆ ನೀರು ಹರಿದಿದೆ. ಚುನಾವಣಾ ಫಲಿತಾಂಶ ಬಂದ 20 ದಿನಗಳಲ್ಲಿ ನೀರು ಹರಿಯುತ್ತಿದೆ. ಇದಕ್ಕೆ ಕಾರಣಕರ್ತರಾದ ಎಲ್ಲರಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಪಟ್ಟನಾಯಕನಹಳ್ಳಿ ಮಠದ ನಂಜಾವಧೂತ ಸ್ವಾಮೀಜಿ, ರಾಜ್ಯ ನಾರು ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಬಿ.ಕೆ.ಮಂಜುನಾಥ್‌, ನಗರ ಬಿಜೆಪಿ ಅಧ್ಯಕ್ಷ ವಿಜಯರಾಜ್‌, ತಾಲ್ಲೂಕು ಅಧ್ಯಕ್ಷ ರಂಗಸ್ವಾಮಿ, ಮಾಜಿ ಅಧ್ಯಕ್ಷ ಸಿ.ಮಾಲಿಮರಿಯಪ್ಪ, ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ದೇವರಾಜ್‌, ಮಾಜಿ ಜಿ.ಪಂ. ಸದಸ್ಯ ಪ್ರಕಾಶ್‌ ಗೌಡ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಇಂಜಿನಿಯರ್‌ ನಾಗೇಂದ್ರಪ್ಪ, ಲಿಂಗದಹಳ್ಳಿ ಸುಧಾಕರ್‌ ಗೌಡ, ಹೇಮಾವತಿ ನೀರು ಹೋರಾಟ ಸಮಿತಿಯ ರಮೇಶ್‌ ಸೇರಿದಂತೆ ಹಲವರು ಹಾಜರಿದ್ದರು.