ಬೆಂಗಳೂರು[ಜೂ.26]: ಮುತ್ತುರಾಜ ಜಂಕ್ಷನ್‌ ಬಳಿ ನಿರ್ಮಾಣವಾಗುತ್ತಿರುವ ಕೆಳಸೇತುವೆ ಕಾಮಗಾರಿ ಜುಲೈ ಅಂತ್ಯಕ್ಕೆ ಪೂರ್ಣಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ಮೇಯರ್‌ ಗಂಗಾಂಬಿಕೆ ತಿಳಿಸಿದರು.

ನಗರದ ಹೊಸಕೆರೆಹಳ್ಳಿಯ ಮುತ್ತುರಾಜ ಜಂಕ್ಷನ್‌ ಬಳಿ ನಿರ್ಮಾಣವಾಗುತ್ತಿರುವ ಅಂಡರ್‌ ಪಾಸ್‌ ಕಾಮಗಾರಿ ವಿಳಂಬವಾಗುತ್ತಿದ್ದ ಹಿನ್ನೆಲೆ ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆದು, ಜುಲೈ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆ ಜಾಗದಲ್ಲಿ ಕಲ್ಲುಬಂಡೆಯಿದ್ದ ಪರಿಣಾಮ ತೆರವು ಮಾಡುವುದು ತಡವಾಯಿತು. ಕಳೆದ ವರ್ಷದಿಂದ ಕಾಮಗಾರಿ ವೇಗ ಪಡೆದಿದ್ದು, ಜುಲೈ ತಿಂಗಳ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳ್ಳಿದೆ ಎಂದು ತಿಳಿಸಿದರು.

ಮೂರು ವರ್ಷ ವಿಳಂಬ:

ಮುತ್ತುರಾಜ ಜಂಕ್ಷನ್‌ನಲ್ಲಿ ಟ್ರಾಪಿಕ್‌ ಸಮಸ್ಯೆ ನಿವಾರಿಸುವ ಉದ್ದೇಶದಿಂದ ಬಿಬಿಎಂಪಿ ನಗರೋತ್ಥಾನ ಯೋಜನೆಯಡಿ .18.72 ಕೋಟಿ ವೆಚ್ಚದಲ್ಲಿ ಕೆಳಸೇತುವೆ ಕಾಮಗಾರಿ ನಿರ್ಮಿಸಲು 2015ರ ಸೆಪ್ಟಂಬರ್‌ನಲ್ಲಿ ಚಾಲನೆ ನೀಡಿ, 18 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಿತ್ತು. ಆದರೆ, ಮೂರು ವರ್ಷಗಳು ಕಳೆಯುತ್ತಿದ್ದರೂ ಕಾಮಗಾರಿ ಮುಗಿದಿಲ್ಲ. ಪೈಪ್‌ ಲೈನ್‌, ಒಳಚರಂಡಿ, ಮಳೆ ನೀರು ಹರಿಯಲು ಕಾಲುವೆ ನಿರ್ಮಾಣ, ನೆಲದಡಿಯಲ್ಲಿ ವಿದ್ಯುತ್‌ ತಂತಿ ಅಳವಡಿಕೆ ಸೇರಿದಂತೆ ಇನ್ನಿತರ ಕಾಮಗಾರಿ ವಿಳಂಬ ಹಾಗೂ ಕಾಮಗಾರಿ ಸ್ಥಳದಲ್ಲಿ ಕಲ್ಲುಬಂಡೆ ಬಂದ ಕಾರಣ ಕಾಮಗಾರಿ ತಡವಾಯಿತು ಎಂದು ಪಾಲಿಕೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.