ಕಾರವಾರ(ಜೂ.28): ಸರ್ಕಾರಿ ಸ್ವಾಮ್ಯದ ಇಂಟರ್‌ನೆಟ್‌ ಸರ್ಕಾರಿ ಕಚೇರಿಗಳೇ ಬಳಕೆ ಮಾಡದೇ ಖಾಸಗಿ ಇಂಟರ್‌ನೆಟ್‌ಗೆ ಮೊರೆ ಹೋಗುತ್ತಿವೆ. ಸರ್ವೀಸ್ ಸರಿಯಿಲ್ಲದೇ ಅನಿವಾರ್ಯವಾಗಿ ಸರ್ಕಾರಿ ಕಚೇರಿಗಳೇ ಬಿಎಸ್‌ಎನ್‌ಎಲ್‌ ನೆರ್ಟ್‌ವರ್ಕ್ ಬದಲಿಗೆ ಖಾಸಗಿ ಟೆಲಿಕಾಂಗೆ ಬದಲಾಗಿವೆ.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಡಿಯಲ್ಲಿ ಬರುವ 257 ಪಡಿತರ ವಿತರಣಾ ಕೇಂದ್ರಗಳು ಈಗಾಗಲೇ ಖಾಸಗಿ ಇಂಟರ್‌ನೆಟ್‌ ಬಳಕೆ ಮಾಡಿಕೊಳ್ಳುತ್ತಿದ್ದರೆ, ಕಂದಾಯ ಇಲಾಖೆ ಅಡಿಯಲ್ಲಿ ಬರುವ ನಾಡ ಕಚೇರಿಗಳಲ್ಲಿ ಅನಿವಾರ್ಯವಾಗಿ ಬಿಎಸ್‌ಎನ್‌ಎಲ್‌ ಇಂಟರ್‌ನೆಟ್‌ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಆದರೆ, ಇನ್ನು ಕೆಲವೇ ದಿನಗಳಲ್ಲಿ ಕಂದಾಯ ಇಲಾಖೆ ತನ್ನದೇ ಆದ ನೆಟ್‌ವರ್ಕ್ ಹೊಂದಲಿದ್ದು, ಅದಕ್ಕೆ ಎಲ್ಲ ನಾಡಕಚೇರಿಗಳು ಬದಲಾಗಲಿದೆ. ಕೆಸ್ವಾನ್‌ ನೆಟ್‌ವರ್ಕ್ ಶೀಘ್ರದಲ್ಲಿ ನಾಡ ಕಚೇರಿಗೂ ವಿಸ್ತರಣೆ ಆಗಲಿದೆ.

ಪಡಿತರ ಕೇಂದ್ರದಲ್ಲಿ ವೈಫಲ್ಯ:

ಇನ್ನು ಗ್ರಾಪಂಗಳಿಗೆ ನೀಡಿರುವ ಚಾಪೋಲ್‌ ವೈಫೈ ಬಹುತೇಕ ಕಡೆ ಬಂದ್‌ ಇದೆ. ಬಿಎಸ್‌ಎನ್‌ಎಲ್‌ ಇಂಟರ್‌ನೆಟ್‌, ನೆಟ್‌ವರ್ಕ್ ಕಿರಿಕಿರಿಯಿಂದಾಗಿ ಸರ್ಕಾರಿ ಒಳಗೊಂಡು ಖಾಸಗಿ ಗ್ರಾಹಕರು ಕೂಡ ಬೇರೆ ನೆಟ್‌ವರ್ಕ್ಗೆ ಬದಲಾಗುತ್ತಿದ್ದಾರೆ.

ಕ್ವಾರಂಟೈನ್‌ನಲ್ಲಿದ್ದ ಸಿಬ್ಬಂದಿ ಹೊರಹಾಕಿದ ಸಾರಿಗೆ ಸಂಸ್ಥೆ ಅಧಿಕಾರಿಗಳು

ಜಿಲ್ಲೆಯ 257 ಪಡಿತರ ಕೇಂದ್ರಗಳಲ್ಲಿ ಖಾಸಗಿ ಇಂಟರ್‌ನೆಟ್‌ ಬಳಕೆ ಮಾಡಲಾಗುತ್ತಿದ್ದು, ಅದರಲ್ಲಿ ಅಂಕೋಲಾ 26, ಭಟ್ಕಳ 21, ಹಳಿಯಾಳ 34, ಹೊನ್ನಾವರ 25, ಕಾರವಾರ 37, ಕುಮಟಾ 26, ಮುಂಡಗೋಡ 22, ಸಿದ್ದಾಪುರ 17, ಶಿರಸಿ 27, ಜೊಯಿಡಾ 6, ಯಲ್ಲಾಪುರ 16 ಪಡಿತರ ವಿತರಣಾ ಕೇಂದ್ರದಲ್ಲಿ ಬಿಎಸ್‌ಎನ್‌ಎಲ್‌ ಬದಲಾಗಿದೆ. ಪಡಿತರ ಕೇಂದ್ರದಲ್ಲಿ ಬಿಎಸ್‌ಎನ್‌ಎಲ್‌ ನಿರಂತರ ಸೇವೆ ನೀಡಲು ವೈಫಲ್ಯ ಕಂಡಿದೆ.

ಗ್ರಾಪಂ ವೈಫೈ ಬಂದ್‌:

ಉತ್ತರ ಕನ್ನಡದಲ್ಲಿ 231 ಗ್ರಾಪಂಗಳಿದ್ದು, ಅವುಗಳಲ್ಲಿ 146 ಗ್ರಾಪಂಗೆ ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಯಾದ ಸಿಎಸ್‌ಸಿ ವೈಫೈ ಚಾಪೋಲ್‌ ಅಳವಡಿಕೆ ಮಾಡಲಾಗಿದೆ. ಆದರೆ, ಬಹುತೇಕ ಕಡೆ ವೈಫೈ ಬಂದ್‌ ಆಗಿದೆ. ಅಂಕೋಲಾ 4, ಕುಮಟಾ 3, ಭಟ್ಕಳ 6, ಶಿರಸಿ 13, ಸಿದ್ದಾಪುರ 14, ಮುಂಡಗೋಡ 3 ಕಡೆ ಸ್ತಬ್ಧಗೊಂಡಿದೆ.

ಪಹಣಿ ಪತ್ರ ಬೇಕಾದರೆ ಇಂಟರ್‌ನೆಟ್‌ ಕೈಕೊಟ್ಟು ಸರ್ವರ್‌ ಸಮಸ್ಯೆಯಾಗಿ ದಿನವಿಡಿ ಕಾಯಬೇಕಾದ ಪರಿಸ್ಥಿತಿಯಿದೆ. ಬಿಎಸ್‌ಎನ್‌ಎಲ್‌ ಟವರ್‌ಗಳಲ್ಲಿ ಈಗಾಗಲೇ ಖಾಸಗಿ ನೆಟ್‌ವರ್ಕ್ ಅಳವಡಿಕೆ ಮಾಡಲಾಗಿದೆ. ಬಿಎಸ್‌ಎನ್‌ಎಲ್‌ ಟವರ್‌ ಬಳಸಿಕೊಂಡು ಖಾಸಗಿ ಟೆಲಿಕಾಂ ಕಂಪನಿಗಳು ಉತ್ತಮ ಸೇವೆ ನೀಡಿ ಲಾಭ ತೆಗೆದುಕೊಳ್ಳುತ್ತಿವೆ. ಆದರೆ, ಬಿಎಸ್‌ಎನ್‌ಎಲ್‌ ಎಲ್ಲ ಇದ್ದೂ ಇಲ್ಲದಂತೆ ಆಗಿದೆ.

ಗಡುವು ನೀಡಿದ ಸಂಸದ

ಸಂಸದ ಅನಂತಕುಮಾರ ಹೆಗಡೆ ಕಳೆದ ಕೆಲವು ದಿನಗಳ ಹಿಂದೆ ಬಿಎಸ್‌ಎನ್‌ಎಲ್‌ ಅಧಿಕಾರಿಗಳ ಸಭೆ ನಡೆಸಿದ್ದು, ಜು. 15ರೊಳಗೆ ಎಲ್ಲ ಸಮಸ್ಯೆ ಬಗೆ ಹರಿಸುವಂತೆ ಗಡುವು ನೀಡಿದ್ದಾರೆ. ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡು ಬಿಸಿ ಮುಟ್ಟಿಸಿದ್ದು, ಇನ್ನಾದರೂ ಎಚ್ಚೆತ್ತುಕೊಳ್ಳುತ್ತಾರಾ ಎಂದು ನೋಡಬೇಕಿದೆ.