ಬೆಂಗಳೂರು [ಸೆ.24]: ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ ರಾಜಕೀಯ ಮುಖಂಡ ಪ್ರಭಾಕರ್‌ರೆಡ್ಡಿ ಅವರ ಹತ್ಯೆಗೆ ಪ್ರೇಯಸಿಯೇ ಯತ್ನಿಸಿರುವ ಘಟ ನೆ ನಡೆದಿದ್ದು, ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಸಂಬಂಧ ಆರೋಪಿತೆ ಪ್ರೇಯಸಿ ಆರ್.ಆರ್.ನಗರ ನಿವಾಸಿ ಪವಿತ್ರಾ ಎಂಬುವವರು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರಭಾಕರ ರೆಡ್ಡಿ ಮತ್ತು ಪವಿತ್ರಾ ಕೆಲ ವರ್ಷಗಳ ಹಿಂದೆ ಲಿವಿಂಗ್ ಟುಗೆದರ್ ನಲ್ಲಿದ್ದು, ಮೂರು ವರ್ಷಗಳಿಂದ ದೂರ ಇದ್ದರು. ಆರು ತಿಂಗಳ ಹಿಂದೆ ಪ್ರಭಾಕರ್ ರೆಡ್ಡಿಯನ್ನು ಸಂಪರ್ಕಿಸಿದ್ದ ಮಹಿಳೆ ಆಸ್ತಿಯನ್ನು ತನ್ನ ಹೆಸರಿಗೆ ವರ್ಗಾಯಿಸುವಂತೆ ಒತ್ತಾಯಿಸಿದ್ದರು. ಇದಕ್ಕೆ ರೆಡ್ಡಿ ಒಪ್ಪಿರಲಿಲ್ಲ. ಇದೇ ವಿಚಾರದ ಬಗ್ಗೆ ಚರ್ಚೆ ನಡೆಸಲು ಶುಕ್ರವಾರ ಪವಿತ್ರಾ ಬಂದಿದ್ದಾಗಲೇ ಕೊಲೆ ಯತ್ನ ನಡೆದಿದೆ ಎಂದು ದೂರು ದಾಖಲಾಗಿದೆ.

ಶುಕ್ರವಾರ ಇಬ್ಬರಿಗೂ ರೆಡ್ಡಿ ಅವರ ಕಾರಿನಲ್ಲೇ ಜಗಳ ನಡೆದಿದೆ. ಕಾರು ನೈಸ್ ರಸ್ತೆ ಮೂಲಕ ಎಲೆಕ್ಟ್ರಾನಿಕ್ ಸಿಟಿ ಕಡೆಗೆ ಹೋಗುತ್ತಿದ್ದಾಗ ಟೋಲ್‌ನಿಂದ 500 ಮೀಟರ್ ಅಂತರದಲ್ಲಿದ್ದಾಗ ರೆಡ್ಡಿ ಹಾಕಿಕೊಂಡಿದ್ದ ಸೀಟ್ ಬೆಲ್ಟ್‌ಅನ್ನು ಅವರ ಕುತ್ತಿಗಿಗೆ ಬಿಗಿದು ಕೊಲೆ ಯತ್ನ ನಡೆದಿದೆ. ಬೆಲ್ಟ್‌ನಿಂದ ಬಿಡಿಸಿಕೊಂಡ ರೆಡ್ಡಿ ಅವರು ಕಾರು ನಿಲ್ಲಿಸಿ ತಕ್ಷಣ ಕೆಳಗಿಳಿದಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಪವಿತ್ರಾ ಕೂಡ ಕಾರಿನಿಂದ ಇಳಿದು ಸ್ಟೀಲ್ ಬಾಟಲ್‌ನಿಂದ ತಲೆಯ ಹಿಂಭಾಗಕ್ಕೆ ಮತ್ತು ಕಿವಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆಗೆ ಒಳಗಾದ ರೆಡ್ಡಿ ಕೂಗಾಡುತ್ತಿದ್ದಂತೆ ರಸ್ತೆಯಲ್ಲಿ ಹೋಗುತ್ತಿದ್ದವರೆಲ್ಲ ಹತ್ತಿರಕ್ಕೆ ಧಾವಿಸಿದ್ದರಿಂದ ಪವಿತ್ರಾ ಅಲ್ಲಿಂದ ಓಡಿ ಹೋದರು ಎಂದು ದೂರಿನಲ್ಲಿ ತಿಳಿಸಿದ್ದಾರೆ. 

ಪ್ರಕರಣ ದಾಖಲಿಸಿಕೊಂಡು ತಲೆಮರೆಸಿ ಕೊಂಡಿರುವ ಮಹಿಳೆಯನ್ನು ಬಂಧಿಸಿ, ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.