ಮುಂದಿನ ಅಧಿವೇಶನದಲ್ಲಿ ಲವ್‌ಜಿಹಾದ್ ಕಾಯ್ದೆ ಜಾರಿ
ಮುಂದಿನ ಅಧಿವೇಶನದಲ್ಲಿ ಲವ್‌ಜಿಹಾದ್ ಕಾಯ್ದೆ ಜಾರಿ | ಯಾಕಾಗಿ ಬಿಎಸ್‌ವೈ ರಾಜಿನಾಮೆ ನೀಡಬೇಕು: ವಿಪಕ್ಷ ನಾಯಕರಿಗೆ ಕಟೀಲ್ ತಿರುಗೇಟು
ಶಿವಮೊಗ್ಗ(ಜ.03): ಮುಂದಿನ ಅಧಿವೇಶನದಲ್ಲಿ ಲವ್‌ಜಿಹಾದ್ ಕಾಯ್ದೆ ಜಾರಿಯಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿಶ್ವಾಸ ವ್ಯಕ್ತಪಡಿಸಿದರು. ಇಲ್ಲಿ ನಡೆಯುತ್ತಿರುವ ಬಿಜೆಪಿ ವಿಶೇಷ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಲು ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ.
ಕಳೆದ ಕಾರ್ಯಕಾರಿ ಸಭೆಯಲ್ಲಿ ಗೋಹತ್ಯೆ ನಿಷೇಧ ಮತ್ತು ಲವ್‌ಜಿಹಾದ್ ಕಾಯ್ದೆ ಕುರಿತು ಚರ್ಚೆ ನಡೆದಿತ್ತು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿದ್ದಾರೆ. ಮುಂದಿನ ಅಧಿವೇಶನದಲ್ಲಿ ಲವ್‌ಜಿಹಾದ್ ಕಾಯ್ದೆ ಕೂಡಾ ಜಾರಿಗೆ ಬರಲಿದೆ ಎಂದು ಹೇಳಿದರು.
ವಿಪಕ್ಷ ಮಾನಸಿಕ ಸ್ಥಿಮಿತತೆ ಇಲ್ಲ:
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂದು ಇದೇ ವೇಳೆ ವ್ಯಂಗ್ಯವಾಡಿದ ಅವರು, ‘‘ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್.ಯಡಿಯೂರಪ್ಪ ಅವರು ರಾಜಿನಾಮೆ ನೀಡಲಿ’’ ಎಂಬ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿ, ಯಾಕಾಗಿ ಬಿಎಸ್‌ವೈ ರಾಜೀನಾಮೆ ನೀಡಬೇಕೆಂದು ಪ್ರಶ್ನಿಸಿದರು.
ಕಾಂಗ್ರೆಸ್ ನಾಯಕರಿಗೆ ಎರಡು ನಾಲಿಗೆ: ನಳಿನ್ ಕುಮಾರ್ ಕಿಡಿ
ಗ್ರಾಪಂ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಅಭೂತಪೂರ್ವ ಜಯಗಳಿಸಿದ್ದು, ಮುಂದಿನ ಹತ್ತು ವರ್ಷದಲ್ಲಿ ಕೂಡಾ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂಬುದನ್ನು ಮನಗಂಡಿದ್ದಾರೆ. ಇದರಿಂದ ಭಯಗೊಂಡು ಅತಂತ್ರ ಸ್ಥಿತಿಯಲ್ಲಿ ಹೇಳಿಕೆ ನೀಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.