Fraud Case: ರಸ್ತೆ ಬದಿಯ ನಕಲಿ ಆಯುರ್ವೇದ ವೈದ್ಯನಿಂದ 8 ಲಕ್ಷ ರೂ. ಪಂಗನಾಮ: ಮೋಸದ ಜಾಲ ಹೀಗೂ ಉಂಟಾ?
ನಕಲಿ ಆಯುರ್ವೇದ ವೈದ್ಯನನ್ನು ನಂಬಿಕೊಂಡವರಿಗೆ ಎಂಟು ಲಕ್ಷ ರೂ. ಪಂಗನಾಮ
ರಸ್ತೆ ಬದಿಯ ನಕಲಿ ಆಯುರ್ವೇದ ವೈದ್ಯರಿಂದ ಹುಷಾರಾಗಿರಿ
ಕಾಲು ನೋವಿಗೆ ಚಿಕಿತ್ಸೆ ನೀಡುವುದಾಗಿ ನಂಬಿಸಿ ಮಹಾ ವಂಚನೆ
ಬೆಂಗಳೂರು (ಜ.03): ಮಾನವನ ದೇಹದ ಪ್ರತಿಯೊಂದು ಅಂಗಕ್ಕೂ ವಿಶೇಷ ಚಿಕಿತ್ಸೆ ನೀಡುವಷ್ಟರ ಮಟ್ಟಿಗೆ ವೈದ್ಯಕೀಯ ಕ್ಷೇತ್ರ ದೊಡ್ಡ ಪ್ರಮಾಣದಲ್ಲಿ ಬೆಳೆದುನಿಂತಿದೆ. ಆದರೆ, ರಾಜಸ್ಥಾನದ ನಕಲಿ ಆಯುರ್ವೇದ ವೈದ್ಯನೊಬ್ಬ ಆಯುರ್ವೇದ ಚಿಕಿತ್ಸೆ ನೀಡುವ ನೆಪದಲ್ಲಿ ಬರೋಬ್ಬರಿ 8 ಲಕ್ಷ ರೂ. ಹಣವನ್ನು ದೋಚಿ ಪೊಲೀಸರ ಅತಿಥಿಯಾಗಿದ್ದಾನೆ.
ಆಧುನಿಕ ಮತ್ತು ವೈಜ್ಞಾನಿಕ ಕಾಲದಲ್ಲಿಯೂ ಹಲವು ಜನರು ಮೋಸ ಹೋಗುತ್ತಲೇ ಇದ್ದು, ತಾವು ದುಡಿದ ಹಣವನ್ನು ಕಳೆದುಕೊಳ್ಳುತ್ತಲೇ ಇದ್ದಾರೆ. ಮೋಸ ಹೋಗುವವರು ಇರುವವರೆಗೂ ಮೋಸ ಮಾಡುವವರು ಹಾಗೂ ಮೋಸದ ವ್ಯವಹಾರ ಜೀವಂತವಾಗಿಯೇ ಇರುತ್ತದೆ. ಆದರೆ, ಮೋಸಗಾರರ ಜಾಲಕ್ಕೆ ಸಿಕ್ಕು ಅಮಾಯಕರು ತಾವು ಜೀವನವಿಡೀ ಕಷ್ಟಪಟ್ಟು ದುಡಿದು ಸಂಗ್ರಹಿಸಿಟ್ಟಿದ್ದ ಹಣವನ್ನೆಲ್ಲಾ ಕಳೆದುಕೊಂಡು ಅನುಭವಿಸುವ ನೋವನ್ನು ಪದಗಳಲ್ಲಿ ಹೇಳಲಾಗುವುದಿಲ್ಲ. ಇಂತಹದ್ದೇ ಘಟನ ಬೆಂಗಳೂರಿನ ವಿಲ್ಸನ್ ಗಾರ್ಡನ್‌ನಲ್ಲಿ ನಡೆದಿದೆ. ಇಲ್ಲಿ ನಕಲಿ ವೈದ್ಯನೊಬ್ಬ ಆಯುರ್ವೇದ ಚಿಕಿತ್ಸೆ ನೀಡುವುದಾಗಿ ಅಮಾಯಕ ಕುಟುಂಬದಿಂದ 8 ಲಕ್ಷ ರೂ. ಹಣವನ್ನು ಪೀಕಿದ್ದಾನೆ.
ಐಷಾರಾಮಿ ನಕಲಿ ವೈದ್ಯನ ಬಂಧನ: ನಕಲಿ ವೈದ್ಯನ ವೇಷದಲ್ಲಿ ಬಂದು ಆಯುರ್ವೇದ ಚಿಕಿತ್ಸೆ ನೀಡುವುದಾಗಿ ಹೇಳಿ ಹಣವನ್ನು ವಂಚನೆ ಮಾಡಿದ್ದ ಆರೋಪಿಯನ್ನು ವಿಲ್ಸನ್ ಗಾರ್ಡನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇನ್ನು ಬಂಧನಕ್ಕೊಳಗಾದ ನಕಲಿ ವೈದ್ಯ ರಾಜಸ್ಥಾನ ಮೂಲದ ಮೊಹಮ್ಮದ್ ಸಮೀನ್ ಆಗಿದ್ದಾನೆ. ಬಂಧಿತನಿಂದ 4 ಕಾರು, 3 ಬೈಕ್ ಹಾಗೂ 3.50 ಲಕ್ಷ ರೂ. ನಗದು ವಶಕ್ಕೆ ಪಡೆಯಲಾಗಿದೆ. ಬೆಂಗಳೂರಿನಲ್ಲಿ ಚಿಕಿತ್ಸೆ ಆಯುರ್ವೇದ ಚಿಕಿತ್ಸೆ ನೀಡುವುದಾಗಿ ಹೇಳಿ ಯಾವುದೇ ಚಿಕಿತ್ಸೆ ನೀಡದೇ ಹಣವನ್ನು ಕಿತ್ತುಕೊಂಡು, ನೆಲಮಂಗಲದ ಬಳಿ ಹೋಗಿ ಟೆಂಟ್‌ನಲ್ಲಿ ನೆಲೆಸಿದ್ದನು.
ನಕಲಿ ಎನ್ಓಸಿ ತಯಾರು, ಲಕ್ಷ ಲಕ್ಷ ಹಣ ಸುರಿದು ಕಾರು ಕೊಂಡವರಿಗೆ ಪಂಗನಾಮ
ಪಂಗನಾಮ ಹಾಕುವುದೇ ಕಾಯಕ: ಬೆಂಗಳೂರಿನ ವಿಲ್ಸನ್ ಗಾರ್ಡನ್‌ನ ನಿವಾಸಿ ಪಂಕಜ್ ಎಂಬುವವರ ತಾಯಿ ಕಾಲಿನ ನೋವಿನಿಂದ ಬಳಲುತ್ತಿದ್ದರು. ಈ ವೇಳೆ ಕೆಲವು ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದರೂ ನೋವು ವಾಸಿ ಆಗಿರಲಿಲ್ಲ. ಮೂಳೆ ಸವೆತದಿಂದ ಆಗಿರುವ ನೋವಿಗೆ ತಾಯಿ ಆಯುರ್ವೇದ ಚಿಕಿತ್ಸೆ ಕೊಡಿಸುವಂತೆ ಕೇಳಿದ್ದಾರೆ. ಆಗ ಮಗ ಪಂಕಜ್ ಶೆಡ್ ಹಾಕಿಕೊಂಡು ನೋವಿಗೆ ಪರಿಹಾರ ನೀಡುವುದಾಗಿ ಹೇಳಿಕೊಂಡಿದ್ದ ವೈದ್ಯನನ್ನು ನಂಬಿಕೊಂಡು ಕಾಲು ನೋವಿನ ಚಿಕಿತ್ಸೆಗೆ ಕರೆದುಕೊಂಡು ಬಂದಿದ್ದಾರೆ.
ಒಂದು ಹನಿ ಕೀವು ತೆಗೆಯಲು 4 ಸಾವಿರ ರೂ.: ಇನ್ನು ಅಮಾಯಕ ಪಂಕಜ್ ಅವರ ಮನೆಗೆ ಬಂದ ತಾಯಿಯ ಕಾಲನ್ನು ಪರಿಶೀಲಿಸಿದ ನಕಲಿ ವೈದ್ಯ ಮೊಹಮ್ಮದ್ ಸಮೀನ್ ಕಾಲಿನಲ್ಲಿ ಕೀವು ತುಂಬಿಕೊಂಡಿದೆ ಅದನ್ನ ಚಿಕಿತ್ಸೆ ನೀಡಿ ಸರಿ ಮಾಡ್ತಿನಿ ಎಂದು ನಂಬಿಕೆ ಹುಟ್ಟಿಸಿದ್ದಾನೆ. ನಂತರ ಒಂದು ಹನಿ (drop) ಕಾಲಿನೊಳಗಿನ ಕೀವನ್ನು ಹೊರಗೆ ತೆಗೆಯಲು 4 ಸಾವಿರ ರೂ.ಗಳಂತೆ ನೀಡುವಂತೆ ಕೇಳಿದ್ದಾನೆ. ನಂತರ, ಚಿಕಿತ್ಸೆ ಆರಂಭಿಸಿ ಗಾಯದ ಸ್ಥಳಕ್ಕೆ ನೋವು ನಿವಾರಕ ಎಣ್ಣೆಯನ್ನು ಹಚ್ಚಿ ಮಸಾಜ್ ಮಾಡಿ ತಾತ್ಕಾಲಿಕ ಉಪಶಮನ ನೀಡಿ ಬರೋಬ್ಬರಿ 8 ಲಕ್ಷ ರೂ. ಹಣವನ್ನು ಪೀಕಿ ಅಲ್ಲಿಂದ ಜಾಗ ಖಾಲಿ ಮಾಡಿದ್ದಾನೆ. ಆದರೆ, ಅಸಲಿಗೆ ಯಾವುದೇ ಚಿಕಿತ್ಸೆ ನೀಡದೇ ಹಣ ಪಡೆದು ಎಸ್ಕೇಪ್ ಆಗಿದ್ದನು.
Railway Job Scam: ರೈಲ್ವೇಯಲ್ಲಿ ಕೆಲಸ ಕೊಡಿಸುವುದಾಗಿ 28 ನಿರುದ್ಯೋಗಿ ಯುವಕರಿಗೆ ವಂಚನೆ, 2.5 ಕೋಟಿ ರೂ ಪಂಗನಾಮ!
ಮತ್ತೆ ಮೋಸದ ಜಾಲ ಬೀಸಿದ್ದ ಆರೋಪಿ: ಎಲ್ಲ ಮೋಸಗಾರರು ಬಳಸುವ ಕುತಂತ್ರದಂತೆಯೇ ಬೆಂಗಳೂರಿನಲ್ಲಿ ೮ ಲಕ್ಷ ರೂ. ಹಣ ವಸೂಲಿ ಮಾಡಿದ್ದ ಆರೋಪಿ, ಆ ಸ್ಥಳವನ್ನು ಖಾಲಿ ಮಾಡಿಕೊಂಡು ನೆಲಮಂಗಲದ ಬಳಿ ರಸ್ತೆಯ ಪಕ್ಕದಲ್ಲಿ ಶೆಡ್ ಹಾಕಿಕೊಂಡಿದ್ದನು. ಅಲ್ಲಿಯೂ ಕೂಡ ದೇಹದ ಎಲ್ಲ ನೋವುಗಳಿಗೆ ಆಯುರ್ವೇದ ಚಿಕಿತ್ಸೆ ನೀಡುವುದಾಗಿ ಶೆಡ್ ಹಾಕಿಕೊಂಡು ಮತ್ತೊಂದು ವಂಚನೆಗೆ ಜಾಲವನ್ನು ಸಿದ್ಧತೆ ಮಾಡಿಕೊಂಡಿದ್ದನು. ಇನ್ನು ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ದಾಖಲಾಗಿದ್ದ ಪಂಕಜ್ ಅವರ ದೂರಿನ ಅನ್ವಯ ಕಾರ್ಯಾಚರಣೆ ಮಾಡಿದ ಪೊಲೀಸರು ನಕಲಿ ಆಯುರ್ವೇದ ವೈದ್ಯ ಮೊಹಮ್ಮದ್ ಸಮೀನ್‌ನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.