Haveri Family Seeks Euthanasia: 5 ಲಕ್ಷ ರೂಪಾಯಿ ಪರಿಹಾರ ಬೇಕೆಂದರೆ ಅಧಿಕಾರಿಗಳಿಗೆ 50,000 ರೂಪಾಯಿ ಲಂಚ ಕೊಡಲೇಬೇಕೆಂಬ ಆರೋಪ ಈಗ ಕೇಳಿಬಂದಿದೆ  

ವರದಿ: ಪವನ್ ಕುಮಾರ್ , ಏಷ್ಯಾನೆಟ್ ಸುವರ್ಣ ನ್ಯೂಸ್, ಹಾವೇರಿ

ಹಾವೇರಿ (ನ. 07): ಹಾವೇರಿ ಜಿಲ್ಲೆಯಲ್ಲಿ ಭಾರೀ ಮಳೆಗೆ ಮನೆ ಕಳೆದುಕೊಂಡ ಬಡವರ ಗೋಳು ಕೇಳೋರಿಲ್ಲದಂತಾಗಿದೆ. ಮಳೆಯಿಂದ ಮನೆಗಳು ಕುಸಿದು ಬಿದ್ದರೆ 5 ಲಕ್ಷ ಪರಿಹಾರ ಸರ್ಕಾರ ಘೋಷಣೆ ಮಾಡಿದ್ದೇ ತಡ ಕೆಲ ಅಧಿಕಾರಿಗಳು ಹಾಗೂ ಗ್ರಾಮ‌ ಪಂಚಾಯಿತಿ ಸದಸ್ಯರು ಅದನ್ನೇ ದಂಧೆ ಮಾಡಿಕೊಂಡಿದ್ದಾರೆ. 5 ಲಕ್ಷ ರೂಪಾಯಿ ಪರಿಹಾರ ಬೇಕೆಂದರೆ 50,000 ರೂಪಾಯಿ ಲಂಚ ಕೊಡಲೇಬೇಕೆಂಬ ಆರೋಪ ಈಗ ಕೇಳಿಬಂದಿದೆ. ಇಲ್ಲದಿದ್ದರೆ ಎಂಥಾ ಬಡವರಿದ್ದರೂ ಕರುಣೆ ಇಲ್ಲದೆ ಸಿ (C) ಕೆಟಗರಿ ಹಾಕಿ ಪಿಡಿಒಗಳು ಹಾಗೂ ಇಂಜನಿಯರ್‌ಗಳು ಕೈ ತೊಳೆದುಕೊಳ್ತಿದ್ದಾರೆ ಎನ್ನಲಾಗಿದೆ. ಮನೆ ಹಾನಿಯಾದ ಕುರಿತು ವರದಿ ನೀಡುವಾಗ ಕೆಟಗರಿ ನಿಗದಿ ಮಾಡುವಲ್ಲಿ ಸಾಕಷ್ಟು ಗೋಲ್ ಮಾಲ್ ನಡೆಯುತ್ತಲೇ ಇದೆ. ಇದರಿಂದ ಬಡವರು ಬೇಸತ್ತಿದ್ದಾರೆ. ಹೀಗಾಗಿ ಇಲ್ಲೊಂದು ಕುಟುಂಬ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ರಾಷ್ಟ್ರಪತಿಗಳಿಗೆ ದಯಾಮರಣ ಕೋರಿ ಮನವಿ ಮಾಡಿದೆ. 

ದಯಾಮರಣ ಕೋರಿ ಅರ್ಜಿ: ಹಾವೇರಿ ತಾಲೂಕು ಹೊಸಳ್ಳಿ ಗ್ರಾಮದ ಬಡ ಕುಟುಂಬ ಪಡಬಾರದ ಪಾಡು ಪಡುತ್ತಿದೆ. ಮನೆ ಪರಿಹಾರ ನೀಡುವಲ್ಲಿ ಅನ್ಯಾಯವಾದ ಕಾರಣ ರಾಷ್ಟ್ರಪತಿಗಳಿಗೆ ದಯಾಮರಣ ಕೋರಿ ಅರ್ಜಿ ಸಲ್ಲಿಸಲು ಮುಂದಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯದ ನಡೆಗೆ ಬೇಸತ್ತು ಹೋದ ಕುಟುಂಬ ದಯಾಮರಣ ನೀಡಿ ಎಂದು‌ ಮನವಿ ಮಾಡಿದೆ. ಜಿಲ್ಲಾಧಿಕಾರಿಗಳ ಕಚೇರಿಗೆ ಬಂದ ನೊಂದ ತಾಯಿ- ಮಗನ‌ ಗೋಳು ಕೇಳೋರಿಲ್ಲದಂತಾಗಿದೆ. 

ಹಾವೇರಿ ತಾಲೂಕು ಹೊಸಳ್ಳಿ ಗ್ರಾಮದ ಶಾಂತವ್ವ ಹಾಗೂ ಪುತ್ರ ಪ್ರಕಾಶ್ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ದಯಾಮರಣ ಕೋರಿ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ. ಸಂಪೂರ್ಣ ಮನೆ ಬಿದ್ದರೂ ಸಿ ಕೆಟಗರಿ ಹಾಕಿ ಅನ್ಯಾಯ ಮಾಡಿದ್ದಾರೆ. 50,000 ರೂಪಾಯಿಯಲ್ಲಿ ಮನೆ ಹೇಗೆ ನಿರ್ಮಿಸಿಕೊಳ್ಳೋದು ಎಂದು ಪ್ರಕಾಶ್ ಅಳಲು ತೋಡಿಕೊಂಡಿದ್ದಾರೆ.

ಪರಿಹಾರದಲ್ಲಿ ತಾರತಮ್ಯ?:  ಗ್ರಾಮ ಪಂಚಾಯತಿ, ತಹಶಿಲ್ದಾರರ ಕಚೇರಿ ಅಲೆದು ಅಲೆದು ಸಾಕಾಗಿದೆ. ನಮ್ಮನ್ಯಾರೂ ಕೇರ್ ಮಾಡುತ್ತಿಲ್ಲ. ಹೀಗಾಗಿ ಮನೆ ಕಟ್ಟಲು ಪರಿಹಾರ ಹಾಕಿಸಿ ಕೊಡಿ ಇಲ್ಲದಿದ್ದರೆ ದಯಾಮರಣಕ್ಕೆ ಅವಕಾಶಕೊಡಿ. ನಮಗೆ ಅನ್ಯಾಯ ಆಗಿದೆ , ಪರಿಹಾರ ಹಾಕಿಕೊಡುವಲ್ಲಿ ಅಧಿಕಾರಿಗಳು ತಾರತಮ್ಯ ಮಾಡಿದ್ದಾರೆ. ಇದರಿಂದ ಬೇಸತ್ತು ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದೇವೆ ಎಂದು ಪ್ರಕಾಶ್‌ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಚಿಕ್ಕಮಗಳೂರು: ದಯಾಮರಣಕ್ಕೆ ಪ್ರಧಾನಿಗೆ ಮನವಿ ಪ್ರಕರಣ, ಬಿಲ್ ಪಾವತಿ ಮಾಡಿಸಲು ಕ್ರಮ, ಸಿಇಓ

ಬಿ‌ಪಿಎಡ್ ವಿಧ್ಯಾಭ್ಯಾಸ ಮುಗಿಸಿ ಕೆಲಸ ಸಿಗದೇ ಕುಟುಂಬದ ನಿರ್ವಹಣೆಗೆ ಪ್ರಕಾಶ್ ಕೂಲಿ ಮಾಡಿಕೊಂಡಿದ್ದಾರೆ. ತಾಯಿ ಶಾಂತವ್ವ ಕೂಡಾ ಕೂಲಿ ನಾಲಿ ಮಾಡಿ ಜೀವನ ಸಾಗಿಸ್ತಿದ್ದಾರೆ. ಮನೆ ಕಟ್ಟಿಕೊಂಡರೆ ದುಡಿಯೋಕೆ ಅನುಕೂಲ‌ ಆಗಲಿದೆ. ಕೆಲವರಿಗೆ ಮನೆಯ ಒಂದು ಸಣ್ಣ ಗೋಡೆ ಬಿದ್ದರೂ A ಕೆಟಗರಿ ಮಾಡಿ 5 ಲಕ್ಷ ರೂಪಾಯಿ ಪರಿಹಾರಕ್ಕೆ ಆಯ್ಕೆ ಮಾಡಿದ್ದಾರೆ. 

ಆದರೆ ನಮ್ಮ ಮನೆ ಸಂಪೂರ್ಣ ಬಿದ್ದರೂ C ಕೆಟಗರಿ ಹಾಕಿ ದ್ರೋಹ ಮಾಡಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಕೊನೆಗೆ ಈ ವಿಷಯ ಜಿಲ್ಲಾಧಿಕಾರಿಗಳ ಗಮನಕ್ಕೂ ಬಂದು ಆದ ತಪ್ಪು ಸರಿ ಪಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ನೊಂದ ಬಡ ಕುಟುಂಬಕ್ಕೆ ಇನ್ನಾದರೂ ಪರಿಹಾರ ಸಿಗಬೇಕಿದೆ.