ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ಮುಂಜಾನೆ ಬಾಡಿಗೆಗಾಗಿ ಕಾಯುತ್ತಿದ್ದ 26 ವರ್ಷದ ಕಾರು ಚಾಲಕನ ಮೇಲೆ ಗ್ಯಾಸ್ ಲಾರಿ ಹರಿದು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾನೆ. ಇತ್ತೀಚೆಗಷ್ಟೇ ಸಾಲ ಮಾಡಿ ಕಾರು ಖರೀದಿಸಿದ್ದ ಈತ, ಕುಟುಂಬಕ್ಕೆ ಏಕೈಕ ಆಧಾರವಾಗಿದ್ದನು.
ಕೊಡಗು: ಹೊಟ್ಟೆಪಾಡಿಗಾಗಿ ಮುಂಜಾನೆ ಐದು ಗಂಟೆಗೆ ಕಾರಿನ ಬಾಡಿಗೆಗಾಗಿ ಬಂದಿದ್ದ ಕಾರು ಚಾಲಕ ಲಾರಿ ಅಪಘಾತದಲ್ಲಿ ಸ್ಥಳದಲ್ಲಿಯೇ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ನಡೆದಿದೆ. ಮಡಿಕೇರಿಯ ಗಣಪತಿ ಬೀದಿಯ ನಿವಾಸಿ ನಜೀರ್ ಮತ್ತು ಶಾಹಿನ್ ಅವರ ಏಕೈಕ ಪುತ್ರ 26 ವರ್ಷದ ಶಾಹಿಲ್ ದುರಂತ ಅಂತ್ಯ ಕಂಡ ಯುವಕ.
ತಲೆ ಮೇಲೆ ಹರಿದ ಲಾರಿ
ತಂದೆ ಇಲ್ಲದೆ ಇಡೀ ಮನೆಗೆ ಈತನೇ ಆಶ್ರಯವಾಗಿದ್ದ ಇತ್ತೀಚೆಗೆ ಸಾಲ ಮಾಡಿ ಕಾರು ಕೊಂಡಿದ್ದ. ಅದರ ಸಾಲ ತೀರಿಸುವುದಕ್ಕಾಗಿಯೇ ಶಾಹಿಲ್ ಮುಂಜಾನೆ ನಾಲ್ಕುವರೆಗೆ ಪ್ರವಾಸಿಗರನ್ನು ಪಿಕಪ್ ಮಾಡಲು ಮಡಿಕೇರಿ ನಗರದ ಜನರಲ್ ತಿಮ್ಮಯ್ಯ ವೃತ್ತದ ಬಳಿ ಮೈಸೂರು ರಸ್ತೆಯಲ್ಲಿ ಇರುವ ಬಸ್ ನಿಲ್ದಾಣದ ಬಳಿ ನಿಂತಿದ್ದ. ಈ ವೇಳೆ ಮಂಗಳೂರು ಕಡೆಯಿಂದ ಬಂದ ಗ್ಯಾಸ್ ಸಿಲಿಂಡರ್ ತುಂಬಿದ್ದ ಲಾರಿ ಯುವಕನ ಮೇಲೆ ಹರಿದಿದೆ. ತಲೆ ಮೇಲೆ ಲಾರಿ ಹರಿದಿದ್ದರಿಂದ ಯುವಕ ಶಾಹಿಲ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಮಡಿಕೇರಿ ಡಿವೈಎಸ್ಪಿ ಸೂರಜ್, ವೃತ್ತ ನಿರೀಕ್ಷಕ ಚಂದ್ರಶೇಖರ್ ಸ್ಥಳಕ್ಕೆ ಆಗಮಿಸಿ ಕೂಡಲೇ ಮೃತದೇಹವನ್ನು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದ್ದಾರೆ. ಮಡಿಕೇರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಲಾರಿ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ.
ಮದುವೆ ಮಾಡಲು ಹೆಣ್ಣು ಹುಡುಕುತ್ತಿದ್ದೆ
ಈ ಕುರಿತು ಮಾತನಾಡಿರುವ ಶಾಹಿಲ್ ನ ಅತ್ತೆ ಆಶಾ, ತಂದೆ ಇಲ್ಲದಿದ್ದರಿಂದ ನಾನೇ ಆತನಿಗೊಂದು ಮದುವೆ ಮಾಡುವುದಕ್ಕಾಗಿ ಹೆಣ್ಣು ಹುಡುಕುತ್ತಿದ್ದೆ. ಇನ್ನೇನು ಕೆಲವು ತಿಂಗಳಲ್ಲಿ ವಿವಾಹಿತನಾಗಿ ಸುಖ ಸಂಸಾರ ನಡೆಸುವವನಿದ್ದ. ಸಾಲ ಮಾಡಿ ಕಾರು ಕೊಂಡಿದ್ದ ಆತ ಅದನ್ನು ತೀರಿಸುವುದಕ್ಕಾಗಿ ಪ್ರವಾಸಿಗರನ್ನು ಪಿಕಪ್ ಮಾಡಲು ನಿತ್ಯ ಮುಂಜಾನೆಯೇ ಬರುತ್ತಿದ್ದ. ಇಂದು ಇಂತಹ ದುರ್ಗತಿ ಬಂದಿದೆ ಎಂದು ಕಣ್ಣೀರಿಟ್ಟಿದ್ದಾರೆ.
ಮಿತಿ ಮೀರಿದ ಬಾಡಿಗೆ ಬೈಕ್‌ಗಳ ಹಾವಳಿ
ವಾಹನ ಮಾಲೀಕರ ಸಂಘದಲ್ಲೂ ಇದ್ದ ಶಾಹಿಲ್ ಒಳ್ಳೆಯ ಹುಡುಗನಾಗಿದ್ದ ದುಡಿಯಬೇಕೆಂಬ ಹಂಬಲದಿಂದ ಮುಂಜಾನೆಯೇ ಬಾಡಿಗೆಗಾಗಿ ಬರುತ್ತಿದ್ದ. ಇತ್ತೀಚೆಗೆ ಬಾಡಿಗೆ ಬೈಕುಗಳ ಹಾವಳಿ ಮಿತಿ ಮೀರಿದ್ದು, ನಾಲ್ಕು ಗಂಟೆಗೆ ಅವುಗಳು ಅಂಗಡಿಗಳು ತೆರೆಯುತ್ತವೆ. ಇದನ್ನು ಓವರ್ ಕಂ ಮಾಡಿ ಬಾಡಿಗೆ ಮಾಡಲೇಬೇಕಾದ ಅನಿವಾಯರ್ತೆ ಇರುವುದರಿಂದ ಕೆಲವರು ನಾಲ್ಕು ಗಂಟೆಗೆ ಬಾಡಿಗೆ ಮಾಡಲು ಬರುತ್ತಾರೆ. ಹೀಗೆ ಬಾಡಿಗೆಗೆ ಬಂದಿರುವಾಗಲೇ ಇಂತಹ ದುರ್ಘಟನೆ ನಡೆದಿದೆ. ಬಾಡಿಗೆ ಬೈಕುಗಳ ಹಾವಳಿಗೆ ಬ್ರೇಕ್ ಹಾಕಿದರೆ ಇಂತಹ ಪರಿಸ್ಥಿತಿ ಕಾರು ಚಾಲಕರು, ಮಾಲೀಕರಿಗೆ ಬರುವುದಿಲ್ಲ. ಮೃತ ಶಾಹಿಲ್ ನ ಕುಟುಂಬಕ್ಕೆ ಸರ್ಕಾರ ಸೂಕ್ತ ಪರಿಹಾರ ಒದಗಿಸಬೇಕಾಗಿದೆ ಎಂದು ಕಾರು ಮಾಲೀಕರು, ಚಾಲಕರ ಸಂಘದ ಮುಖಂಡ ಸಂತೋಷ್ ಕಾರ್ಯಪ್ಪ ಆಗ್ರಹಿಸಿದ್ದಾರೆ. (ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು)


