Asianet Suvarna News Asianet Suvarna News

ಹಣ ಇಲ್ಲದೇ ಚುನಾಚಣೆ ಎದುರಿಸ್ತಾರಂತೆ ಈ ಅಭ್ಯರ್ಥಿ!

ಹಣ ಇಲ್ಲದೆ ಹೊಸ ಚಿಂತನಾ ಕ್ರಮದೊಂದಿಗೆ ಚುನಾವಣೆ ಎದುರಿಸುವೆ: ಜೆಡಿಯು ಅಭ್ಯರ್ಥಿ ಮಹಿಮಾ ಪಟೇಲ್ ಮನದಾಳದ ಮಾತು | ಎಲ್ಲ ರಾಜಕಾರಣಿಗಳಂತೆ ನಾನೂ ಅದೇ ಶೈಲಿಯಲ್ಲಿ ಚುನಾವಣೆ ನಡೆಸಿದರೆ, ನಾನು ಹೂಡಿದ ಬಂಡವಾಳಕ್ಕೆ ಲಾಭ ಆಪೇಕ್ಷಿಸಬೇಕಾಗುತ್ತದೆ. ಆಗ ರಾಜಕಾರಣಿಯಾದವನು ಭ್ರಷ್ಟನಾಗುತ್ತಾನೆ -ಮಹಿಮಾ ಪಟೇಲ್ 

Loksabha By-Election: JDU Candidate Mahima Patel interview with Kannada Prabha
Author
Bengaluru, First Published Oct 25, 2018, 7:21 PM IST

ಶಿವಮೊಗ್ಗ (ಅ. 25):  ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಮತ್ತು ಬಿಜೆಪಿ ಅಭ್ಯರ್ಥಿಗಳ ನಡುವೆ ಭಾರೀ ಪೈಪೋಟಿ ನಡೆಯುತ್ತಿರುವ ಸಂದರ್ಭದಲ್ಲಿ ತಮ್ಮ ವಿಭಿನ್ನ ಚಿಂತನೆ, ಪ್ರಚಾರ ವೈಖರಿಗಳಿಂದ ಜೆಡಿಯು ಅಭ್ಯರ್ಥಿ ಮಹಿಮಾ ಪಟೇಲ್ ಗಮನ ಸೆಳೆಯುತ್ತಿದ್ದಾರೆ.

ಅಬ್ಬರದ ಪ್ರಚಾರವಿಲ್ಲದೆ, ಸಮಾನ ಮನಸ್ಕರನ್ನು ಸೇರಿಸಿಕೊಂಡು ಗುಂಪು ಸಭೆಗಳ ಮೂಲಕ ತಮ್ಮ ಚಿಂತನೆಯನ್ನು ಮತದಾರರಿಗೆ ಮುಟ್ಟಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಲೋಕಸಭಾ ಉಪಚುನಾವಣೆ ಸಂದರ್ಭದಲ್ಲಿ ತಮ್ಮ ಆಲೋಚನೆ, ವಿಚಾರಗಳನ್ನು ಅವರು ‘ಕನ್ನಡಪ್ರಭ’ದೊಂದಿಗೆ ಹಂಚಿಕೊಂಡಿದ್ದಾರೆ.

ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದೀರಾ? ಯಾವ ಉದ್ದೇಶದಿಂದ ಸ್ಪರ್ಧಿಸುತ್ತಿದ್ದೀರಿ?

ಖಂಡಿತವಾಗಿಯೂ ಗಂಭೀರವಾಗಿಯೇ ಚುನಾವಣೆಯನ್ನು ಪರಿಗಣಿಸಿದ್ದೇನೆ. ಆದರೆ ಜನರೂ ಈ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಆದರೆ, ಹಣದ ಥೈಲಿ ಇಟ್ಟುಕೊಂಡು ಚುನಾವಣೆ ಮಾಡುವುದಿಲ್ಲ. ಧನಾತ್ಮಕವಾಗಿ ಯೋಚಿಸುವ, ಈ ದೇಶಕ್ಕೆ, ಸಮಾಜಕ್ಕೆ ಏನು ಬೇಕು ಎಂಬುದನ್ನು ಬಯಸುವ ಮತ್ತು ಆ ದಿಕ್ಕಿನಲ್ಲಿ ಚಿಂತಿಸುವ ಮನಃಸ್ಥಿತಿಯನ್ನು ಜನರಲ್ಲಿ ಜಾಗೃತಗೊಳಿಸುವ ಪ್ರಯತ್ನ ನನ್ನದಾಗಿದೆ. ಎಲ್ಲ ರಾಜಕಾರಣಿಗಳಂತೆ ನಾನೂ ಅದೇ ಶೈಲಿಯಲ್ಲಿ ಚುನಾವಣೆ ನಡೆಸಿದರೆ, ನಾನು ಹೂಡಿದ ಬಂಡವಾಳಕ್ಕೆ ಲಾಭ ಆಪೇಕ್ಷಿಸಬೇಕಾಗುತ್ತದೆ.

ಆಗ ರಾಜಕಾರಣಿಯಾದವನು ಭ್ರಷ್ಟನಾಗುತ್ತಾನೆ. ಆತ ಸುಖ ಕಳೆದುಕೊಳ್ಳುತ್ತಾನೆ. ರಾಜಕಾರಣಿ ಖುಷಿಯಾಗಿ ಇಲ್ಲದಿದ್ದರೆ ಜನರೂ ಖುಷಿಯಾಗಿ ಇರಲು ಸಾಧ್ಯವಿಲ್ಲ. ಆದರೆ, ಇಂದು ಯಾವ ರಾಜಕಾರಣಿ ಕೂಡ ಖುಷಿಯಾಗಿಲ್ಲ ಎಂಬುದನ್ನು ನಾವು ಗಮನಿಸಬೇಕು. ಹೀಗಾಗಿ, ಭಿನ್ನವಾದ ರಾಜಕೀಯ ಚಿಂತನೆಗಳಿಂದ ಹೊಸ ವ್ಯವಸ್ಥೆಯನ್ನು ರೂಪಿಸಲು ಹೊರಟಿದ್ದೇನೆ. ಇದಕ್ಕೆ ಚುನಾವಣೆ ಒಂದು ವೇದಿಕೆ.

ನನಗೆ ಈ ಜಿಲ್ಲೆಯಲ್ಲಿ ಉತ್ತಮ ಸಂಬಂಧವಿದೆ. ದೊಡ್ಡ ಅಭಿಮಾನಿ ಬಳಗ, ಕಾರ್ಯಕರ್ತರಿದ್ದಾರೆ. ಎಲ್ಲರೂ ಜೊತೆಯಾಗಿ ಕೆಲಸ ಮಾಡಲು ತಯಾರಿದ್ದಾರೆ. ತಪ್ಪು ದಾರಿಯಲ್ಲಿ ಹೋಗಿ ಗುರಿ ಮುಟ್ಟಲು ನಾನು ಇಷ್ಟಪಡುವುದಿಲ್ಲ. ಹೀಗಾಗಿ, ಸರಿಯಾದ ದಾರಿಯಲ್ಲಿಯೇ ನಡೆಯುತ್ತೇನೆ. 

ಚುನಾವಣೆಗೆ 8-10 ದಿನಗಳು ಇರುವಾಗ ಇಂತಹ ಚಿಂತನೆಗಳನ್ನು ಇಟ್ಟುಕೊಂಡು 16 ಲಕ್ಷ ಮತದಾರರನ್ನು ತಲುಪಲು ಸಾಧ್ಯವೇ?

ನಿಜ, ತಡವಾಗಿದೆ. 16 ಲಕ್ಷ ಮತದಾರರನ್ನು ನೇರವಾಗಿ ತಲುಪಲು ಸಾಧ್ಯವಿಲ್ಲ. ಸಾಮಾಜಿಕ ಜಾಲತಾಣ, ಮಾಧ್ಯಮಗಳ ಮೂಲಕ ನನ್ನ ಚಿಂತನೆಗಳನ್ನು ತಲುಪಿಸುತ್ತೇನೆ. ಎಲ್ಲ ತಾಲೂಕು ಕೇಂದ್ರಗಳಿಗೆ ಹೋಗಿ, ಸಭೆಗಳನ್ನು ನಡೆಸುತ್ತೇನೆ. ಜನ ನನ್ನನ್ನು ಅರ್ಥ ಮಾಡಿಕೊಳ್ಳುತ್ತಾರೆ. ಒಂದು ಬದಲಾವಣೆ ತರುತ್ತಾರೆ ಎಂಬ ಭಾವನೆ, ನಂಬಿಕೆ ನನ್ನದು. 2004 ರಲ್ಲಿ ಚನ್ನಗಿರಿ ಕ್ಷೇತ್ರದಲ್ಲಿ ಇದೇ ರೀತಿಯಲ್ಲಿ ಹಣ ಖರ್ಚು ಮಾಡದೆ ಚುನಾವಣೆ ನಡೆಸಿದೆ. ಜನ ಒಪ್ಪಿ, ಗೆಲ್ಲಿಸಿದರು.

ನಿಮ್ಮ ತಂದೆ ಜೆ.ಎಚ್.ಪಟೇಲ್ ಮತ್ತು ನಿಮ್ಮನ್ನು ಜನ ಒಂದೇ ರೀತಿ ನೋಡುತ್ತಾರೆಯೇ?

ಸ್ವಲ್ಪ ಮಟ್ಟಿಗೆ ನೋಡುತ್ತಾರೆ. ನಮ್ಮ ತಂದೆಯವರು ರಾಜಕಾರಣ ಮಾಡಿದ ಸಂದರ್ಭಕ್ಕೂ ಈಗಿನ ಸಂದರ್ಭಕ್ಕೂ ಬಹಳ ವ್ಯತ್ಯಾಸವಿದೆ. ನನ್ನ ತಂದೆಯವರ ಬಗ್ಗೆ ಜನ ಅಪಾರವಾದ ಗೌರವ ಇಟ್ಟಿದ್ದರು. ಅವರೂ ಭರವಸೆ, ಆಮಿಷ ಒಡುತ್ತಿರಲಿಲ್ಲ. ಶಾಸಕ ಎಂದರೆ ಚರಂಡಿ, ರಸ್ತೆ ಮಾಡುವುದಲ್ಲ. ಸರಿಯಾದ ಶಾಸನ ರೂಪಿಸುವುದು ಮತ್ತು ಎಲ್ಲ ಕೆಲಸವನ್ನು ಅಧಿಕಾರಿಗಳಿಂದ ಮಾಡಿಸುವುದು. ಅದನ್ನು ತಂದೆಯವರು ಮಾಡುತ್ತಿದ್ದರು. ಹೀಗಾಗಿ, ಈಗಲೂ ಜೆ.ಎಚ್.ಪಟೇಲ್ ಅವರನ್ನು ಸ್ಮರಿಸದೆ ಸದನ ಪೂರ್ಣಗೊಳ್ಳುವುದೇ ಇಲ್ಲ. ಅವರ ಪ್ರಭಾವದಿಂದಾಗಿ ನಾನು ತಪ್ಪು ದಾರಿಯಲ್ಲಿ ಹೆಜ್ಜೆ ಇಡಲು ಸಾಧ್ಯವೇ ಇಲ್ಲ.

ನಿಮ್ಮ ತಂದೆಯ ಕಾಲದ ಬಳಿಕ 2 ದಶಕಗಳು ಸಾಗಿ ಬಂದಿದ್ದೇವೆ. ತಲೆಮಾರು ಬದಲಾಗಿದೆ, ಆಗಿನ ಸಮಾಜವಾದ ಸಿದ್ಧಾಂತವನ್ನೇ ಮುಂದಿಡುತ್ತಿದ್ದೀರಾ?

ಇಲ್ಲ. ಆಗಿನ ಸಮಾಜವಾದಕ್ಕೂ, ಈಗಿನ ಸಮಾಜವಾದಕ್ಕೂ ವ್ಯತ್ಯಾಸವಿದೆ. ಸಮಾಜವಾದಕ್ಕೆ ಹೊಸ ವ್ಯಾಖ್ಯಾನ ನೀಡಬೇಕಾಗಿದೆ. ಸಮಾನ ಆಸ್ತಿ, ಸಮಾನ ಹಣದ ಹಂಚಿಕೆ ಎಂಬೆಲ್ಲ ತತ್ವಗಳು ಈಗಿನ ಸಂದರ್ಭಕ್ಕೆ ಹೊಂದುವುದಿಲ್ಲ. ಸಮಾಜವಾದ ಎನ್ನುವುದನ್ನು ನಾವು ಧನಾತ್ಮಕ ಚಿಂತನೆ ಎನ್ನಬಹುದು.

ಯಾರೂ ದೊಡ್ಡವರಲ್ಲ, ಯಾರೂ ಸಣ್ಣವರಲ್ಲ. ಮೇಲು ಕೀಳು ಎಂಬುದಿಲ್ಲ. ಪ್ರತಿಯೊಬ್ಬನಿಗೂ ಆತ್ಮಸಾಕ್ಷಿ ಜಾಗೃತವಾಗಬೇಕು. ಆತ್ಮಾಭಿಮಾನ ಎಚ್ಚೆತ್ತುಕೊಳ್ಳಬೇಕು. ಈ ರೀತಿಯ ಆಲೋಚನಾ ಕ್ರಮ ಜನರಲ್ಲಿ ಹುಟ್ಟಬೇಕು. ಮಾತಿನ ಮೂಲಕ ಪರಿವರ್ತನೆ ತರಬೇಕು. ಯುವ ಮನಸ್ಸುಗಳ ಪ್ರಜ್ಞೆಯಲ್ಲಿ ಬದಲಾವಣೆ ತರಬೇಕು. ಭವಿಷ್ಯ ನಿರ್ಧರಿಸುವ ಚಿಂತನೆಗಳು ಹುಟ್ಟಬೇಕು.

ಈ ರೀತಿಯ ಚುನಾವಣಾ ಪ್ರಚಾರ, ಚಿಂತನೆಯನ್ನು ನಿಮ್ಮ ಕುಟುಂಬ ಒಪ್ಪುತ್ತಿದೆಯೇ?

ನನ್ನ ಕುಟುಂಬದವರು ಮತ್ತು ಸ್ನೇಹಿತರು ಚುನಾವಣೆಯನ್ನು ಈ ರೀತಿ ಮಾಡಲು ಸಾಧ್ಯವಾ ಎಂದು ಪ್ರಶ್ನಿಸುತ್ತಾರೆ. ಆದರೆ, ನನ್ನ ಚಿಂತನೆಯನ್ನು ಒಪ್ಪುತ್ತಾರೆ. ನನ್ನನ್ನು ತಪ್ಪು ರಾಜಕಾರಣಿ ಎನ್ನುತ್ತಾರೆ. ಜನ ತಪ್ಪು ಮಾಡಿ ನನ್ನನ್ನು ಗೆಲ್ಲಿಸಲಿ ಎಂದು ತಮಾಷೆಯಾಗಿಯೇ ಹೇಳುತ್ತೇನೆ. ಚುನಾವಣೆ ಎಂಬುದೇ ಭ್ರಷ್ಟತನದ ಮೂಲ. ಆ ರೀತಿಯ ಚುನಾವಣೆಯನ್ನು ನಾನು ಹೇಗೆ ನಡೆಸಲಿ? ಈಗಿನ ಚುನಾವಣೆ ಎಂದರೆ ಜನರನ್ನು ಭಿಕಾರಿಗಳು ಎಂದು ಭಾವಿಸಿ ಹಣ ಎಸೆಯುತ್ತಾರೆ.

ನಾನು ಜನರನ್ನು ಆ ರೀತಿ ಭಾವಿಸುವುದಿಲ್ಲ. ದುಡ್ಡಿದ್ದವನೇ ಶ್ರೀಮಂತನಲ್ಲ. ಶ್ರೀಮಂತಿಕೆ ಎಂಬುದು ಎಲ್ಲರಲ್ಲೂ ಇರುತ್ತದೆ, ಅದನ್ನು ಗುರುತಿಸಬೇಕಷ್ಟೆ. ಈಗ ಫಲಿತಾಂಶ ನನ್ನ ಪರವಾಗಿರುತ್ತದೆ ಎಂಬುದು ನನ್ನ ಆಶಾವಾದ. ಈ ದೇಶದಲ್ಲಿ ಎಷ್ಟೋ ಚಮತ್ಕಾರಗಳು ನಡೆದಿವೆ. ಈಗಲೂ ಅಂತಹ ಚಮತ್ಕಾರ ನಡೆಯಬಹುದು. ಒಂದು ಪರಿವರ್ತನೆಯನ್ನು ಜನ ಸಮುದಾಯಲ್ಲಿ ಮೂಡಿಸಿ ಮುಂದಿನ ಸಾರ್ವತ್ರಿಕ ಲೋಕಸಭೆ ಚುನಾವಣೆ ಹೊತ್ತಿಗೆ ಈ ಬದಲಾವಣೆ ಎನ್ನುವುದನ್ನು ಎಲ್ಲೆಡೆ ವ್ಯಾಪಿಸುವಂತೆ ಮಾಡುತ್ತೇನೆ. ಪಾರದರ್ಶಕ, ಸರಳ ಮತ್ತು ಅಧಿಕಾರ ಇಲ್ಲದ ಚುನಾವಣೆ ನನ್ನ ಗುರಿ. 

ನಿಮ್ಮ ಚುನಾವಣಾ ತಂತ್ರಗಾರಿಕೆ ಏನು?

ಜನರು, ಯುವಕರಲ್ಲಿ ಪರಿವರ್ತನೆ ತಂದು, ಆಲೋಚನಾ ಕ್ರಮವನ್ನು ಬದಲಾಯಿಸುವುದು. ಬದಲಾಯಿಸುವುದು ಎಂದರೆ ಅವರಲ್ಲಿಯೇ ಆ ಚಿಂತನೆ ಹುಟ್ಟುವಂತಾಗಬೇಕು. ಚುನಾವಣೆಗೆ ಬೇರೆ ಆಯಾಮ ನೀಡುವುದು. ಸಾವಿರಾರು ವರ್ಷದ ಹಿಂದೆ ಭಯ ಸೃಷ್ಟಿಸಿ ‘ದಂಡ’ದ ಮೂಲಕ ಅಧಿಕಾರ ಹಿಡಿಯುತ್ತಿದ್ದರು. ಕಾಲಾ ನಂತರದಲ್ಲಿ ಜನರಲ್ಲಿ ಸಿಟ್ಟು ರೂಪಿತವಾಗಿದೆ.

ಈ ಸಿಟ್ಟನ್ನು ಬಳಸಿಕೊಂಡು ‘ಬೇಧ’ದ ಮೂಲಕ ಸಮಾಜ ಒಡೆದು ಅಧಿಕಾರ ಸ್ಥಾಪಿಸುತ್ತಿದ್ದಾರೆ. ಇದರ ಬದಲಿಗೆ ನಾನು ಜನರನ್ನು ಸಂತೋಷವಾಗಿರಿಸಿ ‘ಸಾಮ’ ತತ್ವದ ಮೂಲಕ ಅಧಿಕಾರ ಪಡೆಯಲು ಯತ್ನಿಸುತ್ತೇನೆ. ಹೀಗೆ ಅಧಿಕಾರ ಪಡೆದಾಗ ಮಾತ್ರ ನಿಜವಾದ ಅರ್ಥದಲ್ಲಿ ಜನಪರವಾಗಿ ಇರಲು ಸಾಧ್ಯ. 

-ಗೋಪಾಲ್ ಯಡಗೆರೆ

Follow Us:
Download App:
  • android
  • ios