Asianet Suvarna News Asianet Suvarna News

ಆಡಳಿತ ನಡೆಸುವವರಿಗೆ ನಾಲ್ವಡಿ ದಾರಿದೀಪ: ಸಂತೋಷ್‌ ಹೆಗ್ಡೆ

ನಾಲ್ವಡಿ ಕೃಷ್ಣರಾಜ ಒಡೆಯರ್‌ ಆಡಳಿತ ಚರಿತ್ರೆಯನ್ನು ಪಠ್ಯರೂಪದಲ್ಲಿ ಹೊರತಂದು ಆಡಳಿತದಲ್ಲಿರುವ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದಲ್ಲಿರುವ ಎಲ್ಲರಿಗೂ ತಿಳಿವಳಿಕೆ ಮೂಡಿಸಬೇಕು ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಹೇಳಿದರು.

lokayukta retired justice santosh hegde talks about nalvadi krishnaraja wodeyar at mandya gvd
Author
Bangalore, First Published Aug 4, 2022, 7:48 PM IST

ಮಂಡ್ಯ (ಆ.04): ನಾಲ್ವಡಿ ಕೃಷ್ಣರಾಜ ಒಡೆಯರ್‌ ಆಡಳಿತ ಚರಿತ್ರೆಯನ್ನು ಪಠ್ಯರೂಪದಲ್ಲಿ ಹೊರತಂದು ಆಡಳಿತದಲ್ಲಿರುವ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದಲ್ಲಿರುವ ಎಲ್ಲರಿಗೂ ತಿಳಿವಳಿಕೆ ಮೂಡಿಸಬೇಕು ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಹೇಳಿದರು. ಬುಧವಾರ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಕಲಾಮಂದಿರದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಟ್ರಸ್ಟ್‌ ವತಿಯಿಂದ ನಡೆದ ನಾಲ್ವಡಿ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಪ್ರಸ್ತುತ ಆಡಳಿತ ನಡೆಸುತ್ತಿರುವವರಿಗೆ ಆಡಳಿತ ಯಾರಿಗೆ, ಏತಕ್ಕಾಗಿ ಎನ್ನುವ ವಿದ್ಯೆಯನ್ನು ಕೊಡಬೇಕಿದೆ. 

ರಾಜನೀತಿ ಹೇಗಿರಬೇಕು, ಅಭಿವೃದ್ಧಿಯ ಆಲೋಚನೆಗಳು ಹೇಗಿರಬೇಕು, ಜನರ ಕಷ್ಟ-ಕಾರ್ಪಣ್ಯಗಳಿಗೆ ಹೇಗೆ ಸ್ಪಂದಿಸಬೇಕು ಎಂಬ ಅರಿವು, ಜ್ಞಾನವನ್ನು ಮೂಡಿಸಲು ನಾಲ್ವಡಿಯವರ ಆತ್ಮಚರಿತ್ರೆ ನೆರವಾಗಲಿದೆ ಎಂದರು. ಜನರ ಶ್ರೇಯೋಭಿವೃದ್ಧಿಗೆ ತಮ್ಮ ಸ್ವತ್ತನ್ನೇ ಅಡವಿಟ್ಟಮಹಾರಾಜರನ್ನು ಎಲ್ಲಿಯೂ ಕಾಣಲು ಸಾಧ್ಯವಿಲ್ಲ. ಇಂತಹ ಮಾದರಿ ಆಡಳಿತ ನಡೆಸಿದವರ ಚರಿತ್ರೆ ಪಠ್ಯವಾಗಿ ಶಾಲಾ ಮಕ್ಕಳಿಗೆ ತಿಳಿಸಬೇಕು. ಅವರಲ್ಲಿಯೂ ಮಹಾರಾಜರ ಆದರ್ಶಗುಣಗಳನ್ನು ಬಿತ್ತಬೇಕು. ಜೊತೆಗೆ ಅದೇ ಪಠ್ಯ ಆಡಳಿತ ನಡೆಸುವವರಿಗೆ ದಾರಿದೀಪವೂ ಆಡಬೇಕು ಎಂದು ನುಡಿದರು.

ಸೋಷಿಯಲ್ ಮೀಡಿಯಾ ಟ್ರಾಲ್ ನೆನೆದು ಕಣ್ಣೀರು ಹಾಕಿದ ಸಾ.ರಾ.ಮಹೇಶ್

ಇಂದಿನ ಪ್ರಜಾಪ್ರಭುತ್ವದ ಆಡಳಿತ ನಿರಾಸೆ ಮೂಡಿಸಿದೆ. ಈಗಿನವರಿಗೆ ಜನಪರ ಕಾಳಜಿ ಎನ್ನುವುದೇ ಇಲ್ಲ. ಜೈಲಿಗೆ ಹೋಗಿ ಬಂದ ವ್ಯಕ್ತಿಗಳಿಗೆ ಸಲಾಂ ಹೊಡೆಯುವ ಆಡಳಿತ ವ್ಯವಸ್ಥೆಯಲ್ಲಿದ್ದೇವೆ. ಇದು ಪ್ರಜಾಪ್ರಭುತ್ವದ ದುರಂತ. ಆಡಳಿತ ನಡೆಸಲು ಬರುವವರು ಮಹಾರಾಜರ ಆಡಳಿತ ಶೈಲಿಯ ಬಗ್ಗೆ ತಿಳಿದುಕೊಂಡು ಬರಬೇಕು. ತಾನೊಬ್ಬ ಜನಸೇವಕ ಎನ್ನುವುದನ್ನು ಮರೆಯಬಾರದು ಎಂದರು.  ಪ್ರತಿಯೊಬ್ಬರಲ್ಲೂ ತೃಪ್ತಿ, ಮಾನವೀಯತೆ ಇರಬೇಕು. ಆಗ ಸಮಾಜದಲ್ಲಿ ಬದಲಾವಣೆಯನ್ನು ಕಾಣಲು ಸಾಧ್ಯ. ಈ ಬದಲಾವಣೆ ಜನರಿಗಾಗಿ, ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದ ಆಗಬೇಕಿದೆ. 

ತೃಪ್ತಿ, ಮಾನವೀಯತೆ ಗುಣಗಳನ್ನು ರೂಢಿಸಿಕೊಂಡಾಗ ಮಹಾರಾಜರ ಕಾಲದ ಸುವರ್ಣಯುಗವನ್ನು ಮತ್ತೆ ಕಾಣಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.ದಿವ್ಯ ಸಾನ್ನಿಧ್ಯ ವಹಿಸಿದ್ದ ಆದಿ ಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಆಡಳಿತದಲ್ಲಿ ಸುವರ್ಣಯುಗವನ್ನು ತೋರಿಸುವ ಮೂಲಕ ನಾಲ್ವಡಿಯವರು ಜಗತ್ತಿಗೆ ಜ್ಯೋತಿಯಾದರು. ನಾಲ್ವಡಿ ಅವರಲ್ಲಿ ಅಂತಹದೊಂದು ದಿವ್ಯತೆ, ದೂರದೃಷ್ಟಿಬರಲು ಅವರ ತಾಯಿ ಕೆಂಪನಂಜಮ್ಮಣ್ಣಿ ಕಾರಣ. ಒಬ್ಬ ತಾಯಿ ಮನಸ್ಸು ಮಾಡಿದರೆ ಜಗತ್ತಿನಲ್ಲಿ ಇತಿಹಾಸ ಪುರುಷರಾಗಿ ಬೆಳೆಯಬಹುದು ಎನ್ನುವುದಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್‌, ಗಾಂಧೀಜಿ, ಶಿವಾಜಿ, ವಿವೇಕಾನಂದ ಸೇರಿದಂತೆ ಹಲವರು ಸಾಕ್ಷಿಯಾಗಿದ್ದಾರೆ ಎಂದರು.

ಇತಿಹಾಸ ತಜ್ಞ ಧರ್ಮೇಂದ್ರಕುಮಾರ್‌ ಮಾತನಾಡಿ, ನಮಗೆ ಯಾವುದೋ ದೇಶ ಮಾದರಿಯಾಗಬೇಕಿಲ್ಲ. ನಮ್ಮ ಮಹಾರಾಜರೇ ನಮಗೆ ಮಾದರಿಯಾಗಿದ್ದಾರೆ. 1799ರಲ್ಲಿ ಆಂಗ್ಲೋ-ಮೈಸೂರು ಯುದ್ಧವಾದಾಗ ಮಹಾರಾಜರ ಬಳಿ ಒಂದು ಅರಮನೆಯೂ ಇರಲಿಲ್ಲ. ಮುಮ್ಮಡಿ ಕೃಷ್ಣರಾಜ ಒಡೆಯರ್‌ ಅಧಿಕಾರಕ್ಕೆ ಬಂದ ನಂತರದಲ್ಲಿ ಕೇವಲ 100 ವರ್ಷಗಳಲ್ಲಿ ಮೈಸೂರು ರಾಜಮನೆತನ ವಿಶ್ವದ ಏಳನೇ ಶ್ರೀಮಂತ ರಾಜಮನೆತನವಾಗಿತ್ತು ಎಂದು ಪ್ರಶಂಸಿದರು. ಮೈಸೂರು ಯುವರಾಜ ಯದುವೀರ್‌ ಮಾತನಾಡಿ, ಮುಮ್ಮಡಿ ಕೃಷ್ಣರಾಜ ಒಡೆಯರ್‌ ಆಡಳಿತಾವಧಿಯಲ್ಲಿ ಶಿಕ್ಷಣ, ಆರೋಗ್ಯ, ಉದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಬಿತ್ತನೆ ಹಾಕಿದ್ದು, ನಾಲ್ವಡಿ ಕೃಷ್ಣರಾಜ ಒಡೆಯರ್‌ ಕಾಲದಲ್ಲಿ ಸೊಗಸಾಗಿ ಅರಳಿದವು. 

Mysuru: ಗ್ರಾಮ ಪಂಚಾಯಿತಿ ಪೌರಕಾರ್ಮಿಕರಿಗೆ ಅಧಿಕಾರಿಗಳಿಂದ ಕಿರುಕುಳ

ಅದೇ ರೀತಿಯ ಬೀಜವನ್ನು ನಾವಿಂದು ಮಕ್ಕಳ ಮನಸ್ಸಿನಲ್ಲಿ ನೆಟ್ಟು ಬೆಳೆಸಿ ಮಾದರಿ ಮೈಸೂರು ಮಾರ್ಗದಲ್ಲೇ ಹೋದರೆ ಮತ್ತೆ ಸುವರ್ಣಯುಗವನ್ನು ಕಾಣಬಹುದು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಡಾ.ಎಸ್‌.ಸಿ.ಶಂಕರೇಗೌಡ, ಡಾ.ಎಚ್‌.ಎಸ್‌.ರವಿಕುಮಾರ್‌, ಸಿಸ್ಟರ್‌ ಪ್ರಿಂಟೋ ಮ್ಯಾಥ್ಯೂಊ, ಹನಸೂಗೆ ಸೋಮಶೇಖರ್‌, ಪಿ.ಆರ್‌.ಕಾಮಾಕ್ಷಿ, ಜಯಶಂಕರ ಅವರನ್ನು ಸನ್ಮಾನಿಸಲಾಯಿತು. ಅಧ್ಯಕ್ಷತೆಯನ್ನು ಶಾಸಕ ಎಂ.ಶ್ರೀನಿವಾಸ್‌ ವಹಿಸಿದ್ದರು. ನಗರಸಭೆ ಅಧ್ಯಕ್ಷ ಹೆಚ್‌.ಎಸ್‌.ಮಂಜು, ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್‌ ಟ್ರಸ್ಟ್‌ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್‌ ಇದ್ದರು.

Follow Us:
Download App:
  • android
  • ios