ನಾನು ಲೋಕಾಯುಕ್ತ ಬಂದ್ ಮಾಡಿದಿದ್ದರೆ ಇವತ್ತೇ ರಾಜೀನಾಮೆ ಕೊಡುವೆ: ಸಿದ್ದರಾಮಯ್ಯ
ನಾನು ಲೋಕಾಯುಕ್ತ ಬಂದ್ ಮಾಡಿದಿದ್ದರೆ ಇವತ್ತೇ ರಾಜೀನಾಮೆ ಕೊಡುತ್ತೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ.
ಮೈಸೂರು(ಮಾ.6): ನಾನು ಲೋಕಾಯುಕ್ತ ಬಂದ್ ಮಾಡಿದಿದ್ದರೆ ಇವತ್ತೇ ರಾಜೀನಾಮೆ ಕೊಡುತ್ತೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ. ನಾನು ಲೋಕಾಯುಕ್ತ ಬಂದ್ ಮಾಡಿಲ್ಲ. ನಾವು ಭ್ರಷ್ಟಾಚಾರ ನಿಗ್ರಹಕ್ಕೆ ಎಸಿಬಿ ರಚನೆ ಮಾಡಿದ್ದೇ ಅಷ್ಟೇ. ನಾವು ಲೋಕಾಯುಕ್ತದ ಯಾವ ಅಧಿಕಾರ ಕಿತ್ತುಕೊಂಡಿಲ್ಲ. ನಮ್ಮ ಕಾಲದಲ್ಲೂ ಲೋಕಾಯುಕ್ತ ಇದ್ದರು. ಎಲ್ಲಾ ಸತ್ಯ ಗೊತ್ತಿದ್ದರೂ ಬೊಮ್ಮಯಿ ಸುಳ್ಳು ಹೇಳುತ್ತಿದ್ದಾರೆ. ಎಸಿಬಿ ರದ್ದು ಮಾಡುತ್ತೇವೆ ಎಂದು ಬಿಜೆಪಿ ಪ್ರಣಾಳಿಕೆಯಲ್ಲಿ ಹೇಳಿತ್ತು. ಆದರೆ ಎಸಿಬಿ ರದ್ದು ಮಾಡಿದ್ದು ಬಿಜೆಪಿ ಸರ್ಕಾರವಲ್ಲ. ನ್ಯಾಯಾಲಯ ಎಸಿಬಿ ರದ್ದು ಮಾಡಿದ್ದು. ಬಿಜೆಪಿಯವರಿಗೆ ಸುಳ್ಳು ಹೇಳುವುದು ಚಟ. ಸುಳ್ಳೆ ಬಿಜೆಪಿ ಮನೆದೇವ್ರು. ಹೀಗಾಗಿ ಲೋಕಾಯುಕ್ತ ವಿಚಾರದಲ್ಲಿ ಬಿಜೆಪಿಯವ್ರು ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ ಎಂದಿದ್ದಾರೆ.
ಮನಸ್ಸು ಮಾಡಿದ್ರೆ ಮಾಡಾಳು ವಿರುದ್ಧ ಕೇಸ್ ತಪ್ಪಿಸಬಹುದಿತ್ತು: ಪ್ರಲ್ಹಾದ್ ಜೋಶಿ
ಇದರ ಜೊತೆಗೆ ಮಡಾಳ್ ವಿರೂಪಾಕ್ಷಪ್ಪನನ್ನ ಸರ್ಕಾರವೇ ರಕ್ಷಣೆ ಮಾಡುತ್ತಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ. ವಿರೂಪಾಕ್ಷ ಎಲ್ಲಿದ್ದಾನೆ ಎಂಬುದು ಸರ್ಕಾರಕ್ಕೆ ಗೊತ್ತಿದೆ. ಅವನು ಅವನ ಮೆನೆಯಲ್ಲೇ ಓಡಾಡಿಕೊಂಡಿದ್ದಾನೆ. ಅವನನ್ನು ಬಂಧಿಸದೆ ಇವರು ನಾಟಕ ಮಾಡ್ತಿದ್ದಾರೆ. ಲುಕ್ಔಟ್ ನೋಟೀಸ್ ಹೆಸರಿನಲ್ಲಿ ಜನರ ಗಮನ ಬೇರೆಡೆ ಸೆಳೆಯುತ್ತಿದ್ದಾರೆ ಅಷ್ಟೇ. ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಲು ಬಂದಾಗಲೇ ಅವನನ್ನು ಯಾಕೆ ಬಂಧಿಸಲಿಲ್ಲ? ಭ್ರಷ್ಟಾಚಾರದ ಆರೋಪಕ್ಕೆ ಮೀಸ್ಟರ್ ಬೊಮ್ಮಯಿ ಸಾಕ್ಷಿ ಕೇಳುತ್ತಿದ್ರು. ಈಗ ರೆಡ್‌ಹ್ಯಾಂಡಾಗಿ ಸಿಕ್ಕಿಬದ್ದಿದ್ದಾರೆ. ಏನು ಕ್ರಮ ತೆಗೆದುಕೊಂಡಿದ್ದಾರೆ? ಆದರೂ ನಮಗೆ ಮುಜುಗರ ಇಲ್ಲ ಅಂತಿದ್ದಾರೆ. ಇವರಿಗೆ ಮುಜುಗರ ಆಗಿದೆ. ಅಪ್ಪ ಅಧ್ಯಕ್ಷ ಆಗಿದ್ದ ಕಾರಣಕ್ಕೆ ಮಗನಿಗೆ ಲಂಚ ಕೊಡಲು ಬಂದಿದ್ದರು. ಹೀಗಾಗಿ ಅಪ್ಪನೆ ಮೊದಲ ಆರೋಪಿ. ಅವನನ್ನ ಬಂಧಿಸಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಮರ್ಯಾದೆಗೆ ಅಂಜಿದ ಬಿಜೆಪಿ: ಶಾಸಕ ಮಾಡಾಳು ವಿರುಪಾಕ್ಷಪ್ಪ ಪಕ್ಷದಿಂದ ಉಚ್ಛಾಟನೆ..!
ಬಿಜೆಪಿ ನಾಯಕರಿಗೆ ಆರ್ ಧ್ರುವನಾರಾಯಣ್ ತಿರುಗೇಟು:
ಲೋಕಾಯುಕ್ತ ಮುಚ್ಚಿದ ಕಾಂಗ್ರೆಸ್ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ ಎಂಬ ಬಿಜೆಪಿ ನಾಯಕರ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್ ಧ್ರುವನಾರಾಯಣ್ ಮೈಸೂರಿನಲ್ಲಿ ತಿರುಗೇಟು ನೀಡಿದ್ದಾರೆ. ಮುಖ್ಯಮಂತ್ರಿಗಳಿಗೆ ಮಾಹಿತಿ ಕೊರತೆಯಿದೆ. ಇಲ್ಲ ಅವರು ಸುಳ್ಳು ಹೇಳುತ್ತಿದ್ದಾರೆ. ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಲೋಕಾಯುಕ್ತದ ಅಧಿಕಾರ ಮೊಟಕುಗೊಳಿಸಿಲ್ಲ. ಬಿಜೆಪಿ ಶಾಸಕನ ಮನೆಯಲ್ಲಿ ಎಂಟು ಕೋಟಿ ಹಣ ಸಿಕ್ಕಿದೆ. ಇದಕ್ಕಿಂತ ಹೆಚ್ಚಿನ ಪುರಾವೆ ಬೇಕಾಗಿಲ್ಲ. ನೈತಿಕತೆ ಏನಾದರೂ ಇದ್ದರೆ ಕೂಡಲೇ ಸಿಎಂ ರಾಜೀನಾಮೆ ಕೊಡಬೇಕು. ಬಿಜೆಪಿ ಶಾಸಕನ ರಕ್ಷಣೆಗೆ ಸಿಎಂ ಮುಂದಾಗಿದ್ದಾರೆ. ರಾಜ್ಯದಲ್ಲಿ ಇಂಟಲಿಜೆನ್ಸ್ ಇದೆ. ಆದರೂ ಸಿಎಂ ಈ ಬಗ್ಗೆ ಮಾಹಿತಿಯಿಲ್ಲ ಎನ್ನುತ್ತಿದ್ಧಾರೆ ಎಂದು ಕೆಪಿಸಿಸಿ ಧ್ರುವನಾರಾಯಣ್ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ.