ಸುಭಾಶ್ಚಂದ್ರ ಎಸ್‌.ವಾಗ್ಳೆ

ಮಲ್ಪೆ(ಏ.23): ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸಂಕಷ್ಟಕ್ಕೊಳಗಾಗಿದ್ದ ಸುಮಾರು 140ಕ್ಕೂ ಹೆಚ್ಚು ಕುಟುಂಬಗಳಿಗೀಗ ಇಲ್ಲಿನ ಬಾಪುತೋಟದ ನಿವಾಸಿ ಶಾರದಕ್ಕ ಅನ್ನದಾತೆಯಾಗಿದ್ದಾರೆ. ಹಾಗಂತ ಶಾರದಕ್ಕ ಶ್ರೀಮಂತರೇನಲ್ಲ. ಮಲ್ಪೆ ಬಂದರಿನಲ್ಲಿ ಮೀನು ಹೆಕ್ಕಿ, ಮಾರಿ ಜೀವನ ಸಾಗಿಸುವ ಪರಿಶಿಷ್ಟಜಾತಿಯ ಬಡ ಮಹಿಳೆ.

ಲಾಕ್‌ಡೌನ್‌ನಿಂದಾಗಿ ಮಲ್ಪೆ ಬಂದರು ಮೀನುಗಾರಿಕೆ ಇಲ್ಲದೆ ಕಳೆದೊಂದು ತಿಂಗಳಿಂದ ಸಂಪೂರ್ಣ ಬಂದ್‌ ಆಗಿದೆ. ಈ ಬಂದರಿನಲ್ಲಿ ಬೆಳಗ್ಗೆಯಿಂದ ಸಂಜೆವರೆಗೆ ಮೈಮುರಿದು ದುಡಿಯುವ, ಆವತ್ತು ದುಡಿದು ಸಂಪಾದಿಸಿ ಆವತ್ತೇ ಊಟ ಮಾಡುವ ಸಾವಿರಾರು ಮಂದಿ ಇದ್ದಾರೆ. ಅಂಥವರಲ್ಲಿ ಶಾರದಕ್ಕ ಕೂಡ ಒಬ್ಬರು. ಸ್ವಂತ ಭೂಮಿ, ಮನೆ ಇಲ್ಲದ ಅವರು 7 ಮಕ್ಕಳೊಂದಿಗೆ ವಾಸಿಸುತ್ತಿರುವ ಪುಟ್ಟಗುಡಿಸಲನ್ನು ಈ ಮಳೆಗಾಲಕ್ಕೆ ಮೊದಲು ದುರಸ್ತಿ ಮಾಡಬೇಕು ಎಂದು ಅವರು .30 ಸಾವಿರ ಉಳಿಸಿದ್ದರು.

ಅಷ್ಟರಲ್ಲಿ ಲಾಕ್‌ಡೌನ್‌ ಘೋಷಣೆ ಆಯಿತು. ಬಂದರನ್ನೇ ನಂಬಿಕೊಂಡಿದ್ದ ಈ ಕಾರ್ಮಿಕರಿಗೆ ಒಪ್ಪೊತ್ತು ಊಟಕ್ಕೂ ತತ್ವಾರ ಆಯಿತು. ಆಹಾರದ ಕಿಟ್‌ ಹಂಚುವ ದಾನಿಗಳು, ಜನಪ್ರತಿನಿಧಿಗಳು ಬಾರದ ಈ ಕಾರ್ಮಿಕರ ಮನೆಗೆ ಶಾರದಕ್ಕ ತಲಾ 5 ಕೆ.ಜಿ. ಅಕ್ಕಿ ಕೊಂಡುಹೋಗಿ ಕೊಟ್ಟರು. ಅದಕ್ಕೆ ಅವರು ತನ್ನ ಉಳಿತಾಯದ .30 ಸಾವಿರ ಖರ್ಚು ಮಾಡಿದರು. ಅದು ಸಾಲದೆಂಬಂತೆ ತನಗೆ ಸಿಕ್ಕಿದ್ದ ರೇಷನ್‌ ಅಕ್ಕಿಯನ್ನೂ ಇನ್ನೊಂದು ಬಡಕುಟುಂಬಕ್ಕೆ ಕೊಟ್ಟುಬಿಟ್ಟರು.

ಇನ್ನೂ ಹಂಚುವುದಕ್ಕೆ ಬಾಕಿ ಇದೆ: ತನ್ನಿಂದ ಮೀನು ಖರೀದಿಸಿದ ಅನೇಕ ಜನ ತನಗೆ ಹಣ ಕೊಡುವುದಕ್ಕೆ ಬಾಕಿ ಇದೆ. ಅದು ಬಂದರೆ ಅದರಿಂದಲೂ ಅಕ್ಕಿ ಖರೀದಿಸಿ, ಇನ್ನುಳಿದ ಕುಟುಂಬಗಳಿಗೆ ಕೊಡುತ್ತೇನೆ ಎನ್ನುತ್ತಾರೆ ಶಾರದಕ್ಕ. ಯಾರೋ ಪ್ರಾಯೋಜಿಸಿದ ಕಿಟ್‌ಗಳನ್ನು ಹಂಚುವ ನೆಪದಲ್ಲಿ ಪೋಟೋ ತೆಗೆದು, ಬಡವರ ಕಾರಣಕ್ಕೆ ಪ್ರಚಾರ ಪಡೆಯುವವ ಮಧ್ಯೆ, ಶಾರದಕ್ಕ ಸದ್ದಿಲ್ಲದೆ 140 ಮನೆಗಳಿಗೆ ತಾನೇ ಸ್ವತಃ ಹೋಗಿ ಅಕ್ಕಿ ಕೊಟ್ಟು ಬಂದಿದ್ದಾರೆ. ಆದರೆ, ಒಂದೇ ಒಂದು ಫೋಟೋ ತೆಗೆದಿಲ್ಲ. ತೆಗೆಯುವುದಕ್ಕೆ ಅವರ ಬಳಿ ಕ್ಯಾಮರ ಮೊಬೈಲೂ ಇಲ್ಲ, ಪ್ರಚಾರ ಪಡೆಯಬೇಕು ಎಂದೂ ಅವರಿಗೆ ಅನ್ನಿಸಿಲ್ಲ.

ನನಗೆ ಅವರ ಕಷ್ಟನೋಡಿ ಚಿಂತೆ ಆಯಿತು. ಅವರೂ ನಮ್ಮ ಹಾಗೇ ಬದುಕಬೇಕಲ್ವಾ. ಅದಕ್ಕೆ ನನ್ನಿಂದಾದ ಸಹಾಯ ಮಾಡಿದ್ದೇನೆ. ನನ್ನ ಹತ್ತಿರ ಹಣ ಇರುತ್ತಿದ್ದರೆ ಇನ್ನೂ ಸಹಾಯ ಮಾಡುತ್ತಿದ್ದೆ. ತುಂಬಾ ಜನ ನನಗೆ ಹಣ ಕೊಡಲಿಕ್ಕಿದೆ. ಅದನ್ನು ಕೊಟ್ಟರೆ ಇನ್ನೂ ತುಂಬಾ ಜನರಿಗೆ ಸಹಾಯ ಮಾಡ್ತೇನೆ.

- ಶಾರದಕ್ಕ, ಮೀನು ಮಾರುವ ಮಹಿಳೆ, ಮಲ್ಪೆ