'ಕಳೆದು ಹೋದ ಅಧಿಕಾರಿ : ಕುಸಿದ ಬಿಜೆಪಿ ಜಂಗಾಬಲ'
ನಡೆದ ಚುನಾವಣೆಯಲ್ಲಿ ಆಯ್ಕೆಯಾದವರ ಅಧಿಕಾರ ಇದೀಗ ಇಲ್ಲದಂತಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಏನಿದು ..?
ವರದಿ : ಎಂ ಅಫ್ರೋಜ್ ಖಾನ್
ರಾಮನಗರ (ನ.21): ವರ್ಷದಿಂದ ಅಧಿಕಾರ ಇಲ್ಲದೆ ವನವಾಸ ಅನುಭವಿಸಿ ಇತ್ತೀಚೆಗಷ್ಟೇ ಗದ್ದುಗೆ ಅಲಂಕರಿಸಿದ್ದ ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ - ಉಪಾಧ್ಯಕ್ಷರ ಆಯ್ಕೆಯನ್ನು ಹೈಕೋರ್ಟ್ ಅಸಿಂಧುಗೊಳಿಸಿರುವುದು ‘ಕೈಗೆ ಬಂದ ತುತ್ತು ಬಾಯಿಗಿಲ್ಲ‘ ಎಂಬ ಗಾದೆ ಮಾತಿನಂತಾಗಿದೆ.
ಜಿಲ್ಲೆಯಲ್ಲಿ ಕನಕಪುರ ನಗರಸಭೆ, ಮಾಗಡಿ ಪುರಸಭೆ ಹಾಗೂ ಬಿಡದಿ ಪುರಸಭೆ ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನಗಳಿಗೆ ಆಯ್ಕೆ ಪ್ರಕ್ರಿಯೆ ನಡೆದಿತ್ತು. ಕುರ್ಚಿಯಲ್ಲಿ ಕುಳಿತ ಆಡಳಿತ ನಡೆಸುವುದಕ್ಕೂ ಮುನ್ನವೇ ಎಲ್ಲಾ ಅಧ್ಯಕ್ಷ - ಉಪಾಧ್ಯಕ್ಷರು ಅಧಿಕಾರ ಕಳೆದುಕೊಂಡಿದ್ದಾರೆ.
21 ದಿನಗಳಲ್ಲಿ ಅಧಿಕಾರ ಹೋಯ್ತು:
ಕನಕಪುರ ನಗರಸಭೆ ಅಧ್ಯಕ್ಷರಾಗಿ ಕಾಂಗ್ರೆಸ್‌ನ ಮಹಮ್ಮದ್ ಮಕ್ಬುಲ್ ಪಾಷಾ ಹಾಗೂ ಉಪಾಧ್ಯಕ್ಷರಾಗಿ ಗುಂಡಣ್ಣ ಅವಿರೋಧವಾಗಿ ಆಯ್ಕೆಯಾಗಿದ್ದರು. ಚುನಾವಣೆ (ಅ.29)ನಡೆದ 21 ದಿನಗಳಲ್ಲಿಯೇ ಅಧಿಕಾರ ಕಳೆದುಕೊಳ್ಳುವ ಸ್ಥಿತಿ ಬಂದಿದೆ. 2019ರ ನ. 12ರಂದು ಕನಕಪುರ ನಗರಸಭೆ ಚುನಾವಣೆ ನಡೆದು ನ. 14ರಂದು ಫಲಿತಾಂಶ ಪ್ರಕಟಗೊಂಡಿತ್ತು. ಕಾಂಗ್ರೆಸ್ 26, ಜೆಡಿಎಸ್ 4, ಬಿಜೆಪಿ 1 ಸ್ಥಾನದಲ್ಲಿ ಗೆಲುವು ಸಾಧಿಸಿತ್ತು. ಮೀಸಲು ಪಟ್ಟಿಪ್ರಕಟವಾಗದ ಕಾರಣ ಒಂದು ವರ್ಷಗಳ ಕಾಲ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ನೆನೆಗುದಿಗೆ ಬಿದ್ದಿತ್ತು.
ಕುಸಿದ ಬಿಜೆಪಿ ಜಂಗಾಬಲ?
ಮಾಗಡಿ ಪುರಸಭೆ ಅಧ್ಯಕ್ಷರಾಗಿ ಬಿಜೆಪಿ ಸದಸ್ಯೆ ಭಾಗ್ಯಮ್ಮ ಹಾಗೂ ಉಪಾಧ್ಯಕ್ಷರಾಗಿ ಜೆಡಿಎಸ್ ಸದಸ್ಯ ರೆಹಮತ್ ನ. 9ರಂದು ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದದೆ. ಇವರು ಕೇವಲ 11 ದಿನಗಳಲ್ಲಿಯೇ ಅಧಿಕಾರದಿಂದ ಕೆಳಗಿಳಿಯುವಂತಾಗಿದೆ.
ವರಿಷ್ಠರಿಲ್ಲದೆ ಅವಧಿ ಪೂರ್ಣದ ಆತಂಕ:
ಇನ್ನು ಬಿಡದಿ ಪುರಸಭೆ ಅಧ್ಯಕ್ಷರಾಗಿ ಜೆಡಿಎಸ್ ಅಭ್ಯರ್ಥಿ ಸರಸ್ವತಿ ರಮೇಶ್ ಹಾಗೂ ಉಪಾಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಕಾಂಗ್ರೆಸ್ ಸದಸ್ಯ ಸಿ.ಲೋಕೇಶ್ ನ.5ರಂದು ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿ ಕೇವಲ 14 ದಿನಗಳಲ್ಲಿ ಗದ್ದುಗೆ ಕಳೆದುಕೊಳ್ಳುವ ಸ್ಥಿತಿ ಬಂದೊದಗಿದೆ. ಬಾಕಿ ಉಳಿದಿರುವ ಅವಧಿ ವರಿಷ್ಠರಿಲ್ಲದೆ ಪೂರ್ಣಗೊಳ್ಳುವ ಆತಂಕ ಸದಸ್ಯರನ್ನು ಕಾಡುತ್ತಿದೆ.
ತೀವ್ರ ಪೈಪೋಟಿ ನಡೆಸಿ ಗದ್ದುಗೆ ಹಿಡಿಯುವಲ್ಲಿ ಯಶಸ್ವಿಯಾದ ಅಧ್ಯಕ್ಷ - ಉಪಾಧ್ಯಕ್ಷರಿಗೆ ಮುಂದೇನು ಎಂಬ ಆತಂಕ ಕಾಡುತ್ತಿದೆ. ಪ್ರತಿ ಪಕ್ಷಗಳು ಮತ್ತೊಮ್ಮೆ ಆಯ್ಕೆ ಪ್ರಕ್ರಿಯೆ ನಡೆದಲ್ಲಿ ಕಾರ್ಯತಂತ್ರ ರೂಪಿಸಿ ರಾಜಕೀಯ ದಾಳ ಉರುಳಿಸುವ ಆಲೋಚನೆಯಲ್ಲಿವೆ.
ಕೆಲವರ ಚಿತಾವಣೆಯಿಂದ ಅಲ್ಪಸಂಖ್ಯಾತರು ಹಾಗೂ ಕೆಳವರ್ಗದ ಜನರಿಗೆ ಅಧಿಕಾರ ತಪ್ಪಿಸುವ ಉದ್ದೇಶದಿಂದ ನ್ಯಾಯಾಲಯದಲ್ಲಿ ತಕರಾರು ಅರ್ಜಿ ಸಲ್ಲಿಸಿದ್ದಾರೆ. ರಾಜ್ಯ ಸರ್ಕಾರ ಕೂಡಲೇ ನ್ಯಾಯಾಲಯಕ್ಕೆ ಸೂಕ್ತವಾದ ದಾಖಲೆಗಳನ್ನು ಒದಗಿಸಿ ನಮಗೆ ನ್ಯಾಯ ಒದಗಿಸಿಕೊಡಬೇಕು.
- ಮಹಮದ್ ಮಕ್ಬುಲ್, ನಗರಸಭಾದ್ಯಕ್ಷ ಕನಕಪುರ.