Lake Encroachment: ಅಧಿವೇಶನದಲ್ಲೇ ಕೆರೆ ನುಂಗಣ್ಣರ ಪಟ್ಟಿ ಬಿಡುಗಡೆ ಮಾಡುವೆ: ಸಚಿವ ಅಶೋಕ್
ದಾಖಲೆ ಸಂಗ್ರಹಕ್ಕೆ ಸೂಚನೆ, ಸಮಯ ನಿಗದಿಗೆ ಸಭಾಧ್ಯಕ್ಷರ ಬಳಿ ಮನವಿ: ಸಚಿವ ಆರ್.ಅಶೋಕ್
ಬೆಂಗಳೂರು(ಸೆ.16): ರಾಜಧಾನಿಯಲ್ಲಿ ಕಾನೂನು ಬಾಹಿರವಾಗಿ ಕೆರೆಗಳನ್ನು ಒತ್ತುವರಿ ಮಾಡಿರುವವರ ಬಗ್ಗೆ ಇದೇ ಅಧಿವೇಶನದಲ್ಲಿ ದಾಖಲೆಗಳನ್ನು ಬಿಡುಗಡೆ ಮಾಡುವುದಾಗಿ ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರು ಕೆರೆಗಳನ್ನು ನುಂಗಿ ನೀರು ಕುಡಿದಿದ್ದಾರೋ ಅವರ ದಾಖಲೆ ಬಿಡುಗಡೆ ಮಾಡುತ್ತೇನೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಪ್ಪು ಮಾಡಿದ್ದಾರೆಯೇ, ನಾನು ತಪ್ಪು ಮಾಡಿದ್ದೇನೆಯೇ ಅಥವಾ ನಮ್ಮ ಸಂಪುಟ ಸಹೋದ್ಯೋಗಿಗಳು ತಪ್ಪು ಮಾಡಿದ್ದಾರೆಯೇ ಎಂಬುದು ದಾಖಲೆ ಬಿಡುಗಡೆ ಬಳಿಕ ಗೊತ್ತಾಗಲಿದೆ ಎಂದರು.
ಈಗಾಗಲೇ ನಮ್ಮ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಕಲೆ ಹಾಕಿ ದಾಖಲೆಗಳನ್ನು ಸಿದ್ಧಪಡಿಸುವಂತೆ ಸೂಚಿಸಿದ್ದೇನೆ. ಅಧಿಕಾರಿಗಳು ಕೂಡ ಅಗತ್ಯವಿರುವ ದಾಖಲೆಗಳನ್ನು ಕಲೆ ಹಾಕಿದ್ದಾರೆ. ಕೆರೆಗಳನ್ನು ನುಂಗಿದ ಮೂಲ ಪುರುಷರು ಯಾರು, ಯಾವ ಯಾವ ಸರ್ಕಾರದಲ್ಲಿ ಎಷ್ಟೆಷ್ಟು ಒತ್ತುವರಿಯಾಗಿದೆ ಎಲ್ಲವನ್ನೂ ಬಹಿರಂಗಪಡಿಸುತ್ತೇವೆ. ವಿಧಾನಸಭೆಯ ಸಭಾಧ್ಯಕ್ಷರ ಬಳಿ ಚರ್ಚಿಸಿ ಸಮಯ ನಿಗದಿಗೆ ಮನವಿ ಮಾಡುತ್ತೇವೆ. ಅವರ ನಿಗದಿ ಮಾಡಿದ ಸಮಯಕ್ಕೆ ದಾಖಲೆ ಬಿಡುಗಡೆ ಮಾಡುವುದಾಗಿ ಹೇಳಿದರು.
NewsHour ಸದನದಲ್ಲಿ ಸಿದ್ದರಾಮಯ್ಯ ಮೇಷ್ಟ್ರ ವ್ಯಾಕರಣ ಪಾಠ, ನಮ್ ಕಡೆ ಹಿಂಗೆ ಎಂದ ಆರ್ ಅಶೋಕ್!
ಕೆಲವರು ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಕೆರೆಗಳನ್ನು ಮುಚ್ಚಿ ಕಟ್ಟಡಗಳನ್ನು ನಿರ್ಮಿಸಿದ್ದರಿಂದ ಬೆಂಗಳೂರಿಗೆ ಈ ಪರಿಸ್ಥಿತಿ ಬಂದಿದೆ. ಕೆರೆಗಳನ್ನು ಮುಚ್ಚಿದ ಪರಿಣಾಮ ನೀರು ಸರಾಗವಾಗಿ ಹರಿಯದೆ ರಾಜಕಾಲುವೆಗೆ ಹೋಗದೆ ಜನವಸತಿ ಪ್ರದೇಶಗಳಿಗೆ ನುಗ್ಗಿದೆ. ಯಾವ ಕಾಲದಲ್ಲಿ ಯಾವ ಸರ್ಕಾರ, ಯಾವ ಮುಖ್ಯಮಂತ್ರಿಗಳು, ಅಧಿಕಾರಿಗಳು ಅನುಮೋದನೆ ಕೊಟ್ಟಿದ್ದರು ಎಂಬ ಬಗ್ಗೆ ದಾಖಲೆಗಳು ಲಭ್ಯವಾಗಿವೆ. ಸದನದಲ್ಲಿ ಇದನ್ನು ಬಹಿರಂಗಪಡಿಸಲಿದ್ದೇನೆ ಎಂದರು.
ಪ್ರಸ್ತುತ ಅಧಿವೇಶನದಲ್ಲಿ ಪ್ರವಾಹ ಪರಿಸ್ಥಿತಿ ಕುರಿಂತೆ ಚರ್ಚೆ ನಡೆಯುತ್ತಿದೆ. ಕಂದಾಯ ಸಚಿವನಾಗಿ ರಾಜ್ಯ ವಿಪತ್ತು ನಿರ್ವಹಣಾ ಮುಖ್ಯಸ್ಥನಾಗಿ ಸದಸ್ಯರ ಪ್ರಶ್ನೆಗಳಿಗೆ ಉತ್ತರ ಕೊಡುವುದು ನನ್ನ ಜವಾಬ್ದಾರಿ. ಚರ್ಚೆ ಮುಗಿದ ಬಳಿಕ ಉತ್ತರ ಕೊಡುತ್ತೇನೆ. ರಾಜ್ಯದ ವಿವಿಧ ಕಡೆ ಸರ್ಕಾರಕ್ಕೆ ಸೇರಿದ ಕೆರೆಗಳನ್ನು ಒತ್ತುವರಿ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಇದೇ ರೀತಿ ಬೆಂಗಳೂರಿನಲ್ಲೂ ಸಾಕಷ್ಟು ಭೂ ಕಬಳಿಕೆಯಾಗಿದೆ. ಇದರ ಬಗ್ಗೆ ಸದನದಲ್ಲಿ ದಾಖಲೆಗಳ ಸಮೇತ ನುಂಗಣ್ಣರ ಹೆಸರುಗಳನ್ನು ಬಹಿರಂಗಪಡಿಸಬೇಕು. ಸಭಾಧ್ಯಕ್ಷರ ಅನುಮತಿ ಸಿಕ್ಕ ಕೂಡಲೇ ಎಲ್ಲವನ್ನು ಬಯಲು ಮಾಡುತ್ತೇವೆ ಎಂದು ಹೇಳಿದರು.