ಬಿಸಿಲ ತೀವ್ರತೆಯಿಂದ ಮದ್ಯ ಮಾರಾಟದಲ್ಲಿ ಭಾರೀ ಏರಿಕೆ!
ರಾಜ್ಯದಲ್ಲಿ ಬಿಸಿಲ ಬೇಗೆಯು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಇದರ ನಡುವೆ ಮದ್ಯ ಮಾರಾಟದಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ.
ಕಾರವಾರ : ಚುನಾವಣೆ ಹಾಗೂ ಉರಿ ಬಿಸಿಲು ಜಿಲ್ಲೆಯಲ್ಲಿ ಮದ್ಯ ಮಾರಾಟವನ್ನು ಗಣನೀಯವಾಗಿ ಹೆಚ್ಚಿಸಿದೆ. 2019 ರ ಏಪ್ರಿಲ್, ಮೇ ತಿಂಗಳಲ್ಲಿ ಗುರಿಗಿಂತ ಶೇ. 107 .1 ರಷ್ಟು ಮಾರಾಟ ಹೆಚ್ಚಾಗಿದೆ.
2019 - 20ರ ಏಪ್ರೀಲ್ ಮತ್ತು ಮೇ ತಿಂಗಳಲ್ಲಿ 1.56ಲಕ್ಷ ಲೀ. ಗುರಿ ನೀಡಲಾಗಿದ್ದು, 1.67ಲಕ್ಷ ಲೀ. ಮದ್ಯ ಮಾರಾಟ ಆಗಿದೆ. ಜಿಲ್ಲೆಯಲ್ಲಿ ಕಳೆದ 3 ವರ್ಷಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ 2018 - 19 ನೇ ಸಾಲಿನಲ್ಲಿ ಮದ್ಯ ಮಾರಾಟ ಆಗಿದೆ. 10 . 45 ಲಕ್ಷ ಲೀ. ಮದ್ಯ ಗುರಿ ನೀಡಲಾಗಿದ್ದು, 9.42 ಲಕ್ಷ ಲೀ, 2016 - 17 ನೇ ಸಾಲಿನಲ್ಲಿ 9.94 ಲಕ್ಷ ಲೀ. ಗುರಿ, 9.12 ಲಕ್ಷ ಲೀ. ಮಾರಾಟ, 2017 - 18ರಲ್ಲಿ 9.64 ಲಕ್ಷ ಲೀ, ಗುರಿ, 9. 41 ಲಕ್ಷ ಲೀ. ಮಾರಾಟ ಆಗಿದೆ.
ವರ್ಷವಾರು ಲೆಕ್ಕಾಚಾರದಲ್ಲಿ 2018 - 19 ರಲ್ಲಿ ಹೆಚ್ಚಿನ ಮಾರಾಟ ಆಗಿದ್ದರೆ ಕಳೆದ ವರ್ಷಕ್ಕಿಂತ ಪ್ರಸಕ್ತ ವರ್ಷ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಬಿಸಿಲಿನ ತೀವ್ರತೆ ಹೆಚ್ಚಿತ್ತು. ಬಿಸಿಲ ಝಳದಿಂದ ದಣಿವಾರಿಸಿಕೊಳ್ಳಲು ಮದ್ಯಕ್ಕೆ ಬೇಡಿಕೆ ಹೆಚ್ಚಾಗಿತ್ತು. ಸಂಜೆ ಆಗುತ್ತಿದ್ದಂತೆ ಬಾರ್ ಆ್ಯಂಡ್ ರೆಸ್ಟೋರೆಂಟ್ ಹಾಗೂ ವೈನ್ ಶಾಪ್‌ಗಳು ಗ್ರಾಹಕರಿಂದ ತುಂಬಿ ತುಳುಕುತ್ತಿದ್ದವು. ಬಿಸಿಲ ತೀವ್ರತೆಯೇ ಈ ಎರಡು ತಿಂಗಳಲ್ಲಿ ಮದ್ಯ ಹೆಚ್ಚಿನ ಪ್ರಮಾಣದಲ್ಲಿ ಮಾರಾಟಕ್ಕೆ ಪ್ರಮುಖ ಕಾರಣವಾಗಿದೆ.
ಲೋಕಸಭಾ ಚುನಾವಣೆ ಮಾರ್ಚ್ ತಿಂಗಳಲ್ಲಿ ಘೋಷಣೆಯಾಗಿದ್ದು, ನೀತಿ ಸಂಹಿತೆ ಜಾರಿಯಾದ ನಂತರ ಗೋವಾ ಕರ್ನಾಟಕ ಗಡಿಗಳಾದ ಮಾಜಾಳಿ ಹಾಗೂ ಅನಮೋಡ್‌ನಲ್ಲಿ ಕಟ್ಟು ನಿಟ್ಟಿನ ತಪಾಸಣೆ ಮಾಡಲಾಗುತ್ತಿತ್ತು. ಜತೆಗೆ ಅಬಕಾರಿ ಹಾಗೂ ಇತರ ಇಲಾಖೆಯ ಅಧಿಕಾರಿಗಳ, ಸಿಬ್ಬಂದಿ ತಂಡ ಪ್ರತಿನಿತ್ಯ ಗಸ್ತು ತಿರುಗಿ ಅರಣ್ಯ ಹಾಗೂ ಸಮುದ್ರ ಮಾರ್ಗದ ಮೂಲಕ ಗೋವಾದಿಂದ ಅಕ್ರಮವಾಗಿ ಸರಬರಾಜಾಗುವ ಮದ್ಯವನ್ನು ತಡೆದಿದ್ದರು. ಇದರಿಂದ ಜಿಲ್ಲೆಯ ವಿವಿಧ ಭಾಗಗಳಿಗೆ ಗೋವಾದಿಂದ ಅಕ್ರಮವಾಗಿ ಪೂರೈಕೆ ಆಗುವ ಮದ್ಯಕ್ಕೆ ಕಡಿವಾಣ ಬಿದ್ದು, ಕರ್ನಾಟಕ ಹಾಗೂ ಭಾರತೀಯ ಮದ್ಯ ಮಾರಾಟ ಹೆಚ್ಚಾಗಿದೆ.
ಚುನಾವಣೆ ಸಂದರ್ಭದಲ್ಲಿ ಕರ್ನಾಟಕಕ್ಕೆ ಸಮೀಪ ಇರುವ ಗೋವಾದ ಪೊಳೆಂನಲ್ಲಿ ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳನ್ನು ಬಂದ್ ಮಾಡಲಾಗಿತ್ತು. ಇದರಿಂದಾಗಿ ಕರ್ನಾಟಕದ ಮದ್ಯಕ್ಕೆ ಬೇಡಿಕೆ ಹೆಚಾಗಿತ್ತು. ಎರಡು ತಿಂಗಳ ಉರಿಬಿಸಿಲು ಮದ್ಯಪ್ರಿಯರ ಜೋಬಿಗೆ ಕತ್ತರಿ ಹಾಕಿದೆ.
ಬೇಡಿಕೆ ಹೆಚ್ಚಳ
ಶಿರಸಿ ಹಾಗೂ ಹೊನ್ನಾವರದಲ್ಲಿ ಮದ್ಯ ದಾಸ್ತಾನು ಗೋಡಾನ್ ಇದ್ದು, ಶಿರಸಿಯಿಂದ ಘಟದ ಮೇಲಿನ ತಾಲೂಕಿಗೆ ಹಾಗೂ ಹೊನ್ನಾವರದಿಂದ ಘಟ್ಟದ ಕೆಳಗಿನ ತಾಲೂಕಿನ ಬಾರ್ ಹಾಗೂ ವೈನ್ ಶಾಪ್ ಗಳಿಗೆ ಮದ್ಯ ಪೂರೈಕೆ ಆಗುತ್ತದೆ. ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಮದ್ಯ ಸರಬರಾಜಾಗದೇ ಕೆಲವಷ್ಟು ಬ್ರಾಂಡ್‌ಗಳು ಬಾರ್‌ಗಳಲ್ಲಿ ಸಿಗುತ್ತಿರಲಿಲ್ಲ. ಬೇಡಿಕೆ ಹೆಚ್ಚಾಗಿದ್ದು, ಪೂರೈಕೆ ಕಡಿಮೆ ಆಗಿತ್ತು.