ಕುಣಿಗಲ್ ಗೆ 900 ಕೋಟಿ ವೆಚ್ಚದಲ್ಲಿ ಲಿಂಕ್ ಕೆನಾಲ್
ತಾಲೂಕಿನ ನೀರಾವರಿ ಸಮಸ್ಯೆ ಮುಂದಿನ ಮೂರು ವರ್ಷದಲ್ಲಿ ಕುಣಿಗಲ್ ಲಿಂಕ್ ಕೆನಾಲ್ ಸೇರಿದಂತೆ ಕೊತ್ತಕೆರೆ ಏತ ನೀರಾವರಿ ಯೋಜನೆ ಪ್ರಾರಂಭಿಸಲಾಗುವುದು ಎಂದು ಸಂಸದ ಡಿ ಕೆ ಸುರೇಶ್ ತಿಳಿಸಿದ್ದಾರೆ.
ಕುಣಿಗಲ್: ತಾಲೂಕಿನ ನೀರಾವರಿ ಸಮಸ್ಯೆ ಮುಂದಿನ ಮೂರು ವರ್ಷದಲ್ಲಿ ಕುಣಿಗಲ್ ಲಿಂಕ್ ಕೆನಾಲ್ ಸೇರಿದಂತೆ ಕೊತ್ತಕೆರೆ ಏತ ನೀರಾವರಿ ಯೋಜನೆ ಪ್ರಾರಂಭಿಸಲಾಗುವುದು ಎಂದು ಸಂಸದ ಡಿ ಕೆ ಸುರೇಶ್ ತಿಳಿಸಿದ್ದಾರೆ.
ತಾಲೂಕಿನ ಕೊತ್ತಕೆರೆ ಹೋಬಳಿಯ ತೆರೆದ ಕುಪ್ಪೆ ಗ್ರಾ.ಪಂ. ಯಲ್ಲಿ ಏರ್ಪಡಿಸಿದ್ದ ಜನ ಸಂಪರ್ಕ ಸಭೆಯಲ್ಲಿ ಭಾಗವಹಿಸಿ, ಸಾರ್ವಜನಿಕರಿಂದ ಅರ್ಜಿ ಸ್ವೀಕಾರ ಮಾಡಿ ಮಾತನಾಡಿದರು.
ಚುನಾವಣೆಗೆ ಮೊದಲು ಕಾಂಗ್ರೆಸ್ ಸರ್ಕಾರ ಕೊಟ್ಟ 5 ಗ್ಯಾರಂಟಿಗಳನ್ನು ಪೂರ್ಣಗೊಳಿಸುವಲ್ಲಿ ಕಾಂಗ್ರೆಸ್ ಸರ್ಕಾರ ಯಶಸ್ವಿಯಾಗಿದೆ.
ಕಾಂಗ್ರೆಸ್ ಸರ್ಕಾರ ನೀಡಿದ ಎಲ್ಲಾ ಯೋಜನೆಗಳನ್ನು ಸಂಪೂರ್ಣ ಎಲ್ಲಾ ಪಕ್ಷದವರು ಬಳಸಿಕೊಳ್ಳುತ್ತಿದ್ದಾರೆ. ಆದರೆ, ನಮ್ಮ ಮೇಲೆ ಇಲ್ಲಸಲ್ಲದ ಟೀಕೆಗಳನ್ನು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ತಾಲೂಕಿನ ನೀರಾವರಿ ಸಮಸ್ಯೆ ಹೋಗಲಾಡಿಸುವ ಉದ್ದೇಶದಿಂದ 900 ಕೋಟಿ ರು. ವೆಚ್ಚದಲ್ಲಿ ಕುಣಿಗಲ್ ಗೆ ನೇರ ಲಿಂಕ್ ಕೆನಾಲ್ ಯೋಜನೆಯ ಕೆಲವೇ ದಿನಗಳಲ್ಲಿ ಪ್ರಾರಂಭಿಸುತ್ತಿದ್ದೇವೆ. ಕೊತ್ತಕೆರೆ ಹೋಬಳಿಯಿಂದ ಏತ ನೀರಾವರಿ ಪ್ರಾರಂಭಿಸುವ ಯೋಜನೆಗೆ ಕ್ರಿಯಾಯೋಜನೆ ಸಿದ್ಧವಾಗಿದೆ, ತಾಲೂಕಿನಲ್ಲಿ ಬಹುತೇಕ ನೀರಾವರಿ ಸಮಸ್ಯೆ ಮುಂದಿನ ಮೂರು ವರ್ಷದಲ್ಲಿ ಕೊನೆಗೊಳ್ಳಲಿದೆ ಎಂದರು,
ಆರೋಗ್ಯ ಕ್ಷೇತ್ರವನ್ನು ವೃದ್ಧಿಸುವ ಹಿನ್ನೆಲೆ ಕುಣಿಗಲ್ ನಲ್ಲಿ ಇನ್‌ಪೋಸಿಸ್ ವತಿಯಿಂದ ಹೈಟೆಕ್ ತಾಯಿ ಮಕ್ಕಳ ಆಸ್ಪತ್ರೆ ನಿರ್ಮಿಸಲಾಗುತ್ತಿದೆ.
ಎರಡು ಗ್ರಾ.ಪಂ. ಗೆ ಒಂದು ಮಾದರಿ ಶಾಲೆ ಪ್ರಾರಂಭಿಸುವ ಉದ್ದೇಶ ಇದೆ. ಖಾಸಗಿ ಶಾಲೆಯ ಮಾದರಿಯಲ್ಲಿ ಪ್ರತಿ ಮನೆಯಿಂದ ಮಗುವನ್ನು ಕರೆದುಕೊಂಡು ಹೋಗಿ ಪುನಃ ಮನೆಗೆ ಬಸ್ ಲ್ಲಿ ಕರೆದುಕೊಂಡು ಬರುವ ವ್ಯವಸ್ಥೆ ಮಾಡಲಾಗುತ್ತದೆ. ತಾಲೂಕಿನ ಯಾವ ಗ್ರಾ.ಪಂ.ಯಲ್ಲಿ ಅವಕಾಶ ಸಿಗುತ್ತದೆ ಎಂಬುದನ್ನು ನಾವು ನಿಗದಿಪಡಿಸಿ ಪ್ರಾಯೋಗಿಕವಾಗಿ ಪ್ರಾರಂಭಿಸುವುದಾಗಿ ತಿಳಿಸಿದರು,
ರಾಜಕಾರಣಿಗಳು ಚುನಾವಣಾ ವೇಳೆ ನಿವೇಶನ ಹಕ್ಕುಪತ್ರ ನೀಡಿದ್ದಾರೆ. ಈ ಸಂಬಂಧ ಸರ್ಕಾರದಲ್ಲಿ ಅಥವಾ ಕಚೇರಿಯಲ್ಲಿ ಯಾವುದೇ ದಾಖಲಾತಿ ಇಲ್ಲ. ಜನರಿಗೆ ಅನ್ಯಾಯ ಆಗದಂತೆ ಮರು ಪರಿಶೀಲಿಸಿ ನಿವೇಶನ ನೀಡುವ ಸ್ಥಳವನ್ನು ಗುರುತಿಸಿ ಬಡವರಿಗೆ ನಿವೇಶನದ ಸಮಸ್ಯೆ ಬಗೆಹರಿಸುವ ಕಾರ್ಯವನ್ನು ಮಾಡುತ್ತೇವೆ ಎಂದರು,
ಕಂದಾಯ ಇಲಾಖೆಯಲ್ಲಿ ಹಲವಾರು ತಾಂತ್ರಿಕ ಸಮಸ್ಯೆಗಳಿವೆ. ವಿಶೇಷ ಅಭಿಯಾನ ಪ್ರಾರಂಭಿಸಿ ಪ್ರತಿ ಮನೆಯ ಪಕ್ಕಾ ಪೋಡಿ ಹಾಗೂ ಖಾತೆ ಸಮಸ್ಯೆಯನ್ನು ಬಗೆಹರಿಸುವುದಕ್ಕೆ ವಿಶೇಷವಾದ ಅಧಿಕಾರಿಗಳನ್ನು ನೇಮಕ ಮಾಡುತ್ತಿದ್ದೇವೆ ಎಂದರು.
ಅರಣ್ಯ ರಸ್ತೆ ಕಂದಾಯ ವಿದ್ಯುತ್ ಸೇರಿದಂತೆ ಹಲವಾರು ಸಮಸ್ಯೆಗಳನ್ನ ಒಳಗೊಂಡ ಅರ್ಜಿಗಳನ್ನು ಪಡೆಯಲಾಯಿತು. ಮುಂದಿನ ದಿನಾಂಕ ನಿಗದಿಯ ಒಳಗಾಗಿ ಬಂದ ಅರ್ಜಿಗಳನ್ನು ವಿಲೇ ಮಾಡಬೇಕು. ಕೆಲಸ ಮಾಡಿ ಇಲ್ಲದಿದ್ದರೆ ಬೇರೆಡೆಗೆ ವರ್ಗಾಯಿಸಿಕೊಂಡು ಹೋಗಬಹುದೆಂದು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು. ಕುಣಿಗಲ್ ಶಾಸಕ ಡಾ, ಹೆಚ್ ಡಿ ರಂಗನಾಥ್, ತಹಸೀಲ್ದಾರ್ ವಿಶ್ವನಾಥ್, ಡಿವೈಎಸ್ಪಿ ಲಕ್ಷ್ಮಣ್, ಸೇರಿದಂತೆ ಹಲವರು ಇಲಾಖಾ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.