ವಿನಯ್ ಕುಲಕರ್ಣಿ ಅರೆಸ್ಟ್: ಕುತೂಹಲ ಕೆರಳಿಸಿದ ಲಿಂಗಾಯತ ಮಠಾಧೀಶರ ಸಭೆ
ಗದಗ ತೋಂಟದಾರ್ಯ ಮಠದಲ್ಲಿ ಲಿಂಗಾಯತ ಮಠಾಧೀಶರ ಸಭೆ| ಮಾಜಿ ಸಚಿವ ವಿನಯ್ ಕುಲಕರ್ಣಿ ಸಿಬಿಐ ವಿಚಾರಣೆ ಹಿನ್ನಲೆಯಲ್ಲಿ ಈ ಸಭೆ| ತನಿಖೆ ನ್ಯಾಯಸಮ್ಮತವಾಗಿ ನಡೆಯಲಿ| ಸ್ವಾಮೀಜಿಗಳು ಯಾಕೆ ಬಂದಿದ್ದಾರೆ ನನಗೆ ಗೊತ್ತಿಲ್ಲ: ಸಿದ್ಧರಾಮ ಶ್ರೀಗಳು|
ಗದಗ(ನ.09): ಮಾಜಿ ಸಚಿವ ವಿನಯ್ ಕುಲಕರ್ಣಿ ಸಿಬಿಐ ವಿಚಾರಣೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಗದಗ ನಗರದ ತೋಂಟದಾರ್ಯ ಮಠದಲ್ಲಿ ಲಿಂಗಾಯತ ಮಠಾಧೀಶರ ಅನೌಪಚಾರಿಕ ಸಭೆ ಭಾನುವಾರ ಜರುಗಿದೆ.
ತೋಂಟದಾರ್ಯ ಮಠದ ಡಾ. ಸಿದ್ಧರಾಮ ಶ್ರೀಗಳ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ, ಕೂಡಲ ಸಂಗಮದ ಬಸವಜಯ ಮೃತ್ಯುಂಜಯ ಶ್ರೀ, ಮುಂಡರಗಿ- ಬೈಲೂರು ತೋಂಟದಾರ್ಯ ಮಠದ ನಿಜಗುಣಪ್ರಭು ತೋಂಟದಾರ್ಯ ಶ್ರೀ, ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಶ್ರೀಗಳು ಸೇರಿದಂತೆ ಉತ್ತರ ಕರ್ನಾಟಕದ ಅನೇಕ ಮಠಾಧೀಶರು ಈ ಸಭೆಯಲ್ಲಿ ಭಾಗವಹಿಸಿದ್ದರು.
ಮಾಜಿ ಸಚಿವ ವಿನಯ್ ಕುಲಕರ್ಣಿ ಸಿಬಿಐ ವಿಚಾರಣೆ ಬೆನ್ನಲ್ಲೇ ಪ್ರಕರಣ ಜಾತಿ ಹಾಗೂ ರಾಜಕೀಯಕ್ಕೆ ತಿರುವು ಪಡೆದಿದೆ. ಕಾರಣ ಲಿಂಗಾಯತ ಮಠಾಧೀಶರು ಈ ರೀತಿ ಸಭೆ ಸೇರಿರುವುದು ಕುತೂಹಲ ಮೂಡಿದೆ. ಆದರೆ, ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಡಾ.ಸಿದ್ಧರಾಮ ಶ್ರೀಗಳು ಈ ಮಠಾಧೀಶರು ಯಾಕೆ ಇಲ್ಲಿಗೆ ಬಂದಿದ್ದಾರೆ ಎನ್ನುವುದು ತಮಗೆ ಗೊತ್ತಿಲ್ಲ ಎಂದು ಹೇಳಿರುವುದು ಮತ್ತಷ್ಟು ಕುತೂಹಲ ಕೆರಳಿಸಿದೆ.
ಮಹತ್ವದ ಬೆಳವಣಿಗೆ:
ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟದಲ್ಲಿ ಗದಗ ನಗರದ ತೋಂಟದಾರ್ಯ ಮಠ ಮುಂಚೂಣಿಯಲ್ಲಿದೆ. ಲಿಂಗೈಕ್ಯ ತೋಂಟದ ಡಾ. ಸಿದ್ಧಲಿಂಗ ಶ್ರೀಗಳೇ ಅದರ ನೇತೃತ್ವ ವಹಿಸಿದ್ದರು. ಆ ಹೋರಾಟದಲ್ಲಿ ವಿನಯ ಕುಲಕರ್ಣಿ ಕೂಡಾ ಮುಂಚೂಣಿಯಲ್ಲಿ ನಿಂತು ಹೋರಾಟ ಮಾಡಿದ್ದರು. ಈಗ ಅವರ ಬಂಧನ, ಸಿಬಿಐ ವಿಚಾರಣೆ ಹಿನ್ನೆಲೆಯಲ್ಲಿ ಲಿಂಗಾಯತ ಹೋರಾಟದ ಶಕ್ತಿ ಕೇಂದ್ರ ಎಂದು ಕರೆಯಲ್ಪಡುವ ಗದುಗಿನ ಮಠದಲ್ಲಿ ಹಲವು ಶ್ರೀಗಳು ಸೇರಿ ಸಭೆ ನಡೆಸಿರುವುದು, ರಾಜ್ಯ ರಾಜಕೀಯದ ಪಾಲಿಗೆ ಮಹತ್ವದ ಬೆಳವಣಿಗೆಯಾಗುವ ಸಾಧ್ಯತೆಯಿದೆ.
ಯೋಗೀಶಗೌಡ ಹತ್ಯೆ ಪ್ರಕರಣ: ಇಂದು ಕೋರ್ಟ್‌ಗೆ ವಿನಯ್ ಕುಲಕರ್ಣಿ
ನ್ಯಾಯಯುತ ತನಿಖೆ ನಡೆಯಲಿ:
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ತೋಂಟದಾರ್ಯ ಮಠದ ಡಾ. ಸಿದ್ಧರಾಮ ಶ್ರೀಗಳು, ಸಿಬಿಐ ವಿಚಾರಣೆಯಲ್ಲಿರುವ ಮಾಜಿ ಸಚಿವ ವಿನಯ… ಕುಲಕರ್ಣಿ ಆಪರಾಧಿಯಲ್ಲ, ಆರೋಪಿ ಮಾತ್ರ. ತನಿಖೆ ನ್ಯಾಯಸಮ್ಮತವಾಗಿ ನಡೆಯಬೇಕು. ನಮಗೂ ನ್ಯಾಯಾಂಗ ವ್ಯವಸ್ಥೆಯಲ್ಲಿ ಅಪಾರವಾದ ಗೌರವವಿದೆ. ಸಿಬಿಐ ಅಧಿಕಾರಿಗಳು ನ್ಯಾಯಯುತವಾದ ವಿಚಾರಣೆ ನಡೆಸುತ್ತಾರೆ ಎಂಬ ವಿಶ್ವಾಸವಿದೆ. ವಿನಯ… ಕುಲಕರ್ಣಿ ನಿರಪರಾಧಿಯಾಗಿ ಹೊರಬರಬೇಕು ಎಂಬ ಆಶಾಭಾವನೆ ನಮ್ಮದಾಗಿದೆ ಎಂದರು.
ಇತರ ಸ್ವಾಮಿಗಳು ಶ್ರೀಮಠಕ್ಕೆ ಬಂದಿರುವ ಕುರಿತು ಪ್ರಶ್ನೆಗೆ ಉತ್ತರಿಸಿದ ಅವರು, ಅವರು ಯಾಕೆ ಬಂದಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಮಾಧ್ಯಮದವರನ್ನು ಕರೆದಿಲ್ಲ. ಅವರು ಮಾಧ್ಯಮದವರನ್ನು ಭೇಟಿ ಆಗುವುದಿಲ್ಲ ಎನ್ನುತ್ತಿದ್ದಾರೆ. ಇನ್ನು ಕೊಲೆಯಾದ ಯೋಗೀಶಗೌಡ ಹಾಗೂ ವಿನಯ್ ಕುಲಕರ್ಣಿ ಇಬ್ಬರೂ ಪಂಚಮಸಾಲಿ ಲಿಂಗಾಯತರೇ. ಪ್ರಕರಣಕ್ಕೆ ಜಾತಿ-ಮತ-ಪಂಥ ಯಾವುದೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.
ಪಂಚಮಸಾಲಿ ಸ್ವಾಮೀಜಿ ವಿರುದ್ಧ ಪ್ರಮೋದ್ ಮುತಾಲಿಕ್ ಆಕ್ರೋಶ..!
ಪ್ರಕರಣ ಕುರಿತು ಅಭಿಪ್ರಾಯ ವ್ಯಕ್ತಪಡಿಸುವಂತೆ ಭಕ್ತರು ಹೇಳಿದ ಹಿನ್ನೆಲೆಯಲ್ಲಿ ಹಿರಿಯ ಸ್ವಾಮೀಜಿಗಳ ಮಾರ್ಗದರ್ಶನ ಪಡೆಯಲು ಇಲ್ಲಿ ಬಂದಿದ್ದೇವೆ. ಪ್ರಕರಣ ನ್ಯಾಯಾಲಯದಲ್ಲಿರುವ ಹಿನ್ನೆಲೆಯಲ್ಲಿ ಈ ಕುರಿತು ನಾನು ಏನೂ ಮಾತನಾಡುವುದಿಲ್ಲ ಎಂದು ಕೂಡಲ ಸಂಗಮ ಜಯಬಸವ ಮೃತ್ಯುಂಜಯ ಶ್ರೀಗಳು ತಿಳಿಸಿದ್ದಾರೆ.
ವಿನಯ್ ಕುಲಕರ್ಣಿ ಪ್ರಕರಣ ನ್ಯಾಯಾಲಯದಲ್ಲಿರುವ ಹಿನ್ನೆಲೆಯಲ್ಲಿ ನಾವು ಏನೂ ಹೇಳಿಕೆ ನೀಡುವುದಿಲ್ಲ. ಗದುಗಿನ ತೊಂಟದಾರ್ಯ ಮಠಕ್ಕೆ ಸಿದ್ಧರಾಮ ಶ್ರೀಗಳನ್ನು ಭೇಟಿ ಮಾಡಲು ಬಂದಿದ್ದೇವೆ ಅಷ್ಟೆ ಎಂದು ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಶ್ರೀಗಳು ಹೇಳಿದ್ದಾರೆ.