ಬೆಂಗಳೂರು [ಜು.15] :  ಬೆಸ್ಕಾಂ ಎಂಜಿನಿಯರ್‌ಗಳ ನಿರ್ಲಕ್ಷ್ಯದಿಂದ ವಿದ್ಯುತ್‌ ದುರಸ್ತಿ ಕಾರ್ಯದಲ್ಲಿ ತೊಡಗಿದ್ದ ಲೈನ್‌ಮೆನ್‌ವೊಬ್ಬರು ವಿದ್ಯುತ್‌ ಸ್ಪರ್ಶಿಸಿ ಮೃತಪಟ್ಟಿರುವ ಘಟನೆ ಥಣಿಸಂದ್ರದಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ.  ಬಾಣಸವಾಡಿ ನಿವಾಸಿ ಮುರಳಿ (42) ಮೃತ ಬೆಸ್ಕಾಂ ಸಿಬ್ಬಂದಿ.

ಮೃತ ಮುರಳಿ ಕುಟುಂಬಸ್ಥರು ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ಅಂಬೇಡ್ಕರ್‌ ಆಸ್ಪತ್ರೆ ಬಳಿ ಪ್ರತಿಭಟನೆ ನಡೆಸಿದರು. ಮೃತರ ಸಾವಿಗೆ ಕಾರಣವಾದ ತಪ್ಪಿತಸ್ಥ ಎಂಜಿನಿಯರ್‌ಗಳನ್ನು ಕೂಡಲೇ ಬಂಧಿಸಿ, ಕಾನೂನು ಕೈಗೊಳ್ಳಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು. ಈ ಸಂಬಂಧ ಕೊತ್ತನೂರು ಪೊಲೀಸ್‌ ಠಾಣೆಯಲ್ಲಿ ಬೆಸ್ಕಾಂ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಮುನಿರಾಜು ಮತ್ತು ಕಿರಿಯ ಅಭಿಯಂತರ ಚಂದ್ರಶೇಖರ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಸುಮಾರು ಹದಿನೈದು ವರ್ಷಗಳಿಂದ ಮುರಳಿ ಅವರು ಬೆಸ್ಕಾಂ ಲೈನ್‌ಮೆನ್‌ ಆಗಿದ್ದು, ಪತ್ನಿ ಹಾಗೂ ಪುತ್ರನ ಜತೆ ಬಾಣಸವಾಡಿಯಲ್ಲಿ ನೆಲೆಸಿದ್ದರು. ಭಾನುವಾರ ರಜೆ ಇದ್ದ ಕಾರಣ ಮುರಳಿ ಅವರು ಮನೆಯಲ್ಲಿದ್ದರು.

ಭಾನುವಾರ ಬೆಳಗ್ಗೆ 10.30ರ ಸುಮಾರಿಗೆ ಮುರಳಿ ಅವರಿಗೆ ಕರೆ ಮಾಡಿದ್ದ ಎಂಜಿನಿಯರ್‌ ಚಂದ್ರಶೇಖರ್‌, ಥಣಿಸಂದ್ರ ಬಳಿ ವಿದ್ಯುತ್‌ ಪೂರೈಕೆಯಲ್ಲಿ ಸಮಸ್ಯೆಯಾಗಿರುವ ಬಗ್ಗೆ ದೂರು ಬಂದಿದೆ. ಸ್ಥಳಕ್ಕೆ ತೆರಳಿ ದುರಸ್ತಿ ಮಾಡುವಂತೆ ನೀಡಿದ ಸೂಚನೆ ಮೇರೆಗೆ ಮುರಳಿ ಅವರು ಥಣಿಸಂದ್ರಕ್ಕೆ ಹೋಗಿದ್ದರು.

ಮುರಳಿ ಅವರು ಸ್ಥಳಕ್ಕೆ ಹೋಗುವ ಮುನ್ನ ಕಿರಿಯ ಸಹಾಯಕ ಅಭಿಯಂತರ ಚಂದ್ರಶೇಖರ್‌ ಹಾಗೂ ಮತ್ತೊಬ್ಬ ಲೈನ್‌ಮೆನ್‌ ಸ್ಥಳದಲ್ಲಿದ್ದರು. ನಂತರ ವಿದ್ಯುತ್‌ ಸಂಪರ್ಕ ಸ್ಥಗಿತಗೊಳಿಸಿ ವಿದ್ಯುತ್‌ ವೈಯರ್‌ ದುರಸ್ತಿ ಮಾಡಲು ಮುರಳಿ ವಿದ್ಯುತ್‌ ಕಂಬ ಏರಿದ್ದರು. ವಿದ್ಯುತ್‌ ತಂತಿ ಸರಿಪಡಿಸುತ್ತಿದ್ದ ವೇಳೆ ಏಕಾಏಕಿ ವಿದ್ಯುತ್‌ ಪ್ರವಹಿಸಿ ಮುರಳಿ ಅವರು ಕಂಬದಲ್ಲಿಯೇ ಮೃತಪಟ್ಟಿದ್ದಾರೆ. ಆತಂಕಗೊಂಡ ಸಹಾಯ ಅಭಿಯಂತರ ಚಂದ್ರಶೇಖರ್‌ ಅವರು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅವಘಡ ಸಂಭವಿಸಿದೆ. ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಮುನಿರಾಜು ಅವರಿಗೆ ಮುರಳಿ ಅವರನ್ನು ಕಂಡರೆ ಆಗುತ್ತಿರಲ್ಲಿಲ್ಲ. ಉದ್ದೇಶ ಪೂರ್ವಕವಾಗಿ ವಿದ್ಯುತ್‌ ಸ್ವಿಚ್‌ಆನ್‌ ಮಾಡಿದ್ದರಿಂದ ಮುರಳಿ ಅವರು ಮೃತಪಟ್ಟಿದ್ದಾರೆ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ.

ಸಂಬಂಧಪಟ್ಟಅಧಿಕಾರಿಗಳು ಸ್ಥಳಕ್ಕೆ ಬರಬೇಕೆಂದು ಮೃತರ ಕುಟುಂಬಸ್ಥರು ಶವ ಇಡಲಾಗಿದ್ದ ಅಂಬೇಡ್ಕರ್‌ ಆಸ್ಪತ್ರೆ ಬಳಿ ಪ್ರತಿಭಟನೆ ನಡೆಸಿದರು. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಮತ್ತು ಬೆಸ್ಕಾಂನ ಹಿರಿಯ ಅಧಿಕಾರಿಗಳು ಮನವೊಲಿಸಿದ ಬಳಿಕ ಪ್ರತಿಭಟನೆ ಹಿಂಪಡೆದಿದ್ದಾರೆ. ವಿದ್ಯುತ್‌ ದುರಸ್ತಿ ಮಾಡುವಾಗ ಹೇಗೆ ವಿದ್ಯುತ್‌ ಪ್ರವಹಿಸಿತ್ತು? ಯಾರಾದರೂ ವಿದ್ಯುತ್‌ ಸ್ವಿಚ್‌ಆನ್‌ ಮಾಡಿದ್ದಾರೆಯೇ ಎಂಬುದು ತನಿಖೆ ವೇಳೆ ತಿಳಿದು ಬರಲಿದೆ ಎಂದು ಪೊಲೀಸರು ಮಾಹಿತಿ ನೀಡಿದರು.