ಹುಬ್ಬಳ್ಳಿ ಏರ್‌ಪೋರ್ಟ್ ಬಳಿಯೆ ಹೆಲಿಪೋರ್ಟ್!
ಹುಬ್ಬಳ್ಳಿಯಲ್ಲಿ ಪ್ರಾಥಮಿಕವಾಗಿ ಸರ್ಕಾರಿ ಜಾಗ ಗುರುತಿಸಿದ ಜಿಲ್ಲಾಡಳಿತ| ಉತ್ತರ ಕರ್ನಾಟಕ ಪ್ರವಾಸೋದ್ಯಮದ ಹೆಬ್ಬಾಗಿಲಾಗಲಿದೆ ಹುಬ್ಬಳ್ಳಿ| ಹೆಲಿಟೂರಿಸಂಗೆ ಹುಬ್ಬಳ್ಳಿಯಲ್ಲಿ ಸಾಕಷ್ಟು ಅವಕಾಶ| ಪ್ರವಾಸೋದ್ಯಮ ಕೇಂದ್ರಗಳಿಗೆ ಆದಷ್ಟು ಕಡಿಮೆ ದರದಲ್ಲಿ ಶೀಘ್ರವಾಗಿ ಕರೆದೊಯ್ಯಲು ಇದರಿಂದ ಸಾಧ್ಯ|
ಮಯೂರ ಹೆಗಡೆ
ಹುಬ್ಬಳ್ಳಿ(ಏ.03): ಹುಬ್ಬಳ್ಳಿಯಲ್ಲಿ ಹೆಲಿಟೂರಿಸಂಗಾಗಿ ‘ಹೆಲಿಪೋರ್ಟ್’ ನಿರ್ಮಿಸಲು ಪ್ರಾಥಮಿಕವಾಗಿ ನಗರದ ವಿಮಾನ ನಿಲ್ದಾಣದ ಬಳಿ ಜಾಗ ಗುರುತಿಸಲಾಗಿದ್ದು, ಪರಿಶೀಲನೆ ಹಂತದಲ್ಲಿದೆ. ನಗರದಲ್ಲಿ ಹೆಲಿಟೂರಿಸಂ ಕೇಂದ್ರವಾಗಬೇಕು ಎಂಬುದು ಕಳೆದ ಹಲವು ವರ್ಷಗಳ ಬೇಡಿಕೆ. ಗುರುವಾರ ವಿಧಾನಸೌಧದಲ್ಲಿ ನಡೆದ ಸಭೆಯಿಂದ ಅದಕ್ಕೆ ಮತ್ತಷ್ಟುರೆಕ್ಕೆಪುಕ್ಕಗಳು ಮೂಡಿ ಹೊಸ ಕನಸು ಚಿಗುರಲು ಕಾರಣವಾಗಿದೆ. ಅಂದುಕೊಂಡಂತೆ ಆದರೆ, ಮುಂಬರುವ ದಿನಗಳಲ್ಲಿ ಹುಬ್ಬಳ್ಳಿ ಉತ್ತರ ಕರ್ನಾಟಕ ಭಾಗದ ಪ್ರವಾಸೋದ್ಯಮದ ಹೆಬ್ಬಾಗಿಲು ಎನಿಸಿಕೊಳ್ಳಲಿದೆ.
ಜಾಗ ಗುರುತು:
‘ಕನ್ನಡಪ್ರಭ’ ಜತೆ ಮಾತನಾಡಿದ ಜಿಲ್ಲಾಧಿಕಾರಿ ನಿತೇಶ ಪಾಟೀಲ್, ಹೆಲಿಟೂರಿಸಂಗಾಗಿ ಹೆಲಿಪೋರ್ಟ್ ನಿರ್ಮಾಣಕ್ಕೆ 5ರಿಂದ 10 ಎಕರೆ ಜಮೀನು ಬೇಕಿದೆ. ಅದರಲ್ಲೂ ವಿಮಾನ ನಿಲ್ದಾಣದ ಸುತ್ತಮುತ್ತ ಸಿಕ್ಕರೆ ಹೆಚ್ಚಿನ ಅನುಕೂಲವಾಗುತ್ತದೆ. ಹೀಗಾಗಿ ಅಲ್ಲಿನ 1ರಿಂದ 2 ಕಿಮೀ ಅಂತರದಲ್ಲಿ ಜಾಗ ನಿಗದಿಸುವ ಪ್ರಯತ್ನ ನಡೆದಿದೆ. ಪ್ರಾಥಮಿಕವಾಗಿ ಕಾಟನ್ ಕೌಂಟಿ ಬಳಿಯ ಸರ್ಕಾರಿ ಜಾಗವನ್ನು ಗುರುತು ಮಾಡಿದ್ದೇವೆ’‘ಈಚೆಗೆ ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿಗಳು ಆಗಮಿಸಿ ಜಾಗವನ್ನು ಪರಿಶೀಲನೆ ಮಾಡಿಕೊಂಡು ತೆರಳಿದ್ದಾರೆ. ಇದರ ಸಾಧಕ-ಬಾಧಕಗಳ ಚರ್ಚೆ ಹಂತದಲ್ಲಿದ್ದು, ಸೂಕ್ತವಾದರೆ ಈ ಜಾಗ ಅಂತಿಮವಾಗಬಹುದು. ಸುತ್ತಮುತ್ತಲೂ ಕಾಟನ್‌ಕೌಂಟಿ, ಡೆನಿಸನ್ಸ್, ಫಾರ್ಚೂನ್ ಸೇರಿ ಇತರ ಹೋಟೆಲ್‌ಗಳಿವೆ. ಪ್ರವಾಸಿಗರು ಬಂದರೆ ವಸತಿ ವ್ಯವಸ್ಥೆಗೆ ಈ ಜಾಗ ಹೆಚ್ಚು ಅನುಕೂಲವಾಗಿದೆ’ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ದೂರು ಮುಖ್ಯಮಂತ್ರಿ ಮೇಲೆಯೇ ಎಂದು ತಿಳಿಯಬೇಡಿ:ಸಚಿವ ಶೆಟ್ಟರ್
ಪ್ರವಾಸೋದ್ಯಮಕ್ಕೆ ಪುಷ್ಟಿ
ಬೇರೆಡೆಯಿಂದ ಬರುವ ಪ್ರವಾಸಿಗರಿಗೆ ಉಕ ಭಾಗದ ಪ್ರವಾಸಿ ಕ್ಷೇತ್ರಗಳಿಗೆ ಇಲ್ಲಿಂದ ತೆರಳಲು ಹೆಚ್ಚು ಅನುಕೂಲವಾಗಲಿದೆ. ಹೆಲಿಪೋರ್ಟ್ ನಿರ್ಮಾಣವಾದರೆ ಹಂಪಿ, ಬದಾಮಿ ಪಟ್ಟದಕಲ್ಲು, ಸವದತ್ತಿ, ದಾಂಡೇಲಿ, ಮುರ್ಡೇಶ್ವರ, ಗೋಕರ್ಣ ಸೇರಿ ವಿವಿಧೆಡೆ ಇಲ್ಲಿಂದ ಶೀಘ್ರವಾಗಿ ಪ್ರವಾಸಿಗರಿಗೆ ಹೋಗಿ ಬರಲು ಅನುಕೂಲವಾಗಲಿದೆ. ಅಲ್ಲದೆ, ಮಂಗಳೂರು, ಕಲಬುರಗಿಯಲ್ಲಿ ನಿರ್ಮಾಣವಾಗುವ ಟೂರಿಸಂ ಹೆಲಿಪೋರ್ಟ್‌ನಿಂದ ಪ್ರವಾಸಿಗರಿಗೆ ಎರಡೂ ಕಡೆ ಸಂಪರ್ಕ ಏರ್ಪಡುತ್ತದೆ. ಇದರಿಂದ ಸಹಜವಾಗಿ ಹೋಟೆಲ್, ಕರಕುಶಲ ವಸ್ತು, ಸ್ಥಳೀಯ ವಿಶೇಷತೆ, ಸಾಂಸ್ಕೃತಿಕ ಉದ್ಯಮಗಳ ಆರ್ಥಿಕ ಪ್ರಗತಿ ಹೆಚ್ಚುತ್ತದೆ.
ಖಾಸಗಿ ಪ್ರಯತ್ನ;
ಹುಬ್ಬಳ್ಳಿಯಲ್ಲಿ ಈ ಹಿಂದೆಯೆ ಖಾಸಗಿ ಹೆಲಿಟೂರಿಸಂ ಪ್ರಯತ್ನ ನಡೆದಿದೆ. ಹುಬ್ಬಳ್ಳಿಯ ಬಾಹುಬಲಿ ಧರೆಪ್ಪನವರ ಹುಬ್ಬಳ್ಳಿ, ಬೆಳಗಾವಿಯಲ್ಲಿ ಹೆಲಿಟೂರಿಸಂ ನಡೆಸುತ್ತಿದ್ದಾರೆ. ಬೆಳಗಾವಿಯಲ್ಲಿ ತಮ್ಮದೆ ಆದ ಹೆಲಿಪ್ಯಾಡನ್ನೂ ಹೊಂದಿದ್ದಾರೆ. 6 ಜನರನ್ನು ಕರೆದೊಯ್ಯುವ ಸಾಮರ್ಥ್ಯದ ಹೆಲಿಕಾಪ್ಟರ್ ಹೊಂದಿದ್ದಾರೆ.
‘ಹೆಲಿಟೂರಿಸಂಗೆ ಹುಬ್ಬಳ್ಳಿಯಲ್ಲಿ ಸಾಕಷ್ಟು ಅವಕಾಶವಿದೆ. ಖಾಸಗಿಯವರಿಗೆ ವಹಿಸುವುದಾದರೆ ಜಿಲ್ಲಾಡಳಿತ ಹಾಗೂ ಸರ್ಕಾರ ಹೆಚ್ಚಿನ ಸಹಕಾರ ನೀಡಬೇಕಾಗುತ್ತದೆ. ಏರ್‌ಪೋರ್ಟ್‌ನಲ್ಲಿ ಒಂದು ಬಾರಿ ಹೆಲಿಕಾಪ್ಟರ್ ಲ್ಯಾಂಡ್ ಆಗಬೇಕೆಂದರೆ 15-20 ಸಾವಿರ ವೆಚ್ಚವಾಗುತ್ತದೆ. ಅಲ್ಲದೆ ಪೊಲೀಸ್ ಭದ್ರತೆಗೆ ದಿನಕ್ಕೆ . 1500 ಕೊಡಬೇಕು. ಹೆಲಿಪ್ಯಾಡ್ ಆದಲ್ಲಿ ಈ ದರ ಕಡಿಮೆಯಾಗಬೇಕು ಹಾಗೂ ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ನೀಡಲು ರಿಯಾಯಿತಿ ನೀಡಬೇಕಾಗುತ್ತದೆ’ ಎಂದರು.
ಏನಿದು ಹೆಲಿಟೂರಿಸಂ?
ವಿಐಪಿ, ವಿವಿಐಪಿಗಳಿಗೆ ಮಾತ್ರವಾಗಿರುವ ಹೆಲಿಕಾಪ್ಟರನ್ನು ಪ್ರವಾಸೋದ್ಯಮಕ್ಕೆ ಪೂರಕವಾಗಿ ಬಳಸಿಕೊಂಡು ಸಾಮಾನ್ಯ ಜನತೆಗೆ ತಲುಪಿಸುವುದೆ ಹೆಲಿಟೂರಿಸಂ. ಖಾಸಗಿಯಾಗಿ ಹೆಲಿಕ್ಯಾಪ್ಟರ್‌ನಲ್ಲಿ ಸುತ್ತುವುದಾದರೆ ಒಬ್ಬರಿಗೆ . 10-15 ಸಾವಿರ ಬೇಕು. ಆದರೆ ಪ್ರವಾಸೋದ್ಯಮದಿಂದ ವ್ಯಾಪಕ ಬೇಡಿಕೆ ಬರುವ ಹಿನ್ನೆಲೆಯಲ್ಲಿ ಕೇವಲ 3-5 ಸಾವಿರದಲ್ಲಿ ಸುತ್ತಬಹುದು. ಅಲ್ಲದೆ, ಪ್ರವಾಸೋದ್ಯಮ ಕೇಂದ್ರಗಳಿಗೆ ಆದಷ್ಟು ಕಡಿಮೆ ದರದಲ್ಲಿ ಶೀಘ್ರವಾಗಿ ಕರೆದೊಯ್ಯಲು ಇದರಿಂದ ಸಾಧ್ಯ. ಫ್ಯಾಮಿಲಿ ಪ್ಯಾಕೇಜ್, ಸ್ನೇಹಿತರಿಗಾಗಿ ಪ್ಯಾಕೇಜ್, ಆಯಾ ಕಾಲಕ್ಕೆ ವಿಶೇಷ ರಿಯಾಯಿತಿ ಕೂಡ ಇದರಲ್ಲಿ ಇರುತ್ತದೆ.
ಮುಖ್ಯವಾಗಿ ಹುಬ್ಬಳ್ಳಿಯಲ್ಲಿ ಪ್ರವಾಸೋದ್ಯಮದ ದೃಷ್ಟಿಯಿಂದ ಹೆಲಿಪ್ಯಾಡ್ ನಿರ್ಮಾಣವಾಗಲೇಬೇಕು. ಖಾಸಗಿ ಹೆಲಿಟೂರಿಸಂ ಸಂಸ್ಥೆಗಳಿಗೆ ಭದ್ರತೆ, ಕೆಲವು ರಿಯಾಯಿತಿ ಒದಗಿಸಬೇಕು ಎಂದು ಬಾಹುಬಲಿ ಧರೆಪ್ಪನವರ ತಿಳಿಸಿದ್ದಾರೆ.
ಹೆಲಿಪೋರ್ಟ್‌ಗೆ ಏರ್‌ಪೋರ್ಟ್ ಸುತ್ತಮುತ್ತ 5-10 ಎಕರೆ ಜಮೀನು ಬೇಕಿದೆ. ಈಚೆಗೆ ಸ್ಥಳ ಪರಿಶೀಲನೆ ನಡೆಸಿದ್ದು, ಸಾಧಕ-ಬಾಧಕಗಳ ಕುರಿತು ಚರ್ಚೆ ನಡೆದಿದೆ ಎಂದು ಧಾರವಾಡ ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಹೇಳಿದ್ದಾರೆ.